ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜ್ಞಾನದತ್ತ ಮಕ್ಕಳಲ್ಲಿ ಆಸಕ್ತಿ ಬೆಳೆಸಿ: ಪ್ರೊ.ಬಿ.ಡಿ.ಕುಂಬಾರ ಸಲಹೆ

Published : 26 ಸೆಪ್ಟೆಂಬರ್ 2024, 8:03 IST
Last Updated : 26 ಸೆಪ್ಟೆಂಬರ್ 2024, 8:03 IST
ಫಾಲೋ ಮಾಡಿ
Comments

ದಾವಣಗೆರೆ: ದೇಶದ ಅಭಿವೃದ್ಧಿಗೆ ವಿಜ್ಞಾನದ ಕೊಡುಗೆ ಅಪಾರ. ಮೂಲ ವಿಜ್ಞಾನದತ್ತ ಮಕ್ಕಳಲ್ಲಿ ಒಲವು ಮೂಡಿಸುವ ಅಗತ್ಯವಿದ್ದು, ಪಾಲಕರು ಹಾಗೂ ಶಿಕ್ಷಣ ಸಂಸ್ಥೆಗಳು ಇತ್ತ ಗಮನ ಹರಿಸಬೇಕು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಪ್ರೊ.ಬಿ.ಡಿ.ಕುಂಬಾರ ಸಲಹೆ ನೀಡಿದರು.

ಇಲ್ಲಿನ ಎ.ವಿ.ಕಮಲಮ್ಮ ಮಹಿಳಾ ಕಾಲೇಜು ಸಭಾಂಗಣದಲ್ಲಿ ದಾವಣಗೆರೆ ವಿಶ್ವವಿದ್ಯಾಲಯ ಹಾಗೂ ಡಿಆರ್‌ಎಂ ವಿಜ್ಞಾನ ಕಾಲೇಜು ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಭೌತವಿಜ್ಞಾನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮೂಲ ವಿಜ್ಞಾನ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ವಿಜ್ಞಾನದ ಕುರಿತು ಆಸಕ್ತಿ ಮೂಡಿಸಬೇಕು. ವಿಜ್ಞಾನಕ್ಕೆ ಪೂರಕವಾಗಿರುವ ಶೈಕ್ಷಣಿಕ ಪ್ರವಾಸಗಳನ್ನು ಹಮ್ಮಿಕೊಳ್ಳಬೇಕು. ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸೇರಿ ಇತರೆಡೆಗೆ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ಯಬೇಕು’ ಎಂದು ಕಿವಿಮಾತು ಹೇಳಿದರು.

‘ಶಿಕ್ಷಣ ಸಂಸ್ಥೆಗಳು, ಶಿಕ್ಷಕರು ವಿಜ್ಞಾನ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಮೂರು ತಿಂಗಳಿಗೊಮ್ಮೆ ಶಾಲೆ–ಕಾಲೇಜುಗಳಲ್ಲಿ ಉಪನ್ಯಾಸ ಮಾಲಿಕೆಗಳು ಆಯೋಜಿಸಬೇಕು. ವಿಷಯ ಪರಿಣತರು, ವಿಜ್ಞಾನಿಗಳನ್ನು ಕರೆಸಿ ಅನುಭವ ಹಂಚಿಕೊಳ್ಳಲು ವೇದಿಕೆ ರೂಪಿಸಬೇಕು. ಇಂತಹ ಪ್ರಯತ್ನಗಳು ವಿದ್ಯಾರ್ಥಿಗಳಲ್ಲಿ ಸ್ಫೂರ್ತಿಯನ್ನು ತುಂಬಲು ಸಹಕಾರಿಯಾಗಲಿವೆ’ ಎಂದು ಅಭಿಪ್ರಾಯಪಟ್ಟರು.

‘ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಾತಿ ವಿಳಂಬವಾಗುತ್ತಿದೆ. ವಿಶ್ವವಿದ್ಯಾಲಯ, ಪದವಿ ಕಾಲೇಜು ಸೇರಿ ಎಲ್ಲೆಡೆ ಅತಿಥಿ ಉಪನ್ಯಾಸಕರ ಸೇವೆ ಅನಿವಾರ್ಯವಾಗಿದೆ. ಇದು ವಿಜ್ಞಾನ ವಿಭಾಗದಲ್ಲಿ ಉಪನ್ಯಾಸಕರ ಸಂಖ್ಯೆ ಕುಗ್ಗಲು ಕಾರಣವಾಗಿದೆ. ವಿಜ್ಞಾನ ಕಾಲೇಜುಗಳು ಆಕರ್ಷಣೆ ಕಳೆದುಕೊಳ್ಳುತ್ತಿವೆ. ಮೂಲ ವಿಜ್ಞಾನ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಗುಣಮಟ್ಟದ ಶಿಕ್ಷಕರು, ಉಪನ್ಯಾಸಕರು ಹಾಗೂ ಪ್ರಯೋಗಾಲಯದ ಕೊರತೆ ಎದುರಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಎಡವುತ್ತಿದ್ದೇವೆ. ಕಾಲದ ಅಗತ್ಯಕ್ಕೆ ಅನುಗುಣವಾದ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಕುರಿತು ಆಸಕ್ತಿಯೂ ಬೆಳೆಯುತ್ತಿಲ್ಲ’ ಎಂದು ಹೇಳಿದರು.

‘ಭೌತವಿಜ್ಞಾನದಲ್ಲಿ ಸಾಕಷ್ಟು ಬೆಳವಣಿಗೆ ಆಗುತ್ತಿದೆ. ವಿಜ್ಞಾನದ ಮೂಲ ಅಂಶಗಳನ್ನು ಮಕ್ಕಳಿಗೆ ಕಲಿಸುವ ಅಗತ್ಯವಿದೆ. ಪ್ರತಿ‌ಮೂರು ವರ್ಷಕ್ಕೊಮ್ಮೆ ಪಠ್ಯ ಬದಲಾಗಬೇಕು. ಪದವಿ ಹಂತದಲ್ಲಿ ಸರಿಯಾಗಿ ಅಧ್ಯಯನ ಮಾಡಿದರೆ ಸ್ನಾತಕೋತ್ತರ ಹಂತದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ’ ಎಂದರು.

ಪ್ರಾಂಶುಪಾಲರಾದ ಕಮಲಾ ಸೊಪ್ಪಿನ್‌, ಪ್ರಾಧ್ಯಾಪಕರಾದ ಎನ್.ಎಚ್.ಹನುಮಂತರಾಯ, ಎಂ.ಎನ್.ಕಳಸದ, ಬಿಒಎಸ್ ಸದಸ್ಯರಾದ ವಿನೋದ್ ಕುಮಾರ್, ಶ್ರೀನಿವಾಸ್ ಇದ್ದರು.

ಏಕರೂಪ ಬೋಧನಾ ವಿಧಾನ ಅನುಷ್ಠಾನಕ್ಕೆ ಇಂತಹ ಕಾರ್ಯಾಗಾರ ಅಗತ್ಯ. ಸಂಶೋಧನೆಯಲ್ಲಿ ಸುಧಾರಣೆ ತರಲು ಇದು ಸಹಕಾರಿ. ಕಲಿಕೆಗೂ ಆಸಕ್ತಿ ಬೆಳೆಸುತ್ತದೆ
ಪ್ರೊ.ಎಂ.ಪಿ.ರೂಪಶ್ರೀ, ಪ್ರಾಂಶುಪಾಲರು ಡಿಆರ್‌ಎಂ ವಿಜ್ಞಾನ ಕಾಲೇಜು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT