ಮಂಡಕ್ಕಿ ಭಟ್ಟಿ ಸ್ಥಳಾಂತರ: ನೆರವು ನೀಡಲು ಸಿಎಂ ಒಪ್ಪಿಗೆ- ಶಾಮನೂರು

7

ಮಂಡಕ್ಕಿ ಭಟ್ಟಿ ಸ್ಥಳಾಂತರ: ನೆರವು ನೀಡಲು ಸಿಎಂ ಒಪ್ಪಿಗೆ- ಶಾಮನೂರು

Published:
Updated:

ದಾವಣಗೆರೆ: ‘ಪರಿಸರ ಮಾಲಿನ್ಯವಾಗುತ್ತಿರುವುದರಿಂದ ಮಂಡಕ್ಕಿ ಭಟ್ಟಿಯನ್ನು ನಗರದಿಂದ ಹೊರಗೆ ಸ್ಥಳಾಂತರಿಸಲು ಭೂಮಿ ಖರೀದಿಸಲು ಹಣಕಾಸಿನ ನೆರವು ನೀಡಲು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಒಪ್ಪಿಗೆ ಸೂಚಿಸಿದ್ದಾರೆ’ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದರು.

ಇಲ್ಲಿ ಗುರುವಾರ ನಡೆದ ‘ಸ್ಮಾರ್ಟ್‌ ಸಿಟಿ’ ಸಲಹಾ ಸಮಿತಿ ಸಭೆಯಲ್ಲಿ ಮಂಡಕ್ಕಿ ಭಟ್ಟಿ ಅಭಿವೃದ್ಧಿ ಕುರಿತ ಚರ್ಚೆಯ ವೇಳೆ ಅವರು ಈ ವಿಷಯ ಗಮನಕ್ಕೆ ತಂದರು.

‘ಈಗಾಗಲೇ ಮಂಡಕ್ಕಿ ಭಟ್ಟಿ ಸ್ಥಳಾಂತರಕ್ಕೆ ಜಾಗ ನೋಡುತ್ತಿದ್ದೇವೆ. ಸುಮಾರು 120 ಎಕರೆ ಭೂಮಿ ಅಗತ್ಯವಿದೆ. ಭೂಮಿ ಖರೀದಿಸಲು ಸ್ಮಾರ್ಟ್‌ ಸಿಟಿ ಯೋಜನೆಯಡಿ ಅವಕಾಶ ಇಲ್ಲದೇ ಇರುವುದರಿಂದ ಸಂಬಂಧಪಟ್ಟ ಇಲಾಖೆಯ ಮೂಲಕ ₹ 20 ಕೋಟಿ ನೆರವು ನೀಡಲು ಮುಖ್ಯಮಂತ್ರಿ ಸಹಮತಿ ಸೂಚಿಸಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ಅವರೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಸ್ಪಷ್ಟಪಡಿಸಿದರು.

‘ಮಂಡಕ್ಕಿ ಭಟ್ಟಿಯನ್ನು ಸ್ಥಳಾಂತರಿಸುವುದರಿಂದ ಸದ್ಯ ಅಲ್ಲಿ ಯಾವುದೇ ರೀತಿಯ ಮೂಲಸೌಲಭ್ಯ ಕಲ್ಪಿಸಲು ಹಣ ಖರ್ಚು ಮಾಡಬೇಡಿ’ ಎಂದೂ ಅವರು ಅಧಿಕಾರಿಗಳಿಗೆ ಸೂಚಿಸಿದರು.

‘₹ 252.52 ಕೋಟಿ ವೆಚ್ಚದಲ್ಲಿ ಮಂಡಕ್ಕಿ ಭಟ್ಟಿ ಅಭಿವೃದ್ಧಿಗೊಳಿಸಲು ಉದ್ದೇಶಿಸಲಾಗಿದೆ. ಗ್ಯಾಸ್‌ ಮೂಲಕ ಭಟ್ಟಿ ಕಾರ್ಯನಿರ್ವಹಿಸುವುದು ಹಾಗೂ ಯಂತ್ರದ ಮೂಲಕ ಮಂಡಕ್ಕಿ ತಯಾರಿಸುವ ಯಂತ್ರವನ್ನು ಪ್ರಾಯೋಗಿಕವಾಗಿ ಅಳವಡಿಸಲಾಗಿದೆ. ಇದರಿಂದಾಗಿ ಹೊಗೆ ಕಡಿಮೆಯಾಗಿದ್ದು, ಶುದ್ಧ ಮಂಡಕ್ಕಿ ಉತ್ಪಾದನೆಯಾಗಲಿದೆ. ಆರು ಚೀಲ ಭತ್ತಕ್ಕೆ 42 ಚೀಲ ಮಂಡಕ್ಕಿ ಬರಬೇಕಾಗಿದ್ದು, ಸ್ವಲ್ಪ ಕಡಿಮೆ ಬರುತ್ತಿದೆ. ಇದನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ’ ಎಂದು ಅಶಾದ್‌ ಷರೀಫ್‌ ತಿಳಿಸಿದರು.

‘ಮಂಡಕ್ಕಿ ಭಟ್ಟಿ ಹಾಗೂ ಅವಲಕ್ಕಿ ಭಟ್ಟಿಯ ಅಧ್ಯಕ್ಷರು ಹಾಗೂ ನನ್ನ ಎದುರಿನಲ್ಲೇ ಪ್ರಾಯೋಗಿಕವಾಗಿ ಕೂರಿಸಿದ ಯಂತ್ರದಲ್ಲಿ ಮಂಡಕ್ಕಿ ತಯಾರಿಸಿ ಎಷ್ಟು ಇಳುವರಿ ಬರುತ್ತದೆ ಎಂಬುದನ್ನು ಖಾತ್ರಿ ಪಡಿಸಬೇಕು. ಮಂಡಕ್ಕಿಯ ಇಳುವರಿ ಸಮಾಧಾನಕರವಾಗಿದ್ದರೆ ಮಾತ್ರ ಉಳಿದ ಕಡೆ ಯಂತ್ರ ಕೂರಿಸಿ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !