ಬಸವಾಪಟ್ಟಣ: ಸಮೀಪದ ಸೂಳೆಕೆರೆ (ಶಾಂತಿಸಾಗರ)ದಲ್ಲಿ ಚನ್ನಗಿರಿ–ದಾವಣಗೆರೆ ರಸ್ತೆಯ ವಿಸ್ತರಣೆ ಸಂದರ್ಭದಲ್ಲಿ ಪ್ರಯಾಣಿಕರ ತಂಗುದಾಣ ತೆರವುಗೊಳಿಸಿದ್ದು, ಮರಗಳನ್ನು ಕಡಿಯಲಾಗಿದೆ. ಇದರಿಂದ ಬಿಸಿಲಲ್ಲೇ ಪ್ರಯಾಣಿಕರು ಬಸ್‌ಗಳಿಗೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
ಈಗ ಬಿಸಿಲಿನ ತಾಪ ಹೆಚ್ಚಿದೆ. ಇಂತಹ ಸಮಯದಲ್ಲಿ ತಂಗುದಾಣ ಇಲ್ಲದ ಕಾರಣ ಪ್ರಯಾಣಿಕರು ಹೈರಾಣಾಗಿದ್ದಾರೆ.
ಸೂಳೆಕೆರೆಯಿಂದ ದಾವಣಗೆರೆ, ಹೊನ್ನಾಳಿ, ಚನ್ನಗಿರಿ, ಭದ್ರಾವತಿ, ಮಲೇಬೆನ್ನೂರು, ಹರಿಹರಕ್ಕೆ ಹೋಗುವ ಪ್ರಯಾಣಿಕರಿಗೆ ಇದು ಪ್ರಮುಖ ಜಂಕ್ಷನ್. ಬಸವಾಪಟ್ಟಣ, ಹೊನ್ನಾಳಿ ಕಡೆಗೆ ಹೋಗುವ ಪ್ರಯಾಣಿಕರು ಗಂಟೆಗಟ್ಟಲೇ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಬಸವಾಪಟ್ಟಣ, ಹೊನ್ನಾಳಿ ಮಾರ್ಗದಲ್ಲಿ ಬೆರಳೆಣಿಕೆಯಷ್ಟಿವೆ. ಇದರಿಂದ ಬಿಸಿಲಿನಲ್ಲಿ ಪ್ರಯಾಣಿಕರು ಗಂಟೆಗಟ್ಟಲೇ ಕಾಯುವ ಪರಿಸ್ಥಿತಿ ಇದೆ.
ಇದ್ದ ತಂಗುದಾಣವನ್ನು ತೆರವು ಮಾಡಲಾಗಿದೆ. ಹೊಸದಾಗಿ ನಿರ್ಮಿಸಿಲ್ಲ. ಇದರಿಂದ ಬಿಸಿಲು, ಮಳೆಯಲ್ಲಿ ಪ್ರಯಾಣಿಕರು ಪರದಾಡಬೇಕು. ಮರಗಳನ್ನೂ ಕಡಿದಿರುವುದರಿಂದ ತೊಂದರೆಯಾಗಿದೆ. ಸಂಬಂಧಪಟ್ಟವರು ಕೂಡಲೇ ಮಹಿಳಾ ಮತ್ತು ಪುರುಷರ ಶೌಚಾಲಯವನ್ನು ಒಳಗೊಂಡ ಒಂದು ಸುಸಜ್ಜಿತವಾದ ತಂಗುದಾಣ ನಿರ್ಮಿಸಬೇಕು ಎಂದು ಹೊಸನಗರದ ನಿವಾಸಿ ಶಿವಾನಾಯ್ಕ್ ಒತ್ತಾಯಿಸಿದರು.
‘ಚನ್ನಗಿರಿಯ ಶಾಸಕರಾಗಿದ್ದ ಎನ್.ಜಿ. ಹಾಲಪ್ಪನವರು ಸೂಳೆಕೆರೆಯಲ್ಲಿ ನಿರ್ಮಿಸಿದ್ದ ತಂಗುದಾಣ ಸುಭದ್ರವಾಗಿತ್ತು. ಅದರಿಂದ ರಸ್ತೆ ವಿಸ್ತರಣೆಗೆ ತೊಂದರೆ ಇರಲಿಲ್ಲ. ಆದರೆ ಅದನ್ನು ನೆಲಸಮ ಮಾಡಲಾಗಿದೆ. ಲೋಕೋಪಯೋಗಿ ಇಲಾಖೆ ಹೊಸ ತಂಗುದಾಣ ನಿರ್ಮಿಸುವ ಬಗ್ಗೆ ಕ್ರಮ ಕೈಗೊಂಡಿಲ್ಲ. ಸೂಳೆಕೆರೆ ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ತಾಣ. ಪ್ರತಿದಿನ ಇಲ್ಲಿಗೆ ನೂರಾರು ಜನರು ಬರುತ್ತಾರೆ. ಇಲ್ಲಿ ತಂಗುದಾಣ ಸೇರಿದಂತೆ ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕು’ ಎಂದು ನಲ್ಲೂರಿನ ಮಹಾಲಿಂಗಪ್ಪ ಒತ್ತಾಯಿಸಿದರು.
‘ಸೂಳೆಕೆರೆ ಏರಿಯ ಎರಡೂ ಕಡೆಗಳಲ್ಲಿ ಮಾವು, ಬೇವು, ನೀಲಗಿರಿ, ಹಲಸು ಮುಂತಾದ ಅನೇಕ ಮರಗಳಿದ್ದವು. ಬೇಸಿಗೆಯಲ್ಲಿ ಅವು ನೆರಳಾಗಿದ್ದವು. ಈಗ ಇಲ್ಲಿ ಒಂದೂ ಮರವಿಲ್ಲ. ಸಮೀಪದದಲ್ಲಿಯೇ ಅರಣ್ಯ ಇಲಾಖೆಯ ನರ್ಸರಿ ಇದ್ದು, ಈ ಮಳೆಗಾಲದ ಆರಂಭದಲ್ಲಿ ಗಿಡಗಳನ್ನು ನೆಟ್ಟು ಸೂಳೆಕೆರೆಗೆ ಹಿಂದಿನ ವೈಭವವನ್ನು ತರಬೇಕು’ ಎಂಬುದು ಚನ್ನಗಿರಿಯ ಶಿಕ್ಷಕಿ ಶಾರದಮ್ಮ ಅವರ ಒತ್ತಾಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.