ಸಂತೇಬೆನ್ನೂರು:ಅಧಿಕ ಮಳೆಯಿಂದಾಗಿ ಕೊಳೆರೋಗದಿಂದ ಈರುಳ್ಳಿ ಬೆಳೆ ನಾಶವಾಗಿದೆ. ರೋಗ ನಿಯಂತ್ರಣಕ್ಕೆ ಬಾರದೆ ಬೇಸತ್ತ ಭೀಮನೆರೆ ರೈತರು ಈರುಳ್ಳಿ ಬೆಳೆಯನ್ನು ನಾಶ ಪಡಿಸಿದ್ದಾರೆ.
40 ಎಕರೆಯಲ್ಲಿ ಸಮೃದ್ಧವಾಗಿ ಬೆಳೆದಿದ್ದ ಈರುಳ್ಳಿಗೆ ಕೊಳೆರೋಗ ತಗುಲಿದ್ದು, ಒಂದು ತಿಂಗಳಿಂದ ರೋಗ ನಿಯಂತ್ರಣಕ್ಕೆ ರೈತರು ಹರಸಾಹಸಪಟ್ಟಿದ್ದು, ಕೊನೆಗೂ ಬೇಸತ್ತು ಈರುಳ್ಳಿ ಬೆಳೆನಾಶಪಡಿಸಿದರು.
‘ಎರಡು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದೆ. ಕೊಳೆ ರೋಗಕ್ಕೆ ಬೆಳೆ ನಲುಗಿತ್ತು. ನಿವಾರಣೆಗೆ ₹31 ಸಾವಿರ ಖರ್ಚು ಮಾಡಿ 6 ಸಲ ಔಷಧ ಸಿಂಪಡಿಸಿದೆ. ರೋಗ ಹತೋಟಿಗೆ ಬರಲಿಲ್ಲ. ಈರುಳ್ಳಿ ಗಡ್ಡೆಗಳು ಕೊಳೆಯಲು ಆರಂಭಿಸಿದವು. 2 ಎಕರೆಗೆ ₹ 1ಲಕ್ಷ ಖರ್ಚು ಮಾಡಿದ್ದೆ.ಈರುಳ್ಳಿ ಬೆಳೆ ನಾಶ ಮಾಡದೆ ವಿಧಿಯಿರಲಿಲ್ಲ. ಇದರಿಂದ ಅಪಾರ ನಷ್ಟ ಉಂಟಾಗಿದೆ’ ಎಂದು ಅಳಲು ತೋಡಿಕೊಂಡರು ರೈತ ಮಹೇಂದ್ರ.
‘300ರಿಂದ 400 ಪಾಕೆಟ್ ಈರುಳ್ಳಿ ಇಳುವರಿ ಬರುವ ನಿರೀಕ್ಷೆ ಇತ್ತು. ₹ 20 ಸಾವಿರ ಖರ್ಚು ಮಾಡಿ ನಾಲ್ಕು ಬಾರಿ ಔಷಧ ಸಿಂಪಡಿಸಿದೆ. ಬೆಳೆ ಚೇತರಿಸಿಕೊಳ್ಳಲಿಲ್ಲ. ಗರಿ ಕೊಳೆತು ಉದುರಿತು. ಗಡ್ಡೆಗಳು ಕೊಳೆತ ಮೇಲೆ ಪ್ರಯೋಜನವಿಲ್ಲ. ಅದಕ್ಕಾಗಿ ನಾಶಪಡಿಸಿದೆ. 2 ಎಕರೆಗೆ ₹ 60 ಸಾವಿರ ಖರ್ಚು ಆಗಿದೆ’ ಎಂದು ರೈತ ರುದ್ರೇಶ್ ಬೇಸರಿಸಿದರು.
‘ಒಂದೆಡೆ ದುಬಾರಿ ಬೀಜದ ಖರೀದಿ. ಕೈಗೆಟುಕದ ಬೆಲೆ ದಾಟಿದ ಔಷಧ, ಗೊಬ್ಬರ, ನಿಯಂತ್ರಣಕ್ಕೆ ಬಾರದ ರೋಗ, ಹವಾಮಾನ ವೈಪರೀತ್ಯ, ಸದ್ಯ ಈರುಳ್ಳಿ ಬೆಲೆ ಕುಸಿತ ರೈತರ ಬದುಕನ್ನು ಅನಿಶ್ಚಿತಗೊಳಿಸಿವೆ’ ಎಂದು ರೈತ ಬಿ.ಎಚ್. ವೆಂಕಟೇಶ್.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.