ಗುರುವಾರ , ಜೂನ್ 24, 2021
27 °C

ಕೊರೊನಾ: ಮೂರು ಮಂದಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೊರೊನಾ ಸೋಂಕಿನಿಂದ ಮೂವರು ಮೃತಪಟ್ಟಿರುವುದು ಬುಧವಾರ ದೃಢಪಟ್ಟಿದೆ. ಒಟ್ಟು 196 ಮಂದಿಗೆ ಕೊರೊನಾ ಇರುವುದು ಖಚಿತವಾಗಿದೆ.

ನಗರದ ನಿಜಲಿಂಗಪ್ಪ ಬಡವಾಣೆಯ 79 ವರ್ಷದ ವೃದ್ಧೆ ಜ್ವರ, ಉಸಿರಾಟದ ಸಮಸ್ಯೆ, ರಕ್ತದೊತ್ತಡದಿಂದ ಬಳಲುತ್ತಿದ್ದರು. ಅವರು ಮಂಗಳವಾರ ಮೃತಪಟ್ಟಿದ್ದಾರೆ. ಜಯನಗರದ 46 ವರ್ಷದ ವ್ಯಕ್ತಿ ಜ್ವರ ಮತ್ತು ಉಸಿರಾಟದ ಸಮಸ್ಯೆಯಿಂದ ಸೋಮವಾರ ನಿಧನರಾದರು. ಹರಿಹರ ಇಂದಿರಾನಗರದ 43 ವರ್ಷದ ಮಹಿಳೆ ಜ್ವರ, ಉಸಿರಾಟದ ಸಮಸ್ಯೆ, ಮಧುಮೇಹ, ರಕ್ತದೊತ್ತಡದಿಂದ ಸೋಮವಾರ ಸಾವನ್ನಪ್ಪಿದರು. ಈ ಎಲ್ಲರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದಾವಣಗೆರೆ ತಾಲ್ಲೂಕಿನ 129 ಮಂದಿಗೆ ಕೊರೊನಾ ಬಂದಿದೆ. ಹರಿಹರ ತಾಲ್ಲೂಕಿನ 14, ಜಗಳೂರು ತಾಲ್ಲೂಕಿನ 10, ಚನ್ನಗಿರಿ ತಾಲ್ಲೂಕಿನ 20, ಹೊನ್ನಾಳಿ–ನ್ಯಾಮತಿ ತಾಲ್ಲೂಕುಗಳ 11 ಮಂದಿಗೆ ಸೋಂಕು ತಗುಲಿದೆ. ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೊರಜಿಲ್ಲೆಗಳ 12 ಮಂದಿಯಲ್ಲಿ ಸೋಂಕು ಇರುವುದು ಖಚಿತವಾಗಿದೆ.

ಪ್ರೊ. ಮುರುಗಯ್ಯ ನಿಧನ

ದಾವಣಗೆರೆ ವಿಶ್ವವಿದ್ಯಾಲಯದ ಎಂಬಿಎ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ. ಮುರುಗಯ್ಯ (62) ಬುಧವಾರ ನಿಧನರಾದರು.

ಒಂದು ವಾರದಿಂದ ಕೊರೊನಾದಿಂದ ಬಳಲುತ್ತಿದ್ದ ಅವರು ಮೊದಲು ಮನೆಯಲ್ಲೇ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರರಿದ್ದಾರೆ.

ಕರ್ನಾಟಕ ವಿಶ್ವವಿದ್ಯಾಲಯದ ಬೆಳಗಾವಿ ಆವರಣ, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡಿದ್ದ ಪ್ರೊ. ಮುರುಗಯ್ಯ ಅವರು, ಪ್ರಸ್ತುತ ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಬರುವ ಜೂನ್ 30ರಂದು ಕರ್ತವ್ಯದಿಂದ ನಿವೃತ್ತರಾಗಲಿದ್ದರು.

ಪ್ರೊ. ಮುರುಗಯ್ಯ ಅವರು ವ್ಯವಹಾರ ನಿರ್ವಹಣೆಯ ಅಧ್ಯಯನ, ಶಿಕ್ಷಣ, ಸಂಶೋಧನೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಗೌರವಯುತ ಸ್ಥಾನ ಗಳಿಸಿದ್ದರು. ಅವರ ನಿಧನದಿಂದ ವಿಶ್ವವಿದ್ಯಾಲಯಕ್ಕೆ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ನಷ್ಟವಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರಣಪ್ಪ ಹಲಸೆ ಸಂತಾಪ ಸೂಚಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು