ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಸಂಪರ್ಕ ಸೇತುವಾದ ‘ಫೇಸ್‌ಬುಕ್‌ ಪೇಜ್‌‌’

ಲಾಕ್‌ಡೌನ್‌ನಲ್ಲಿ ರೈತರ ಸಂಕಷ್ಟಕ್ಕೆ ಮಿಡಿದ ಯುವಕರ ಗುಂಪು
Last Updated 12 ಜೂನ್ 2020, 19:30 IST
ಅಕ್ಷರ ಗಾತ್ರ

ದಾವಣಗೆರೆ: ಲಾಕ್‌ಡೌನ್ ಸಂದರ್ಭದಲ್ಲಿ ಮಾರುಕಟ್ಟೆ ಸಿಗದೆ ಬೆಳೆಯನ್ನು ನಾಶಪಡಿಸುತ್ತಿದ್ದ ರೈತರ ನೆರವಿಗೆ ಫೇಸ್‌ಬುಕ್‌ ಮೂಲಕ ಯುವಕರ ಗುಂಪು ಸಹಾಯ ಹಸ್ತ ಚಾಚಿದೆ.ರಾಜ್ಯ, ಅಂತರರಾಜ್ಯದ ರೈತರುಇದರಿಂದ ನೆರವು ಪಡೆದಿದ್ದಾರೆ.

‘ಅನ್ನದಾತ ಜೀವದಾತ’ ಎಂಬ ಫೇಸ್‌ಬುಕ್‌ ಪೇಜ್‌ ಮೂಲಕ ಯುವಕರ ಗುಂಪು ಸಾಮಾಜಿಕ ಜಾಲತಾಣವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದೆ. ಈ ಪೇಜ್‌ನಲ್ಲಿ ರೈತರು ಬೆಳೆಯ ಮಾಹಿತಿಯನ್ನು ಫೋಟೊ ಅಥವಾ ವಿಡಿಯೊ ಮಾಡಿ ಹಾಕಿದರೆ ಸಾಕು. ರೈತರ ಜಮೀನಿಗೇ ಬಂದು ವ್ಯಾಪಾರಿಗಳು ಬೆಳೆಯನ್ನು ಖರೀದಿಸುತ್ತಾರೆ.

ಇಂತಹ ಆಲೋಚನೆಯ ಹಿಂದಿನ ರೂವಾರಿ ಪ್ರಖ್ಯಾತ್‌ಪುತ್ತೂರು. ರೈತರು ಹಾಗೂ ಖರೀದಿದಾರರ ಮಧ್ಯೆ ಸಂಪರ್ಕ ಸೇತುವಾಗಿ ಅವರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸ್ನೇಹಿತರಾದ ಅರುಣ್ ವಿರೂಪಾಕ್ಷ, ಶರತ್ ಬಾಬು, ಕನ್ನಡ ಮನಸು ಪವನ್ಜೊತೆಯಾಗಿದ್ದಾರೆ. ನೂರಾರು ಜನ ಪೇಜ್‌ ಬೆಂಬಲಿಸಿ ಶೇರ್‌ ಮಾಡುತ್ತಿದ್ದಾರೆ.

ದಾವಣಗೆರೆ, ಚಿತ್ರದುರ್ಗ, ಬಾಗಲಕೋಟೆ, ಕಲಬುರ್ಗಿ ಸೇರಿ ರಾಜ್ಯದ ಬಹುತೇಕ ಜಿಲ್ಲೆ ಹಾಗೂ ಗುಜರಾತ್, ಕೇರಳ‌ ಸೇರಿ ಹಲವು ರಾಜ್ಯಗಳ ರೈತರು ಅವರನ್ನು ಸಂಪರ್ಕಿಸಿದ್ದಾರೆ. ಇಲ್ಲಿಯವರೆಗೆ180ಕ್ಕೂ ಹೆಚ್ಚು ರೈತರು ನೆರವು ಪಡೆದಿದ್ದಾರೆ.

ಪ್ರಖ್ಯಾತ್‌ ಮೂಲತಃ ಪುತ್ತೂರಿನವರು.ಹಾಸನದಲ್ಲಿ ಹೈನುಗಾರಿಕೆಯಲ್ಲಿ ತೊಡಗಿಕೊಂಡಿದ್ದು,ಸದ್ಯ ಬೆಂಗಳೂರಿನಲ್ಲಿದ್ದಾರೆ. 6 ವರ್ಷಗಳಿಂದ ‘ಉದ್ಯೋಗ ಕರ್ನಾಟಕ’ ಪೇಜ್‌ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗದ ಮಾಹಿತಿ ನೀಡಿ ನೆರವಾಗುತ್ತಿದ್ದಾರೆ.

‘ಉದ್ಯೋಗ ಅರಸಿ ಬೆಂಗಳೂರಿಗೆ ಹೋದಾಗ ಮೂಡಿದ ನಿರಾಸೆ ಹೈನುಗಾರಿಕೆಯತ್ತ ಮುಖ ಮಾಡಿಸಿತು. ಲಾಕ್‌ಡೌನ್‌ನಲ್ಲಿ ರೈತರ ಸಂಕಷ್ಟ ಕಂಡು ಈ ಯೋಚನೆ ಮಾಡಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತರಿಗೆ ಖರೀದಿದಾರರನ್ನು ಹುಡುಕಿಕೊಡುವುದಷ್ಟೇ ನಮ್ಮ ಕೆಲಸ’ ಎಂದು ಪ್ರಖ್ಯಾತ್‌ ಪುತ್ತೂರು ‘ಪ್ರಜಾವಾಣಿ’ಗೆ ತಮ್ಮ ಯೋಜನೆ ಬಗ್ಗೆ ವಿವರಿಸಿದರು.

ನಗರ ಪ್ರದೇಶಗಳ ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಅಗತ್ಯವಿರುವ ತಾಜಾ ಹಣ್ಣನ್ನೂ ಈ ಪೇಜ್‌ ಮೂಲಕ ಪೂರೈಸಲಾಗುತ್ತಿದೆ. ನಿವಾಸಿಗಳು ವಾಟ್ಸ್‌ಆ್ಯಪ್‌ನಲ್ಲಿ ಬೇಡಿಕೆ ಸಲ್ಲಿಸಿದರೆ ಸಾಕು. ರೈತರು, ಗ್ರಾಹಕರ ನೇರ ಅನುಸಂಧಾನ ಇದರ ಹಿಂದಿನ ಉದ್ದೇಶ ಎಂದು ತಿಳಿಸಿದರು.

‘ನಾಲ್ಕೂವರೆ ಎಕರೆಯಲ್ಲಿ ಸಾವಯವ ಪದ್ಧತಿಯಲ್ಲಿ ಮಾವು ಬೆಳೆದಿದ್ದೆ. ಖರೀದಿದಾರರು ಇಲ್ಲದೆ ಕಂಗಾಲಾಗಿದ್ದ ಸಮಯದಲ್ಲಿ ಫೇಸ್‌ಬುಕ್‌ ಪೇಜ್‌ ನೆರವಿಗೆ ಬಂತು’ ಎಂದರು ರೈತ ಮಹೇಶ್‌ ಪಾಟೀಲ್.

ನೆರವಿಗೆ ಮುನ್ನುಡಿ ಬರೆದಬೆಳೆನಾಶ

ಲಾಕ್‌ಡೌನ್‌ ಅವಧಿಯಲ್ಲಿ ಗೆಳೆಯರೊಬ್ಬರು 10 ಎಕರೆಯಲ್ಲಿ ಬೆಳೆದ ಕಬ್ಬನ್ನು ಮಾರಾಟ ಮಾಡಲಾಗದೆ ಸುಟ್ಟು ಹಾಕಿದ ವಿಷಯ ಪ್ರಖ್ಯಾತ್‌ ಅವರನ್ನು ಘಾಸಿಗೊಳಿಸಿತ್ತು. ಸ್ನೇಹಿತನಿಗೆ ನೆರವು ನೀಡಲು ಆಗಲಿಲ್ಲ ಎಂಬ ಕೊರಗು ಅವರನ್ನು ಕಾಡುತ್ತಿತ್ತು. ಆಗ ಹುಟ್ಟಿಕೊಂಡಿದ್ದೇ‘ಅನ್ನದಾತ ಜೀವದಾತ’ ಪೇಜ್‌. ಈ ಮೂಲಕ ಇಂದು ನೂರಾರು ರೈತರಿಗೆ ನೆರವಿನ ಹಸ್ತ ಚಾಚಿದ್ದಾರೆ.

ಆ್ಯಪ್‌ ರೂಪಿಸುವ ಚಿಂತನೆ

ರೈತರಿಗೆ ಹೆಚ್ಚಿನ ನೆರವು ನೀಡಲು ಆ್ಯಪ್ ರೂಪಿಸುವ ಕೆಲಸ ನಡೆದಿದೆ. ರೈತರ ಜಮೀನಿನ ಲೊಕೇಷನ್‌ ಹಾಕಿದರೆ ಬೆಳೆ, ರೈತರ ವಿಳಾಸ ಸೇರಿ ಸಂಪೂರ್ಣ ಮಾಹಿತಿ ನೀಡುವ ಆ್ಯಪ್‌ ರೂಪಿಸುವ ಸಿದ್ಧತೆ ನಡೆದಿದೆ ಎಂದು ಪ್ರಖ್ಯಾತ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT