ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಮಾವಿನ ಬೆಳೆಗೆ ಕೊರೊನಾ ಕಾರ್ಮೋಡ

ಇಳುವರಿಯೂ ಕಡಿಮೆ; ಬೇಡಿಕೆಯೂ ಕುಸಿಯುವ ಭೀತಿ
Last Updated 11 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಮಾವಿನ ಬೆಳೆಯ ಮೇಲೆ ಕೊರೊನಾ ಕಾರ್ಮೋಡ ಕವಿದಿದೆ. ಈ ಬಾರಿ ಇಳುವರಿ ಕಡಿಮೆಯಾಗಿ ಮೊದಲೇ ಕಂಗೆಟ್ಟಿದ್ದ ಬೆಳೆಗಾರರಿಗೆ ‘ಲಾಕ್‌ಡೌನ್‌’ ಗಾಯದ ಮೇಲೆ ಬರೆ ಎಳೆದಿದೆ.

ಮಳೆಯ ಕೊರತೆಯಿಂದಾಗಿ ಮೂರ್ನಾಲ್ಕು ವರ್ಷ ಫಸಲು ಕಡಿಮೆ ಬಂದಿತ್ತು. ಈ ಬಾರಿ ಸಾಕಷ್ಟು ಮಳೆಯಾಗಿದ್ದರೂ ಮಾರ್ಚ್‌ನಲ್ಲಿ ಚಿಗುರೊಡೆದು ಫಸಲು ಕಡಿಮೆಯಾಗಿದೆ. ಇದರ ನಡುವೆಯೇ ಕೊರೊನಾ ಭೀತಿಯಿಂದಾಗಿ ಮಾವಿನಹಣ್ಣಿನ ವಹಿವಾಟು ಕುಸಿಯುವ ಸಾಧ್ಯತೆ ಹೆಚ್ಚಿದೆ.

ಜಿಲ್ಲೆಯಲ್ಲಿ ಸುಮಾರು 3,000 ಹೆಕ್ಟೇರ್‌ ಪ್ರದೇಶಗಳಲ್ಲಿ ಮಾವು ಬೆಳೆಯಲಾಗುತ್ತಿದೆ. ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರಿನಲ್ಲೇ ಸುಮಾರು 1,800 ಹೆಕ್ಟೇರ್‌ ಮಾವು ಬೆಳೆಯಲಾಗುತ್ತಿದೆ.

ಉಪ್ಪಿನಕಾಯಿ ಮಾವಿಗಿಲ್ಲ ಬೇಡಿಕೆ: ‘ಈ ವೇಳೆಗೆ ಉಪ್ಪಿನಕಾಯಿ ಮಾಡಲು ತೋತಾಪುರಿ, ಮಿಡಿ, ನಾಟಿ ಮಾವಿನಕಾಯಿಗೆ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಇರುತ್ತಿತ್ತು. ಈಗ ಲಾಕ್‌ಡೌನ್ ಇರುವುದರಿಂದ ಉಪ್ಪಿನಕಾಯಿ ಫ್ಯಾಕ್ಟರಿಗಳು ಬಂದ್‌ ಆಗಿವೆ. ಹೀಗಾಗಿ ಕಾಯಿಗಳಿಗೆ ಬೇಡಿಕೆಯೇ ಇಲ್ಲ. ಮರದಲ್ಲೇ ಹಣ್ಣು ಮಾಡಲು ಬಿಟ್ಟಿದ್ದೇವೆ’ ಎಂದು ಡೊಡ್ಡಬ್ಬಿಗೆರೆಯ ಪ್ರಸನ್ನಕುಮಾರ್‌ ಜಿ.ಕೆ. ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

‘ಆಲ್ಫಾನ್ಸೊ ಮಾವಿನ ಬೆಳೆ ಈ ಬಾರಿ ಶೇ 90ರಷ್ಟು ಕಡಿಮೆಯಾಗಿದೆ. ಸಿಂಧೂರ, ತೋತಾಪುರಿ, ನಾಟಿ ಮಾವಿನಕಾಯಿ 20 ದಿನಗಳ ಒಳಗೆ ಹಣ್ಣಾಗಲಿವೆ. ಇಲ್ಲಿನ 8–10 ರೈತರು ಸೇರಿಕೊಂಡು ಪುಣೆ, ಮುಂಬೈಗೆ ಲಾರಿಯಲ್ಲಿ ಮಾವಿನಹಣ್ಣು ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಬರುತ್ತಿದ್ದೆವು. ಈ ಬಾರಿ ಮಾವಿನಹಣ್ಣು ಒಯ್ಯುವುದು ಕಷ್ಟ. ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ನಿರೀಕ್ಷಿತ ಪ್ರಮಾಣದಲ್ಲಿ ದರ ಸಿಗುವುದಿಲ್ಲ. ಕೊರೊನಾ ಭೀತಿಯಿಂದ ಗ್ರಾಹಕರಿಲ್ಲದೇ ಜ್ಯೂಸ್‌ ಅಂಗಡಿಯವರೂ ಹೆಚ್ಚಿನ ಪ್ರಮಾಣದಲ್ಲಿ ಈ ಬೇಸಿಗೆಯಲ್ಲಿ ಮಾವಿನಹಣ್ಣು ತೆಗೆದುಕೊಳ್ಳದಿರುವ ಸಾಧ್ಯತೆ ಇದೆ. ಹೀಗಾಗಿ ಮಾವು ಬೆಳೆಗಾರರ ನೆರವಿಗೆ ಸರ್ಕಾರ ಬರಬೇಕು’ ಎಂದು ಅವರು ಮನವಿ ಮಾಡಿದರು.

‘ಮಳೆಯಿಲ್ಲದೇ ಮರಗಳು ಒಣಗಿದ್ದರಿಂದ ಮೂರು ಎಕರೆಯಲ್ಲಿನ ಮರಗಳನ್ನು ತೆಗೆಸಿ ಮೆಕ್ಕೆಜೋಳ ಬೆಳೆಯಲು ಆರಂಭಿಸಿದ್ದೇನೆ. ಸದ್ಯ ಮೂರೂವರೆ ಎಕರೆಯಲ್ಲಿ ಮಾವು ಬೆಳೆಯುತ್ತಿದ್ದೇನೆ. ಸತತ 5ನೇ ವರ್ಷವೂ ಮಾವಿನಬೆಳೆಯಲ್ಲಿ ನಷ್ಟ ಅನುಭವಿಸುವಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮನೆಯವರೇ ಸೇರಿಕೊಂಡು ಒಂದೂವರೆ ಟನ್‌ ತೋತಾಪುರಿ ಮಾವಿನಕಾಯಿ ಕೊಯ್ದು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಿದ್ದೇವೆ. ಒಂದು ಕೆ.ಜಿ.ಗೆ ₹ 15ರಿಂದ ₹ 20 ಸಿಕ್ಕಿದೆ. ಲಾಕ್‌ಡೌನ್‌ ಇರುವುದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲ. ಸಾಮಾನ್ಯ ದಿನಗಳಲ್ಲಿ ಒಂದು ಕೆ.ಜಿ.ಗೆ ₹ 30ರಿಂದ ₹ 40ರವರೆಗೆ ಬೆಲೆ ಸಿಗುತ್ತಿತ್ತು. ಈ ವರ್ಷ ಹೆಚ್ಚಿನ ಲಾಭವೂ ಸಿಗಲಿಲ್ಲ’ ಎಂದು ಸಂತೇಬೆನ್ನೂರಿನ ಮಾವು ಬೆಳೆಗಾರ ಸೈಯದ್‌ ವಾಸಿಂ ಬೇಸರಿಸಿದರು.

‘15 ದಿನಗಳಲ್ಲಿ ಮಾವಿನಹಣ್ಣು ಕೀಳಲು ಬರಲಿದೆ. ಕೊರೊನಾ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರೂ ಕೆಲಸಕ್ಕೆ ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿ ಮಾವಿನಹಣ್ಣಿಗೆ ಬೇಡಿಕೆ ಇಲ್ಲದಿದ್ದರೆ ಮರದಲ್ಲೇ ಕಾಯಿಗಳನ್ನು ಬಿಡಬೇಕಾದ ಸ್ಥಿತಿ ಬರಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಈ ಬಾರಿ ಶೇ 30ರಷ್ಟು ಇಳುವರಿ ಕಡಿಮೆ ಬಂದಿದೆ. ಲಾಕ್‌ಡೌನ್‌ ಸಡಿಲಿಸಿ ಪುಣೆ, ಮುಂಬೈಗೆ ಮಾವಿನಹಣ್ಣು ಸಾಗಿಸಲು ಅವಕಾಶ ಲಭಿಸಿ, ಅಲ್ಲಿ ಉತ್ತಮ ಬೆಲೆ ಸಿಕ್ಕರೆ ಮಾತ್ರ ರೈತರಿಗೆ ಒಳ್ಳೆಯ ಲಾಭ ಸಿಗಲಿದೆ’ ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್‌ ಅಭಿಪ್ರಾಯಪಡುತ್ತಾರೆ.

*
ಕೊರೊನಾ ಭೀತಿಯ ಪರಿಣಾಮ ಈ ಬಾರಿ ಮಾವಿನಹಣ್ಣಿಗೆ ಹೆಚ್ಚಿನ ಬೇಡಿಕೆ ಇರುವುದಿಲ್ಲ. ಹೀಗಾಗಿ ಲಾಭಕ್ಕಿಂತ ರೈತರ ಕೈಸುಡುವ ಸಾಧ್ಯತೆಯೇ ಹೆಚ್ಚು.
- ಪ್ರಸನ್ನಕುಮಾರ್‌ ಜಿ.ಕೆ., ಮಾವು ಬೆಳೆಗಾರ, ದೊಡ್ಡಬ್ಬಿಗೆರೆ

*
ಹಾಪ್‌ಕಾಮ್ಸ್‌ನಿಂದ ಹೆಚ್ಚಿನ ಪ್ರಮಾಣದಲ್ಲಿ ಮಾವು ಖರೀದಿಸಲು ಸಾಧ್ಯವಾಗುವುದಿಲ್ಲ. ಸ್ಥಳೀಯ ಜ್ಯೂಸ್‌ ಫ್ಯಾಕ್ಟರಿಯವರ ಜತೆ ಜಿಲ್ಲೆಯ ಮಾವಿನಹಣ್ಣು ಖರೀದಿಸುವ ಬಗ್ಗೆ ಮಾತುಕತೆ ನಡೆಸುತ್ತೇವೆ.
- ಲಕ್ಷ್ಮೀಕಾಂತ ಬೋಮ್ಮನ್ನರ್‌, ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT