ಮಂಗಳವಾರ, ಮೇ 18, 2021
30 °C
ಸಂಜೆ ಹೊತ್ತಿಗೆ ವಿವಿಧ ಅಂಗಡಿಗಳಿಗೆ ದಾಳಿ ನಡೆಸಿದ ಜಿಲ್ಲಾಧಿಕಾರಿ ನೇತೃತ್ವದ ತಂಡ

ಜವಳಿ ಅಂಗಡಿಗಳಿಗೆ ದಂಡ ವಿಧಿಸಿದ ಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೊರೊನಾ ನಿಯಮ ಪಾಲಿಸದ ಜವಳಿ ಅಂಗಡಿಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ನೇತೃತ್ವದ ತಂಡ ಸೋಮವಾರ ಬಿಸಿಮುಟ್ಟಿಸಿದೆ. ಮಾಸ್ಕ್‌ ಧರಿಸದ, ಅಂತರ ಕಾಪಾಡಿಕೊಳ್ಳದ ಗ್ರಾಹಕರು ಇದ್ದ ಅಂಗಡಿಗಳಿಗೆ ದಂಡ ವಿಧಿಸಿದ್ದಾರೆ.

ನಗರದ ಗಡಿಯಾರಕಂಬ, ಕಾಳಿಕಾದೇವಿ ರಸ್ತೆ, ವಿಜಯಲಕ್ಷ್ಮೀ ರಸ್ತೆ ಸೇರಿ ವಿವಿಧ ರಸ್ತೆಗಳಲ್ಲಿ ಸಂಚರಿಸಿದ ತಂಡವು ಕೊರೊನಾ ನಿಯಂತ್ರಣ ನಿಯಮ ಉಲ್ಲಂಘಿಸಿದರೆ ವ್ಯಾಪಾರ ಪರವಾನಗಿಯನ್ನು ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು,.

ಬಟ್ಟೆ ಅಂಗಡಿ, ಜ್ಯೂವೆಲರ್ಸ್‍ ಅಂಗಡಿ, ಫ್ಯಾನ್ಸಿ ಅಂಗಡಿಗಳ ಸಹಿತ ವಿವಿಧ ಅಂಗಡಿಗಳು ಗ್ರಾಹಕರಿಂದ ತುಂಬಿ ತುಳುಕುತ್ತಿದ್ದವು. ಎಲ್ಲಿಯೂ ಅಂತರ ಕಾಣಲಿಲ್ಲ. ಜನರು ಮತ್ತು ಅಂಗಡಿ ಮಾಲೀಕರ ಈ ವರ್ತನೆಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಆಕ್ರೋಶ ವ್ಯಕ್ತಪಡಿಸಿದರು.

ಕಾಳಿಕಾದೇವಿ ರಸ್ತೆಯಲ್ಲಿನ ಎರಡು ಬಿ.ಎಸ್‍. ಚನ್ನಬಸಪ್ಪ ಜವಳಿ ಅಂಗಡಿಗಳಿಗೆ ತಲಾ ₹ 50 ಸಾವಿರ ದಂಡ ವಿಧಿಸಿದರು. ಅಂಬರ್‍ಕರ್ ಪಂಪಣ್ಣ ಜವಳಿ ಅಂಗಡಿಗೆ ₹ 10 ಸಾವಿರ ದಂಡ ಹಾಕಿದರು. ದಂಡ ಪಾವತಿಸಲು ನಿರಾಕರಿಸಿದ್ದಕ್ಕಾಗಿ ಕರ್ನಾಟಕ ವಿಪತ್ತು ನಿರ್ವಹಣೆ ಕಾಯ್ದೆಯನ್ವಯ ಇವರ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮಾಸ್ಕ್ ಧರಿಸದ ಸಾರ್ವಜನಿಕರಿಗೆ ಜಿಲ್ಲಾಧಿಕಾರಿಗಳು ಸ್ವತಃ ಮಾಸ್ಕ್ ವಿತರಿಸಿದರು. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಸ್ ಮಾಡಿಕೊಂಡು ಅಂತರವನ್ನು ಕಾಯ್ದುಕೊಳ್ಳಿ. ನಿಮ್ಮ ಬಗ್ಗೆ ನೀವು ಜಾಗರೂಕರಾಗಿರಿ. ಹಬ್ಬ- ಮದುವೆ ಸಮಾರಂಭಗಳನ್ನು ಕನಿಷ್ಠ 6 ತಿಂಗಳುಗಳ ಕಾಲ ಮಾಡದೇ ಕೋವಿಡ್ ಸೋಂಕು ಹರಡದಂತೆ ಎಚ್ಚರ ವಹಿಸಿ. ಜೀವಕ್ಕಿಂತ ಹಣ, ಸಂಭ್ರಮ ಮುಖ್ಯವಲ್ಲ ಎಂದು ಕಿವಿಮಾತು ಹೇಳಿದರು.

ಕೋವಿಡ್ ನಿಯಮಗಳನ್ನು ಪಾಲಿಸದವರಿಗೆ ದಂಡ ವಿಧಿಸ
ಲಾಗುತ್ತದೆ. ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿಗಳನ್ನು ಬೇಕಾಬಿಟ್ಟಿಯಾಗಿ ಉಲ್ಲಂಘನೆ ಮಾಡುವುದನ್ನು ಸಹಿಸುವುದಿಲ್ಲ. ಕೊರೊನಾ ನಿಯಂತ್ರಿಸಲು ಕೇವಲ ಜಿಲ್ಲಾಡಳಿತ, ಪೊಲೀಸ್‌ ಇಲಾಖೆ, ತಾಲ್ಲೂಕು ಆಡಳಿತದಿಂದ ಸಾಧ್ಯವಿಲ್ಲ. ಜನರು, ವರ್ತಕರು ಸಹಕಾರ ನೀಡಬೇಕು ಎಂದು ಕೋರಿದರು.

ನಿಯಮ ಉಲ್ಲಂಘನೆ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಇನ್ನು ಕಠಿಣ ನಿಯಮಗಳನ್ನು ಜಾರಿಗೆ ತರಲಾಗುವುದು ಎಂದು ಎಚ್ಚರಿಸಿದರು.

ಜಾಗೃತಿ ಅಭಿಯಾನದಲ್ಲಿ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ತಹಶೀಲ್ದಾರ್ ಗಿರೀಶ್ ಅವರೂ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು