‘ಶಾಲೆಯ ಅಭಿವೃದ್ಧಿ ಆದ್ಯತೆ ನೀಡಿ’
ದುರ್ಗಾಂಬಿಕಾ ದೇವಿ ದೇವಸ್ಥಾನದ ಟ್ರಸ್ಟ್‌ನಿಂದ ನಡೆಯುತ್ತಿರುವ ಶಾಲೆಯು ದುಸ್ಥಿತಿಗೆ ತಲುಪುತ್ತಿದೆ. ಶಾಲೆಯ ನಿರ್ವಹಣೆಗೆ ಟ್ರಸ್ಟ್‌ನಿಂದ ಪ್ರತೀ ವರ್ಷ ₹18.40 ಲಕ್ಷ ಭರಿಸಲಾಗುತ್ತಿದೆ. ₹10 ಲಕ್ಷ ಮಾತ್ರ ಆದಾಯ ಬರುತ್ತಿದ್ದು ₹ 8 ಲಕ್ಷ ಟ್ರಸ್ಟಿಗೆ ಹೊರೆಯಾಗುತ್ತಿದೆ. ಆದರೂ ಶಾಲೆಯ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ ಯಾಕೆ ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಪ್ರಶ್ನಿಸಿದರು. ಶಾಲೆಯ ಕಟ್ಟಡ ಬಿರುಕು ಬಿಟ್ಟಿದೆ. ಆವರಣದಲ್ಲಿ ಸಗಣಿ ಮೇವು ಬಿದ್ದಿದೆ. ಶಾಲೆಯ ನಿರ್ವಹಣೆ ಬಗ್ಗೆ ಟ್ರಸ್ಟ್‌ನ ಸಮಿತಿ ಸದಸ್ಯರು ಎಷ್ಟು ಸಭೆಗಳನ್ನು ನಡೆಸಿ ಚರ್ಚೆ ನಡೆಸಿದ್ದಾರೆ ಎಂದು ಪ್ರಶ್ನಿಸಿದರು. ಬಡವರ ಮಕ್ಕಳು ಓದುವ ಶಾಲೆಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು. ‘ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ಆದಷ್ಟು ಬೇಗ ದುರಸ್ತಿ ಕಾರ್ಯಗಳನ್ನು ನಡೆಸೋಣ. ಟ್ರಸ್ಟ್‌ನಲ್ಲಿ ಸಾಕಷ್ಟು ಅನುದಾನ ಲಭ್ಯವಿದೆ. ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳೋಣ’ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.