ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದರೆ ಕೊರೊನಾ ಮೂರನೇ ಅಲೆ; ಮಕ್ಕಳ ಜತೆ ದೊಡ್ಡವರಿಗೂ ಸೋಂಕು

ಸಕಲ ಸಿದ್ಧತೆಯಲ್ಲಿ ತೊಡಗಿಸಿಕೊಂಡಿರುವ ಜಿಲ್ಲಾಡಳಿತ, ತಾಲ್ಲೂಕು ಆಡಳಿತಗಳು
Last Updated 9 ಆಗಸ್ಟ್ 2021, 3:59 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ 3ನೇ ಅಲೆ ಅತ್ತ ಕೇರಳ, ಇತ್ತ ಮಹಾರಾಷ್ಟ್ರದಲ್ಲಿದೆ. ಹಾಗಾಗಿ ದಾವಣಗೆರೆಗೆ ಬರಲು ಹೆಚ್ಚು ದಿನ ಬೇಕಾಗಿಲ್ಲ ಎನ್ನಲಾಗುತ್ತಿದೆ. ಮೂರನೇ ಅಲೆಯಲ್ಲಿ ಮಕ್ಕಳಿಗೇ ಹೆಚ್ಚು ತಗುಲಲಿದೆ ಎಂಬ ಪ್ರಚಾರ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ಕೊರೊನಾ ಮೂರನೇ ಅಲೆ ಬಂದರೆ ಒಟ್ಟು ಸೋಂಕಿತರಲ್ಲಿ ಮಕ್ಕಳ ಪ್ರಮಾಣ ಶೇ 30 ದಾಟಲ್ಲ, ಶೇ 70ಕ್ಕಿಂತ ಅಧಿಕ ಮಂದಿ 18 ದಾಟಿದವರೇ ಇರಲಿದ್ದಾರೆ ಎನ್ನುತ್ತಾರೆ ತಜ್ಞರು. ಈ ಎಲ್ಲದರ ನಡುವೆ ಮಕ್ಕಳಿಗೆ ಕೊರೊನಾ ಬಂದರೆ ರಕ್ಷಣೆಗಾಗಿ ಜಿಲ್ಲೆಯಾದ್ಯಂತ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕೇಂದ್ರ ಸರ್ಕಾರದ ತಜ್ಞರ ಸಮಿತಿ, ರಾಜ್ಯ ಸರ್ಕಾರದ ತಜ್ಞರ ಸಮಿತಿಯ ಪ್ರಕಾರ ಮೂರನೇ ಅಲೆ ಮಕ್ಕಳಿಗೆ ಬರುವ ಸಾಧ್ಯತೆ ಹೆಚ್ಚಿದೆ. 18 ವರ್ಷ ದಾಟಿದ ಬಹುತೇಕರು ಕೊರೊನಾ ನಿರೋಧಕ ಲಸಿಕೆ ತೆಗೆದುಕೊಂಡಿರುತ್ತಾರೆ ಎಂಬುದು ಕೂಡ ಕಾರಣ. ಆದರೆ ಯಾವುದಾದರೂ ಕಾಯಿಲೆ ಇರುವ ಮಕ್ಕಳನ್ನು ಹೊರತುಪಡಿಸಿ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಹಾಗಾಗಿ ಕೊರೊನಾ ಬಂದರೂ ಶೀಘ್ರ ಗುಣಮುಖರಾಗುತ್ತಾರೆ. ಹಿರಿಯರೇ ಹೆಚ್ಚು ಜಾಗ್ರತೆಯಿಂದ ಇರಬೇಕು ಎಂಬುದು ಜಿಲ್ಲಾ ಮಟ್ಟದ ವೈದ್ಯಾಧಿಕಾರಿ ಅವರ ಅಭಿಪ್ರಾಯ.

ಜಿಲ್ಲೆಯಲ್ಲಿ 18 ವರ್ಷ ದಾಟಿದವರು ಸುಮಾರು 12 ಲಕ್ಷ ಹಾಗೂ ಮಕ್ಕಳು 7 ಲಕ್ಷ ಇದ್ದಾರೆ.7 ಲಕ್ಷ ಮಕ್ಕಳಲ್ಲಿ ಶೇ 10ರಷ್ಟು ಮಂದಿಗೆ ಬರಬಹುದು ಎಂದು ಹಿಂದೆ ಅಂದಾಜು ಮಾಡಲಾಗಿತ್ತು. ಈಗಿನ ಅಂದಾಜು ಇನ್ನೂ ಕಡಿಮೆಯಾಗಿದೆ. 4000ದಷ್ಟು ಮಕ್ಕಳಿಗೆ ಬರಬಹುದು ಎಂದು ಅಂದಾಜಿಸಲಾಗಿದೆ. ಅದರಲ್ಲಿ ಆಸ್ಪತ್ರೆಗೆ 200 ಮಕ್ಕಳು ಬರಬಹುದು. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ತೀವ್ರ ಅಪೌಷ್ಟಿಕ ಮತ್ತು ಸಾಧಾರಣ ಅಪೌಷ್ಟಿಕ ಮಕ್ಕಳಿಗೆ ನೀಡಲು ಸಿಎಸ್‌ಆರ್ ಫಂಡ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆ ಸ್ಪಿರುಲಿನಾ ಚಿಕ್ಕಿ ವಿತರಿಸುತ್ತಿದೆ. ಆಯುಷ್‌ ಇಲಾಖೆ ಲೇಹ ತಯಾರಿಸುತ್ತಿದೆ. ಇದೆಲ್ಲ ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸಲು ನೀಡುವಂಥವುಗಳಾಗಿವೆ. ಮಕ್ಕಳಿಗೆ ಯಾವುದೇ ಕಾಯಿಲೆ ಕಂಡುಬಂದರೆ ಅಂಥವರನ್ನು ಸ್ಥಳೀಯ ಆಸ್ಪತ್ರೆಯ ವೈದ್ಯರು ತಪಾಸಣೆ ಮಾಡಲಿದ್ದಾರೆ. ಹೆಚ್ಚುವರಿ ಚಿಕಿತ್ಸೆ ಬೇಕಿದ್ದರೆ ತಾಲ್ಲೂಕು ಆಸ್ಪತ್ರೆಗೆಗಳಿಗೆ ಕಳುಹಿಸುತ್ತಾರೆ. ಇನ್ನೂ ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವವರನ್ನು ಜಿಲ್ಲೆಯಲ್ಲಿ ಇರುವ ನ್ಯೂಟ್ರಿಶಿಯನಲ್‌ ರಿಹ್ಯಾಬಿಲಿಟಿ ಸೆಂಟರ್‌ಗೆ ಕರೆ ತರಲಾಗುತ್ತದೆ. ಯಾವುದೇ ಮಗು ಅಪೌಷ್ಟಿಕದಿಂದ ಅಥವಾ ಅನಾರೋಗ್ಯದಿಂದ ಬಳಲಬಾರದು ಎಂಬ ಉದ್ದೇಶದಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಹಲವು ತಯಾರಿ: ಚಿಗಟೇರಿ ಜಿಲ್ಲಾ ಆಸ್ಪತ್ರೆಯ 65 ಮತ್ತು 66ನೇ ವಾರ್ಡ್‌ನಲ್ಲಿ 36 ಬೆಡ್‌ಗಳ ಪಿಐಸಿಯು (ಪಿಡಿಯಾಟ್ರಿಕ್‌ ಇಂಟೆನ್ಸಿವ್‌ ಕೇರ್‌ ಯುನಿಟ್‌) ತಯಾರಾಗುತ್ತಿದೆ. ಪ್ರತಿ ತಾಲ್ಲೂಕಿನಲ್ಲಿ ತಲಾ 5 ತೀವ್ರ ನಿಗಾ ಘಟಕಗಳ ಬೆಡ್‌ಗಳು ಸೇರಿ ಇನ್ನೂ 60 ಬೆಡ್‌ಗಳಿಗೆ ಬೇಡಿಕೆ ಇಟ್ಟಿದೆ. ಸರ್ಕಾರಿ 17, ಖಾಸಗಿ 51 ಸೇರಿ ಜಿಲ್ಲೆಯಲ್ಲಿ ಒಟ್ಟು 68 ಮಂದಿ ಮಕ್ಕಳ ತಜ್ಞರನ್ನು ಗುರುತಿಸಿ ತರಬೇತಿ ನೀಡಲಾಗಿದೆ. ಶುಶ್ರೂಷಕರಿಗೆ ತರಬೇತಿ ನಡೆಯುತ್ತಿದೆ. ಕಾನ್‌ಸಂಟ್ರೇಟರ್‌ಗಳನ್ನು ತರಿಸಿ ಇಟ್ಟುಕೊಳ್ಳಲಾಗಿದೆ. ಮೊನಿಟರ್‌, ಐಸಿಯು ಕ್ವಾಟ್‌, ಮಲ್ಟಿಪ್ಯಾರೋ ಮೀಟರ್‌, ವೆಂಟಿಲೇರ್‌ಗಳಿಗೆ ಪ್ರಸ್ತಾವ ಹೋಗಿದೆ.

15ರ ಒಳಗೆ ಎಲ್ಲವೂ ಸಿದ್ಧ
ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ ಅಲ್ಲದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಹಿತ ಎಲ್ಲವೂ ಕೊರೊನಾ ಮೂರನೇ ಅಲೆ ಎದುರಿಸಲು ಸಿದ್ಧವಾಗಿವೆ. ಕೊರೊನೋತ್ತರವಾಗಿ ಕಾಣಿಸಿಕೊಳ್ಳುವ ಕಪ್ಪು ಶಿಲೀಂಧ್ರಗಳ ಚಿಕಿತ್ಸೆಗೆ ಸದ್ಯ ಔಷಧ ಪೂರೈಕೆ ಇದೆ. ಒಮ್ಮೆಲೇ ಕಪ್ಪು ಶಿಲೀಂಧ್ರ ಪ್ರಕರಣ ಜಾಸ್ತಿಯಾದರೆ ಹೆಚ್ಚು ಬೇಕಾಗುತ್ತದೆ. ಅದಕ್ಕೆ ಬೇಡಿಕೆ ಸಲ್ಲಿಸಿದ್ದೇವೆ. ಕೊರೊನೋತ್ತರವಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಮಿಸ್‌–ಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಮ್ಯುನೋಗ್ಲೊಬುಲಿನ್‌ 50 ಶೀಷೆ ಅಂದರೆ 500 ಡೋಸ್‌ ತಂದು ಇಟ್ಟುಕೊಳ್ಳುತ್ತೇವೆ. ಅದಕ್ಕಾಗಿ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದೇವೆ. ಅವರು ಪೂರೈಸುವ ಡೋಸ್‌ಗಳ ಜತೆಗೆ ಸ್ಥಳೀಯವಾಗಿ ನಾವೂ ಸಂಗ್ರಹಿಸಿಟ್ಟುಕೊಳ್ಳುತ್ತೇವೆ.

ಆಮ್ಲಜನಕ ಘಟಕಗಳು ತಯಾರಿವೆ. ಆದರೆ, ಅದಕ್ಕೆ ಪವರ್‌ಬ್ಯಾಕಪ್‌ ಆಗಬೇಕು. ಅವೆಲ್ಲವೂ ಸದ್ಯದಲ್ಲಿಯೇ ಆಗಲಿವೆ. ಇವೆಲ್ಲ ಕಾರ್ಯಗಳು, ತಯಾರಿಗಳು ಆ.15ರ ಒಳಗೆ ಮುಗಿಯಲಿವೆ.

ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ ಎಂದರೆ ಜನರು ಕೊರೊನಾ ಸೋಂಕು ತಗುಲಿಸಿಕೊಂಡು ಬಂದು ಚಿಕಿತ್ಸೆ ಪಡೆಯಿರಿ ಎಂದರ್ಥವಲ್ಲ. ಜನರು ಕೂಡ ಎಚ್ಚರಿಕೆಯಿಂದ ಇರಬೇಕು. ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಕೊರೊನಾ ಬಾರದಂತೆ ನೋಡಿಕೊಳ್ಳಬೇಕು.
-ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ

ವಿವಿಧ ಕಾಯಿಲೆಗಳ 142 ಮಕ್ಕಳು
ಅಪೌಷ್ಟಿಕ ಮಕ್ಕಳಲ್ಲದೇ ಹೃದಯದ ಸಮಸ್ಯೆ, ಶ್ವಾಸಕೋಶದ ಸಮಸ್ಯೆ ಹೀಗೆ ವಿವಿಧ ರೋಗಗಳಿಂದ ಬಳಲುತ್ತಿರುವ 142 ಮಕ್ಕಳನ್ನು ಗುರುತಿಸಲಾಗಿದೆ. ಅವರಿಗೆ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಅಡಿಯಲ್ಲಿ ಜಿಲ್ಲಾ ತ್ವರಿತ ನಿಗಾ ಘಟಕದಲ್ಲಿ (ಇಐಸಿ) ಚಿಕಿತ್ಸೆ ನೀಡುವುದರ ಜತೆಗೆ ಅವರ ಆರೋಗ್ಯದ ಬಗ್ಗೆ ನಿರಂತರ ನಿಗಾ ಇಡಲಾಗಿದೆ. ಒಂದೂವರೆ ತಿಂಗಳ ಮಗುವಿನಿಂದ ಹಿಡಿದು 2 ವರ್ಷದವರೆಗೆ ವಿವಿಧ ಲಸಿಕೆ ನೀಡಲಾಗುತ್ತದೆ. ಬಳಿಕ 5, 10, 15 ವರ್ಷಕ್ಕೆ ಲಸಿಕೆ ನೀಡಲಾಗುತ್ತದೆ. ಇದರಿಂದ ತಪ್ಪಿಸಿಕೊಂಡಿರುವ ಮಕ್ಕಳನ್ನು ಹುಡುಕಿ ಲಸಿಕೆ ನೀಡಿ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತಿದ್ದೇವೆ. ಅಪೌಷ್ಟಿಕವಾಗಿ ಬಳಲುವ ಮಕ್ಕಳ ಹೆತ್ತವರಿಗೆ ಕೊರೊನಾ ನಿರೋಧಕ ಲಸಿಕೆ ನೀಡಲಾಗುತ್ತಿದೆ. ಅಂಥ ಹೆತ್ತವರು ಜಿಲ್ಲೆಯಲ್ಲಿ 16,670 ಮಂದಿ ಇದ್ದು, 11 ಸಾವಿರ ಮಂದಿಗೆ ಲಸಿಕೆ ನೀಡಲಾಗಿದೆ. ಉಳಿದವರಿಗೆ ಎರಡು ಮೂರು ದಿನಗಳಲ್ಲಿ ನೀಡಲಾಗುವುದು.
-ಡಾ.ಕೆ.ಎಸ್‌. ಮೀನಾಕ್ಷಿ, ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ

ಹಿಡನ್ ಪ್ರಕರಣಗಳ ಪತ್ತೆಗೆ ಕ್ರಮ
ಜ್ವರ, ಶೀತ ಸಹಿತ ಕೊರೊನಾ ಲಕ್ಷಣಗಳಿದ್ದರು ಆಸ್ಪತ್ರೆಗೆ ಬಾರದೇ ಮನೆಯಲ್ಲಿಯೇ ಉಳಿಯುವವರನ್ನು ಪತ್ತೆಹಚ್ಚಲಾಗುತ್ತಿದೆ. ಈ ರೀತಿ ಮರೆಯಾದ ಪ್ರಕರಣಗಳು ಪತ್ತೆಯಾದರೆ ಕೊರೊನಾ ಹರಡುವುದನ್ನು ನಿಯಂತ್ರಿಸವುದು ಕಷ್ಟವಲ್ಲ.

ಕೊರೊನಾ ಒಬ್ಬರಿಗೆ ಬಂದರೆ ಅದನ್ನು ಪ್ರಾಥಮಿಕ ಹಂತ ಎನ್ನುತ್ತೇವೆ. ಅವರಿಂದ ಮನೆಯವರಿಗೆ ಬಂದರೆ ಅದು ಸ್ಥಳೀಯ ಹರಡುವಿಕೆ ಹಂತ. ಒಬ್ಬರಿಗೆ ಸೋಂಕು ಬಂದ ಕೂಡಲೇ ಮನೆಯ ಸದಸ್ಯರನ್ನು, ಮನೆಗೆ ಬಂದು ಹೋಗುವವರನ್ನು ಬೇರ್ಪಡಿಸಿ ಅವರನ್ನು ಪರೀಕ್ಷೆ ಮಾಡಿ ನಿಗಾ ಇಡಬೇಕು. ಅದು ಯಶಸ್ವಿಯಾಗದೇ ಇದ್ದರೆ ಸುತ್ತಮುತ್ತಲ ಮನೆಗಳಿಗೆ, ಬೀದಿಗೆ ಬರುತ್ತದೆ. ಅದನ್ನು ಸಮುದಾಯದಲ್ಲಿ ಹರಡುವಿಕೆ ಎಂದು ಗುರುತಿಸಲಾಗುತ್ತದೆ. ಅಲ್ಲಿಂದ ಎಲ್ಲರಿಗೂ ಹರಡಿದರೆ ಎಪಿಡಮಿಕ್‌ ಎನ್ನುತ್ತೇವೆ. ಮೊದಲ ಹಂತದಲ್ಲೇ ನಿಯಂತ್ರಿಸಲು ಈ ಬಾರಿ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ.

ರಿಸ್ಕ್‌ ಗ್ರೂಪ್‌ ಎಂದು ಪೌರಕಾರ್ಮಿಕರು, ಬಸ್‌, ಲಾರಿ, ಆಟೊ, ಇತರ ವಾಹನಗಳ ಚಾಲಕ, ನಿರ್ವಾಹಕ, ಕ್ಲೀನರ್‌ಗಳು, ಎಪಿಎಂಸಿ, ಹೋಟೆಲ್‌, ಡಾಬ, ಹಣ್ಣು–ತರಕಾರಿ ಮಾರಾಟಗಾರರು ಇವರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ಮಹಾರಾಷ್ಟ್ರ ಮತ್ತು ಕೇರಳದಿಂದ ಬರುವವರು 72 ಗಂಟೆಗಳ ಒಳಗೆ ಪರೀಕ್ಷೆಗೆ ಒಳಗಾದ ನೆಗೆಟಿವ್‌ ವರದಿ ತರಬೇಕು. ವಸತಿನಿಲಯಗಳ ಮೇಲೆ ಕೂಡ ನಿಗಾ ಇಡಲಾಗಿದೆ.
-ಡಾ.ಜಿ.ಡಿ ರಾಘವನ್‌, ಜಿಲ್ಲಾ ಸರ್ವೇಕ್ಷಣಾಧಿಕಾರಿ

ಆಮ್ಲಜನಕ ಘಟಕ ಕಾಮಗಾರಿ ಶುರು
ಹರಪನಹಳ್ಳಿ:
ಸಂಸದ ಜಿ.ಎಂ.ಸಿದ್ದೇಶ್ವರ ಘೋಷಣೆ ಮಾಡಿದಂತೆ ಆಕ್ಸಿಜನ್ ಘಟಕದ ಕಾಮಗಾರಿ ಭರದಿಂದ ಸಾಗಿದೆ. ಸೋಂಕಿತರ ಸಂಖ್ಯೆ ಹೆಚ್ಚಾದರೆ ಸಾರ್ವಜನಿಕ ಆಸ್ಪತ್ರೆಯ 100 ಹಾಸಿಗೆಗಳನ್ನು ಸಿದ್ಧಪಡಿಸಲು ತಾಲ್ಲೂಕು ಆಡಳಿತ ನಿರ್ಧರಿಸಿದೆ. 60 ಬೆಡ್ ಗೂ ಆಕ್ಸಿಜನ್ ವ್ಯವಸ್ಥೆಯಿದ್ದು, ಘಟಕದ ಆರಂಭಿಸಿದರೆ, 100 ಹಾಸಿಗೆಗೂ ವಿಸ್ತಾರವಾಗಲಿದೆ.

ಸ್ಥಳೀಯ ಪುರಸಭೆ ಅಧಿಕಾರಿಗಳು ಮಾಸ್ಕ್ ಇಲ್ಲದೇ ಓಡಾಡುವರಿಗೆ ದಂಡ ವಿಧಿಸಲು ಆರಂಭಿಸಿದ್ದಾರೆ. ಒಂದೇ ದಿನಕ್ಕೆ ₹ 2,200 ದಂಡ ವಸೂಲಿಯಾಗಿದೆ. ಈ ಬಗ್ಗೆ ಧ್ವನಿವರ್ಧಕ ಪ್ರಚಾರ ಕೈಗೊಂಡಿದ್ದಾರೆ. ಅಂಗಡಿಗಳಲ್ಲಿ ಮಾಸ್ಕ್ ಹಾಕುವುದು. ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡುತ್ತಿದ್ದಾರೆ. ಕೆಮ್ಮು, ಜ್ವರ, ತಲೆನೋವು, ನೆಗಡಿಗೆ ಮಾತ್ರ ಕೇಳಲು ಬಂದವರ ನಂಬರ್, ಹೆಸರು, ಊರಿನ ಮಾಹಿತಿ ಪಡೆಯುವಂತೆ ಕಟ್ಟುನಿಟ್ಟಿನ ಆದೇಶ ಮಾಡಲಾಗಿದೆ.

ಹತ್ತು ಮಕ್ಕಳ ಹಾಸಿಗೆಗಳ ಪ್ರತ್ಯೇಕ ಕೊಠಡಿ ಸಿದ್ಧಪಡಿಸಲಾಗಿದೆ. ಆಕ್ಸಿಜನ್ ಘಟಕದ ಪ್ರಯೋಗ ಯಶಸ್ವಿಯಾಗಿದ್ದು, ವಾರದಲ್ಲಿ ಆರಂಭಗೊಳ್ಳಲಿದೆ. ಎರಡನೆ ಅಲೆಯಲ್ಲಿ 3,800 ಸೋಂಕಿತರ ಸಂಖ್ಯೆ ಆಧರಿಸಿ, ಶೇ 60ರಷ್ಟು ಔಷಧ ಖರೀದಿಗೆ ಟಾಸ್ಕ್ ಫೋರ್ಸ್ ಸಮಿತಿ ಆದೇಶಿಸಿದೆ ಎಂದು ಉಪ ವಿಭಾಗಾಧಿಕಾರಿ ಎಚ್.ಜಿ. ಚಂದ್ರಶೇಖರಯ್ಯ ತಿಳಿಸಿದರು.

ಆಮ್ಲಜನಕ ಘಟಕಕ್ಕೆ ಬೇಕು ವಿದ್ಯುತ್‌ ಜನರೇಟರ್‌
ಹೊನ್ನಾಳಿ:
ಆಮ್ಲಜನಕ ಉತ್ಪಾದನಾ ಘಟಕ ತಯಾರಾಗಿದೆ. ಒಂದು ನಿಮಿಷಕ್ಕೆ 500 ಲೀಟರ್ ಆಮ್ಲಜನಕ ಉತ್ಪತ್ತಿಯಾಗುವ ಸಾಮರ್ಥ್ಯ ಹೊಂದಿದೆ. ಅದಕ್ಕೆ ವಿದ್ಯುತ್‌ ನಿರಂತರ ಪೂರೈಸಲು ಒಂದು ಜನರೇಟರ್‌ ಅಗತ್ಯವಿದೆ.

ಮಕ್ಕಳಿಗಾಗಿ ಬೆಡ್ ಗಳನ್ನು ಕಾಯ್ದಿರಿಸಲಾಗಿದೆ. ಒಂದು ಐಸಿಯುಗೆ ಮೂರು ಜನ ಸ್ಟಾಫ್ ನರ್ಸ್‌, ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮೂರು ಜನ ಡಿ. ಗ್ರೂಪ್ ನೌಕರರನ್ನು ನೇಮಕ ಮಾಡಲಾಗಿದೆ.

ಕೊರೊನಾ ಮೂರನೇ ಅಲೆಗೆ ಸಂಬಂಧಿಸಿದಂತೆ ಚಿಕಿತ್ಸೆ ನೀಡುವ ವೈದ್ಯರಿಗೆ ಸಮಯಕ್ಕೆ ಸರಿಯಾಗಿ ಔಷಧ, ಮಾಸ್ಕ್ ಗಳು ಹಾಗೂ ಇಂಜೆಕ್ಷನ್‌ಗಳನ್ನು ಪೂರೈಕೆ ಮಾಡಬೇಕೆಂಬ ಬೇಡಿಕೆ ಇದೆ. ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಿದ್ದಾರೆ ಎಂದು ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಚಂದ್ರಪ್ಪ ಮಾಹಿತಿ ನೀಡಿದರು.

10 ಹಾಸಿಗೆಗೆ ಆಮ್ಲಜನಕ ಪೂರೈಕೆ
ಚನ್ನಗಿರಿ:
ತಾಲ್ಲೂಕಿನ ಸರ್ಕಾರಿ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ಮಕ್ಕಳಿಗೆ ಪ್ರತ್ಯೇಕ ವಾರ್ಡ್ ಅನ್ನು ತೆರೆಯಲು ಸಿದ್ಧತೆ ಮಾಡಲಾಗಿದೆ. ಪಟ್ಟಣದ ಆರೋಗ್ಯ ಕೇಂದ್ರದಲ್ಲಿ 10 ಹಾಸಿಗೆಗಳಿಗೆ ಆಮ್ಲಜನಕ ಪೂರೈಕೆ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಘಟಕ ಪ್ರಾರಂಭಿಸಲು ಸಾಬೂನು ಮತ್ತು ಮಾರ್ಜಕ ನಿಗಮದಿಂದ ಅಧ್ಯಕ್ಷ, ಶಾಸಕ ಮಾಡಾಳ್ ವಿರೂಪಾಕ್ಷಪ್ಪ ₹ 1 ಕೋಟಿ ಅನುದಾನ ಒದಗಿಸಿದ್ದರು.

57 ಆಮ್ಲಜನಕ ಕಾನ್ಸನ್‌ಟ್ರೇಟರ್‌ಗಳನ್ನು ದಾನಿಗಳ ಸಹಾಯದಿಂದ ಸಂಗ್ರಹಿಸಿಡಲಾಗಿದೆ. ಹಾಗೆಯೇ 6 ವೆಂಟಿಲೇಟರ್‌ಗಳಿವೆ. ಉಪಕರಣಗಳ ಕೊರತೆ ಇರುವುದಿಲ್ಲ. 10 ಹಾಸಿಗೆಗಳಿಗೆ ಆಮ್ಲಜನಕ ಪೂರೈಕೆ ವ್ಯವಸ್ಥೆಯನ್ನು ಮಾಡಲಾಗಿದೆ. ಸೋಂಕಿತರ ಸಂಖ್ಯೆ ಹೆಚ್ಚಾದಲ್ಲಿ ಇನ್ನು ಹೆಚ್ಚು ಹಾಸಿಗೆಗಳಿಗೆ ಆಮ್ಲಜನಕ ಪೂರೈಕೆ ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದು ಆಡಳಿತ ವೈದ್ಯಾಧಿಕಾರಿ ಡಾ.ಎನ್. ರಾಜಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT