ಚನ್ನಗಿರಿ: ಭತ್ತ ಖರೀದಿ ಕೇಂದ್ರ ಆರಂಭ

7

ಚನ್ನಗಿರಿ: ಭತ್ತ ಖರೀದಿ ಕೇಂದ್ರ ಆರಂಭ

Published:
Updated:
Deccan Herald

ಚನ್ನಗಿರಿ: ತಾಲ್ಲೂಕಿನಲ್ಲಿ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದ್ದು, ರೈತರ ಅನುಕೂಲಕ್ಕಾಗಿ ಖರೀದಿ ಕೇಂದ್ರ ಆರಂಭಿಸಲಾಗಿದೆ. ಅದೇ ರೀತಿ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಅತಿ ಶೀಘ್ರದಲ್ಲಿ ಆರಂಭಿಸಲು ಸರ್ಕಾರ ಮುಂದಾಗಬೇಕು ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಒತ್ತಾಯಿಸಿದರು.

ಪಟ್ಟಣದ ಎಂಪಿಎಂಸಿ ಪ್ರಾಂಗಣದಲ್ಲಿ ಶುಕ್ರವಾರ ಮಕ್ಕೆಜೋಳ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಖರೀದಿ ಕೇಂದ್ರದಲ್ಲಿ 'ಎ' ಶ್ರೇಣಿ ಭತ್ತವನ್ನು ₹ 1,750 ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತದೆ. ಆದರೆ ಖಾಸಗಿ ವ್ಯಾಪಾರಸ್ಥರು ₹ 1,800ಕ್ಕೆ ಒಂದು ಕ್ವಿಂಟಲ್ ಭತ್ತವನ್ನು ಖರೀದಿ ಮಾಡುತ್ತಿದ್ದಾರೆ. ಬೆಂಬಲ ಬೆಲೆಯನ್ನು ಹೆಚ್ಚಿಸಿದ್ದರೆ ರೈತರಿಗೆ ಅನುಕೂಲವಾಗುತ್ತಿತ್ತು. ಒಬ್ಬರಿಂದ 40 ಕ್ವಿಂಟಲ್ ಭತ್ತ ಖರೀದಿಸಲಾಗುತ್ತದೆ. ರೈತರು ಪಹಣಿ, ಬೆಳೆ ದೃಢೀಕರಣ ಪತ್ರ ಹಾಗೂ ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿಯನ್ನು ನೀಡಿ ಹೆಸರನ್ನು ಡಿ. 5ರಿಂದ 15ರೊಳಗೆ ನೋಂದಣಿ ಮಾಡಿಸಬೇಕು. ನಂತರ ಭತ್ತವನ್ನು ಖರೀದಿ ಮಾಡಿ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎಂದರು.

‘ಸಂಸದರೊಂದಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಈಚೆಗೆ ಭೇಟಿ ಮಾಡಿ ತಾಲ್ಲೂಕನ್ನು 'ಬರಪೀಡಿತ' ಎಂದು ಘೋಷಿಸುವಂತೆ ಮನವಿ ಮಾಡಿದ್ದೇನೆ’ ಎಂದು ತಿಳಿಸಿದರು.

ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ ಮಾಡುವಲ್ಲಿ ವಿಫಲವಾಗಿದೆ. ರೈತರ ಮೂಗಿಗೆ ತುಪ್ಪ ಸವರಿ ಸುಳ್ಳು ಹೇಳುವ ಕಾರ್ಯವನ್ನು ಕುಮಾರಸ್ವಾಮಿ ಅವರು ಮಾಡುತ್ತಿದ್ದಾರೆ. ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ ಅವರು ಈಗ ಕೇವಲ ₹ 50 ಸಾವಿರ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳುತ್ತಿದ್ದಾರೆ. ಇದರಿಂದ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಸಮ್ಮಿಶ್ರ ಸರ್ಕಾರ ರೈತರ ಜೀವನದ ಜತೆ ಆಟವಾಡುತ್ತಿದೆ ಎಂದು ದೂರಿದರು.

ಎಪಿಎಂಸಿ ಅಧ್ಯಕ್ಷ ಜಿ.ಎಸ್. ವೀರಭಧ್ರಪ್ಪ, ಉಪಾಧ್ಯಕ್ಷ ಆಂಜನಪ್ಪ, ಸದಸ್ಯರಾದ ಎಂ.ಬಿ. ರಾಜಪ್ಪ, ಟಿ. ನಾಗರಾಜ್, ವಿಜಯಕುಮಾರ್, ಕಗ್ಗಿ ರಾಜು, ಬಿಜೆಪಿ ಮುಖಂಡ ಟಿ ಚಿಕ್ಕಪ್ಪ, ಮಂಜುನಾಥ್, ಪ್ರಕಾಶ್, ಕೃಷಿ ಅಧಿಕಾರಿ ರವಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !