ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಪ್ರಿಲ್ 15ರಿಂದ ಮೇ 29ರವರೆಗೆ ಜನಗಣತಿ

ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸೌಲಭ್ಯ ತಲುಪಿಸಲು ಜನಗಣತಿ ಸಹಕಾರಿ : ಡಿಸಿ
Last Updated 25 ಫೆಬ್ರುವರಿ 2020, 9:26 IST
ಅಕ್ಷರ ಗಾತ್ರ

ದಾವಣಗೆರೆ: ಸಮಾಜದಲ್ಲಿನ ಯಾವುದೇ ಯೋಜನೆಗಳು ಹಾಗೂ ಸೌಲಭ್ಯಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸಲು ಅಂಕಿ ಅಂಶಗಳು ಪ್ರಮುಖವಾಗಿದ್ದು, ಪ್ರಸಕ್ತ ಸಾಲಿನ ಜನಗಣತಿಯಲ್ಲಿ ಜಾಗರೂಕರಾಗಿ ಕಾರ್ಯನಿರ್ವಹಿಸಿ ಸರ್ಕಾರಕ್ಕೆ ನಿಖರವಾದ ಮಾಹಿತಿ ನೀಡಲು ಎಲ್ಲರೂ ಶ್ರಮಿಸೋಣ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಜನಗಣತಿ 2021 ಮನೆಪಟ್ಟಿ ಮತ್ತು ಮನೆಗಣತಿ ಹಾಗೂ ಜನಸಂಖ್ಯಾ ರಿಜಿಸ್ಟರ್ ಪರಿಷ್ಕರಣೆ ಸಂಬಂಧ ಜನಗಣತಿ ಅಧಿಕಾರಿಗಳಿಗೆ ಮಹಾನಗರಪಾಲಿಕೆಯಲ್ಲಿ ಸೋಮವಾರ ಆಯೋಜಿಸಿದ್ದ ಎರಡು ದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿ, ‘ಗಣತಿಯಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳು ಗೊಂದಲಗಳಿಗೆ ಒಳಗಾಗದೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವ ಮೂಲಕ ಸತ್ಯ ಮತ್ತು ಪಾರದರ್ಶಕ ಮಾಹಿತಿಯನ್ನು ಜನರಿಂದ ಪಡೆದು ನಿಖರವಾದ ಅಂಕಿ-ಅಂಶಗಳನ್ನು ಸಂಗ್ರಹಿಸಬೇಕು’ ಎಂದು ತಿಳಿಸಿದರು.

‘ಕಳೆದ ಜನಗಣತಿಗಿಂತ ಈ ಬಾರಿ ವಿಶಿಷ್ಟವಾಗಿದ್ದು, ಆಧುನಿಕ ತಂತ್ರಜ್ಞಾನದ ಅಂಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಡಿಜಿಟಲ್ ತಂತ್ರಜ್ಞಾನ ಬಳಸಿ ಗಣತಿಯ ಮಾಹಿತಿಯನ್ನು ಪಡೆದು ಗೂಗಲ್‍ನಲ್ಲಿ ಅಪ್‍ಡೇಟ್ ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಈ ಹೊಸ ಅಂಶಗಳನ್ನು ನಾವೆಲ್ಲಾ ಕಲಿತುಕೊಳ್ಳುವ ಮೂಲಕ ಯಶಸ್ಸಿಗೆ ಶ್ರಮಿಸೋಣ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಮಾತನಾಡಿ, ‘ಜನಗಣತಿಯನ್ನು ಏಪ್ರಿಲ್ 15ರಿಂದ ಮೇ 29ರವರೆಗೆ ನಡೆಯಲಿದ್ದು, ಅಧಿಕಾರಿಗಳಿಗೆ ಮೂರು ಹಂತಗಳಲ್ಲಿ ತರಬೇತಿ ನೀಡಲಾಗುವುದು. ಆಧುನಿಕ ತಂತ್ರಜ್ಞಾನವನ್ನು ಯಾವ ರೀತಿ ಬಳಕೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ತರಬೇತಿ ನೀಡಲಾಗುವುದು’ ಎಂದು ಹೇಳಿದರು.

ಜನಗಣತಿಯ ಸಹಾಯಕ ನಿರ್ದೇಶಕ ರಾಮಾಂಜನೇಯ ಮಾತನಾಡಿ, ‘ಜನಗಣತಿ ಸಮಯದಲ್ಲಿ ಜನರು ಯಾವುದೇ ಮಾಹಿತಿ ನೀಡಲು ನಿರಾಕರಿಸಿದರೆ ಕಾನೂನು ಅಡಿಯಲ್ಲಿ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಅವರು, ‘ಈ ಸಮಯದಲ್ಲಿ ಸಂಗ್ರಹಿಸುವ ಮಾಹಿತಿಯನ್ನು ಸೆನ್ಸಸ್ ಆ್ಯಪ್ ಮೂಲಕ ಬೇಗ ಬಿಡುಗಡೆ ಮಾಡಲು ಸಹಾಯವಾಗುತ್ತದೆ’ ಎಂದರು.

ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಜನಗಣತಿಯ ನೋಡೆಲ್ ಅಧಿಕಾರಿ ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT