ಗುರುವಾರ , ಜನವರಿ 20, 2022
15 °C

ಸ್ಪರ್ಧಾತ್ಮಕ ತರಬೇತಿ ಕೇಂದ್ರ ಶೀಘ್ರ ಆರಂಭ: ದಾವಣಗೆರೆ ವಿವಿ ಕುಲಪತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವನ್ನು ದಾವಣಗೆರೆ ವಿಶ್ವವಿದ್ಯಾಲಯವು ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿ ಆರಂಭಿಸಲಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ. ಶರಣಪ್ಪ ವಿ. ಹಲಸೆ ತಿಳಿಸಿದರು.

ವಿಶ್ವವಿದ್ಯಾಲಯದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆ ಬರೆಯಲು ಆಸಕ್ತಿ ಇರುವವರಿಗೆ ಪ್ರಾಥಮಿಕ (ಪ್ರಿಲಿಮಿನರಿ) ಪರೀಕ್ಷೆಗೆ ಮೊದಲು ತರಬೇತಿ ನೀಡಲಾಗುವುದು. ಈ ಪರೀಕ್ಷೆ ಜೂನ್‌ನಲ್ಲಿ ನಡೆಯುತ್ತದೆ. ಜೂನ್‌ವರೆಗೆ ತರಬೇತಿ ಪಡೆದರೆ ನಮ್ಮ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಸುಲಭವಾಗಲಿದೆ. ಅರ್ಜಿ ಸಲ್ಲಿಸಲು ಜ.6ರವರೆಗೆ ಅವಕಾಶ ನೀಡಲಾಗಿತ್ತು. ಅದನ್ನು ಜ.13ರ ವರೆಗೆ ವಿಸ್ತರಿಸಲಾಗಿದೆ. ಹಾಗಾಗಿ ಪ್ರವೇಶ ಪರೀಕ್ಷೆಯನ್ನು ಜ.19ರಂದು ನಡೆಸಲಾಗುವುದು. ಈ ತಿಂಗಳ ಕೊನೇವಾರದಲ್ಲಿ ತರಬೇತಿ ತರಗತಿ ಆರಂಭಗೊಳ್ಳಲಿವೆ’ ಎಂದು ಮಾಹಿತಿ ನೀಡಿದರು.

ಸ್ಥಳಾವಕಾಶ ಮತ್ತು ಮೂಲ ಸೌಲಭ್ಯ ನೋಡಿಕೊಂಡು ಸದ್ಯ 60 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಅದರಲ್ಲಿ ಶೇ 50ರಷ್ಟು ಸ್ಥಾನಗಳನ್ನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಮೀಸಲಿಡಲಾಗುವುದು. ಮೊದಲ ಐದು ರ‍್ಯಾಂಕ್‌ ಗಳಿಸಿದವರಿಗೆ ಸಂಪೂರ್ಣ ಉಚಿತವಾಗಿ ತರಬೇತಿ ನೀಡಲಾಗುವುದು. ಉಳಿದ ವಿದ್ಯಾರ್ಥಿಗಳಿಗೆ ಹಾಗೂ ವಿಶ್ವವಿದ್ಯಾಲಯದ ಹೊರಗಿನಿಂದ ಬರುವವರಿಗೆ ಶುಲ್ಕ ವಿಧಿಸಲಾಗುವುದು. ತರಬೇತಿ ಶುಲ್ಕ ಎಷ್ಟು ಎನ್ನುವುದು ಸಿಂಡಿಕೇಟ್‌ ಸಭೆಯಲ್ಲಿ ನಿರ್ಧರಿಸಲಾಗುವುದು. ಪ್ರವೇಶ ಶುಲ್ಕ ₹ 100 ಇರಲಿದೆ ಎಂದು ತಿಳಿಸಿದರು.

ಪರಿಶಿಷ್ಟ ಜಾತಿ ಮತ್ತು ವರ್ಗದ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಲಾಗುವುದು. ಅಂಗವಿಕಲರಿಗೆ ಶೇ 3 ಮೀಸಲಾತಿ ದೊರೆಯಲಿದೆ. ಹೊರಗಿನಿಂದ ಬರುವವರು ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಉತ್ತೀರ್ಣರಾಗಿರಬೇಕು. ಅಂತಿಮ ವರ್ಷದ ವಿದ್ಯಾರ್ಥಿಗಳೂ ಭಾಗವಹಿಸಬಹುದು ಎಂದರು.

ಶಿಬಿರದಲ್ಲಿ ಪ್ರತ್ಯೇಕ ಗ್ರಂಥಾಲಯ, ಅಧ್ಯಯನ ಕೊಠಡಿ, ತರಬೇತಿ ಕೊಠಡಿ ವ್ಯವಸ್ಥೆ ಇರುತ್ತದೆ. ಮುಂದೆ ವಸತಿ ವ್ಯವಸ್ಥೆ ಮಾಡುವ ಯೋಜನೆ ಇದೆ. ಪ್ರತಿದಿನ ಸಂಜೆ 4ರಿಂದ 8ರವರೆಗೆ ತರಬೇತಿ ನಡೆಯಲಿದೆ. ವಿಶ್ವವಿದ್ಯಾಲಯದ 120ಕ್ಕೂ ಅಧಿಕ ಪ್ರಾಧ್ಯಾಪಕರ ಜತೆಗೆ ವಿವಿಧ ಕ್ಷೇತ್ರಗಳ, ವಿಷಯಗಳ ಪರಿಣಿತರು, ವಿದ್ವಾಂಸರು, ಅಧಿಕಾರಿಗಳು ತರಬೇತಿ ನಡೆಸಿಕೊಡಲಿದ್ದಾರೆ ಎಂದರು.

ಇತರ ತರಬೇತಿ: ಇದಲ್ಲದೇ ಪಿಎಸ್‌ಐ, ಬ್ಯಾಂಕಿಂಗ್‌, ಎಸ್‌ಎಸ್‌ಸಿ, ರೈಲ್ವೆ, ಪಿಡಿಒ, ಎಫ್‌ಡಿಎ, ಎಸ್‌ಡಿಎ, ಯುಜಿಸಿ, ನೆಟ್‌, ಸ್ಲೆಟ್‌ ಮುಂತಾದ ಪರೀಕ್ಷೆಗಳಿಗೂ ಅಧಿಸೂಚನೆಗಳು ಹೊರಡಿಸಿದ ಸಮಯದಲ್ಲಿ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಕುಲಸಚಿವ ಪ್ರೊ. ಬಸವರಾಜ ಬಣಕಾರ, ಸಿಂಡಿಕೇಟ್ ಸದಸ್ಯ ಜಯಪ್ರಕಾಶ ಕೊಂಡಜ್ಜಿ, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಂಯೋಜನಾಧಿಕಾರಿ ಡಾ. ಅಶೋಕಕುಮಾರ ಪಾಳೇದ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಶಿವಕುಮಾರ ಕಣಸೋಗಿ, ಸಹ ಪ್ರಾಧ್ಯಾಪಕರಾದ ವಿನಯ್ ಎಂ., ಮಹೇಶ್ ಬೀಳಗಿ, ಬಸವರಾಜ ಬೆನಕನಕೊಂಡ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು