ಭಾನುವಾರ, ನವೆಂಬರ್ 29, 2020
25 °C

ಫಸಲ್‌ ಬಿಮಾ ಯೋಜನೆಯಡಿ ಭ್ರಷ್ಟಾಚಾರ: ಸಚಿನ್‌ ಮಿಗಾ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಫಸಲ್‌ ಬಿಮಾ ಯೋಜನೆಯು ರಫೆಲ್‌ ಹಗರಣಕ್ಕಿಂತ ದೊಡ್ಡದು ಎಂದು ಕಾಂಗ್ರೆಸ್‌ ಕಿಸಾನ್‌ ಘಟಕದ ಅಧ್ಯಕ್ಷ ಸಚಿನ್‌ ಮಿಗಾ ಆರೋಪಿಸಿದರು.

ಈ ಯೋಜನೆಗೆ ರೈತರ ಪಾಲು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲು ಎಂದು ವಿಮೆ ಕಟ್ಟಬೇಕು. ಪ್ರಧಾನಿ ಅವರ ಸ್ನೇಹಿತ ಅದಾನಿ ಅವರ ಕಂಪನಿಗೆ (ಯುನಿವರ್ಸಲ್‌ ಸೊಂಪು) ಇದು ಹೋಗುತ್ತದೆ. ರಾಜ್ಯದಲ್ಲಿ 2018ರಲ್ಲಿ ₹ 20 ಸಾವಿರ ಕೋಟಿ ಕಟ್ಟಲಾಗಿದೆ. ಬೆಳೆ ನಷ್ಟ ಎಂದು ₹ 4,900 ಕೋಟಿ ರೈತರಿಗೆ ಪಾವತಿಯಾಗಿದೆ. ಅಂದರೆ ಏಳೆಂಟು ತಿಂಗಳ ಒಂದೇ ಅವಧಿಯಲ್ಲಿ ರಾಜ್ಯದಿಂದ ಅದಾನಿಗೆ ₹ 15,100 ಕೋಟಿ ಲಾಭವಾಗಿದೆ. ಇದೇ ರೀತಿ ದೇಶದಲ್ಲಿ ₹ 1.08 ಲಕ್ಷ ಕೋಟಿ ವಿಮೆ ಕಟ್ಟಲಾಗಿದ್ದು, ₹ 20 ಸಾವಿರ ಕೋಟಿಯಷ್ಟೇ ಬೆಳೆ ಪರಿಹಾರ ನೀಡಲಾಗಿದೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಿವರ
ನೀಡಿದರು.

ಎಪಿಎಂಸಿ ತಿದ್ದು‍ಪಡಿ ಕಾಯ್ದೆ ಜಾರಿಗೆ ಬಂದರೆ ಜಿಯೋ ಸಿಮ್‌ನಂತೆ 12ರಿಂದ 16 ತಿಂಗಳಷ್ಟೇ ಜನರಿಗೆ ಉಪಯೋಗವಾಗಲಿದೆ. ಜಿಯೋ ಸಿಮ್‌ ಮೊದಲು ಉಚಿತವಾಗಿ ನೀಡಿ, ಈಗ ಟಾರಿಫ್ ಒಂದೇ ಸಮನೆ ಏರಿಸಿದ್ದಾರೆ. ಹಾಗೆ ಈ ಕಾಯ್ದೆ ಜಾರಿಗೆ ಬಂದ ಮೇಲೆ ಆರಂಭದಲ್ಲಿ ಎಪಿಎಂಸಿ ಹೊರಗೆ ರೈತರಿಗೆ ಉತ್ತಮ ಬೆಲೆ ಸಿಗಲಿದೆ. ವಹಿವಾಟು ಇಲ್ಲದೇ, ತೆರಿಗೆ ಸಂಗ್ರಹ ಇಲ್ಲದೇ ಒಮ್ಮೆ ಎಪಿಎಂಸಿಗಳು ನನೆಗುದಿಗೆ ಬಿದ್ದಮೇಲೆ ರೈತರಿಗೆ ಸಂಕಷ್ಟ ಎದುರಾಗಲಿದೆ. ರೈತರು ದೊಡ್ಡ ಕಂಪನಿಗಳ ಗುಲಾಮರಾಗಬೇಕಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಿಸಾನ್‌ ಘಟಕದ ಅಧ್ಯಕ್ಷ ಶಿವಗಂಗಾ ಬಸವರಾಜ್‌, ಕಾಂಗ್ರೆಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್‌ ಕೆ. ಶೆಟ್ಟಿ, ಮುಖಂಡರಾದ ಮನೋಜ್‌, ಪ್ರವೀಣ್‌ಕುಮಾರ್‌, ಶಿವಕುಮಾರ್‌ ಅವರೂ ಇದ್ದರು.

‘ಕಿಸಾನ್‌ ಜಾಥಾ: ಭಾಗಿಯಾಗಲಿರುವ ರಾಹುಲ್‌ ಗಾಂಧಿ’

ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ಮತ್ತು ಉಪ ಚುನಾವಣೆಗಳು ಮುಗಿದ ಬೆನ್ನಲ್ಲೇ ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಕಿಸಾನ್‌ ಜಾಥಾ ನಡೆಯಲಿದ್ದು, ಅದರಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭಾಗವಹಿಸಲಿದ್ದಾರೆ.

ಎಪಿಎಂಸಿ, ಭೂಸುಧಾರಣೆ, ವಿದ್ಯುತ್‌ ಕಾಯ್ದೆ ಸೇರಿ ವಿವಿಧ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಮೂಲಕ ರೈತ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಈ ಜಾಥಾ ಹಮ್ಮಿಕೊಳ್ಳಲಾಗಿದೆ. ನ. 7, 8ಕ್ಕೆ ಜಾಥಾ ನಡೆಸಲು ಉದ್ದೇಶಿಸಲಾಗಿದೆ. ಹುಬ್ಬಳ್ಳಿ–ಹಳಿಯಾಳ–ಬೆಳಗಾವಿ, ದಾವಣಗೆರೆ–ಚನ್ನಗಿರಿ–ಕಾಗೋಡು, ಬೀದರ್‌–ಕಲಬುರ್ಗಿ ಈ ಮೂರು ದಾರಿಗಳನ್ನು ಪರಿಶೀಲನೆ ಮಾಡಲಾಗಿದೆ. ಇದರಲ್ಲಿ ಯಾವುದಾರೂ ಎರಡನ್ನು ಕೆಪಿಸಿಸಿ ಅಧ್ಯಕ್ಷರು ಅಂತಿಮಗೊಳಿಸಲಿದ್ದಾರೆ ಎಂದು ಸಚಿನ್‌ ಮಿಗಾ  ಮಾಹಿತಿ ನೀಡಿದರು.

ಠೇವಣಿಗೆ ಕನ್ನ: ಎಫ್‌ಎಸ್‌ಡಿಆರ್‌ (ಫಿನಾನ್ಶಿಯಲ್‌ ಸೆಕ್ಟರ್‌ ಡೆವಲಪ್‌ಮೆಂಟ್‌ ಆ್ಯಂಡ್‌ ರೆಗ್ಯುಲೇಶನ್‌) ಕಾಯ್ದೆಯ ಮೂಲಕ ಜನರ ಠೇವಣಿಗೆ ಕನ್ನ ಹಾಕಲು ಸರ್ಕಾರ ಹೊರಟಿದೆ. ಯಾರಾದರೂ ಬ್ಯಾಂಕಲ್ಲಿ ಡೆಪಾಸಿಟ್‌ ಇಟ್ಟವರ ಅನುಮತಿ ಇಲ್ಲದೇ ಬಳಸಿಕೊಳ್ಳುವ ಕಾಯ್ದೆ ಇದು ಎಂದು ಹೇಳಿದರು.

ಸಹಿ ಚಳವಳಿ

ಎಪಿಎಂಸಿ, ಭೂಸುಧಾರಣೆ, ವಿದ್ಯುತ್‌ ತಿದ್ದುಪಡಿ ಕಾಯ್ದೆಗಳು ಸಹಿತ ಎಲ್ಲವನ್ನೂ ದೊಡ್ಡ ಉದ್ಯಮಿಗಳಿಗೆ ಲಾಭ ಮಾಡಿಕೊಡುವುದಕ್ಕಾಗಿಯೇ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲಾಗುತ್ತಿದೆ. ಇವುಗಳನ್ನು ವಿರೋಧಿಸಿ ರೈತರಿಂದ ಸಹಿ ಚಳವಳಿ ಮಾಡಲಾಗುತ್ತಿದೆ. ರೈತರ ಸಹಿ ಸಂಗ್ರಹಿಸಿದ ಕಾರ್ಡ್‌ಗಳನ್ನು ರಾಷ್ಟ್ರಪತಿಗೆ ಕಳುಹಿಸಿಕೊಡಲಾಗುವುದು ಎಂದು ಸಚಿನ್‌ ಮಿಗಾ ತಿಳಿಸಿದರು.

‘ಬಾಬಾಗೌಡ ಪಾಟೀಲರಿಂದ ರೈತ ವಿರೋಧಿ ಹೇಳಿಕೆ’

ಮಾಜಿ ಸಚಿವ ಬಾಬಾಗೌಡ ಪಾಟೀಲರು ರೈತ ಸಂಘದ ಹೆಸರಿನಲ್ಲಿ ಬಿಜೆಪಿ ವಕ್ತಾರರಂತೆ ಮಾತನಾಡುತ್ತಿದ್ದಾರೆ. ರೈತರಿಗೆ ಅಪಮಾನ ಮಾಡುವ ಹೇಳಿಕೆ ನೀಡುತ್ತಿದ್ದಾರೆ. ಎಲ್ಲ ರೈತ ಸಂಘಗಳು ರೈತ ವಿರೋಧಿಯಾದ ಭೂಸುಧಾರಣೆ, ಎಪಿಎಂಸಿ ಮತ್ತಿತರ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸುತ್ತಿದ್ದರೆ ಪಾಟೀಲರು ಪರವಾಗಿ ಮಾತನಾಡುತ್ತಿದ್ದಾರೆ ಎಂದು ಸಚಿನ್‌ ಮಿಗಾ ಟೀಕಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು