ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇಶದ 27 ಕೋಟಿ ಜನ ಮಾದಕ ವ್ಯಸನಿಗಳು: ಎಚ್.ಎಂ.ಸದಾನಂದ

ಹರಿಹರ: ಸಂಪನ್ಮೂಲ ವ್ಯಕ್ತಿ ಎಚ್.ಎಂ.ಸದಾನಂದ ಹೇಳಿಕೆ
Published 29 ಜೂನ್ 2024, 16:13 IST
Last Updated 29 ಜೂನ್ 2024, 16:13 IST
ಅಕ್ಷರ ಗಾತ್ರ

ಹರಿಹರ: ದೇಶದ 27 ಕೋಟಿ ಜನರು ಮಾದಕ ಪದಾರ್ಥಗಳ ವ್ಯಸನಕ್ಕೆ ಒಳಗಾಗಿದ್ದಾರೆ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಂಪನ್ಮೂಲ ವ್ಯಕ್ತಿ ಎಚ್.ಎಂ.ಸದಾನಂದ ಹೇಳಿದರು.

ತಾಲ್ಲೂಕಿನ ಹನಗವಾಡಿ ಗ್ರಾಮದ ಬಣಕಾರ್ ಪುಟ್ಟಮ್ಮ ಕುರುವತ್ತೆಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಮಾದಕ ವಸ್ತು ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಸರ್ಕಾರದ ಜೊತೆಗೆ ಸಮುದಾಯವೂ ದೇಶವನ್ನು ಮಾದಕ ಮುಕ್ತ ಮಾಡುವತ್ತ ಶ್ರಮಿಸುವ ಅಗತ್ಯವಿದೆ’ ಎಂದು ಹೇಳಿದರು.

‘ನಮ್ಮ ಸುತ್ತಮುತ್ತಲಿನ ವೃತ್ತಿ ಶಿಕ್ಷಣ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾದಕ ಪದಾರ್ಥಗಳ ಮಾರಾಟ ಮಾಡುವ ಜಾಲ ಇರುತ್ತದೆ. ರಾಜ್ಯದ ಪ್ರವಾಸಿ ತಾಣಗಳಾದ ಉಡುಪಿ, ಮಂಗಳೂರು, ಹಂಪಿ, ಗೋಕರ್ಣ, ಮುರುಡೇಶ್ವರಗಳಲ್ಲೂ ವಿದೇಶಿ ಪೆಡ್ಲರ್‌ಗಳಿಂದ ಮಾದಕ ಪದಾರ್ಥಗಳ ಸರಬರಾಜು ಆಗುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಭಾರತವನ್ನು ಬಲಹೀನಗೊಳಿಸುವ ಉದ್ದೇಶದಿಂದಲೂ ಶತ್ರು ರಾಷ್ಟ್ರಗಳು ದೇಶದೊಳಗೆ ಮಾದಕ ಪದಾರ್ಥಗಳನ್ನು ಸಾಗಿಸುತ್ತಿವೆ. ಆ ಮೂಲಕ ಯುವ ಜನರಿಗೆ ಮಾದಕ ಪದಾರ್ಥಗಳ ದಾಸರನ್ನಾಗಿಸುವ ಷಡ್ಯಂತ್ರ ನಡೆಯುತ್ತಿದೆ. ಯುವತಿಯರ ಮೂಲಕ ಮಾರಾಟ ಜಾಲ ಹರಡಲಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಅವಧಿ ಮೀರಿದ ಮಾತ್ರೆಗಳನ್ನು ಚಾಕೋಲೇಟ್, ತಂಪು ಪಾನಿಯಗಳಲ್ಲಿ ನಶೆಗೆ ಬಳಸಲಾಗುತ್ತಿದೆ ಎಂಬ ಆರೋಪವೂ ಇದೆ. ದೇಶದಲ್ಲಿ ಮಾದಕ ಪದಾರ್ಥಗಳ ಸೇವನೆಯಿಂದ ವಾರ್ಷಿಕ ₹ 13 ಲಕ್ಷ ಜನರು ಬಲಿಯಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ’ ಎಂದು ಹೇಳಿದರು.

ಜನಮಂಗಳ ಕಾರ್ಯಕ್ರಮದಲ್ಲಿ ನಿರ್ಗತಿಕರಿಗೆ ವಾತ್ಸಲ್ಯದ ಮನೆ, ಅಡುಗೆ ಸಾಮಗ್ರಿಗಳು, ಊರುಗೋಲು, ವಾಟರ್ ಬೆಡ್‌ಗಳನ್ನು ನೀಡಲಾಗುತ್ತಿದೆ ಎಂದು ಸಂಸ್ಥೆಯ ಕ್ಷೇತ್ರ ಮೇಲ್ವಿಚಾರಕಿ ತನುಜಾ ಹೇಳಿದರು.

ಪ್ರಬಾರಿ ಮುಖ್ಯಶಿಕ್ಷಕಿ ಅನ್ನಪೂರ್ಣ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಮುಜಾಹಿದ್ ಅಹ್ಮದ್, ಮಂಜುನಾಥ್, ಮಹೇಶ್ವರಪ್ಪ, ಸುರೇಶ್ ಹಂಚಿನಗೌಡ್ರ, ಸೇವಾ ಪ್ರತಿನಿಧಿ ಭಾರತಿ ಹಾಜರಿದ್ದರು. ವಿದ್ಯಾರ್ಥಿಗಳಾದ ಶರತ್, ಹರ್ಷಿತಾ, ರೆಹಮಾನ್, ದರ್ಶನ್ ಅನಿಸಿಕೆ ಹಂಚಿಕೊಂಡರು. ವಿದ್ಯಾರ್ಥಿಗಳಿಗೆ ರಾಷ್ಟ್ರ ನಾಯಕರ ಪುಸ್ತಕಗಳನ್ನು ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT