ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗ ನಿರೋಧಕ ಶಕ್ತಿ ಇದ್ದರೆ ಕೊರೊನಾ ಸಮಸ್ಯೆ ಇಲ್ಲ

Last Updated 17 ಮಾರ್ಚ್ 2020, 13:10 IST
ಅಕ್ಷರ ಗಾತ್ರ

ದಾವಣಗೆರೆಯಲ್ಲಿ ನಡೆದ ಪ್ರಜಾವಾಣಿ ಫೋನ್‌ ಇನ್ ಕಾರ್ಯಕ್ರಮದಲ್ಲಿ ಸಿಟಿ ಮೆಡಿಕಲ್ ಸೆಂಟರ್‌ನ ಡಾ. ಯು.ಆರ್ ರಾಜು ಮಾತನಾಡಿದರು.

* ಮೇಲಿಂದ ಮೇಲೆ ಕೆಮ್ಮು, ನೆಗಡಿ ಇದೆ. ಏನಾದರೂ ಸಮಸ್ಯೆ ಇದೆಯಾ?

- ಕೆ.ಬಿ.ರಾಜಪ್ಪ,

ಇಂದಿನ ವಾತಾವರಣದಲ್ಲಿ ಧೂಳು, ಹೊಗೆ ಇದ್ದು, ನೆಗಡಿ, ಕೆಮ್ಮು ಸಹಜವಾಗಿ ಬರುತ್ತದೆ. ಬೇಗ ಬಿಡಲಿಲ್ಲ ಎಂದಾದರೆ ಹತ್ತಿರದ ಆರೋಗ್ಯ ಕೇಂದ್ರಗಳನ್ನು ವಿಚಾರಿಸಿ. ಅಲರ್ಜಿ ಇಲ್ಲವೇ ನ್ಯುಮೊನಿಯ ಲಕ್ಷಣಗಳು ಇರಬಹುದು. 5 ದಿವಸದಿಂದ ಇದ್ದರೆ ಸರಿ ಇಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಫಿಸಿಷಿಯನ್ ಬಳಿ ತೋರಿಸಿಕೊಳ್ಳಿ, ಆಯಾಸ, ಉಸಿರಾಡಲು ತೊಂದರೆ ಇಲ್ಲದಿರುವುದರಿಂದ ಭಯಪಡುವ ಲಕ್ಷಣಗಳು ಇಲ್ಲ. ಏನು ತೊಂದರೆ ಇಲ್ಲ.

* ಅಸ್ತಮಾ ಇದ್ದು, ಉಸಿರಾಟದ ತೊಂದರೆ ಇರುವುದರಿಂದ ಕೊರೊನಾ ವೈರಸ್ ಹರಡುವ ಸಾಧ್ಯತೆ ಇದೆಯೇ?

- ಭೂತೇಶ್, (42 ವರ್ಷ) ಆದಿವಾಲ, ಹಿರಿಯೂರು

ಅಸ್ತಮಾ ಇದ್ದವರು ಶ್ವಾಸಕೋಶಗಳು ಇತರರಂತೆ ಕೆಲಸ ಅಷ್ಟು ಚೆನ್ನಾಗಿರಲ್ಲ. ಅವರಿಗೆ ಯಾವುದೇ ಸೋಂಕು ತೊಂದರೆಗೆ ಒಳಗಾಗುತ್ತಾರೆ ಎನ್ನುವುದು ಸಹಜ. ಅಸ್ತಮಾ ಬಂದವರಿಗೆ ತೊಂದರೆಗೆ ಒಳಗಾಗುವ ಸಾಧ್ಯತೆ ಇದೆ. ಆದರೆ ನಿಮಗೆ ಕೋವಿಡ್‌–19 ಲಕ್ಷಣಗಳು ಇಲ್ಲ. ಕೊರೊನಾ ರೀತಿ ತುಂಬಾ ವೈರಸ್‌ಗಳು ಇವೆ. ಅದರಲ್ಲಿ ಒಂದು ತರಹದ ವೈರಸ್‌ ಅಷ್ಟೇ. ಒಬ್ಬರಿಂದ ಮತ್ತೊಬ್ಬರಿಗೆ ಬೇಗ ಹರಡುವುದರಿಂದ ಕೊರೊನಾ ವೈರಸ್ ಅಪಾಯಕಾರಿ. ಆದರೆ ನಿಮ್ಮ ವಯಸ್ಸಿಗೆ ತೊಂದರೆಯಾಗುವುದಿಲ್ಲ. ಭಯ ಬೇಡ. ಚಿಂತೆ ಮಾಡುವ ವಿಷಯ ಎಂದರೆ ನಿಮಗೆ ತುಂಬಾ ಆಯಾಸ ಆಗುತ್ತದೆ. ತುಂಬಾ ಗಂಭೀರವಾದರೆ ವೈದ್ಯರಿಗೆ ತೋರಿಸುವುದು ಒಳ್ಳೆಯದು.

* ಪ್ರಾರ್ಥನಾ ಮಂದಿರಲ್ಲಿ ಪ್ರಾರ್ಥನೆ ಮಾಡುವ ಮೊದಲು ಮೂಗು, ಕಣ್ಣು, ಬಾಯಿ, ಕಿವಿ ಸ್ವಚ್ಛಗೊಳಿಸುತ್ತೇವೆ. ನಮಗೆ ಕೊರೊನಾ ವೈರಸ್ ಹರಡುವ ಸಾಧ್ಯತೆ ಇದೆಯೇ?

- ಅರ್ಫತ್ ಉಲ್ಲಾ, ದಾವಣಗೆರೆ,

ಕೊರೊನಾ ಬರುವುದು ಬೇರೆಯವರು ಜೋರಾಗಿ ಕೆಮ್ಮಿದಾಗ ಅಥವಾ ಸೀನಿದಾಗ ಒಂದು ಮೀಟರ್ ಒಳಗೆ ನಿಂತಿದ್ದರೆ ನೇರವಾಗಿ ಬರಬಹುದು. ರೋಗಿಯು ಕೆಮ್ಮಿದಾಗ ವೈರಸ್‌ ಕೆಳಗೆ ಬಿದ್ದು, ಬಟ್ಟೆ, ಬೆಡ್‌ ಶೀಟ್ ಇಲ್ಲವೇ ಕಾರ್ಪೆಟ್ ಮೇಲೆ ಬಿದ್ದರೆ 8 ಗಂಟೆ ಬದುಕಿರುತ್ತದೆ. ಒಂದು ವೇಳೆ ಪ್ರಾರ್ಥನೆ ಮಾಡುವ ಸ್ಥಳದಲ್ಲಿ ವೈರಸ್ ಇದ್ದರೆ ಆ ಸ್ಥಳವನ್ನು ಮುಟ್ಟಿದ ನಂತರ ಮೂಗಿಗೆ ಒತ್ತಿಕೊಂಡರೆ ವೈರಸ್ ಹರಡುತ್ತದೆ. ನೀವು ನೀರಿನಲ್ಲಿ ತೊಳೆದುಕೊಂಡರೆ ಪ್ರಯೋಜನವಿಲ್ಲ. ಪ್ರಾರ್ಥನೆಗಿಂತ ಮೊದಲು ಶುಚಿ ಮಾಡಿಕೊಳ್ಳುವಂತೆ ಮುಗಿದ ನಂತರ ಡೆಟ್ಟಾಲ್ ಅಥವಾ ‌ಹ್ಯಾಂಡ್ ಸ್ಯಾನಿಟೈಸರ್ ಬಳಸುವುದು ಒಳ್ಳೆಯದು. ಪ್ರಾರ್ಥನಾ ಸ್ಥಳಗಳಿಗೆ ಹಲವರು ಭೇಟಿ ನೀಡಲಿದ್ದು, ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಮುಖದ ಮೇಲೆ ಮಾಸ್ಕ್‌ ಧರಿಸಿಕೊಳ್ಳಲು ಅನುಮತಿ ಇದ್ದರೆ ಒಳ್ಳೆಯದು. ಇಲ್ಲದೇ ಹೋದಲ್ಲಿ ಪ್ರಾರ್ಥನೆ ಮುಗಿದ ಬಳಿಕ ಕೈಯನ್ನು ಡೆಟ್ಟಾಲ್ ನೀರು ಇಲ್ಲವೇ ಹ್ಯಾಂಡ್ ಸ್ಯಾನಿಟೈಸರ್ ಹಚ್ಚಿಕೊಳ್ಳಬೇಕು. ಪ್ರಾರ್ಥನೆ ಮುಗಿದ ನಂತರ ಧರಿಸಿದ ಬಟ್ಟೆಗಳನ್ನು ಒಗೆಯಲು ಹಾಕುವುದು ಒಳ್ಳೆಯದು. ಒಬ್ಬರ ಬಟ್ಟೆಯನ್ನು ಮತ್ತೊಬ್ಬರು ಬಳಸಬಾರದು. ಊಟಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ.

* ವಾಂತಿ ಭೇದಿ ಕಾಣಿಸಿಕೊಂಡಾಗ ತುರ್ತಾಗಿ ಏನು ಕ್ರಮ ತೆಗೆದುಕೊಳ್ಳಬೇಕು?

- ಹಾಲೇಶನಾಯ್ಕ, ಬಸವಾ‍ಪಟ್ಟಣ

ಭೇದಿ ಬಾರದ ಹಾಗೆ ನೋಡಿಕೊಳ್ಳಬೇಕು ಹಾಗೂ ಬಂದ ನಂತರ ಎಚ್ಚರವಹಿಸಬೇಕು, ಕಾದು ಆರಿಸಿದ ಇಲ್ಲವೇ ಶುದ್ಧ ಕುಡಿಯುವ ನೀರು ಕುಡಿಯಬೇಕು. ಸ್ವಚ್ಛವಾಗಿರುವ ಜಾಗದಲ್ಲಿ ನೀರನ್ನು ಇಡಬೇಕು. ನಳ ಇಟ್ಟಿರುವ ನೀರಿನ ಕಂಟೈನರ್ ಕುಡಿಯಬೇಕು. ಹೊರಗಡೆ ಊಟ ಮಾಡಬಾರದು.

18–45 ವಯಸ್ಸಿನವರಿಗೆ ಅಷ್ಟಾಗಿ ಪರಿಣಾಮ ಬೀರುವುದಿಲ್ಲ. ಆದರೆ ವಯಸ್ಸಾದವರಿಗೆ ನೀರಿನ ಅಂಶ ಕಡಿಮೆ ಇರುತ್ತದೆ. ಸ್ವಲ್ಪ ಕಡಿಮೆಯಾದರೂ ಅವರಿಗೆ ಸುಸ್ತಾಗಿಬಿಡುತ್ತಾರೆ. ಆದ್ದರಿಂದ ಶುದ್ಧ ನೀರು ಕುಡಿಯುವ ಅಭ್ಯಾಸ ಮಾಡಬೇಕು. ಎಳನೀರು ಕುಡಿಯಬಹುದು, ಇಲ್ಲವೇ ಕಾದು ಆರಿದ ನೀರಿಗೆ ಉಪ್ಪು ಬೆರೆಸಿ ಕುಡಿಯಬಹುದು. ಒಆರ್‌ಎಸ್ ಪ್ಯಾಕೆಟ್ ಖರೀದಿಸಿ ಕುಡಿದರೆ ಕಡಿಮೆಯಾಗುತ್ತದೆ.

ನೀರು ಕುಡಿಯಲು ಆಗದೇ ಇದ್ದರೆ ತುಂಬಾ ವಾಂತಿಯಾಗುತ್ತಿದ್ದರೆ, ಹೆಚ್ಚಿನ ಜ್ವರ ಬಂದರೆ, ನೀರಿನ ತರಹ ಭೇದಿ ಹೋದರೆ, ಮೂತ್ರ ಕಡಿಮೆ ಬಂದರೆ ಇವು ಅಪಾಯಕಾರಿ ಲಕ್ಷಣಗಳು. ಆಗ ಹತ್ತಿರದ ಆರೋಗ್ಯಕೇಂದ್ರಗಳನ್ನು ಸಂಪರ್ಕಿಸಬಹುದು.

* ಸನ್‌ಸ್ಟ್ರೋಕ್ ತಡೆಯುವುದು ಹೇಗೆ?

- ಶಿವಾನಂದ್, ಶಿವಮೊಗ್ಗ

ವಾತಾವರಣದ ಉಷ್ಣತೆಯಿಂದಾಗಿ ನಮ್ಮ ಶರೀರಕ್ಕೆ ಇಂತಿಷ್ಟು ಪ್ರಮಾಣದ ಉಷ್ಣತೆ ತಡೆದುಕೊಳ್ಳುವ ಶಕ್ತಿ ಇರುತ್ತದೆ. ಅದು ಮಿತಿ ಮೀರಿದಾಗ ಸನ್‌ಸ್ಟ್ರೋಕ್ ಆಗುತ್ತದೆ. ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ ಬಿಸಿಲಿಗೆ ಹೋಗದಿದ್ದರೆ ಒಳ್ಳೆಯದು. ಹೋದರೂ ತಲೆ, ಕಣ್ಣುಗಳನ್ನು ಬಟ್ಟೆಯಲ್ಲಿ ಮುಚ್ಚಿಕೊಂಡು ಹೋಗುವುದು ಒಳ್ಳೆಯದು.

* ಸೊಳ್ಳೆಗಳನ್ನು ನಿಯಂತ್ರಿಸುವುದು ಹೇಗೆ? ಸೊಳ್ಳೆ ಬತ್ತಿ ಬಳಸಿದರೆ ಉಸಿರಾಟದ ಸಮಸ್ಯೆ ಬರುತ್ತದೆ ಅದನ್ನು ತಡೆಯುವುದು ಹೇಗೆ?

- ಶೀಲಾ ಆರ್‌.ಡಿ. ರಿಪ್ಪನ್‌‍ಪೇಟೆ

ಮಲೇರಿಯಾ, ಡೆಂಗಿ, ಚಿಕುನ್‌ಗುನ್ಯ ರೋಗಗಳನ್ನು ಹರಡುವ ಸೊಳ್ಳೆಗಳನ್ನು ಕೊಲ್ಲಬೇಕೇ ಹೊರತು ಎಲ್ಲಾ ಸೊಳ್ಳೆಗಳನ್ನು ಕೊಂದರೆ ಪರಿಸರಕ್ಕೆ ನಷ್ಟ. ರಾತ್ರಿ ವೇಳೆ ಕಚ್ಚುವ ಸೊಳ್ಳೆಯಿಂದ ಮಲೇರಿಯಾ ಹರಡುತ್ತದೆ. ಡೆಂಗೆ ಹಾಗೂ ಚಿಕುನ್‌ಗುನ್ಯಾ ರೋಗ ಬರುವ ಸೊಳ್ಳೆಗಳು ಹಗಲು ವೇಳೆ ಕಚ್ಚುತ್ತವೆ. ಇವೆರಡು ಸೊಳ್ಳೆಗಳು ನೀರು ಇರುವ ಜಾಗದಿಂದ ಬರುತ್ತವೆ. ಆದ್ದರಿಂದ ನೀರು ನಿಲ್ಲದಂತೆ ಎಚ್ಚರವಹಿಸಬೇಕು. 24 ಗಂಟೆಗಳಿಗೊಮ್ಮೆ ನೀರನ್ನು ಖಾಲಿ ಮಾಡಬೇಕು. ಮನೆಯಲ್ಲಿ ಬೆಂಚು, ಗೋಡೆಗಳು, ಸ್ಟೂಲ್‌ಗಳು, ಬಾಗಿಲುಗಳನ್ನು ಕೀಟನಾಶಕಗಳನ್ನು ಸಿಂಪಡಿಸಿ ಶುಚಿಗೊಳಿಸಬೇಕು. ಒಡೊಮಸ್ ಕ್ರೀಂ ಅನ್ನು ಹಚ್ಚಿಕೊಂಡರೆ ಸೊಳ್ಳೆಗಳು ಕಚ್ಚುವುದಿಲ್ಲ.

* ಹಾಗಾಗ ಕೆಮ್ಮು ಬರುತ್ತದೆ. ಔಷಧ ತೆಗೆದುಕೊಂಡರು ಕಡಿಮೆಯಾಗಿಲ್ಲ ಏನು ಮಾಡುವುದು?

- ವಿವೇಕ್, ಚಿತ್ರದುರ್ಗ

ಕೆಲವು ಕೆಮ್ಮು ಅಲರ್ಜಿಗೋಸ್ಕರ ಬರುತ್ತದೆ. ಇದನ್ನು ಸರಿಪಡಿಸಲು ಸಾಧ್ಯವಿಲ್ಲ. ನಿಮಗೆ ಒಗ್ಗದಿರುವ ಆಹಾರವನ್ನು ತ್ಯಜಿಸುವುದು ಉತ್ತಮ. ಅಲ್ಲದೇ ಹೊಗೆ, ಧೂಳಿನಿಂದ ದೂರವಿರಬೇಕು. ಎಲ್ಲಾ ಕಡೆ ಮಾಲಿನ್ಯವಿರುವುದರಿಂದು ಉತ್ತಮ ಜಾಗ ಸಿಗುವುದು ಕಷ್ಟ. ವೈದ್ಯರು ಹೇಳಿದಂತೆ ಇನ್‌ಹೆಲ್ಲರ್ ತೆಗೆದುಕೊಳ್ಳಬೇಕು.

* ಕೊರೊನಾ ಬಾರದಂತೆ ತಡೆಗಟ್ಟಲು ಏನು ಮಾಡಬೇಕು?

- ಗೌರಮ್ಮ, ಭರಮಸಾಗರ, ಪವಿತ್ರ ಭರಮಸಾಗರ,

ಮನೆಯಿಂದ ಹೊರಗಡೆ ಹೋಗಲು ಏನು ತೊಂದರೆ ಇಲ್ಲ. ಆದರೆ ತುಂಬಾ ಜನರು ಇರುವ ಕಡೆ ಎಚ್ಚರವಹಿಸಬೇಕು. ಮಾರುಕಟ್ಟೆಯಲ್ಲಿ ಹೆಚ್ಚು ಜನಸಂದಣಿ ಇರುವ ಕಡೆ ಹೋಗುವುದನ್ನು ಕಡಿಮೆ ಮಾಡಬೇಕು. ಹೊರಗಡೆ ಹೋದರೂ ಮುಖಕ್ಕೆ ಮಾಸ್ಕ್ ಧರಿಸಬೇಕು. ಒಂದು ವೇಳೆ ಮಾಸ್ಕ್ ಸಿಗದಿದ್ದರೆ ಕರವಸ್ತ್ರವನ್ನು ದಪ್ಪನಾಗಿ ಮಡಚಿಕೊಂಡು ಮುಖಕ್ಕೆ ಕಟ್ಟಿಕೊಂಡು ಹೋಗಬೇಕು. ಬಸ್‌ನಲ್ಲಿ ಹೋದಾಗ ಪದೇ ಪದೇ ಕೈಯನ್ನು ಮೂಗಿಗೆ ಸೋಕಿಸಬಾರದು. ಮನೆಗೆ ಬಂದ ಬಂದ ನಂತರ, ಸೋಪು ಸ್ಯಾನಿಟೈಸರ್ ಇಲ್ಲವೇ ಡೆಟ್ಟಾಲ್ ಹಾಕಿದ ನೀರಿನಿಂದ ಕೈ ಒರೆಸಿಕೊಳ್ಳಬಹುದು. ಜ್ವರ, ಕೆಮ್ಮು, ಶೀತ ಬಂದರೆ ಒಮ್ಮೆ ವೈದ್ಯರನ್ನು ಸಂಪರ್ಕಿಸಿ.

* ಕೊರೊನಾ ವೈರಸ್‌ ಗಾಳಿಯಲ್ಲಿ ಹರಡುತ್ತದೆಯೇ?

- ಶೇಖರಪ್ಪ, ಮಲ್ಲನಾಯಕನಹಳ್ಳಿ

ಗಾಳಿಯಿಂದ ಹರಡುವುದಿಲ್ಲ. ಸೋಂಕಿತರು ಕೆಮ್ಮಿದರೆ, ಉಸಿರಾಡಿದರೆ ಆ ಗಾಳಿಯಿಂದ ಕೊರೊನಾ ವೈರಸ್ ಹರಡುತ್ತದೆ. ಕೆಮ್ಮಿದಾಗ ಶ್ವಾಸಕೊಶದ ಒಳಗೆ ಹೋದರೆ ಏನು ಮಾಡಲು ಆಗುವುದಿಲ್ಲ. ಪ್ರತಿಯೊಬ್ಬರಿಗೂ ರೋಗ ಬರುತ್ತದೆ ಎಂದು ಅಂದುಕೊಳ್ಳಬೇಕಾಗಿಲ್ಲ. ರೋಗ ನಿರೋಧಕ ಶಕ್ತಿ ಚೆನ್ನಾಗಿದ್ದರೆ ಏನು ಆಗುವುದಿಲ್ಲ. ಕೊರೊನಾ ವೈರಸ್‌ ಗಾಳಿಯೊಳಗೆ ಜಾಸ್ತಿ ಇರುವುದಿಲ್ಲ. ಆ ವೈರಸ್‌ನ ತೂಕ ಜಾಸ್ತಿ ಇರುವುದರಿಂದ ಬಟ್ಟೆ, ನೆಲದ ಮೇಲೆ, ಶರೀರದ ಮೇಲೆ ಜೀವಂತವಾಗಿರುತ್ತದೆ. 8 ರಿಂದ 12 ಗಂಟೆ ಜೀವಂತವಾಗಿರುತ್ತದೆ. ಆ ಸಮಯದಲ್ಲಿ ಮೂಗು, ಇಲ್ಲವೇ ಬಾಯಿಯೊಳಗೆ ಹೋದರೆ ರೋಗ ಬರುವ ಸಾಧ್ಯತೆ ಇರುತ್ತದೆ. ಒಬ್ಬರಿಗೆ ಬಂದರೆ ಮತ್ತೊಬ್ಬರಿಗೆ ಬರಬೇಕು ಎಂದೇನಿಲ್ಲ. ಯುವಕರಿಗೆ ಕೊರೊನಾ ವೈರಸ್‌ ಹರಡಿದರೂ ಅದು ಪ್ರಭಾವ ಬೀರುವುದು ಕಡಿಮೆ, ವಯಸ್ಕರಿಗೆ ಹರಡುವ ಸಂಭವ ಹೆಚ್ಚು. ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರಿಗೆ ಬೇಗ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT