ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಿಸ್‌ ರಸ್ತೆ 7 ತಿಂಗಳೊಳಗೆ ಮುಗಿಸಿ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಭೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಸೂಚನೆ
Last Updated 16 ನವೆಂಬರ್ 2022, 4:24 IST
ಅಕ್ಷರ ಗಾತ್ರ

ದಾವಣಗೆರೆ: ನೀರ್ಥಡಿಯಿಂದ ಹರಿಹರದವರೆಗೆ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್‌ ರಸ್ತೆಗಳ ಕಾಮಗಾರಿ ಮುಗಿಸಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ 6 ಪಥದ ಹೆದ್ದಾರಿ ನಿರ್ಮಾಣ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್‌ ರಸ್ತೆಯಲ್ಲಿ ಇರುವ ಹೈಟೆನ್ಶನ್‌ ವಿದ್ಯುತ್‌ ಕಂಬ ಸ್ಥಳಾಂತರ ಮಾಡಿಕೊಡುವುದಾಗಿ ನಾಲ್ಕು ವರ್ಷಗಳಿಂದ ಹೇಳುತ್ತಿದ್ದೀರಿ. ಯಾವುದೇ ಕೆಲಸವಾಗಿಲ್ಲ. ನಾವು ಜನಪ್ರತಿನಿಧಿಗಳು ಆ ಕಡೆ ಹೋದರೆ ಜನ ಉಗಿಯುತ್ತಾರೆ. ಅಧಿಕಾರಿಗಳಿಂದ ಕೆಲಸ ಮಾಡಿಸಲು ಆಗುತ್ತಿಲ್ಲ ಎನ್ನುತ್ತಾರೆ’ ಎಂದು ಸಂಸದರು ಅಸಮಾಧಾನ ವ್ಯಕ್ತಪಡಿಸಿದರು.

‘ಹೈಟೆನ್ಶನ್‌ ವಿದ್ಯುತ್‌ ಕಂಬ ಸ್ಥಳಾಂತರವನ್ನು ಕೈಬಿಡಲಾಗಿದೆ. ಅದರ ಪಕ್ಕದಲ್ಲಿ ಹೊಸತಾಗಿ ಸರ್ವಿಸ್‌ ರಸ್ತೆ ಮಾಡಲಾಗುವುದು’ ಎಂದು ಇರ್ಕಾನ್ ಗುತ್ತಿಗೆದಾರ ಸಂಸ್ಥೆಯ ಎಂಜಿನಿಯರ್‌ ದೊಡ್ಡಯ್ಯ ಮಾಹಿತಿ ನೀಡಿದರು.

‘ಬಾತಿ–ಹರಿಹರ, ಬಾತಿ–ಕುಂದವಾಡ, ಶಾಮನೂರು ಸೇತುವೆ– ಹದಡಿ ಕ್ರಾಸ್‌ ಹೀಗೆ ಎಲ್ಲ ಸರ್ವಿಸ್‌ ರಸ್ತೆಗಳನ್ನು ಇನ್ನು ಏಳು ತಿಂಗಳ ಒಳಗೆ ಸಂಪೂರ್ಣಗೊಳಿಸಲಾಗುವುದು’ ಎಂದು ತಿಳಿಸಿದರು.

‘ಮೇಲ್ಸೇತುವೆ ನಿರ್ಮಿಸಿರುವಲ್ಲಿ ಎಲ್ಲ ಕಡೆ ನೀರು ನಿಲ್ಲುತ್ತಿದೆ. ಮಳೆ ಬಂದರೆ ಅರ್ಧ ಗಂಟೆ ವಾಹನಗಳು ಚಲಿಸುವುದು ಕಷ್ಟವಾಗುತ್ತಿವೆ. ಹಲವು ಕಡೆಗಳಲ್ಲಿ ಹೆದ್ದಾರಿಯಲ್ಲೇ ನೀರು ಹರಿಯುತ್ತಿದೆ’ ಎಂದು ಸಂಸದರು ದೂರಿದರು.

‘ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಎಲ್ಲ ಸೇತುವೆಗಳ ಮೇಲೆ ವಾಹನಗಳು ಹೋಗುವಾಗ ಒಲಾಡುವಂತಾಗುತ್ತಿದೆ. ವೈಜ್ಞಾನಿಕವಾಗಿ ನಿರ್ಮಿಸಿಲ್ಲ. ವೇಗವಾಗಿ ಹೋಗುವ ವಾಹನಗಳಿಗೆ ಇದು ತೊಂದರೆ ನೀಡುತ್ತಿದೆ’ ಎಂದು ಹೇಳಿದರು.

‘ಟೋಲ್ ಗೇಟ್‌ನಲ್ಲಿ ವಿಐಪಿ ಲೇನ್‌ ಇದೆ. ವಿಐಪಿಗಳು, ಪೊಲೀಸರು, ಆಂಬುಲೆನ್ಸ್‌ ಹೋಗಲು ಈ ಲೇನ್‌ ಇರುವುದು. ಆದರೆ ಬೇರೆ ವಾಹನಗಳು ಇದೇ ಲೇನ್‌ನಲ್ಲಿ ಚಲಿಸುವುದರಿಂದ ತೊಂದರೆಯಾಗುತ್ತಿದೆ’ ಎಂದರು.

‘ಟ್ರಕ್‍ಗಳು ಹೊರಭಾಗದ ರಸ್ತೆಯಲ್ಲಿ, ವೇಗವಾಗಿ ಚಲಿಸುವ ಕಾರು ಇನ್ನಿತರ ವಾಹನಗಳು ಒಳಭಾಗದಲ್ಲಿ ಹೋಗಬೇಕು. ಆದರೆ ಈ ನಿಯಮ ಪಾಲನೆಯಾಗುತ್ತಿಲ್ಲ. ಅದಕ್ಕಾಗಿ ಟೋಲ್‌ ಬಳಿ ನಿಯಮ ಉಲ್ಲಂಘಿಸಿರುವ ವಾಹನಗಳಿಗೆ ಪೊಲೀಸರು ದಂಡ ವಿಧಿಸುವ ಪ್ರಕ್ರಿಯೆ ಆರಂಭವಾಗಿದೆ’ ಎಂದುಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾಹಿತಿ ನೀಡಿದರು.

ರಾತ್ರಿ ಟೋಲ್‌ಗೇಟ್‌ ಬಳಿ ನಿಲ್ಲುವ ವಾಹನಗಳಿಂದ ಲಿಂಗತ್ವ ಅಲ್ಪ ಸಂಖ್ಯಾತರು ಹಣ ವಸೂಲಿ ಮಾಡುವ ದೂರುಗಳು ಇವೆ. ಅಂಥವುಗಳು ಕಂಡು ಬಂದರೆ ಹೆದ್ದಾರಿ ಪ್ರಾಧಿಕಾರದವರು 112 ಅಥವಾ ಪೊಲೀಸ್‌ ಠಾಣೆಗಳಿಗೆ ತಿಳಿಸಿದರೆ ಕ್ರಮ ವಹಿಸಲಾಗುವುದು. ಟೋಲ್‌ ಬಳಿ ರಾತ್ರಿ ಲಾರಿಗಳನ್ನು ನಿಲ್ಲಿಸಿ ಚಾಲಕರು ನಿದ್ದೆ ಮಾಡುತ್ತಾರೆ. ಇದು ಹಲವು ಕಡೆಗಳಲ್ಲಿ ಅಪಘಾತಕ್ಕೆ ಕಾರಣವಾಗಿದೆ. ಟೋಲ್‌ ಬಳಿ ರಸ್ತೆ ಬದಿಯಲ್ಲಿ ಲಾರಿ ನಿಲ್ಲಿಸದಂತೆ ಎಚ್ಚರ ವಹಿಸಿ ಎಂದು ಸೂಚನೆ ನೀಡಿದರು.

ಕಲಪನಹಳ್ಳಿ ಕೆಳಸೇತುವೆ, ಲಕ್ಕಮುತ್ತೇನಹಳ್ಳಿ, ನಿರ್ಥಡಿ ಫ್ಲೈಓವರ್‌ ಸಮಸ್ಯೆಗಳನ್ನು ಸರಿಪಡಿಸುವುದಾಗಿ ಪಿಎನ್‌ಸಿ ಸಂಸ್ಥೆಯ ಸತೀಶ್‌ ಡ್ಯಾನಿ ಭರವಸೆ ನೀಡಿದರು.

ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ವಥೋರೆ, ಯೋಜನಾಧಿಕಾರಿ ಗೌರವ್‌, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಭೂಸ್ವಾಧಿನಾಧಿಕಾರಿ ವೆಂಕಟೇಶ್‌ ನಾಯಕ್‌ ಮುಂತಾದವರು
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT