ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಾಪಟ್ಟಣ: ದಾಗಿನಕಟ್ಟೆ ವೀರಮ್ಮಗೆ ಕೇಂದ್ರ ಪ್ರಶಸ್ತಿ

ಗುಡ್ಡಕ್ಕೆ ಹಸಿರುಣಿಸುವ ಕಾರ್ಯಕ್ಕೆ ಸಂದ ‘ಜಲಯೋಧೆ’ಯ ಗೌರವ
Last Updated 2 ಮಾರ್ಚ್ 2023, 3:26 IST
ಅಕ್ಷರ ಗಾತ್ರ

ಬಸವಾಪಟ್ಟಣ (ದಾವಣಗೆರೆ): ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆ ಅಡಿ ಸುಮಾರು 25,000 ಸಸಿಗಳನ್ನು ನೆಟ್ಟು ಪ್ರಕೃತಿಗೆ ಹಸಿರು ಸೀರೆ ಉಡಿಸಲು ನೆರವಾಗಿರುವ ಕೃಷಿ ಕೂಲಿಯ ಮಹಿಳೆ, ಚನ್ನಗಿರಿ ತಾಲ್ಲೂಕಿನ ದಾಗಿನಕಟ್ಟೆ ಗ್ರಾಮದ ಕೆ.ಎಂ. ವೀರಮ್ಮ ಅವರು ಕೇಂದ್ರ ಸರ್ಕಾರದ ಜಲ ಆಯೋಗ ಕೊಡಮಾಡುವ ‘ಜಲ ಯೋಧೆ’ (ವಾಟರ್‌ ವಾರಿಯರ್‌) ಪ್ರಶಸ್ತಿಗೆ ಭಾಜನರಾಗಿದ್ದಾರೆ.‌

ಗ್ರಾಮದ ಸುತ್ತಲೂ ಇರುವ ಗಂಧದಮಟ್ಟಿ ಗುಡ್ಡ, ಕೆಂಗಣ್ಣನಾಯಕನ ಗುಡ್ಡ, ತಿಮ್ಮಪ್ಪನ ಗುಡ್ಡ ಮತ್ತು ಜಾನುವಾರು ಗುಡ್ಡಗಳಲ್ಲಿ ಟ್ರೆಂಚ್‌ಗಳನ್ನು ತೆಗೆದು ಸೀತಾಫಲ, ಬಿದಿರು, ಹೊಂಗೆ, ಬೇವು, ಹುಣಿಸೆ, ಕಾಡು ಗೋಡಂಬಿ ಹಾಗೂ ವಿವಿಧ ಕಾಡು ಹಣ್ಣುಗಳ ಸಸಿಗಳನ್ನು 800 ಜನ ಕೂಲಿಕಾರರ ನೆರವಿನೊಂದಿಗೆ ನೆಟ್ಟು ಬೆಳೆಸಿರುವ ಇವರು, ಗುಡ್ಡದಿಂದ ಮಣ್ಣು ಜರಿಯದಂತೆ ತಡೆಯುವ, ಮಳೆ ನೀರು ಸಂರಕ್ಷಿಸುವ ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶದೊಂದಿಗೆ ಬದು ನಿರ್ಮಿಸಿ ಮಳೆ ನೀರು ಹರಿದು ಹೋಗದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

‘ಅರಣ್ಯ ಇಲಾಖೆ ಕೈಗೊಂಡ ಕಾರ್ಯಕ್ರಮದ ಮಾದರಿಯಲ್ಲೇ ನರೇಗಾ ಯೋಜನೆ ಅಡಿ 11 ಅಡಿ ಉದ್ದ, 2 ಅಡಿ ಅಗಲ ಮತ್ತು 2 ಅಡಿ ಆಳದ 70,000 ಟ್ರೆಂಚ್‌ಗಳನ್ನು ತೋಡಿದ್ದೇವೆ. ಗಂಧದಮಟ್ಟಿ ಗುಡ್ಡದಲ್ಲಿ 12,500 ಟ್ರೆಂಚ್‌ಗಳಲ್ಲಿ ಅರಣ್ಯ ಇಲಾಖೆ ಒದಗಿಸಿರುವ 25,000 ಸಸಿಗಳನ್ನು ನೆಡಲಾಗಿದೆ. ಇನ್ನೂ ಮೂರು ಗುಡ್ಡಗಳಲ್ಲಿ ತೆಗೆದಿರುವ ಬಾಕಿ 57,500 ಟ್ರೆಂಚ್‌ಗಳಲ್ಲಿ ಮಳೆಗಾಲ ಆರಂಭ ಆಗುತ್ತಿದ್ದಂತೆಯೇ ಸಸಿ ನೆಡುವ ಕಾರ್ಯಕ್ರಮ ರೂಪಿಸಲಾಗಿದೆ’
ಎಂದು ವೀರಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ವರ್ಷ ನೆಟ್ಟಿರುವ ಸಸಿಗಳು ನಳನಳಿಸುತ್ತಿವೆ. ಬೇಸಿಗೆಯಲ್ಲಿ ಟ್ಯಾಂಕರ್‌ ಮೂಲಕ ನೀರುಣಿಸಿ ಒಣಗದಂತೆ ಜೀವ ತುಂಬುತ್ತಿದ್ದೇವೆ. ಸಸ್ಯ ಸಂಕುಲ ಹೆಚ್ಚಳದೊಂದಿಗೆ ಕರಡಿ, ಮೊಲ, ಕಾಡುಕುರಿಗಳಿಗೆ ಸುಲಭದಲ್ಲಿ ಆಹಾರ ದೊರೆಯಲಿದೆ. ಪ್ರಾಣಿಗಳು ಕಾಡು ಬಿಟ್ಟು ಜನವಸತಿ ಪ್ರದೇಶಕ್ಕೆ ನುಗ್ಗುವ ಭಯ ದೂರವಾಗುತ್ತದೆ. ಗುಡ್ಡಗಳಲ್ಲಿರುವ ಕಾಡು ಹಂದಿ, ಚಿರತೆಗಳಿಗೂ ಗಿಡಮರಗಳಲ್ಲಿ ವಾಸಿಸಲು ಅನುಕೂಲವಾಗಲಿದೆ’ ಎಂದು ಅವರು ಹೇಳಿದರು.

‘ಇದುವರೆಗಿನ ಕಾಮಗಾರಿಗೆ ಅರಣ್ಯ ಇಲಾಖೆಯಿಂದ ₹ 10 ಲಕ್ಷ ಮತ್ತು ನರೇಗಾ ಯೋಜನೆ ಅಡಿ ₹ 12 ಲಕ್ಷ ವ್ಯಯಿಸಲಾಗಿದೆ. ಸ್ವಯಂ ಸೇವಾ ಸಂಘಗಳು, ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಪ್ರೋತ್ಸಾಹಿಸಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷರೂ ಬೆನ್ನು ತಟ್ಟಿದ್ದಾರೆ’ ಎಂದು ವೀರಮ್ಮ ಸ್ಮರಿಸಿದರು.

***

ರಾಜ್ಯದ ಏಕೈಕ ಮಹಿಳೆ

‘ಜಿಲ್ಲಾ ಕೃಷಿ ಕೂಲಿ ಕಾರ್ಮಿಕ ಸಂಘದ ಅಧ್ಯಕ್ಷೆಯಾಗಿರುವ ಕೆ.ಎಂ. ವೀರಮ್ಮ ಕಾರ್ಮಿಕರ ಮನವೊಲಿಸಿ ಉತ್ತಮ ಕಾರ್ಯ ಕೈಗೊಂಡಿದ್ದಾರೆ. ಇವರಿಂದಾಗಿ ಅರಣ್ಯ ಸಂಪತ್ತಿನ ಹೆಚ್ಚಳ ಮತ್ತು ಪರಿಸರ ಸಂರಕ್ಷಣೆ ಸಾಧ್ಯವಾಗುತ್ತಿದೆ. ಇವರು ‘ಜಲಯೋಧೆ’ ಪ್ರಶಸ್ತಿಗೆ ಆಯ್ಕೆಯಾದ ರಾಜ್ಯದ ಏಕೈಕ ಮಹಿಳೆ. ನವದೆಹಲಿಯ ವಿಜ್ಞಾನ ಭವನದಲ್ಲಿ ಮಾರ್ಚ್‌ 4ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ವೀರಮ್ಮ ಪ್ರಶಸ್ತಿ ಸ್ವೀಕರಿಸಲಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎ.ಚನ್ನಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT