ದಾವಣಗೆರೆ: ‘ಕರ್ನಾಟಕದ ಮ್ಯಾಂಚೆಸ್ಟರ್’ ಎಂದೇ ಗುರುತಿಸಿಕೊಂಡಿರುವ ದಾವಣಗೆರೆಯು ವ್ಯಾಣಿಜ್ಯ ನಗರಿಯಷ್ಟೇ ಅಲ್ಲ, ಅಪಾರ ದೈವಭಕ್ತಿಯ ನೆಲೆಬೀಡು. ದೇವನಗರಿಯ ಧಾರ್ಮಿಕ ಅಸ್ಮಿತೆಯ ಸಂಕೇತವಾಗಿ ದುರ್ಗಾಂಬಿಕಾ ದೇವಿಯ ದೇಗುಲವಿದೆ. ಜನರ ಆರಾಧ್ಯ ದೈವವಾಗಿ, ಊರ ರಕ್ಷಕಿಯಾಗಿ ಭಕ್ತರನ್ನು ಕಾಪಾಡುತ್ತಿದ್ದಾಳೆ.

ದುರ್ಗಾಂಬಿಕಾ ದೇವಿ ಜನಮಾನಸದಲ್ಲಿ ‘ದುಗ್ಗಮ್ಮ’ ಆಗಿ ನೆಲೆಕಂಡುಕೊಂಡಿದ್ದಾಳೆ. ಜನರ ನಂಬಿಕೆ, ಬದುಕು ಹಾಗೂ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದಾಳೆ. ಜಾತ್ಯತೀತವಾಗಿ ಎಲ್ಲರನ್ನೂ ತನ್ನತ್ತ ಸೆಳೆಯುವ ದೇವಿಯನ್ನು ಜನರು ನಗರದೇವತೆ ಎಂದೇ ಆರಾಧಿಸುತ್ತಾರೆ.

ದುರ್ಗಾಂಬಿಕಾ ದೇವಿ ‘ದುಗ್ಗಮ್ಮ’ ಆಗಿ ದಾವಣಗೆರೆಯಲ್ಲಿ ನೆಲೆನಿಂತ ಬಗೆಗೆ ಪೌರಾಣಿಕ ಹಿನ್ನೆಲೆ ಇದೆ. ದಾವಣಗೆರೆಗೆ ಬರುತ್ತಿದ್ದ ಎತ್ತಿನ ಬಂಡಿಯೊಂದರಲ್ಲಿ ದುಂಡು ಕಲ್ಲಿನ ರೂಪದಲ್ಲಿ ದೇವಿಯ ಪ್ರವೇಶವಾಗಿದೆ. ದುಂಡು ಕಲ್ಲಿನ ಭಾರ ತಾಳಲಾರದೆ ಎತ್ತಿನ ಬಂಡಿ ಮುರಿದು ಬಿದ್ದಿದೆ. ಆಗ ಬಾಲಕನೊಬ್ಬನ ಮೈಮೇಲೆ ಬಂದ ದೇವಿ ದೇಗುಲ ನಿರ್ಮಿಸುವಂತೆ ನಿರ್ದೇಶನ ನೀಡಿದಳು ಎಂಬುದು ಭಕ್ತರ ನಂಬಿಕೆ.

ದೇವಿಯ ಸೂಚನೆಯಂತೆ ಶತಮಾನಗಳ ಹಿಂದೆ ಹಳೆ ದಾವಣಗೆರೆಯಲ್ಲಿ ಚಿಕ್ಕ ದೇಗುಲ ನಿರ್ಮಾಣವಾಗಿದೆ. ಗರ್ಭಗುಡಿಯಲ್ಲಿ ದುಂಡುಕಲ್ಲು ಇಟ್ಟು ‘ದುಗ್ಗಮ್ಮ ದೇವಿ’ ಎಂಬುದಾಗಿ ಪೂಜಿಸಲಾಗುತ್ತಿದೆ. ಊರು ಬೆಳೆದು ಮಹಾನಗರವಾದರೂ ‘ದುಗ್ಗಮ್ಮ’ನ ಆರಾಧನೆ ಕಡಿಮೆಯಾಗಿಲ್ಲ. ಬರಗಾಲದಲ್ಲಿ ಮಳೆಯಮ್ಮನಾಗಿ, ಕಾಯಿಲೆಗಳು ಕಾಣಿಸಿಕೊಂಡಾಗ ಶಕ್ತಿದೇವತೆಯಾಗಿ ಭಕ್ತರನ್ನು ಪೊರೆದಿದ್ದಾಳೆ. 1934ರಲ್ಲಿ ವಿಶಾಲ ದೇಗುಲ ನಿರ್ಮಿಸಿ ಜಾತ್ರಾ ಮಹೋತ್ಸವ ಆಚರಿಸುವ ಪ್ರತೀತಿ ಬೆಳೆದು ಬಂದಿದೆ.

ಎರಡು ವರ್ಷಗಳಿಗೊಮ್ಮೆ ನಡೆಯುವ ನಗರದೇವತೆ ದುರ್ಗಾಂಬಿಕೆಯ ಮತ್ತೊಂದು ಜಾತ್ರಾ ಮಹೋತ್ಸವಕ್ಕೆ ದೇವನಗರಿ ಸಜ್ಜಾಗಿದೆ. ಫೆ. 22ರಿಂದ ಮಾರ್ಚ್ 10ರವರೆಗೆ ಜಾತ್ರೆ ನಡೆಯಲಿದೆ. ದೇಗುಲದ ಸುತ್ತಲಿನ ಬೀದಿಗಳು ವಿದ್ಯುತ್ ದೀಪಾಲಂಕಾರದಲ್ಲಿ ಕಂಗೊಳಿಸುತ್ತಿವೆ. ಜಾತ್ರೆಯ ಸಂಭ್ರಮ ಕಣ್ತುಂಬಿಕೊಳ್ಳಲು ಲಕ್ಷಾಂತರ ಜನ ಆಗಮಿಸುವ ನಿರೀಕ್ಷೆ ಇದೆ.

ಹಂದರಗಂಬ ಪೂಜೆ

ಶಿವಾಜಿ ವೃತ್ತದ ದುರ್ಗಾಂಬಿಕಾ ದೇಗುಲದ ಮುಂಭಾಗದಲ್ಲಿ ಹಂದರಗಂಬ ಹಾಕುವ ಮೂಲಕ ಜಾತ್ರಾ ಮಹೋತ್ಸವದ ಧಾರ್ಮಿಕ ಕೈಂಕರ್ಯಗಳಿಗೆ ಅಧಿಕೃತ ಚಾಲನೆ ದೊರೆಯುತ್ತದೆ. ದುರ್ಗಾಂಬಿಕಾ ದೇವಿ ದೇವಸ್ಥಾನ ಟ್ರಸ್ಟ್ ಕಾರ್ಯಾಧ್ಯಕ್ಷರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಜ. 20ರಂದು ಹಂದಗಂಬಕ್ಕೆ ಕಂಕಣ ಧಾರಣೆ ಮಾಡಿದ್ದರು.

21 ಅಡಿ ಎತ್ತರದ ಕಂಬವೊಂದನ್ನು ಹಲವು ವರ್ಷಗಳಿಂದ ಹಂದರಕ್ಕೆ ಮೀಸಲಿಡಲಾಗಿದೆ. ಈ ಕಂಬವನ್ನು ಜಾತ್ರೆಯ ಸಂದರ್ಭದಲ್ಲಿ ಹೊರತೆಗೆದು ಶುಚಿಗೊಳಿಸಿ ಪುಷ್ಪಗಳಿಂದ ಅಲಂಕರಿಸಿ ನೆಡಲಾಗುತ್ತದೆ. ಜಾತ್ರಾ ಮಹೋತ್ಸವಕ್ಕೆ ವಿಘ್ನಗಳು ಎದುರಾಗದಂತೆ ಪ್ರಾರ್ಥಿಸಲಾಗುತ್ತದೆ. ಗರ್ಭಗುಡಿಯಿಂದ ಕಂಕಣ ತಂದು ಹಂದರಗಂಬಕ್ಕೆ ಕಟ್ಟಿ ಹಾಲು, ತುಪ್ಪವನ್ನು ಅರ್ಪಿಸಲಾಗುತ್ತದೆ. ಫೆ. 20ರಂದು ದೇಗುಲದ ಪೂರ್ವ ದಿಕ್ಕಿನಲ್ಲಿ ಅಮ್ಮನ ಬಾಬದಾರರು ಮತ್ತೊಂದು ಹಂದರಗಂಬ ಹಾಕುತ್ತಾರೆ. ಅಲ್ಲಿಂದ ಜಾತ್ರೆಯ ಚಟುವಟಿಕೆಗಳು ಚುರುಕು ಪಡೆಯುತ್ತವೆ.

ಡಬ್ಬಿಗಡಿಗೆ ಸೇವೆ: ಹಂದರಗಂಬ ಪೂಜೆ ನೆರವೇರುತ್ತಿದ್ದಂತೆ ಡಬ್ಬಿಗಡಿಗೆ (ದೇಣಿಗೆ ಸಂಗ್ರಹ) ಸೇವೆ ಆರಂಭವಾಗುತ್ತದೆ. ಜ.23ರಂದು ಡಬ್ಬಿಗಡಿಗೆಗೆ ಚಾಲನೆ ನೀಡಲಾಗಿತ್ತು. ಇದರಿಂದ ಸಂಗ್ರಹವಾದ ಹಣದಲ್ಲಿ ಜಾತ್ರಾ ಮಹೋತ್ಸವ ನೆರವೇರಿಸುವುದು ಇಲ್ಲಿನ ವಾಡಿಕೆ.

ಧರ್ಮದರ್ಶಿ ಸಮಿತಿಯ ಸದಸ್ಯರು ವಾಲಗ, ಭಜಂತ್ರಿ ಜೊತೆಗೆ ಡಬ್ಬಿಗಡಿಗೆಯನ್ನು ನಗರದ ವಿವಿಧೆಡೆ ಕೊಂಡೊಯುತ್ತಾರೆ. ಭಕ್ತರು ನೀಡುವ ಕಾಣಿಕೆ, ದೇಣಿಗೆಯನ್ನು ಸಂಗ್ರಹಿಸುತ್ತಾರೆ. ಈ ದೇಣಿಗೆಯಲ್ಲಿ ದುರ್ಗಾಂಬಿಕಾ ದೇವಿಗೆ ಸೀರೆ, ಕುಪ್ಪಸ, ತಾಳಿ, ಕಾಲುಂಗರ ಮೊದಲಾದ ಸಾಮಗ್ರಿ ಖರೀದಿಸಲಾಗುತ್ತದೆ. 2024ರಲ್ಲಿ ಡಬ್ಬಿಗಡಿಗೆ ಮೂಲಕ ₹ 9.97 ಲಕ್ಷ ಸಂಗ್ರಹವಾಗಿತ್ತು.

ಮೂರು ದಿನ ಪ್ರಸಾದ: ಜಾತ್ರಾ ಮಹೋತ್ಸವದ ಅಂಗವಾಗಿ ಫೆ.27ರಿಂದ ಮಾರ್ಚ್ 1ರವರೆಗೆ ಅಭಿನವ ರೇಣುಕ ಮಂದಿರದಲ್ಲಿ ಪ್ರಸಾದದ ವ್ಯವಸ್ಥೆ ಇದೆ. ಮೂರು ದಿನ ಮಧ್ಯಾಹ್ನ ಭಕ್ತರಿಗೆ ಪ್ರಸಾದ ನೀಡಲಾಗುತ್ತದೆ.

ಫೆ. 27ರಂದು ಶಾಮನೂರು ಶಿವಶಂಕರಪ್ಪ ಅವರ ಕುಟುಂಬ, ಫೆ. 28ರಂದು ಧರ್ಮಪ್ರಕಾಶ್ ಆರ್. ರಾಮಶೆಟ್ಟರ ಕುಟುಂಬ ಹಾಗೂ ಮಾರ್ಚ್ 1ರಂದು ಮುದೇಗೌಡ ಅವರ ಕುಟುಂಬದ ವತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಆದರೆ, ಧರ್ಮದರ್ಶಿ ಸಮಿತಿ ವತಿಯಿಂದ ದೇಗುಲದ ಸಮೀಪದಲ್ಲಿ ಪ್ರಸಾದ ವ್ಯವಸ್ಥೆ ಮಾಡಿಲ್ಲ ಎಂದು ಸಮಿತಿ ಸ್ಪಷ್ಟಪಡಿಸಿದೆ.

ದೇವಿ ದರ್ಶನಕ್ಕೆ ವ್ಯವಸ್ಥೆ: ದೇಗುಲದ ಸುತ್ತ ಬ್ಯಾರಿಕೇಡ್ಗಳನ್ನು ಅಳವಡಿಸಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ನೂಕುನುಗ್ಗಲು ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ದುಗ್ಗಮ್ಮ ದೇವಿ ದರ್ಶನಕ್ಕೆ ಭಕ್ತರು ಸರತಿ ಸಾಲಿನಲ್ಲಿ ಬರುವಂತೆ ವ್ಯವಸ್ಥೆ ರೂಪಿಸಲಾಗಿದೆ. ಸಾಮಾನ್ಯ ಭಕ್ತರು, ಪಾಸ್ ಹಾಗೂ ಗಣ್ಯರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ.

ಸಾಮಾನ್ಯ ಭಕ್ತರ ಸರತಿ ಸಾಲು ಕಿಲೋ ಮೀಟರ್ಗಟ್ಟಲೇ ಉದ್ದಕ್ಕೆ ಬೆಳೆಯುವ ಸಾಧ್ಯತೆ ಇದೆ. ಶಾಂತಿಯುತವಾಗಿ ದೇವಿ ದರ್ಶನ ಪಡೆಯುವಂತೆ ಭಕ್ತರಿಗೆ ಕೋರಲಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಎಲ್ಲೆಡೆ ಸಿ.ಸಿ.ಟಿ.ವಿ ಕ್ಯಾಮೆರಾಗಳು ನಿಗಾ ವಹಿಸಿವೆ. ದೇಗುಲದ ಸಮೀಪದಲ್ಲಿಯೇ ತಾತ್ಕಾಲಿಕ ಪೊಲೀಸ್ ಚೌಕಿ ನಿರ್ಮಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.