ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ನಿಯಂತ್ರಣ ತೃಪ್ತಿ ತಂದಿಲ್ಲ

ಅಧಿಕಾರಿಗಳ ಮೇಲೆ ಹರಿಹಾಯ್ದ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ
Last Updated 22 ಏಪ್ರಿಲ್ 2021, 5:01 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ ನಿಯಂತ್ರಣ ಕಾರ್ಯಗಳು, ಲಸಿಕೆ ಹಾಕಿಸುವ ಕೆಲಸಗಳು ತೃಪ್ತಿ ತಂದಿಲ್ಲ ಎಂದು ಅಧಿಕಾ ರಿಗಳ ಮೇಲೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಹರಿಹಾಯ್ದರು.

ಜಿಲ್ಲೆಯಲ್ಲಿನ ಕೋವಿಡ್ ಪರಿಸ್ಥಿತಿ ಹಾಗೂ ಲಸಿಕೆ ಅಭಿಯಾನ ಕುರಿತಂತೆ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರಂಭದಿಂದ ಅಂತ್ಯದವರೆಗೆ ಎಲ್ಲ ಅಧಿಕಾರಿಗಳ ಮೇಲೆ ಸಿಡಿಮಿಡಿಗೊಂಡರು.

ಈವರೆಗೆ 45 ವರ್ಷಕ್ಕಿಂತ ಮೇಲಿನವರಿಗೆ ಲಸಿಕೆ ನೀಡುವ ಗುರಿ ಇತ್ತು. 4.17 ಲಕ್ಷ ಮಂದಿಯಲ್ಲಿ ಶೇ 31ರಷ್ಟು ಮಂದಿ ಮಾತ್ರ ಲಸಿಕೆ ಹಾಕಿಸಿಕೊಂಡಿದ್ದಾರೆ. ಉಳಿದವರಿಗೆ ಯಾಕೆ ಲಸಿಕೆ ನೀಡಲು ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು. ಮೊದಲು ಜನರಿಗೆ ಹಿಂಜರಿಕೆ ಇತ್ತು. ಈಗ ಲಸಿಕೆ ತೆಗೆದುಕೊಳ್ಳಲು ಬರುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಉತ್ತರಿಸಿದರು. ಈಗಿಲ್ಲದ ಹಿಂಜರಿಕೆ ಆವಾಗ ಯಾಕೆ ಇತ್ತು ಎಂದು ಸಚಿವರು ಮರು ಪ್ರಶ್ನಿಸಿದರು. 45 ವರ್ಷದ ಮೇಲಿನವರಿಗೆ ಯಾವುದಾದರೂ ರೋಗಗಳಿದ್ದರಷ್ಟೇ ಲಸಿಕೆ ಹಾಕಬೇಕು ಎಂಬ ಸೂಚನೆ ಮೊದಲು ಇತ್ತು. 45 ವರ್ಷದ ಮೇಲಿನ ಎಲ್ಲರಿಗೂ ಹಾಕಬೇಕು ಎಂಬುದು ಏಪ್ರಿಲ್‌ನಲ್ಲಿ ಮಾರ್ಗಸೂಚಿ ಬಂತು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್‌ ಮಾಹಿತಿ ನೀಡಿದರು. ಇಂಥ ಸಮಜಾಯಿಷಿಗಳು ಬೇಡ ಎಂದು ಬೈರತಿ ಸಿಟ್ಟಾದರು.

ಮಾರ್ಚ್ 1 ರಿಂದ ಈವರೆಗೆ ಜಿಲ್ಲೆಯಲ್ಲಿ 15,639 ಆರೋಗ್ಯ ಕಾರ್ಯ ಕರ್ತರು, 5,384 ಜನ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ. ಶೇ 92 ರಷ್ಟು ಸಾಧನೆಯಾಗಿದೆ. 45 ವರ್ಷ ಮೇಲಿನ 4,17,428 ಜನರಿಗೆ ಲಸಿಕೆ ನೀಡುವ ಗುರಿಗೆ ಈವರೆಗೆ 1,30,793 ಜನರಿಗೆ ಲಸಿಕೆ ನೀಡಿದ್ದು ಶೇ. 31 ರಷ್ಟು ಸಾಧನೆಯಾಗಿದೆ ಎಂದು ಮಹಾಂತೇಶ ಬೀಳಗಿ ಅವರು ವಿವರಿಸಿದರು.

ಮಲೇಬೆನ್ನೂರು ಸಹಿತ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕಡಿಮೆ ಲಸಿಕೆ ಪೂರೈಕೆ ಆಗುತ್ತಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು. ಅಗತ್ಯ ಇರುವಷ್ಟು ಲಸಿಕೆ ಯಾಕೆ ಪೂರೈಸುತ್ತಿಲ್ಲ ಎಂದು ಬೈರತಿ ಬಸವರಾಜ ಪ್ರಶ್ನಿಸಿದರು. ಎರಡು ದಿನಗಳಿಂದ ಲಸಿಕೆ ಸಂಗ್ರಹ ಕಡಿಮೆಯಾಗಿತ್ತು. ಬೆಂಗಳೂರಿನಿಂದ ನಿನ್ನೆ ರಾತ್ರಿ ಲಸಿಕೆ ಕಳುಹಿಸಿಕೊಟ್ಟಿದ್ದಾರೆ. ಅದು ಚಿತ್ರದುರ್ಗದಿಂದ ದಾವಣಗೆರೆಗೆ ಬರುತ್ತಿದೆ ಎಂದು ಡಿಎಚ್‌ಒ ಡಾ. ನಾಗರಾಜ್‌ ಸ್ಪಷ್ಟನೆ ನೀಡಿದರು. ‘ಲಸಿಕೆ ಕೊರತೆ ಇರುವುದನ್ನು ನನ್ನ ಗಮನಕ್ಕೆ ಯಾಕೆ ತಂದಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

‘ಕೊರೊನಾ ಸದ್ಯ 854 ಸಕ್ರಿಯ ಪ್ರಕರಣಗಳಿವೆ. ಅದು ಕಡಿಮೆಯಾದರೆ ಕೆಲಸ ಮಾಡುತ್ತಿದ್ದೀರಿ’ ಎಂದು ತಿಳಿಯಬಹುದು ಎಂದು ಸಚಿವರು ಹೇಳಿದರು. ‘ಈಗಲೂ 19ನೇ ಸ್ಥಾನದ ಲ್ಲಿದ್ದೇವೆ’ ಎಂದು ರಾಘವನ್‌ ವಿವರ ನೀಡಿದರು. ಎಷ್ಟನೇ ಸ್ಥಾನ ಎಂಬುದು ಮುಖ್ಯವಲ್ಲ. ಕೊರೊನಾ ಸೊನ್ನೆಗೆ ಬರಬೇಕು ಎಂದು ಬೈರತಿ ತಿಳಿಸಿದರು.

ಬೇರೆ ರಾಜ್ಯ, ಜಿಲ್ಲೆಗಳಿಂದ ಬರುವ ವಾಹನಗಳನ್ನು ತಪಾಸಣೆ ಮಾಡಬೇಕು. ಗಡಿ ಸಂಪರ್ಕಿಸುವ ಮಾರ್ಗಗಳಲ್ಲಿ ಬ್ಯಾರಿಕೇಡ್ ನಿರ್ಮಿಸಿ, ಥರ್ಮಲ್‍ಸ್ಕ್ಯಾನರ್, ಪಲ್ಸ್‌ ಆಕ್ಸಿ ಮೀಟರ್ ಉಪಕರಣ ಬಳಸಿ ಕೊಂಡು ಕೋವಿಡ್ ಪರೀಕ್ಷೆ ನಡೆಸಬೇಕು ಎಂದು ಸೂಚನೆ ನೀಡಿದರು.

ಕೋವಿಡ್ ಪ್ರಕರಣಗಳಿಗೆ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿನ ಶೇ 50ರಷ್ಟು ಬೆಡ್‍ಗಳನ್ನು ಮೀಸಲಿಡಬೇಕು. ಅಧಿಕಾರಿಗಳು ಇದನ್ನು ಖಚಿತಪಡಿಸಿಕೊಳ್ಳಬೇಕು. ಇದರಲ್ಲಿ ಯಾವುದೇ ಆಸ್ಪತ್ರೆಗಳಿಗೆ ವಿನಾಯಿತಿ ಇಲ್ಲ. ಸಹಕರಿಸದ ಖಾಸಗಿ ಆಸ್ಪತ್ರೆಗಳ ಮಾನ್ಯತೆ ರದ್ದುಪಡಿಸುವ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

9 ಸರ್ಕಾರಿ ಆಸ್ಪತ್ರೆಗಳಲ್ಲಿ 1,450 ಬೆಡ್ ಹಾಗೂ 11 ಖಾಸಗಿ ಆಸ್ಪತ್ರೆಗಳಲ್ಲಿ 2,273 ಬೆಡ್ ಸೇರಿದಂತೆ ಒಟ್ಟು 3,723 ಬೆಡ್‍ಗಳು ಜಿಲ್ಲೆಯಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆಗೆ ಮೀಸಲಿದ್ದು, ಈ ಪೈಕಿ ಸದ್ಯ 293 ಬೆಡ್‍ಗಳಲ್ಲಿ ಕೋವಿಡ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ 6000 ಲೀಟರ್‌ ಸಾಮರ್ಥ್ಯದ ಆಕ್ಸಿಜನ್ ಘಟಕ ಲಭ್ಯವಿದೆ. ಜಿಲ್ಲೆಯಲ್ಲಿ ಆಕ್ಸಿಜನ್‍ನ ಯಾವುದೇ ತೊಂದರೆ ಇಲ್ಲ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಸ್.ಎ. ರವೀಂದ್ರನಾಥ್, ಎಸ್.ವಿ. ರಾಮಚಂದ್ರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ವಿ. ಶಾಂತ ಕುಮಾರಿ, ಮೇಯರ್‌ ಎಸ್.ಟಿ. ವೀರೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಮೀನಾಕ್ಷಿ, ಜಿಲ್ಲಾಸ್ಪತ್ರೆ ಜಿಲ್ಲಾ ಸರ್ಜನ್ ಡಾ. ಜಯಪ್ರಕಾಶ್, ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಅವರೂ ಪಾಲ್ಗೊಂಡಿದ್ದರು.

‘ಕರ್ಪ್ಯೂ ಎಲ್ಲರ ನಿರ್ಧಾರ’

ನೈಟ್‌ ಕರ್ಫ್ಯೂ, ವೀಕೆಂಡ್‌ ಕರ್ಫ್ಯೂಗಳಿಂದ ಕೊರೊನಾ ನಿಯಂತ್ರಿಸಲು ಸಾಧ್ಯವೇ? ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ‘ತಜ್ಞರು, ವಿರೋಧ ಪಕ್ಷಗಳು ಎಲ್ಲರೂ ನೀಡಿದ ಸಲಹೆ ಮೇರೆಗೆ ಸರ್ಕಾರ ಚರ್ಚಿಸಿ ಈ ತೀರ್ಮಾನ ಕೈಗೊಂಡಿದೆ’ ಎಂದು ಸಚಿವ ಬೈರತಿ ಬಸವರಾಜ ತಿಳಿಸಿದರು.

ಉಪ ಚುನಾವಣೆಯ ಪ್ರಚಾರಕ್ಕೆ ಇಲ್ಲದ ನಿರ್ಬಂಧ ಈಗ ಯಾಕೆ? ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಚುನಾವಣೆ ಬೇರೆ. ಇದು ಬೇರೆ. ಅಲ್ಲದೇ ಚುನಾವಣೆ ಸಂದರ್ಭದಲ್ಲಿ ಇಷ್ಟೊಂದು ಪ್ರಕರಣಗಳಿರಲಿಲ್ಲ’ ಎಂದು ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT