ಮಂಗಳವಾರ, ಮಾರ್ಚ್ 2, 2021
31 °C
ಸನ್ಯಾಸ ದೀಕ್ಷೆ ಸ್ವೀಕಾರ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳ ಭಕ್ತರು ಭಾಗಿ

ಒಂದೇ ಕುಟುಂಬದ 6 ಮಂದಿ ಜೈನ ದೀಕ್ಷೆ: ಅಂತಿಮ ವಿದಾಯದಲ್ಲಿ ಆತ್ಮಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಇಲ್ಲಿನ ಒಂದೇ ಕುಟುಂಬದ ಐದು ಮಂದಿ ಸದಸ್ಯರು ಸೇರಿ 6 ಮಂದಿ ಜೈನ ಸನ್ಯಾಸ ದೀಕ್ಷೆ ಕಾರ್ಯಕ್ರಮ ಸಾವಿರಾರು ಜನರ ಸಮ್ಮುಖದಲ್ಲಿ ನಡೆಯಿತು.

ಭಾನುವಾರ ರಾತ್ರಿ ಸನ್ಯಾಸ ದೀಕ್ಷೆ ತೆಗೆದುಕೊಳ್ಳುವವರ ಲೌಕಿಕ ಜೀವನಕ್ಕೆ ಅಂತಿಮ ವಿದಾಯ ಹೇಳುವ ಸಮಾರಂಭದಲ್ಲಿ ಗುಜರಾತ್, ಮುಂಬೈ, ರಾಜಸ್ಥಾನ, ಮಹಾರಾಷ್ಟ್ರ ಸೇರಿ ರಾಜ್ಯದ ಇತರೆ ಜಿಲ್ಲೆಗಳಿಂದ 10 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ದೀಕ್ಷೆ ಸ್ವೀಕರಿಸುವ ಈ 6 ಮಂದಿ ಸನ್ಯಾಸ ದೀಕ್ಷೆಯ ಉದ್ದೇಶ ಹಾಗೂ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಭಗವಾನ್ ಮಹಾವೀರರ ಹಾದಿಯನ್ನು ಆತ್ಮಚಿಂತನೆ ಮಾಡಿ ಕೊಳ್ಳಲು ಇದೊಂದು ವಿಶೇಷ ಕಾರ್ಯಕ್ರಮವಾಗಿತ್ತು.

ದೀಕ್ಷೆ ಹೇಗೆ?

ವೇದಿಕೆಯಲ್ಲಿ ಮಹಾ ವೀರರ ಸಿದ್ಧ ಶಿಲಾ ನಿರ್ಮಿಸಿದ್ದು, ಸನ್ಯಾಸ ದೀಕ್ಷೆ ಸ್ವೀಕರಿಸುವ ಈ 6 ಜನ ಸುತ್ತ ಪ್ರದಕ್ಷಿಣೆ ಹಾಕಿದರು. ಬಳಿಕ ಗುರುಗಳು ಅವರ ತಲೆಗೆ ಅಕ್ಕಿ ಹಾಕುವ ಮೂಲಕ ದೀಕ್ಷೆ ನೀಡಿದರು. ನಂತರ ಅವರಿಗೆ ಹೊಸದಾಗಿ ನಾಮಕರಣ ಮಾಡಿದರು. ಆ ಬಳಿಕ ವೇಷ ಪರಿವರ್ತನೆ ಆಗಿ ದೀಕ್ಷೆ ನೀಡಲಾಯಿತು. ದೀಕ್ಷೆಗೂ ಮುನ್ನ ಉಂಗುರ, ವಸ್ತ್ರಗಳನ್ನು ದಾನ ಮಾಡಿದರು.

ಉಳಿಯುವುದು 14 ವಸ್ತುಗಳು ಮಾತ್ರ:  ಹಣ, ಆಸ್ತಿ, ಐಶ್ವರ್ಯವಿದ್ದರೂ ಸನ್ಯಾಸ ದೀಕ್ಷೆ ಸ್ವೀಕರಿಸಿದ ಬಳಿಕ ಮೈಮೇಲೆ ಧರಿಸುವ ಬಟ್ಟೆ, ಭಿಕ್ಷೆಯಿಂದ ಪಡೆಯುವ ಆಹಾರ ಧಾನ್ಯಗಳು, ಮಲಗಲು ಶಾಲು, ಜಪ ಮಾಡಲು ಮಾಲೆ ಸೇರಿ 14 ವಸ್ತುಗಳು ಮಾತ್ರ ಉಳಿಯುತ್ತವೆ. (ಕಂಬಳಿ, ದಂಡ, ದಂಡಾಸನ, ಸಾಪಡಾ ಪುಸ್ತಕ, ನೌಕರವಾಲಿ, ಸಂತಾರ, ಆಸನ, ಸುಪಡಿ ಪೂಜನ್, ಚರಾವುಳಿ) ಈ ವಸ್ತುಗಳನ್ನು ಹರಾಜು ಹಾಕಿದಾಗ ಅವುಗಳನ್ನು ಕೊಂಡುಕೊಂಡ ಭಕ್ತರು ದೀಕ್ಷೆ ಪಡೆದವರಿಗೆ ದಾನವಾಗಿ ನೀಡಿದರು.

‘ದೀಕ್ಷೆ ಪಡೆದ ಮೇಲೆ ಐದು ವ್ರತಗಳಾದ ಅಹಿಂಸಾ ಪರಿಪಾಲನೆ ಮಾಡಬೇಕು, ಸುಳ್ಳು, ಕಳ್ಳತನ ಮಾಡಬಾರದು, ಯಾವುದೇ ಸ್ಥಿರ ಚರ ಆಸ್ತಿಗಳನ್ನು ಹೊಂದಬಾರದು ಹಾಗೂ ಬ್ರಹ್ಮಚರ್ಯ ಪಾಲನೆ ಮಾಡಬೇಕು’ ಎಂದು ಮುಖಂಡ ಗೌತಮ್ ಜೈನ್ ಮಾಹಿತಿ ನೀಡಿದರು.  

ಗುರುಗಳಾದ ಆಚಾರ್ಯ ಮೇಘದರ್ಶನ ಸುರೀಜಿ ಮಹಾರಾಜ್, ಆಚಾರ್ಯ ಗಚ್ಛಾಧಿಪತಿ ಉದಯಪ್ರಭಾ ಸುರೀಜಿ ಮಹಾರಾಜ್, ಆಚಾರ್ಯ ಹೀರಾಚಂದ್ರ ಸುರೀಜಿ ಮಹಾರಾಜ್ ಕಾರ್ಯಕ್ರಮದಲ್ಲಿ ಇದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು