ದಾವಣಗೆರೆ: ‘ಆಧುನಿಕ ಕಾಲವಲ್ಲದೇ ಹಿಂದಿನ ಕಾಲದಲ್ಲಿಯೂ ಭ್ರಷ್ಟಾಚಾರವಿತ್ತು. ವಿದ್ಯಾವಂತರಾದ ಮಾತ್ರಕ್ಕೆ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಾಗುವುದಿಲ್ಲ. ಸುಸಂಸ್ಕೃತರಾದರೆ ಮಾತ್ರ ನಿರ್ಮೂಲನೆ ಮಾಡಬಹುದು’ ಎಂದು ಲೋಕಾಯುಕ್ತ ಡಿವೈಎಸ್ಪಿ ಬಿ.ಕೆ. ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಮಾಸಬ ಕಾಲೇಜಿನ ಸಮಾಜಶಾಸ್ತ್ರ ವಿಭಾಗ ಮತ್ತು ಕರ್ನಾಟಕ ಲೋಕಾಯುಕ್ತ ದಾವಣಗೆರೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹ-2023 ‘ದೇಶದ ಅಭಿವೃದ್ಧಿಗಾಗಿ ಭ್ರಷ್ಟಾಚಾರ ಮುಕ್ತ ಭಾರತ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಸರ್ಕಾರಿ ಇಲಾಖೆ ಸೇರಿದಂತೆ ವಿವಿಧೆಡೆ ನಡೆಯುವ ಭ್ರಷ್ಟಾಚಾರವನ್ನು ತಡೆಗಟ್ಟಲು ಸಂಸ್ಕಾರ, ಸಾಮಾನ್ಯ ಜ್ಞಾನ ಬೇಕು. ವಿದ್ಯಾವಂತರೇ ಸೈಬರ್ ಅಪರಾಧಗಳ ಮೂಲಕ ಹಣ ಲೂಟಿ ಮಾಡುವ ಹಲವು ಹತ್ತು ಉದಾಹರಣೆಗಳು ಇವೆ. ಲಂಚ ಕೊಟ್ಟವರು ಮತ್ತು ಪಡೆದವರು ಇಬ್ಬರೂ ಭ್ರಷ್ಟರಾಗುತ್ತಾರೆ. ಇಬ್ಬರಿಗೂ ಶಿಕ್ಷೆಯಾಗುತ್ತದೆ’ ಎಂದು ಹೇಳಿದರು.
‘ಬಸವಣ್ಣನವರು ಶರಣರು ದಯವೇ ಧರ್ಮದ ಮೂಲವಯ್ಯ ಎಂದು ಹೇಳಿದರೆ, ಭ್ರಷ್ಟರು ಧನವೇ ಧರ್ಮದ ಮೂಲವಯ್ಯ. ಭಯೋತ್ಪಾದಕರಿಗೆ ಭಯವೇ ಧರ್ಮದ ಮೂಲವಯ್ಯ ಎಂಬಂತಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.
‘ಹೆಣ್ಣು ಭ್ರೂಣವಾದರೆ ಗರ್ಭದಲ್ಲಿಯೇ ಅದನ್ನು ಹತ್ಯೆ ಮಾಡುವವರಿದ್ದಾರೆ. ಹೆಣ್ಣು ಶಿಶು ತಮಗೆ ಭಾರವೆಂದು ಹತ್ಯೆ ಮಾಡಿರುವವರು ನಮ್ಮ ಮುಂದಿದ್ದಾರೆ. ಹೆಣ್ಣು ಮಗು ಬೇಡ ಎಂದರೆ ತಾಯಿಯನ್ನೇ ಬೇಡ ಎಂಬಂತೆ. ಹೆಣ್ಣಿದ್ದರೆ ಮಾತ್ರ ಜಗತ್ತು ಎನ್ನುವ ಸತ್ಯ ಕಂಡುಕೊಳ್ಳಬೇಕು’ ಎಂದು ತಿಳಿಸಿದರು.
‘ಎಲ್ಲಾ ಜಿಲ್ಲೆಗಳಲ್ಲಿಯೂ ಲೋಕಾಯುಕ್ತ ಕಚೇರಿ ಇದ್ದರೂ ಸಾರ್ವಜನಿಕರು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ತಪ್ಪಿತಸ್ಥ ಸರ್ಕಾರಿ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮಕ್ಕೆ ಸರ್ಕಾರಕ್ಕೆ ಮತ್ತು ಸಕ್ಷಮ ಪ್ರಾಧೀಕಾರಕ್ಕೆ ಶಿಫಾರಸ್ಸು ಮಾಡಬಹುದು’ ಎಂದು ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ಪ್ರಭು. ಬಿ. ಸೂರಿನ ತಿಳಿಸಿದರು. ಅಲ್ಲದೇ ಪ್ರಾತ್ಯಕ್ಷಿಕೆಗಳ ಮೂಲಕ ಭ್ರಷ್ಟಾಚಾರ ಕುರಿತು ಜಾಗೃತಿ ಮೂಡಿಸಿದರು.
ಕಾಲೇಜಿನ ಪ್ರಾಂಶುಪಾಲೆ ಪ್ರೊ. ಜಿ.ಸಿ. ನೀಲಾಂಬಿಕೆ ಅಧ್ಯಕ್ಷತೆ ವಹಿಸಿದ್ದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಆರ್. ರಾಘವೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಟಿ.ಆರ್. ರಂಗಸ್ವಾಮಿ, ಎ.ಬಿ. ವಿಜಯಕುಮಾರ್, ಒ. ಪ್ರವೀಣ್‍ಕುಮಾರ್, ಕೆ.ವೈ. ಈಶ್ವರ, ಗ್ರಂಥಪಾಲಕ ಕೆ.ವೈ. ಸತೀಶ್, ಪರಮೇಶಿ ಇದ್ದರು. ಎಂ. ಮಂಜಪ್ಪ ನಿರೂಪಿಸಿದರು. ಅಂಕಿತಾ ಪ್ರಾರ್ಥಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.