ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ನಂತರ ಸಿಮೆಂಟ್–ಕಬ್ಬಿಣದ ಬೆಲೆ ಏರಿಕೆ: ಮನೆ ನಿರ್ಮಾಣದ ಆಸೆಗೆ ತಣ್ಣೀರು

Last Updated 17 ಮೇ 2020, 8:10 IST
ಅಕ್ಷರ ಗಾತ್ರ

ದಾವಣಗೆರೆ: ಲಾಕ್‌ಡೌನ್‌ ಸಡಿಲಗೊಳಿಸುತ್ತಿದ್ದಂತೆಯೇ ಸಿಮೆಂಟ್ ಹಾಗೂ ಕಬ್ಬಿಣದ ಬೆಲೆ ಏರಿಕೆಯಾಗಿದ್ದು, ಮನೆ ಕಟ್ಟಿಕೊಳ್ಳಬೇಕು ಎಂದು ಕನಸು ಕಾಣುತ್ತಿದ್ದವರಿಗೆ ನಿರಾಶೆಯಾಗಿದೆ.

ಕೋವಿಡ್‌–19 ಹಿನ್ನೆಲೆಯಲ್ಲಿ ಲಾಕ್‌ಡೌನ್‌ನಿಂದಾಗಿ ಸ್ಥಗಿತಗೊಂಡಿದ್ದ ಉತ್ಪಾದನೆ ಈಗ ಆರಂಭವಾಗಿದ್ದರೂ ಕಚ್ಚಾವಸ್ತುಗಳ ಕೊರತೆ, ಸಾರಿಗೆ ಸಮಸ್ಯೆ ಹಾಗೂ ಕಾರ್ಮಿಕರ ಕೊರತೆ ಬೆಲೆ ಏರಿಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಆರ್ಥಿಕ ಚಟುವಟಿಕೆ ಗರಿಗೆದರಿದರೂ ನಿರ್ಮಾಣ ಕಾರ್ಯದ ಬಹುಮುಖ್ಯ ಸಲಕರಣೆಗಳಾದ ಸಿಮೆಂಟ್ ಹಾಗೂ ಕಬ್ಬಿಣ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದ್ದು, ಜನರು ದುಬಾರಿ ಬೆಲೆ ತೆತ್ತು ನಿರ್ಮಾಣ ಹಂತದಲ್ಲಿರುವ ಮನೆಗಳನ್ನು ಮುಗಿಸಿಕೊಳ್ಳುತ್ತಿದ್ದಾರೆ. ಕೆಲವರು ಮನೆ ನಿರ್ಮಾಣ ಕಾರ್ಯವನ್ನು ಮುಂದೂಡಿದ್ದಾರೆ.

ಲಾಕ್‌ಡೌನ್‌ಗೂ ಮುಂಚೆ ಎಲ್ಲಾ ಕಂಪನಿಗಳ ‘ಎ’ ಗ್ರೇಡ್‌ ಸಿಮೆಂಟ್ ಬೆಲೆ ₹280ರಿಂದ ₹320 ಇತ್ತು. ಲಾಕ್‌ಡೌನ್ ಸಡಿಲಿಕೆಯ ನಂತರ ಪ್ರತಿ ಚೀಲಕ್ಕೆ ₹380ರಿಂದ ₹400 ಆಗಿದೆ. ‘ಬಿ’ ಮತ್ತು ‘ಸಿ’ ಗ್ರೇಡ್‌ ಸಿಮೆಂಟ್‌ ಬೆಲೆ ಈ ಹಿಂದೆ ₹250 ಇದ್ದಿದ್ದು, ₹350 ಆಗಿದೆ’ ಎನ್ನುತ್ತಾರೆ. ಡಿಸ್ಟ್ರಿಕ್ಟ್‌ ಸ್ಟೀಲ್‌ ಅಂಡ್ ಸಿಮೆಂಟ್ ಅಸೋಸಿಯೇಷನ್ ಉಪಾಧ್ಯಕ್ಷ ಅರವಿಂದ್.

‘ಲಾಕ್‌ಡೌನ್‌ಗಿಂತ ಮುಂಚೆ ಕಂಪನಿಗಳು ವಿನಾಯಿತಿ ನೀಡುತ್ತಿದ್ದವು. ಆದನ್ನು ನಾವು ಗ್ರಾಹಕರಿಗೆ ವರ್ಗಾಹಿಸುತ್ತಿದ್ದೆವು. ಈಗ ಅದು ಸ್ಥಗಿತಗೊಂಡಿದೆ. ಡಿಸ್ಕೌಂಟ್ ಇಲ್ಲದಿದ್ದರೆ ಗ್ರಾಹಕರಿಗೆ ಹೇಗೆ ತಾನೇ ಕೊಡಲು ಸಾಧ್ಯ?. ಪೂರೈಕೆ ಕಡಿಮೆಯಾಗಿದ್ದರಿಂದ ಬೇಡಿಕೆ ಜಾಸ್ತಿಯಾಗಿದೆ. ದಾವಣಗೆರೆಗೆ ಈ ಹಿಂದೆ 35 ಸಾವಿರ ಟನ್‌ ಸಿಮೆಂಟ್ ಬರುತ್ತಿತ್ತು. ಈಗ 18ರಿಂದ 20 ಸಾವಿರ ಟನ್‌ಗೆ ಇಳಿದಿದೆ ಎನ್ನುತ್ತಾರೆ’ ಎನ್ನುತ್ತಾರೆ ಅರವಿಂದ್.

‘ಕಲಬುರಗಿಯಿಂದ ಎಸಿಸಿ ಸಿಮೆಂಟ್ ಬರುತ್ತಿತ್ತು. ಅಲ್ಲಿ ಕೋವಿಡ್‌–19ನಿಂದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದರಿಂದ ಅಲ್ಲಿ ಎಲ್ಲವನ್ನೂ ಸೀಲ್‌ಡೌನ್ ಮಾಡಲಾಯಿತು. ಇದರಿಂದ ಜಿಲ್ಲೆಗೆ ಬರುವ ಸಿಮೆಂಟ್ ಪ್ರಮಾಣ ಕಡಿಮೆಯಾಯಿತು. ಪ್ರತಿದಿನ 10ರಿಂದ 15 ಗಾಡಿ ರ‍್ಯಾಮ್ಕೊ ಸಿಮೆಂಟ್ ಈಗ 2 ಗಾಡಿ ಬರುತ್ತಿದೆ. ಆಂಧ್ರದಿಂದ ಬರುತ್ತಿದ್ದ ಸಿಮೆಂಟ್ ಕೂಡ ನಿಂತಿದೆ. ಇದಲ್ಲದೇ ಕಬ್ಬಿಣದ ಬೆಲೆಯಲ್ಲೂ ಭಾರಿ ಏರಿಕೆ ಕಂಡಿದೆ. ಒಂದು ಟನ್ ಕಬ್ಬಿಣ ₹48 ಸಾವಿರ ಇದ್ದಿದ್ದು, ₹52 ಸಾವಿರ ಏರಿಕೆ ಕಂಡಿದೆ ಎನ್ನುತ್ತಾರೆ’ ಅರವಿಂದ್.

‘ಗ್ರಾಮೀಣ ಭಾಗದಲ್ಲಿ ಕಾರ್ಮಿಕರು ಇರುವುದರಿಂದ ಹೆಚ್ಚಿನ ಬೇಡಿಕೆ ಬರುತ್ತಿದೆ. ಆದರೆ ನಗರ ಪ್ರದೇಶಗಳಲ್ಲಿ ಕಾಮಗಾರಿಗಳು ನಿಂತಿವೆ. ಹೆಚ್ಚಿನ ಕಾರ್ಮಿಕರು ಬರುತ್ತಿದ್ದ ಆಜಾದ್‌ನಗರ ಹಾಗೂ ಭಾಷಾನಗರಗಳು ಸೀಲ್‌ಡೌನ್‌ ಆಗಿದ್ದು, ಮನೆ ನಿರ್ಮಾಣ ಕಾರ್ಯ ಅಷ್ಟಾಗಿ ನಡೆಯುತ್ತಿಲ್ಲ’ ಎಂದು ಅವರು ವಿಶ್ಲೇಷಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT