ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಕೊರೊನಾ ಸಂಕಷ್ಟದಲ್ಲೂ ಅರಳುತ್ತಿವೆ ಗಣೇಶನ ವಿಗ್ರಹಗಳು

Last Updated 6 ಸೆಪ್ಟೆಂಬರ್ 2021, 7:43 IST
ಅಕ್ಷರ ಗಾತ್ರ

ದಾವಣಗೆರೆ: ‘ಎರಡು ದಶಕಗಳಿಂದ ಗಣಪತಿ ವಿಗ್ರಹ ಮಾಡುತ್ತಿದ್ದೇನೆ. ಪ್ರತಿವರ್ಷ 100 ವಿಗ್ರಹ ಮಾಡಿ ಮಾರಾಟ ಮಾಡುತ್ತಿದ್ದೆ. ಈ ಬಾರಿ ಸುಮಾರು 40 ವಿಗ್ರಹಗಳನ್ನಷ್ಟೇ ತಯಾರಿಸಿದ್ದೇನೆ. ಕೊರೊನಾದಿಂದಾಗಿ ದೊಡ್ಡ ಗಣಪತಿಗಳಿಗೆ ಬೇಡಿಕೆಯೇ ಇಲ್ಲ. ಸಣ್ಣ ಗಣಪತಿಗಳಿಗೆ ಎಷ್ಟು ಬೇಡಿಕೆ ಇದೆ ಎಂಬುದು ಗಣೇಶ ಚತುರ್ಥಿಗೆ ಎರಡು ದಿನ ಇರುವಾಗ ಗೊತ್ತಾಗುತ್ತದೆ...’

ಜಯನಗರದಲ್ಲಿನ ಗಣೇಶ ವಿಗ್ರಹ ತಯಾರಕ ವೀರೇಶ್‌ ಬಡಿಗೇರ್‌ ಅವರ ಮಾತಿದು.

ವಿಗ್ರಹ ತಯಾರಕರು, ಮಾರಾಟಗಾರರು, ಖರೀದಿದಾರರು ಹೀಗೆ ಎಲ್ಲರಲ್ಲೂ ಹಿಂದಿನ ವರ್ಷಗಳ ಉತ್ಸಾಹ ಈ ಬಾರಿ ಕಾಣಿಸುತ್ತಿಲ್ಲ. ಗಣೇಶ ಚತುರ್ಥಿ ಹತ್ತಿರ ಬರುತ್ತಿದ್ದಂತೆ ವಿಗ್ರಹ ಮಾರುವವರ ನೂರಾರು ಅಂಗಡಿಗಳು ತಲೆಎತ್ತುತ್ತಿದ್ದವು. ಈ ಬಾರಿ ಕಡಿಮೆಯಾಗಿದೆ. ಅಲ್ಲದೇ ಕೋಲ್ಕತ್ತ ಸಹಿತ ರಾಜ್ಯದ ಹೊರಗಿನಿಂದ ಬಂದು ಬೃಹತ್‌ ವಿಗ್ರಹಗಳನ್ನು ತಯಾರಿಸುತ್ತಿದ್ದರು. ಈ ಬಾರಿ ಅವರ ಸಂಖ್ಯೆಯೂ ಕಡಿಮೆಯಾಗಿದೆ. ಕೋಲ್ಕತ್ತದಿಂದ 11 ವರ್ಷಗಳಿಂದ ಬರುತ್ತಿದ್ದ ಸಂಜಯ್‌ ಈ ಬಾರಿಯೂ ಬಂದಿದ್ದಾರೆ. ಆದರೆ, ಆರ್ಡರ್‌ ಸಿಗದೇ ಸುಮ್ಮನಾಗಿದ್ದಾರೆ.

‘ನಾನು ಈರುಳ್ಳಿ ವ್ಯಾಪಾರಿ. ಪ್ರತಿವರ್ಷ ಗಣೇಶೋತ್ಸವದ ಸಂದರ್ಭದಲ್ಲಿ ಈರುಳ್ಳಿ ವ್ಯಾಪಾರ ಬಿಟ್ಟು ಗಣೇಶನ ವಿಗ್ರಹ ಮಾರಾಟಕ್ಕೆ ಇಡುತ್ತೇನೆ. ಉತ್ತಮ ವ್ಯಾಪಾರ ಆಗುತ್ತಿತ್ತು. ಈ ಬಾರಿ ಖರೀದಿದಾರರ ಸಂಖ್ಯೆ ಬಹಳ ಕಡಿಮೆಯಾಗಿದೆ. ಮನೆಗಳಲ್ಲಿ ಮೂರ್ತಿ ಇಟ್ಟು ಪೂಜಿಸುವವರು ಗಣೇಶನ ಹಬ್ಬದ ಹಿಂದಿನ ದಿನ ಬರಬಹುದು ಎಂಬ ನಿರೀಕ್ಷೆ ಇದೆ’ ಎಂದು ವಿಗ್ರಹ ಮಾರಾಟಗಾರ ಮಹಾಂತೇಶ್‌ ಮಾಹಿತಿ ನೀಡಿದರು.

‘ಕೊರೊನಾ ಬಂದು, ಸರಿಯಾದ ದುಡಿಮೆ ಇಲ್ಲದೇ ಜನರಲ್ಲಿ ಹಣವಿಲ್ಲ. ಗಣೇಶನ ವಿಗ್ರಹ ಬೇಕು ಎಂಬ ಆಸೆ ಇದ್ದರೂ ಕೊಳ್ಳುವ ಶಕ್ತಿ ಇಲ್ಲ. ನಿನ್ನೆ ಒಬ್ಬರು ಬಂದು ₹ 100ಕ್ಕೆ ಒಂದು ವಿಗ್ರಹ ಕೊಡಿ ಎಂದು ಕೇಳಿದರು. ಒಂದು ವಿಗ್ರಹ ಮಾಡಲು ಎಷ್ಟು ಸಮಯ, ಎಷ್ಟು ವೆಚ್ಚ ಆಗುತ್ತದೆ ಎಂಬುದೇ ಅವರಿಗೆ ಗೊತ್ತಿಲ್ಲ. ₹ 100ಕ್ಕೆ ವಿಗ್ರಹ ಸಿಗುವುದಿಲ್ಲ ಎಂದು ಅವರಿಗೆ ವಿವರಿಸಿ ಹೇಳಿ ಕಳುಹಿಸಿದೆ’ ಎನ್ನುತ್ತಾರೆ ಅವರು.

ಬೇಡಿಕೆ ಕಡಿಮೆ ಇರುವುದರಿಂದ ವಿಗ್ರಹಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ, ಹಿಂದೆ ಪ್ರತಿವರ್ಷ ವಿಗ್ರಹ ವ್ಯಾಪಾರ ಮಾಡುತ್ತಿದ್ದವರು ಈ ಬಾರಿಯೂ ಆ ಸಂಪ್ರದಾಯ ಮುಂದುವರಿಸಿದ್ದಾರೆ. ಜತೆಗೆ ಕೆಲವು ಹೊಸ ಹುಡುಗರು ಕೂಡ ಒಂದಷ್ಟು ವಿಗ್ರಹಗಳನ್ನು ತಂದಿಟ್ಟು ಮಾರಾಟಕ್ಕೆ ಇಳಿದಿದ್ದಾರೆ. ನಷ್ಟಕಷ್ಟಗಳ ನಡುವೆ ಹಾಕಿದ ಅಸಲು ಬಂದರೆ ಸಾಕು ಎಂದು ಕುಳಿತಿದ್ದಾರೆ.

‘ಇದೇ ಮೊದಲ ಬಾರಿ ಗಣೇಶನ ಮೂರ್ತಿ ಮಾರಾಟಕ್ಕೆ ಇಳಿದಿದ್ದೇವೆ. ಅರ್ಧ ಅಡಿಯಿಂದ ನಾಲ್ಕು ಅಡಿವರೆಗೆ ಸುಮಾರು 60 ಮೂರ್ತಿ ಇದೆ. ಎಷ್ಟು ವ್ಯಾಪಾರ ಆಗುತ್ತದೆ ಎಂದು ನೋಡಬೇಕು’ ಎಂದು ನಿಟುವಳ್ಳಿಯ ಚೇತನ್‌ ಕೆ.ವಿ. ತಿಳಿಸಿದರು.

‘ಈ ಬಾರಿ ವಿಗ್ರಹ ವ್ಯಾಪಾರಕ್ಕೆ ಇಳಿದಿದ್ದೇನೆ. ಇನ್ನೂ ಬೇಡಿಕೆ ಬಂದಿಲ್ಲ. ನೋಡಬೇಕು’ ಎಂದು ಭಗೀರಥ ಸರ್ಕಲ್‌ನ ಕೃಷ್ಣ ಆಶಾಭಾವನೆ ವ್ಯಕ್ತಪಡಿಸಿದರು.

***

ಸರ್ಕಾರದ ಸದ್ಯದ ಮಾರ್ಗಸೂಚಿ ಪ್ರಕಾರ ಮನೆಯಲ್ಲಷ್ಟೇ ಹಬ್ಬ ಆಚರಿಸಬಹುದು. ಸಾರ್ವಜನಿಕ ಗಣೇಶೋತ್ಸವ ಮಾಡಲು ಅವಕಾಶ ಇಲ್ಲ. ಮಾರ್ಗಸೂಚಿ ಬದಲಾದರೆ ತಿಳಿಸಲಾಗುವುದು.

- ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ, ದಾವಣಗೆರೆ

***

ಮನೆಗಳಲ್ಲಿ ಪೂಜಿಸಿದ ಗಣೇಶನ ವಿಗ್ರಹಗಳನ್ನು ಹಾಕಲು ನಗರದ 30 ಕಡೆಗಳಲ್ಲಿ 30 ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸುತ್ತೇವೆ. ಜನರು ಅದರಲ್ಲೇ ವಿಗ್ರಹಗಳನ್ನು ಹಾಕಬೇಕು. ಶಿರಮಗೊಂಡನಹಳ್ಳಿ ಮತ್ತು ಬಾತಿಕೆರೆ ಬಳಿ ಎರಡು ಟ್ಯಾಂಕ್‌ಗಳನ್ನು ಮಾಡಿದ್ದೇವೆ. ಅಲ್ಲಿಯೂ ಗಣೇಶನ ವಿಗ್ರಹ ವಿಸರ್ಜನೆ ಮಾಡಬಹುದು. ಸಾರ್ವಜನಿಕ ಗಣೇಶೋತ್ಸವ ಇಲ್ಲದ ಕಾರಣ, ದೊಡ್ಡ ವಿಗ್ರಹಗಳ ವಿಸರ್ಜನೆಗೆ ವ್ಯವಸ್ಥೆ ಮಾಡಿಕೊಂಡಿಲ್ಲ.

- ವಿಶ್ವನಾಥ ಮುದಜ್ಜಿ, ಮಹಾನಗರ ಪಾಲಿಕೆ ಆಯುಕ್ತ

***

ಹೊನ್ನಾಳಿ: ಮೂರ್ತಿಗೆ ಕುಸಿದ ಬೇಡಿಕೆ

- ಎನ್.ಕೆ. ಆಂಜನೇಯ

ಹೊನ್ನಾಳಿ: ಉತ್ಸವ, ಮೆರವಣಿಗೆ, ಸಂಭ್ರಮದ ಗಣೇಶನ ಹಬ್ಬ ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ಕಳೆಗುಂದಿದೆ. ಎಷ್ಟೋ ಜನ ಗಣೇಶನ ಮೂರ್ತಿ ತಯಾರಿಕೆಯಿಂದ ಹಿಂದೆ ಸರಿದಿದ್ದಾರೆ.

ಹೊನ್ನಾಳಿಯಲ್ಲಿ ಕುಂಬಾರಿಕೆಯಲ್ಲಿ ಅದರಲ್ಲೂ ವಿಶೇಷವಾಗಿ ಗಣೇಶನ ತಯಾರಿಕೆಯಲ್ಲಿ ನಾಗರಾಜಪ್ಪ, ಜಯಪ್ಪ, ಚಂದ್ರರಾಜಪ್ಪ, ವಿನಾಯಕ, ಕೆಂಚಿಕೊಪ್ಪ ನಾಗರಾಜಪ್ಪ ಎನ್ನುವ ಐದು ಕುಟುಂಬದವರು ಹತ್ತಾರು ವರ್ಷಗಳಿಂದಲೂ ಗಣೇಶನ ಮೂರ್ತಿ ತಯಾರಿಸುವಲ್ಲಿ ಪ್ರಸಿದ್ಧವಾಗಿದ್ದರು. ಅದಕ್ಕಾಗಿ ನಾಲ್ಕೈದು ತಿಂಗಳಿನಿಂದಲೇ ಸಿದ್ಧತೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಮಣ್ಣು ತರುವುದು, ಹದ ಮಾಡುವುದು, ಗಣೇಶನ ಮೂರ್ತಿ ತಯಾರು ಮಾಡುವುದು, ಬಣ್ಣ ಕೊಡುವುದು ಇದಕ್ಕೆ ಕನಿಷ್ಠ ನಾಲ್ಕೈದು ತಿಂಗಳಾದರೂ ಬೇಕಾಗುತ್ತಿತ್ತು.

₹ 200 ಸಣ್ಣ ಗಣಪತಿ, ₹ 100 ಮಧ್ಯಮ ಗಾತ್ರದ ಗಣಪತಿ ವಿಗ್ರಹಗಳಿಗೆ ಬೇಡಿಕೆ ಇರುತ್ತಿದ್ದವು. ಈ ಬಾರಿ ಶೇ 75ರಷ್ಟು ಬೇಡಿಕೆ ಕಡಿಮೆಯಾಗಿದೆ ಎಂಬುದು ಮೂರ್ತಿ ತಯಾರಕರ ಅಭಿಪ್ರಾಯ.

ಗಣೇಶನ ಹಬ್ಬಕ್ಕೆ ಅನುಮತಿ ಕೊಡಬೇಕೋ ಬೇಡವೋ ಎಂಬ ಗೊಂದಲವಿದೆ. ಹೀಗಾಗಿ ಗಣೇಶನ ತಯಾರಕರು ಮೂರ್ತಿ ತಯಾರಿಕೆಯನ್ನು ಯಾವ ಧೈರ್ಯದಿಂದ ಮಾಡಬೇಕು ಎಂಬುದು ಮೋಹನ್‌, ಜಯಪ್ಪ, ಚಂದ್ರ ರಾಜಪ್ಪ ಅವರ ಪ್ರಶ್ನೆಯಾಗಿದೆ.

***

ಖರೀದಿ ಆತಂಕದ ನಡುವೆ ಗಣೇಶ ರೆಡಿ

ವಿಶ್ವನಾಥ ಡಿ.

ಹರಪನಹಳ್ಳಿ: ಸರ್ಕಾರ ಗಣೇಶ ಹಬ್ಬ ಆಚರಣೆಗೆ ಸರ್ಕಾರ ಅನುಮತಿ ನೀಡುತ್ತದೆಯೋ ಇಲ್ಲವೋ ಎನ್ನುವ ಆತಂಕದ ನಡುವೆಯೇ ಸಾವಿರಾರು ಮಂದಿ ಪರಿಸರಸ್ನೇಹಿ ಮಣ್ಣಿನ ಗಣೇಶ ವಿಗ್ರಹ ತಯಾರಿಸಿಕೊಂಡು ವ್ಯಾಪಾರ ಶುರುವಿಟ್ಟುಕೊಂಡಿದ್ದಾರೆ.

₹ 200ರಿಂದ ₹ 800ವರೆಗೆ ಬೆಲೆ ನಿಗದಿ ಪಡಿಸಲಾಗಿದೆ. ಕೆಲವು ವ್ಯಾಪಾರಸ್ಥರು ದೂರದ ಹುಬ್ಬಳ್ಳಿಯಿಂದಲೂ ವಿಗ್ರಹಗಳನ್ನು ತರಿಸಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಸ್ಥಳೀಯ ಕಲಾವಿದರ ಹೊಟ್ಟೆ ಮೇಲೆ ಹೊಡೆದಂತಾಗಿದೆ ಎಂದು ಸ್ಥಳೀಯ ಗಣೇಶ ತಯಾರಕರು ಬೇಸರ ವ್ಯಕ್ತಪಡಿಸಿದರು.

‘ಮೂರು ವರ್ಷಗಳಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿ ತಯಾರಿಕೆ ನಿಲ್ಲಿಸಿದ್ದೇವೆ. ಈ ವರ್ಷ ಆತಂಕದ ನಡುವೆಯೂ ಮಣ್ಣಿನಿಂದ ಚಿಕ್ಕ ಗಾತ್ರದ ಸಾವಿರ ಗಣೇಶ ವಿಗ್ರಹ ತಯಾರಿಸಿ ವ್ಯಾಪಾರಕ್ಕಿಟ್ಟಿದ್ದೇವೆ’ ಎಂದು ಪಾರಂಪರಿಕ ಗಣೇಶ ತಯಾರಿಕರಾದ ವಿರೂಪಾಕ್ಷ ಚಿತ್ರಗಾರ ಮತ್ತು ಆನಂದಿ ದಂಪತಿ ತಿಳಿಸಿದರು.

***

ಮಂಕಾದ ಮೂರ್ತಿ ತಯಾರಿಕೆ

ಡಿ.ಎಂ. ಹಾಲಾರಾಧ್ಯ

ನ್ಯಾಮತಿ: ಕಳೆದೆರಡು ವರ್ಷಗಳಿಂದ ಕೊರೊನಾ ಸಂಕಷ್ಟದಿಂದಾಗಿ ಆಚರಣೆಗಳು ಮಂಕಾಗಿದ್ದು, ಈ ಬಾರಿ ಕೊರೊನಾ ಮೂರನೇ ಅಲೆಯ ಆತಂಕದಿಂದಾಗಿ ಗಣೇಶ ಮೂರ್ತಿ ತಯಾರಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ಪೂರ್ವಿಕರು ಮಾಡುತ್ತಿದ್ದ ಕುಂಬಾರಿಕೆ ವೃತ್ತಿ ನೆಚ್ಚಿಕೊಂಡಿರುವ ಕುಟುಂಬಗಳಿಗೆ ಬೇರೆ ಉದ್ಯೋಗ ಬರುವುದಿಲ್ಲ. ಹೊನ್ನಾಳಿ, ನ್ಯಾಮತಿ ಪಟ್ಟಣ, ಕೆಂಚಿಕೊಪ್ಪ, ಸಾಸ್ವೇಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಇರುವ ಕುಂಬಾರ ಕುಟುಂಬಗಳು ಕುಂಬಾರಿಕೆಯಲ್ಲಿ ತೊಡಗಿದ್ದು, ಗಣಪತಿ ಹಬ್ಬದ ಸಮಯದಲ್ಲಿ ಮಣ್ಣಿನ ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗುತ್ತೇವೆ’ ಎಂದು ಗಣೇಶ ಮೂರ್ತಿ ತಯಾರಕರಾದ ಕುಂಬಾರ ಉಮೇಶ, ಚನ್ನೇಶ, ಹೊಸಮನೆ ಯಶೋದಾ, ಶಿವಮ್ಮ, ಶಾಂತಮ್ಮ, ಸುಮಂಗಲಾ, ಪಾರ್ವತಮ್ಮ ತಿಳಿಸಿದ್ದಾರೆ.

‘ಮಡಕೆಗಳ ಬೇಡಿಕೆ ಕುಸಿದಿದ್ದು, ವರ್ಷಕ್ಕೊಮ್ಮೆ ಗಣೇಶ ಮೂರ್ತಿ ತಯಾರು ಮಾಡಿ ಜೀವನ ಕಟ್ಟಿಕೊಂಡಿದ್ದೆವು. ಕೊರೊನಾದಿಂದಾಗಿ ನೂರಾರು ಮೂರ್ತಿ ತಯಾರಕರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಕುಂಬಾರ ಯುವಸೈನ್ಯ ನ್ಯಾಮತಿ ತಾಲ್ಲೂಕು ಅಧ್ಯಕ್ಷ ಉಮೇಶ ನೋವು ತೋಡಿಕೊಂಡರು.

***

ಬಸವಾಪಟ್ಟಣದಲ್ಲಿ ಸಿದ್ಧವಾಗುತ್ತಿವೆ ಮೂರ್ತಿಗಳು

ಎನ್‌.ವಿ. ರಮೇಶ್‌

ಬಸವಾಪಟ್ಟಣ: ದೊಡ್ಡಮೂರ್ತಿಗಳ ಕಡೆ ಗಮನಹರಿಸದೇ ಈ ಬಾರಿ ಮನೆ ಮನೆಗಳಲ್ಲಿ ಪೂಜಿಸುವ ಸಣ್ಣ ಮೂರ್ತಿಗಳಿಗೆ ಗಣೇಶನ ವಿಗ್ರಹ ತಯಾರಕು ಒತ್ತು ನೀಡಿದ್ದಾರೆ.

ದೊಡ್ಡ ಮೂರ್ತಿಗಳನ್ನು ತಯಾರಿಸಲು ಎಂಟರಿಂದ ಹತ್ತು ವಾರಗಳು ಬೇಕು. ಆದರೆ, ಅದಕ್ಕೆ ಕೊರೊನಾ ಕಾರಣದಿಂದ ಬೇಡಿಕೆ ಇಲ್ಲ. ಸರ್ಕಾರ ಕೊನೇ ಕ್ಷಣದಲ್ಲಿ ಅನುಮತಿ ನೀಡಿದರೂ ತಯಾರಿಸಲು ಕಷ್ಟ ಎನ್ನುವುದು ಇಲ್ಲಿನ ಕಲಾವಿದ ಕೆ.ಆರ್‌.ಹಾಲೇಶ್‌ ಅಭಿಪ್ರಾಯ.

‘ನಮಗೆ ಚಿಕ್ಕ ಮೂರ್ತಿಗಳಿಗಿಂತ ದೊಡ್ಡ ಮೂರ್ತಿಗಳನ್ನು ತಯಾರಿಸುವುದು ಸುಲಭ. ಆದರೆ, ಈ ವರ್ಷ ಅಂತಹ ಮೂರ್ತಿಗಳಿಗೆ ಅವಕಾಶ ಇಲ್ಲ. ಇದರಿಂದ ನಮ್ಮಂತಹ ಕಲಾವಿದರಿಗೆ ಮಾತ್ರವಲ್ಲ, ಶಾಮಿಯಾನ, ಧ್ವನಿವರ್ಧಕ ಮತ್ತು ಲೈಟಿಂಗ್‌ ವ್ಯವಸ್ಥೆ ಮಾಡುವವರಿಗೂ, ಸಂಗೀತ, ಉಪನ್ಯಾಸ ಮತ್ತು ಹರಿಕಥೆಗಳನ್ನು ನಡೆಸಿಕೊಂಡು ಬರುತ್ತಿವವರಿಗೂ ಕೆಲಸ ಇಲ್ಲದಂತಾಗಿದೆ’ ಎನ್ನುತ್ತಾರೆ ಕಲಾವಿದ ಪರಮೇಶ್‌.

***

ಸಂದಿಗ್ಧ ಪರಿಸ್ಥಿತಿಯಲ್ಲಿ ಮೂರ್ತಿ ತಯಾರಕರು

ಚನ್ನಗಿರಿ: ಸೆ. 10ಕ್ಕೆ ಗಣೇಶ ಚತುರ್ಥಿ ಹಬ್ಬವಿದ್ದು, ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆಯನ್ನು ನಡೆಸಬೇಕೋ, ಬೇಡವೋ ಎಂಬ ಬಗ್ಗೆ ಜನರಲ್ಲಿ ಗೊಂದಲವಿದೆ. ಹೀಗಾಗಿ ಗಣಪತಿ ಮೂರ್ತಿಗಳನ್ನು ಮಾಡುವುವರು ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದಾರೆ.

‘ಕಳೆದ ವರ್ಷ ಕೇವಲ ₹ 50 ಸಾವಿರ ಮೌಲ್ಯದ ಗಣಪತಿ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡಿದ್ದೆವು. ಈ ಬಾರಿಯೂ ಅದಕ್ಕಿಂತ ಭಿನ್ನ ಪರಿಸ್ಥಿತಿ ಇಲ್ಲ. 35 ವರ್ಷಗಳಿಂದ ಮೂರ್ತಿಗಳನ್ನು ತಯಾರಿಸುತ್ತಾ ಬಂದಿದ್ದೇವೆ. ಮೂರು ವರ್ಷಗಳ ಹಿಂದೆ ₹ 2 ಲಕ್ಷದಿಂದ ₹ 3 ಲಕ್ಷ ಮೌಲ್ಯದ ಮೂರ್ತಿಗಳು ಮಾರಾಟ ಆಗುತ್ತಿದ್ದವು. ಈಗ ಕತ್ತರಿ ಬಿದ್ದಿದೆ. ಸರ್ಕಾರ ಗಣಪತಿ ಮೂರ್ತಿ ತಯಾರಕರಿಗೆ ಸಹಾಯಧನದ ಪ್ಯಾಕೇಜ್ ಘೋಷಿಸಬೇಕು’ ಎಂಬುದು ಮೂರ್ತಿ ತಯಾರಕ ಕೆ. ಲೋಕೇಶಪ್ಪ ಅವರ ಆಗ್ರಹ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT