ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ಜಿ.ಪಂ. ಅಧ್ಯಕ್ಷರಾಗಿ ದೀಪಾ ಅವಿರೋಧ ಆಯ್ಕೆ

Last Updated 11 ಜೂನ್ 2020, 13:51 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲಾ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಹೊನ್ನಾಳಿ ತಾಲ್ಲೂಕಿನ ಕುಂದೂರು ಕ್ಷೇತ್ರದ ಸದಸ್ಯೆ ದೀಪಾ ಜಗದೀಶ ಅವಿರೋಧವಾಗಿ ಆಯ್ಕೆಯಾದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಬೆಂಗಳೂರು ಪ್ರಾದೇಶಿಕ ಆಯುಕ್ತ ವಿ.ಪಿ. ಇಕ್ಕೇರಿ ಅಧ್ಯಕ್ಷತೆಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು.

ದೀಪಾ ಒಬ್ಬರೇ 2 ನಾಮಪತ್ರ ಸಲ್ಲಿಸಿದ್ದರು. ಒಟ್ಟು 29 ಸದಸ್ಯರಲ್ಲಿ 22 ಮಂದಿ ಭಾಗವಹಿಸಿದ್ದರು. ಸಾಮಾನ್ಯ ಮಹಿಳೆ ವರ್ಗಕ್ಕೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ದೀಪಾ ಜಗದೀಶ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ವಿ.ಪಿ. ಇಕ್ಕೇರಿ ಘೋಷಣೆ ಮಾಡಿದರು.

ಆರೋಗ್ಯ, ಅಭಿವೃದ್ಧಿಗೆ ಆದ್ಯತೆ: ‘ಕೊರೊನಾ ಬಂದಿರುವ ಈ ಸಂದರ್ಭದಲ್ಲಿ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡುವೆ. ಎಲ್ಲಾ ಕಡೆ ಹೋಗಿ ಆರೋಗ್ಯದ ಜಾಗೃತಿ ಮೂಡಿಸುವೆ. ಜಿಲ್ಲೆಯಲ್ಲಿರುವ 195 ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡುತ್ತೇನೆ. ಮತ್ತೆ ಗ್ರೀನ್ ಝೋನ್ ಜಿಲ್ಲೆಯಾಗಿಸಲು ಶ್ರಮಿಸುತ್ತೇನೆ. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೂ ಆದ್ಯತೆ ನೀಡಲಾಗುವುದು’ ಎಂದು ನೂತನ ಅಧ್ಯಕ್ಷೆ ದೀಪಾ ಜಗದೀಶ ಪ್ರತಿಕ್ರಿಯಿಸಿದರು.

‘ಗ್ರಾಮ ಪಂಚಾಯಿತಿ ಮಟ್ಟದಿಂದ ಜಿಲ್ಲಾಮಟ್ಟದವರೆಗೆ ಎಲ್ಲಾ ಅಧಿಕಾರಿಗಳೊಂದಿಗೆ ಹಾಗೂ ಜಿಲ್ಲಾಡಳಿತದೊಂದಿಗೆ ಸೇರಿಕೊಂಡು ಜನಪರ ಕೆಲಸ ಮಾಡುವೆ. ಮುಂಗಾರು ಸಂದರ್ಭ ಇದಾಗಿದ್ದು, ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆಯಲ್ಲಿ ಲೋಪ ಆಗದಂತೆ ನೋಡಿಕೊಳ್ಳುವೆ’ ಎಂದು ಭರವಸೆ ನೀಡಿದರು.

‘ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಶ್ರಮಿಸುವೆ. ಶಾಸಕರೊಂದಿಗೆ ಸೇರಿಕೊಂಡು ಒಗ್ಗೂಡಿ ಕೆಲಸ ಮಾಡುವೆ. ಕೆಲಸ ಮಾಡಲು ಮನಸ್ಸು ಇದ್ದರೆ ಅಧ್ಯಕ್ಷತೆಯ ಅವಧಿ ಕಡಿಮೆ ಎಂಬುದು ಲೆಕ್ಕಕ್ಕೆ ಬರುವುದಿಲ್ಲ. ಪಕ್ಷದ ತೀರ್ಮಾನದಂತೆ ಆಯ್ಕೆ ನಡೆಯುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ‍ಪೂಜಾರ ವೀರಮಲ್ಲಪ್ಪ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ ನಾಯ್ಕ್‌, ಮಾಜಿ ಅಧ್ಯಕ್ಷರಾದ ಲೋಕೇಶ್ವರ್, ಯಶೋದಮ್ಮ ಮರುಳಪ್ಪ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT