ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶದಿಂದ ಬಂದ ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳಿ

ಸೋಂಕು ಮುಕ್ತರಾಗಿ ಹೊರಬಂದ ಅಶ್ವಿನಿ, ರಾಜೀವ್‌ ಸಲಹೆ
Last Updated 8 ಏಪ್ರಿಲ್ 2020, 16:43 IST
ಅಕ್ಷರ ಗಾತ್ರ

ದಾವಣಗೆರೆ: ‘ವಿದೇಶದಿಂದ ಬಂದಿದ್ದರೆ, ದೂರದ ಸ್ಥಳಗಳಿಂದ ಪ್ರಯಾಣಿಸಿಕೊಂಡು ಬಂದಿದ್ದರೆ ದಯವಿಟ್ಟು ಪರೀಕ್ಷೆ ಮಾಡಿಸಿಕೊಳ್ಳಿ. ನಿಮ್ಮಲ್ಲಿ ಕೋವಿಡ್‌–19ಗೆ ರೋಗಕ್ಕೆ ಸಂಬಂಧಿಸಿದ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದೇ ಇರಬಹುದು. ಆದರೆ ಸೋಂಕು ನಿಮ್ಮಲ್ಲಿರಬಹುದು. ಅದು ನಿಮಗೆ ತೊಂದರೆ ಕೊಡದೇ ಇದ್ದರೂ ನಿಮ್ಮ ಸಂಪರ್ಕದಲ್ಲಿ ಇರುವ ಹಿರಿಯರು, ಇತರ ರೋಗಗಳಿಂದ ಬಳಲುವವರಿಗೆ ನಿಮ್ಮಿಂದ ತೊಂದರೆಯಾಗಬಹುದು’.

ಗಯನಾದಿಂದ ಬಂದಿದ್ದ ಜಿ.ಎಂ. ಅಶ್ವಿನಿ, ಷಿಕಾಗೋದಿಂದ ಬಂದಿದ್ದ ಜಿ.ಎಲ್‌. ರಾಜೀವ್‌ ಅವರಲ್ಲಿ ಕೋವಿಡ್‌–19 ಸೋಂಕು ಪತ್ತೆಯಾಗಿತ್ತು. ಐಸೋಲೇಶನ್‌ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆದಾಗಿನ ತಮ್ಮ ಅನುಭವವನ್ನು ಅವರು ವಿಡಿಯೊ ಮಾಡಿ ಹರಿಯಬಿಟ್ಟಿದ್ದು, ಈ ಸಲಹೆ ನೀಡಿದ್ದಾರೆ.

ಅಶ್ವಿನಿ ಅವರು ಸಂಸದ ಜಿ.ಎಂ. ಸಿದ್ದೇಶ್ವರ ಅವರ ಮಗಳಾಗಿದ್ದು, ರಾಜೀವ್‌ ಅವರು ಸಿದ್ದೇಶ್ವರ ಅವರ ತಮ್ಮ ಜಿ.ಎಂ. ಲಿಂಗರಾಜ್‌ ಅವರ ಮಗ ಎಂದು ತಮ್ಮ ಮಾಹಿತಿಯನ್ನು ವಿಡಿಯೊದಲ್ಲಿ ಬಹಿರಂಗಪಡಿಸಿದ್ದಾರೆ.

‘ಗಯಾನದಲ್ಲಿ ಜನಾಂಗೀಯ ಹಿಂಸೆ ನಡೆಯುತ್ತಿದ್ದುದರಿಂದ ಮಾರ್ಚ್‌ 20ಕ್ಕೆ ಭಾರತಕ್ಕೆ ಬಂದೆ. ಎರಡು ದಿನ ಹೋಮ್ ಕ್ವಾರಂಟೈನ್‌ನಲ್ಲಿಯೇ ಇದ್ದೆ. ಬಳಿಕ ತಂದೆ ಅವರು ಕೋವಿಡ್‌–19 ಪರೀಕ್ಷೆ ಮಾಡಿಸಿದರು. ನನ್ನದು ಪಾಸಿಟಿವ್‌, ಮಕ್ಕಳದ್ದು, ಜತೆಗೆ ಇದ್ದ ಬೇರೆಯವರದ್ದು ನೆಗೆಟಿವ್‌ ಬಂತು. ಇದನ್ನು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗೆ ತಿಳಿಸಿದರು. ಎಸ್‌.ಎಸ್‌. ಆಸ್ಪತ್ರೆಯಲ್ಲಿ ಐಸೋಲೇಶನ್‌ ವಾರ್ಡ್‌ಗೆ ಸೇರಿಸಲಾಯಿತು. ಅಲ್ಲಿ ನಿರ್ದೇಶಕರು, ವೈದ್ಯರು, ನರ್ಸ್‌ಗಳು, ಆಯಾಗಳು ತುಂಬಾ ಚೆನ್ನಾಗಿ ನೋಡಿಕೊಂಡರು’ ಎಂದು ಅಶ್ವಿನಿ ಹೇಳಿಕೊಂಡಿದ್ದಾರೆ.

‘ಕೋವಿಡ್‌ ಬಂದ ಕೂಡಲೇ ಏನೋ ದೊಡ್ಡದು ಬಂದಿದೆ ಎಂದು ಹೆದರಿಕೊಳ್ಳುವ ಅವಶ್ಯಕತೆ ಇಲ್ಲ. ನನಗೆ ಯಾವುದೇ ತರಹದ ಲಕ್ಷಣಗಳು ಇರಲಿಲ್ಲ. ಕೆಮ್ಮು, ಜ್ವರ ಇರಲಿಲ್ಲ. ಹಾಗಾಗಿ ಯಾವುದೇ ರೋಗ ಲಕ್ಷಣವಿಲ್ಲದೆ ಎಷ್ಟೋ ಮಂದಿಗೆ ನೀವು ಹಬ್ಬಿಸುತ್ತೇವೆ ಎಂಬುದನ್ನಷ್ಟೇ ಯೋಚನೆ ಮಾಡಬೇಕು. ಈ ಕಾಯಿಲೆ ಬೇಗ ಹರಡುತ್ತದೆ. ಆದರೆ ತೊಂದರೆ ಮಾಡುವುದಿಲ್ಲ’ ಎಂದು ತಿಳಿಸಿದ್ದಾರೆ.

‘ಆಸ್ಪತ್ರೆಯಲ್ಲಿ 14 ದಿನ ಒಬ್ಬಳೇ ಇರುವಾಗ ಬಹಳ ಬೇಜಾರಾಗುತ್ತದೆ. ನನ್ನ ತಂದೆ, ತಾಯಿ, ಪತಿ, ಅಣ್ಣ, ಸಂಬಂಧಿಕರು, ಸ್ನೇಹಿತರು ಫೋನ್‌ನಲ್ಲಿ ಆರೋಗ್ಯ ವಿಚಾರಿಸುತ್ತಿದ್ದರು. ನಗಿಸುತ್ತಿದ್ದರು. ಆಸ್ಪತ್ರೆಯಲ್ಲಿ ಯೋಗ ಮಾಡುತ್ತಿದ್ದೆ. ಪ್ರಾಣಾಯಾಮ ಮಾಡುತ್ತಿದ್ದೆ. ಬುಕ್‌ ಓದೋದು, ಸಂಗೀತ ಕೇಳೋದು, ಸಿನಿಮಾ ನೋಡಿಕೊಂಡು ಟೈಮ್ ಪಾಸ್‌ ಮಾಡಬೇಕಾಗುತ್ತದೆ’ ಎಂದು ವಿವರಿಸಿದ್ದಾರೆ.

‘ಷಿಕಾಗೋದಿಂದ ಬಂದಿದ್ದೆ. ಭೀಮಸಮುದ್ರದಲ್ಲಿ ಪ್ರತ್ಯೇಕವಾಗಿ ಇದ್ದೆ. ಕೋವಿಡ್‌–19ಗೆ ಸಂಬಂಧಿಸಿದಂತೆ ಮೊದಲ ಪರೀಕ್ಷೆ ನೆಗೆಟಿವ್‌, ಎರಡನೇ ಪರೀಕ್ಷೆ ಪೊಸಿಟಿವ್‌ ಬಂತು’ ಎಂದು ರಾಜೀವ್‌ ಹೇಳಿಕೊಂಡಿದ್ದಾರೆ.

‘14 ದಿನಗಳಲ್ಲಿಯೇ ಬರಬೇಕು ಎಂದಿಲ್ಲ. ಆಮೇಲೂ ಬರಬಹುದು. ನನಗೆ ಯಾವುದೇ ರೋಗ ಲಕ್ಷಣಗಳಿರಲಿಲ್ಲ. ಯಾರಿಗೂ ಹರಡಬಾರದು ಎಂದು ಪರೀಕ್ಷೆ ಮಾಡಿಸಿಕೊಂಡು ಐಸೊಲೇಶನ್‌ನಲ್ಲಿದ್ದೆವು. ಟ್ರಾವೆಲ್‌ ಮಾಡಿ ವಿಮಾನದಲ್ಲಿ ಬಂದಿದ್ದರೆ ನಿಮ್ಮನ್ನು ನೀವೇ ನೋಡಿಕೊಳ್ಳಿ. ಪ್ರತ್ಯೇಕವಾಗಿ ಇರಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ’ ಎಂದು ಸಲಹೆ ನೀಡಿದ್ದಾರೆ.

ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಗಟ್ಟಿಯಾಗಿರಬೇಕು ಎಂಬ ಕಾರಣಕ್ಕಾಗಿ ನಿಮ್ಹಾನ್ಸ್‌ನಿಂದ ಮನೋತಜ್ಞರು ಕರೆ ಮಾಡಿ ಮಾತನಾಡಿದ್ದರು ಎಂದು ಇಬ್ಬರೂ ತಿಳಿಸಿದ್ದಾರೆ.

ದೇಶದಲ್ಲಿ, ರಾಜ್ಯದಲ್ಲಿ ಉತ್ತಮ ಕಾರ್ಯ
‘ಕೋವಿಡ್‌–19 ನಿಯಂತ್ರಣಕ್ಕಾಗಿ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಲಾಕ್‌ಡೌನ್‌ ಮಾಡುವ ಮೂಲಕ ರೋಗ ಹರಡದಂತೆ ಎಚ್ಚರ ವಹಿಸಿದ್ದಾರೆ’ ಎಂದು ಜಿ.ಎಂ. ಅಶ್ವಿನಿ ಮತ್ತು ಜಿ.ಎಲ್‌. ರಾಜೀವ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT