ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ಉಪಚುನಾವಣೆ: ಹಲವು ಆಕಾಂಕ್ಷಿಗಳ ಜಿದ್ದು

ಇಂದು ನಾಮಪತ್ರ ಸಲ್ಲಿಸಲು ಕೊನೇ ದಿನ: ಅಭ್ಯರ್ಥಿಗಳ ಆಯ್ಕೆಯೇ ಕಾಂಗ್ರೆಸ್‌, ಬಿಜೆಪಿಗೆ ತಲೆನೋವು
Last Updated 17 ಮಾರ್ಚ್ 2021, 3:59 IST
ಅಕ್ಷರ ಗಾತ್ರ

ದಾವಣಗೆರೆ: ಮಹಾನಗರ ಪಾಲಿಕೆಯಲ್ಲಿ 2020ರಲ್ಲಿ ಒಬ್ಬರು, 2021ರಲ್ಲಿ ಒಬ್ಬರು ಕಾಂಗ್ರೆಸ್‌ ಸದಸ್ಯರು ರಾಜೀನಾಮೆ ನೀಡಿದ್ದ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದೆ. ಎರಡೂ ಕ್ಷೇತ್ರಗಳಿಗೆ ಕಾಂಗ್ರೆಸ್‌ನಿಂದ ತಲಾ ಅರ್ಧ ಡಜನ್‌ಗಿಂತ ಅಧಿಕ ಮಂದಿ ಕಣಕ್ಕಿಳಿಯುವ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಬಿಜೆಪಿಗೆ ಯಲ್ಲಮ್ಮನಗರದಲ್ಲಿ ಮಾತ್ರ ಅಭ್ಯರ್ಥಿಯ ಆಯ್ಕೆಯ ದೊಡ್ಡಮಟ್ಟದ ಸವಾಲು ಎದುರಾಗಿದೆ. ನಾಮಪತ್ರ ಸಲ್ಲಿಸಲು ಮಾರ್ಚ್‌ 17 ಕೊನೇ ದಿನವಾಗಿದ್ದು, ಅಂತಿಮ ಅಭ್ಯರ್ಥಿಯ ಆಯ್ಕೆಯೇ ಎರಡು ಪಕ್ಷಗಳಿಗೆ ತಲೆನೋವಾಗಿದೆ.

ಸಾಮಾನ್ಯಕ್ಕೆ ಮೀಸಲಾಗಿದ್ದ ಯಲ್ಲಮ್ಮನಗರ ವಾರ್ಡ್‌ನಿಂದ ಕಾಂಗ್ರೆಸ್‌ನಿಂದ ಮಾಜಿ ಕಾರ್ಪೊರೇಟರ್‌ ಶಿವನಳ್ಳಿ ರಮೇಶ್‌, ರವಿಸ್ವಾಮಿ, ಮುಜಾಹಿದ್‌, ಕಾಸಿಂಸಾಬ್‌, ಉಮಾಶಂಕರ್‌, ವಿನಯಕುಮಾರ್‌, ಮಂಜುನಾಥ್‌ ಆಕಾಂಕ್ಷಿಗಳಾಗಿದ್ದಾರೆ. ಬಿಜೆಪಿಯಿಂದ ಶಿವಾನಂದ್‌, ಚುಕ್ಕಿ ಮಂಜುನಾಥ್‌, ಶ್ರೀನಿವಾಸ ದಾಸಕರಿಯಪ್ಪ, ಗಣೇಶ್‌ ರಾವ್‌ ಅವರು ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಅಡಾಣಿ ಸಿದ್ದಪ್ಪ, ಮನು, ಗೋಪಾಲ ಅವರ ಹೆಸರೂ ಕೇಳಿ ಬರುತ್ತಿದೆ.

ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾದ ಭಾರತ್‌ ಕಾಲೊನಿಯಲ್ಲಿ ಕಾಂಗ್ರೆಸ್‌ನಿಂದ ಮೀನಾಕ್ಷಿ ಜಗದೀಶ್‌, ನಾಗರತ್ನಮ್ಮ ಬಸಪ್ಪ, ಯಲ್ಲಮ್ಮ ಮಂಜುನಾಥ್‌, ಸಾವಿತ್ರಮ್ಮ, ಅನ್ನಪೂರ್ಣಮ್ಮ, ಪೂಜಾ ಕೃಷ್ಣ, ಪದ್ಮಾವತಿ ನಾಗರಾಜ್‌ ಆಕಾಂಕ್ಷಿಗಳಾಗಿದ್ದಾರೆ. ಪಾಲಿಕೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಯಶೋದಾ ಉಮೇಶ್‌ ಮತ್ತು ಎಂ. ರೇಣುಕಾ ಕೃಷ್ಣ ಇಬ್ಬರು ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ರೇಣುಕಾ ಕೃಷ್ಣ ಅವರ ಹೆಸರೇ ಅಂತಿಮಗೊಳಿಸಲು ವರಿಷ್ಠರು ತೀರ್ಮಾನಿಸಿದ್ದಾರೆ.

ಚುನಾವಣೆಯ ಹಿನ್ನೆಲೆ: 2019ರ ನವೆಂಬರ್‌ನಲ್ಲಿ ಚುನಾವಣೆ ನಡೆದಿತ್ತು. ಭಾರತ್‌ ಕಾಲೊನಿಯಲ್ಲಿ ಕಾಂಗ್ರೆಸ್‌ನ ಯಶೋದಾ ಉಮೇಶ್‌ ಅವರು 1751 ಮತಗಳ ಭಾರಿ ಅಂತರದಿಂದ ಬಿಜೆಪಿಯ ಅಭ್ಯರ್ಥಿಯನ್ನು ಸೋಲಿಸಿದ್ದರು. ಆದರೆ ಮುಂದೆ ನಡೆದ ರಾಜಕೀಯದ ತಿರುವುಗಳಿಂದಾಗಿ 2020ರ ಆರಂಭದಲ್ಲಿ ಮೇಯರ್‌, ಉಪಮೇಯರ್‌ ಚುನಾವಣೆಯ ಸಂದರ್ಭದಲ್ಲಿ ಗೈರು ಆಗುವ ಮೂಲಕ ಬಿಜೆಪಿ ಅಧಿಕಾರ ಹಿಡಿಯಲು ನೆರವಾದ ಆರೋಪ ಅವರ ಮೇಲೆ ಬಂದಿತ್ತು. ಮೇಯರ್‌ ಚುನಾವಣೆಯ ಬಳಿಕ ಸದಸ್ಯ ಸ್ಥಾನಕ್ಕೆ ಯಶೋದಾ ರಾಜೀನಾಮೆ ನೀಡಿದ್ದರಿಂದ ತೆರವಾಗಿತ್ತು.

ಯಲ್ಲಮ್ಮ ನಗರ ವಾರ್ಡ್‌ನಿಂದ ದೇವರಮನಿ ಶಿವಕುಮಾರ್‌ 1024 ಮತಗಳ ಭಾರಿ ಅಂತರದಿಂದ ಬಿಜೆಪಿಯ ಅಭ್ಯರ್ಥಿಯನ್ನು ಸೋಲಿಸಿ ಪಾಲಿಕೆ ಸದಸ್ಯರಾಗಿದ್ದರು. 2020ರ ಮೇಯರ್‌, ಉಪಮೇಯರ್‌ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮೇಯರ್‌ ಅಭ್ಯರ್ಥಿಯೂ ಆಗಿದ್ದರು. ಆದರೆ ಕಾಂಗ್ರೆಸ್‌ನಿಂದ ಯಶೋದಾ ಸೇರಿ ಮೂವರು ಗೈರು ಆಗಿದ್ದರಿಂದ ಮೇಯರ್‌ ಸ್ಥಾನಕ್ಕೆ ಏರುವ ಕನಸು ಈಡೇರಿರಲಿಲ್ಲ. 2021ರಲ್ಲಿಯೂ ಅವರೇ ಮತ್ತೆ ಮೇಯರ್‌ ಅಭ್ಯರ್ಥಿಯಾಗಿದ್ದರು. ಆದರೆ ಅವರೇ ಚುನಾವಣೆಯ ಹಿಂದಿನ ದಿನ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಹೋಗಿದ್ದರು. ಇದರಿಂದಾಗಿ ಈ ಎರಡು ಸ್ಥಾನಗಳು ಖಾಲಿಯಾಗಿದ್ದವು.

29ಕ್ಕೆ ಚುನಾವಣೆ

ಎರಡು ವಾರ್ಡ್‌ಗಳ ಉಪಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಸಲು ಮಾರ್ಚ್‌ 17 ಕೊನೇ ದಿನ. 18ಕ್ಕೆ ನಾಮಪತ್ರ ಪರಿಶೀಲನೆ, ಮಾರ್ಚ್‌ 20 ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕಡೇ
ದಿನ. ಮಾರ್ಚ್‌ 29ರಂದು ಬೆಳಿಗ್ಗೆ 7ರಿಂದ ಮತದಾನ ನಡೆಯಲಿದೆ. ಮಾರ್ಚ್‌ 31ರಂದು ಬೆಳಿಗ್ಗೆ 8ರಿಂದ ಮತ ಎಣಿಕೆ ನಡೆಯಲಿದೆ.

ಅಭಿಪ್ರಾಯಗಳು

ಅಂತಿಮ ಅಭ್ಯರ್ಥಿ ಯಾರು ಎಂಬುದನ್ನು ಶಾಮನೂರು ಶಿವಶಂಕರಪ್ಪ, ಎಸ್‌.ಎಸ್‌. ಮಲ್ಲಿಕಾರ್ಜುನ್‌ ಬುಧವಾರ ಬೆಳಿಗ್ಗೆ ನಿರ್ಧರಿಸುತ್ತಾರೆ. ಗೆಲ್ಲಲು ಎಲ್ಲ ತಯಾರಿ ನಡೆಸಲಾಗಿದೆ.

- ಎಚ್‌.ಬಿ. ಮಂಜಪ್ಪ,ಕಾಂಗ್ರೆಸ್‌ ಜಿಲ್ಲಾ ಸಮಿತಿ ಅಧ್ಯಕ್ಷ

***

ಎರಡೂ ವಾರ್ಡ್‌ಗಳು ಕಾಂಗ್ರೆಸ್‌ನ ಭದ್ರಕೋಟೆ. ಇಲ್ಲಿ ಹಿಂದೆ ಕಾಂಗ್ರೆಸ್‌ನಿಂದ ಆಯ್ಕೆಯಾದವರು ಉತ್ತಮ ಕೆಲಸ ಮಾಡಿದ್ದರು. ಈ ಬಾರಿಯೂ ನಮ್ಮವರೇ ಗೆಲ್ಲಲಿದ್ದಾರೆ.

- ಎ. ನಾಗರಾಜ್,ಪಾಲಿಕೆ ವಿರೋಧ ಪಕ್ಷದ ನಾಯಕ

***

ಒಬ್ಬ ಅಭ್ಯರ್ಥಿಯ ಹೆಸರು ಅಂತಿಮಗೊಳಿಸಿದರೆ ಉಳಿದವರು ಕೆಲಸ ಮಾಡುವುದಾಗಿ ಎಲ್ಲರೂ ಹೇಳಿದ್ದಾರೆ. ಬುಧವಾರ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ವರಿಷ್ಠರು ತಿಳಿಸಲಿದ್ದಾರೆ.

- ವೀರೇಶ್‌ ಹನಗವಾಡಿ,ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

***

ಕೊರೊನಾ ಸಂಕಷ್ಟ ಕಾಲದಲ್ಲಿ ಜನರಿಗೆ ಸ್ಪಂದಿಸಿದ ರೀತಿ, ಮಾಡಿದ ಅಭಿವೃದ್ಧಿ ಕಾರ್ಯಗಳು ಬಿಜೆಪಿಯ ಕೈ ಹಿಡಿಯಲಿವೆ. ಎರಡೂ ಕ್ಷೇತ್ರಗಳು ಬಿಜೆಪಿ ಪಾಲಾಗಲಿವೆ.

- ಎಸ್‌.ಟಿ. ವೀರೇಶ್‌,ಮೇಯರ್‌, ಮಹಾನಗರ ಪಾಲಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT