ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜ ಆರೋಗ್ಯವಾಗಿರಲು ಸಾಂಸ್ಕೃತಿಕ ಶಕ್ತಿ ಮುಖ್ಯ

ಜಾನಪದ ತಜ್ಞ ಎಂ.ಜಿ. ಈಶ್ವರಪ್ಪ ಅಭಿಪ್ರಾಯ
Published 30 ಏಪ್ರಿಲ್ 2024, 6:35 IST
Last Updated 30 ಏಪ್ರಿಲ್ 2024, 6:35 IST
ಅಕ್ಷರ ಗಾತ್ರ

ದಾವಣಗೆರೆ: ಸಮಾಜ ಆರೋಗ್ಯಕರವಾಗಿ ಇರಬೇಕಾದರೆ ಸಾಮಾಜಿಕ ಶಕ್ತಿಯಷ್ಟೇ ಸಾಂಸ್ಕೃತಿಕ ಶಕ್ತಿಯೂ ಮುಖ್ಯ ಎಂದು ಜಾನಪದ ತಜ್ಞ ಎಂ.ಜಿ. ಈಶ್ವರಪ್ಪ ಅಭಿಪ್ರಾಯಪಟ್ಟರು.

ನಮನ ಅಕಾಡೆಮಿ, ಎ.ವಿ. ಕಮಲಮ್ಮ ಮಹಿಳಾ ಕಾಲೇಜು, ಕೇಂದ್ರ ಸಂಸ್ಕೃತಿ ಸಚಿವಾಲಯದ ಸಹಯೋಗದಲ್ಲಿ ವಿಶ್ವ ನೃತ್ಯ ದಿನದ ಅಂಗವಾಗಿ ಸೋಮವಾರ ಆಯೋಜಿಸಿದ್ದ ‘ಭರತನಾಟ್ಯಂನ ನಟುವಾಗಂ ಮತ್ತು ದಶವಿಧ ಅಡವುಗಳು ಬಗ್ಗೆ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಮಾಜ ಆರೋಗ್ಯಕರವಾಗಿರಬೇಕಾದರೆ ಈ ಎರಡು ಶಕ್ತಿಗಳು ಸರಿಯಾಗಿರಬೇಕು. ಸಾಂಸ್ಕೃತಿಕ ಶಕ್ತಿ ಸರಿಯಾಗಿರುವ ಕಡೆ ಜನರ ನಡೆ, ನುಡಿ ಹಾಗೂ ಆಚಾರ ವಿಚಾರಗಳು ಚೆನ್ನಾಗಿರುತ್ತವೆ’ ಎಂದರು.

ಸಂಗೀತ ನೃತ್ಯ, ಸಾಹಿತ್ಯ ಸರಸ್ವತಿಯ ಎರಡು ಮುಖಗಳು. ಸಂಗೀತ ನೃತ್ಯವನ್ನು ಕೇಳಿ ಆನಂದಿಸಿದರೆ ಸಾಹಿತ್ಯ ಆಲೋಚನಾಮೃತಕ್ಕೆ ಕರೆದೊಯ್ಯುತ್ತದೆ ಮತ್ತೆ ಮತ್ತೆ ಕಾಡುತ್ತಿರುತ್ತದೆ. ಯೋಚನೆ ಬರುವಂತೆ ಮಾಡುತ್ತದೆ’ ಎಂದು ಹೇಳಿದರು.

‘ದೇಶದಲ್ಲಿ ನೃತ್ಯಪಟುಗಳನ್ನು ಆರಾಧನೆ ಮಾಡುತ್ತೇವೆ. ವೈವಿಧ್ಯಮಯ ನೃತ್ಯಗಳನ್ನು ಕಲಿಸುವ ಮೂಲಕ ಸಾಂಸ್ಕೃತಿಕ ಶ್ರೀಮಂತಿಕೆ ತಂದುಕೊಡುತ್ತಿದ್ದಾರೆ. ವಿದುಷಿ ಮಾಧವಿ ಹಾಗೂ ಗೋಪಾಲಕೃಷ್ಣ ಅವರು ಉತ್ತಮ ಕೆಲಸ ಮಾಡುತ್ತಿದ್ದು, ಸಾಂಸ್ಕೃತಿಕವಾಗಿ ದಾವಣೆಗೆರೆ ಶ್ರೀಮಂತವಾಗಲು ಅವರು ಕಾರಣರಾಗುತ್ತಿದ್ದಾರೆ’ ಎಂದರು.

‘ವಿದ್ಯಾರ್ಥಿಗಳು ಗ್ರಂಥಾಲಯವನ್ನು ಪ್ರವೇಶ ಮಾಡಿದರಷ್ಟೇ ಸಾಲದು. ಸಾಂಸ್ಕೃತಿಕ ಕ್ಷೇತ್ರವನ್ನು ಪ್ರವೇಶ ಮಾಡಿ ಸಂಗೀತ, ನೃತ್ಯ, ಮಾತುಗಾರಿಕೆ ಕಲಿಯಬೇಕು.  ಆ ಮೂಲಕ ಸಾಂಸ್ಕೃತಿಕವಾಗಿ ಶ್ರೀಮಂತರಾಗಿದ್ದೇವೆ ಎಂಬುದನ್ನು ತೋರಿಸಬೇಕು. ವಿದ್ಯಾರ್ಥಿಗಳು ರ‍್ಯಾಂಕ್ ಪಡೆಯುವುದು ಮುಖ್ಯವಲ್ಲ. ಸಾಂಸ್ಕೃತಿಕವಾಗಿ ವಾಕ್ಪಟುಗಳಾ? ಸಂಗೀತ ತಜ್ಞರಾ, ನೃತ್ಯಪಟುಗಳಾ ಎಂಬುದನ್ನು ನೋಡಬೇಕಿದೆ. ಸಿಲಬಸ್ ಅಲ್ಲದೇ ಸಿಲಬಸ್ ಪ್ಲಸ್ ಮುಖ್ಯ. ಕೌಶಲ ಬೆಳೆಸಿಕೊಳ್ಳುವ ಮೂಲಕ ಸಮಾಜವನ್ನು ಸಾಮಾಜಿಕ ಶ್ರೀಮಂತಿಕೆಯನ್ನಾಗುವಂತೆ ಮಾಡೋಣ’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಬ್ಯೂರೋ ಮುಖ್ಯಸ್ಥ ಸಿದ್ದಯ್ಯ ಹಿರೇಮಠ ಮಾತನಾಡಿ, ‘ಪಾಲಕರು ಮಕ್ಕಳಿಂದ ಹೆಚ್ಚು ಅಂಕಗಳನ್ನು ನಿರೀಕ್ಷಿಸುವುದರ ಜೊತೆಗೆ ಅವರನ್ನು ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವುದು ಅಗತ್ಯ. ಏಕೆಂದರೆ ಪುಸ್ತಕದ ಆಚೆಗೂ ಒಂದು ಜಗತ್ತು ಇದೆ. ಅಂಕಗಳ ಆಚೆಗೂ ಒಂದು ಜೀವನವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನೃತ್ಯ, ಕ್ರೀಡೆ, ಸಾಹಿತ್ಯದತ್ತ ಆಸಕ್ತಿಯನ್ನು ಬೆಳೆಸಿಕೊಂಡು ಜೀವನ ರೂಪಿಸಿಕೊಳ್ಳಬೇಕು’ ಎಂದು ಹೇಳಿದರು.

‘ನೃತ್ಯ, ಕ್ರೀಡೆ ಸಾಹಿತ್ಯದಲ್ಲಿ ತೊಡಗಿಸಿಕೊಂಡವರಿಗೆ ದುಶ್ಚಟಗಳು ಸುಳಿಯುವುದಿಲ್ಲ. ಆರೋಗ್ಯವಾಗಿರುತ್ತಾರೆ. ಪ್ರತಿದಿನ ಪ್ರೀತಿಸಿ, ಜೀವಿಸುತ್ತಿದ್ದು, ಆಸಕ್ತಿ ಇರುವ ಕಡೆಗೆ ಮಕ್ಕಳನ್ನು ಪ್ರೋತ್ಸಾಹಿಸಬೇಕು. ಇಲಾಖೆಗಳಿಂದ ಸಹಾಯ ಪಡೆದು ಕ್ರೀಡೆ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು. ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಕೊಂಡವರಿಗೆ ಕೀಳರಿಮೆ ಇರುವುದಿಲ್ಲ, ಆತ್ಮಸ್ಥೈರ್ಯ, ತಾಳ್ಮೆ ಇರುತ್ತದೆ. ಜಗತ್ತಿನಲ್ಲಿ ಜೀವನ ಮಾಡುವುದು ಗೊತ್ತಿರುತ್ತದೆ’ ಎಂದು ವಿಶ್ಲೇಷಿಸಿದರು.

‘ಯಾವುದೇ ಸಂಘಟನೆ ಬೆಳೆಸಬೇಕು ಎಂದು ತುಂಬಾ ಕಷ್ಟ ಪಡಬೇಕು. ಜೀವನದಲ್ಲಿ ಸಾಧಿಸುವ ಛಲ ಇದ್ದರೆ ಯಶಸ್ಸು ಪಡೆಯಬಹುದು’ ಎಂದು ಜೆಸಿಐ ಅಂತರರಾಷ್ಟ್ರೀಯ ತರಬೇತುದಾರರಾದ ಲತಿಕಾ ಶೆಟ್ಟಿ ಹೇಳಿದರು.

ನಮನ ಅಕಾಡೆಮಿ ಕಾರ್ಯದರ್ಶಿ ಮಾಧವಿ ಡಿ.ಕೆ. ಅವರು ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಎವಿಕೆ ಕಾಲೇಜಿನ ಪ್ರಾಂಶುಪಾಲರಾದ ಕಮಲಾ ಸೊಪ್ಪಿನ್ ಅಧ್ಯಕ್ಷತೆ ವಹಿಸಿದ್ದರು. ನಮನ ಅಕಾಡೆಮಿ ಅಧ್ಯಕ್ಷ ಗೋಪಾಲಕೃಷ್ಣ, ಕಾಲೇಜಿನ ಐಕ್ಯೂಎಸಿ ಸಂಯೋಜಕ ಆರ್.ಆರ್.ಶಿವಕುಮಾರ್, ಕವಿತಾ ಇದ್ದರು.

ವಿಶ್ವ ನೃತ್ಯ ದಿನ ಅಂಗವಾಗಿ ದಾವಣಗೆರೆಯಲ್ಲಿ ಆಯೋಜಿಸಿದ್ದ ‘ಭರತನಾಟ್ಯಂ ನಟುವಾಂಗಂ ಮತ್ತು ದಶವಿಧ ಅಡುವುಗಳು’ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ
ವಿಶ್ವ ನೃತ್ಯ ದಿನ ಅಂಗವಾಗಿ ದಾವಣಗೆರೆಯಲ್ಲಿ ಆಯೋಜಿಸಿದ್ದ ‘ಭರತನಾಟ್ಯಂ ನಟುವಾಂಗಂ ಮತ್ತು ದಶವಿಧ ಅಡುವುಗಳು’ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT