ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮಾವಳಿ ಬದಲಾವಣೆ ಪ್ರಸ್ತಾವಕ್ಕೆ ನಿರ್ಧಾರ

ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿದ ಬೆಂಬಲ ಬೆಲೆ ಖರೀದಿ ಕೇಂದ್ರದ ಸಮಸ್ಯೆ
Last Updated 28 ಮೇ 2020, 15:17 IST
ಅಕ್ಷರ ಗಾತ್ರ

ದಾವಣಗೆರೆ: ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸಲು ವಿಧಿಸಿರುವ ನಿಯಮಾವಳಿಗಳನ್ನು ಬದಲಾವಣೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿಕೊಡಬೇಕು ಎಂದು ಗುರುವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಈ ಬಗ್ಗೆ ವಿಷಯ ಪ್ರಸ್ತಾಪಿಸಿದ ಸದಸ್ಯ ತೇಜಸ್ವಿ ಪಟೇಲ್‌, ‘ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಕುಸಿದಿದೆ. ಖರೀದಿ ಕೇಂದ್ರಕ್ಕೆ ರೈತರು ಬರುತ್ತಿಲ್ಲ. ಸರ್ಕಾರ ರೂಪಿಸಿದ ನಿಯಮಗಳನ್ನು ನೋಡಿದರೆ ಖರೀದಿ ಕೇಂದ್ರವೂ ತೆರೆಯಬೇಕು; ಅಲ್ಲಿ ಭತ್ತವೂ ಖರೀದಿಯಾಗಬಾರದು ಎಂಬಂತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ, ‘ಐದು ತಾಲ್ಲೂಕುಗಳಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ. ಒಂದು ಕ್ವಿಂಟಲ್‌ ಭತ್ತಕ್ಕೆ ₹ 1815 ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಈ ಮೊದಲು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಸಿಗುತ್ತಿದ್ದರಿಂದ ಇದುವರೆಗೆ 680 ಕ್ವಿಂಟಲ್‌ ಭತ್ತ ಮಾತ್ರ ಬಂದಿದೆ. ಮೇ 31ರವರೆಗೆ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ಅವಧಿಯನ್ನು ವಿಸ್ತರಿಸುವ ಬಗ್ಗೆ ಪ್ರಸ್ತಾವ ಕಳುಹಿಸಲಾಗಿದೆ’ ಎಂದು ಹೇಳಿದರು.

ಸದಸ್ಯ ಬಿ.ಎಂ. ವಾಗೀಶ ಸ್ವಾಮಿ, ‘ತೇವಾಂಶ ಶೇ 17 ಇರಬೇಕು. ಒಬ್ಬರಿಂದ ಗರಿಷ್ಠ 40 ಕ್ವಿಂಟಲ್‌ ಭತ್ತ ಖರೀದಿಸಬೇಕು ಎಂಬ ನಿಯಮಗಳನ್ನು ವಿಧಿಸಿರುವುದರಿಂದ ರೈತರು ಭತ್ತವನ್ನು ಖರೀದಿ ಕೇಂದ್ರಕ್ಕೆ ತರುತ್ತಿಲ್ಲ. ₹ 1,400ಕ್ಕೆ ಭತ್ತ ಮಾರುತ್ತಿದ್ದಾರೆ. ರೈತರ ಹಿತದೃಷ್ಟಿಯಿಂದ ಈ ನಿಮಯಗಳನ್ನು ಸಡಿಲಗೊಳಿಸಬೇಕು. ಹಸಿ ಭತ್ತಕ್ಕೆ ತೂಕದಲ್ಲಿ ಕಡಿಮೆ ಮಾಡಿಕೊಳ್ಳುವ ವ್ಯವಸ್ಥೆ ಬರಬೇಕು’ ಎಂದು ಸಲಹೆ ನೀಡಿದರು.

‘ಪಡಿತರ ಮೂಲಕ ಶೇ 80ರಷ್ಟು ಅಕ್ಕಿ ವಿತರಣೆಯಾಗುತ್ತಿದೆ. ಲಾಕ್‌ಡೌನ್‌ ಕಾರಣಕ್ಕೆ ಮದುವೆ ಇನ್ನಿತರ ಸಮಾರಂಭಗಳು ನಡೆಯದೇ ಇರುವುದರಿಂದ ಅಕ್ಕಿ ಕೊಳ್ಳುವವರೂ ಇಲ್ಲದಂತಾಗಿದೆ. ಅಲ್ಲದೇ ಬೆಂಬಲ ಬೆಲೆಯಲ್ಲಿ ರೈತರಿಂದ ಭತ್ತ ಖರೀದಿಸುವ ಅಕ್ಕಿ ಗಿರಣಿಗಳ ಮಾಲೀಕರಿಂದ ಬ್ಯಾಂಕ್‌ ಭದ್ರತಾ ಠೇವಣಿಯನ್ನೂ ಪಡೆಯಲಾಗುತ್ತಿದೆ’ ಎಂದು ಗಿರಣಿ ಮಾಲೀಕರ ಸಮಸ್ಯೆಯನ್ನೂ ಹೇಳಿಕೊಂಡರು.

ಸದಸ್ಯರಾದ ಸುರೇಂದ್ರ ನಾಯ್ಕ ಹಾಗೂ ಕೆ.ಎಸ್‌. ಬಸವಂತಪ್ಪ ಅವರು ಮೆಕ್ಕೆಜೋಳವನ್ನು ಕೆಎಂಎಫ್‌ನವರು ಖರೀದಿಸುವುದನ್ನು ನಿಲ್ಲಿಸಿದ್ದಾರೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದು ಸಭೆಯ ಗಮನಕ್ಕೆ ತಂದರು.

ಸಿಇಒ ಪದ್ಮ ಬಸವಂತಪ್ಪ, ‘ಭತ್ತ ಖರೀದಿ ನಿಯಮಾವಳಿ ಬದಲಾವಣೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿಕೊಡೋಣ. ಮೆಕ್ಕೆಜೋಳ ಖರೀದಿ ಬಗ್ಗೆ ಕೆಎಂಎಫ್‌ ಜೊತೆಗೆ ಮಾತುಕತೆ ನಡೆಸುತ್ತೇವೆ’ ಎಂದರು.

ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದುಗಲ್‌, ‘ಮುಂಗಾರಿಗೆ 40 ಸಾವಿರ ಕ್ವಿಂಟಲ್‌ ಬಿತ್ತನೆ ಬೀಜ ಅಗತ್ಯವಿದೆ. 35,200 ಕ್ವಿಂಟಲ್‌ ಬಿತ್ತನೆ ಬೀಜ ದಾಸ್ತಾನು ಇದೆ. 36 ಸಾವಿರ ಟನ್‌ ರಸಗೊಬ್ಬರ ಅಗತ್ಯವಿದ್ದು, 33 ಸಾವಿರ ಟನ್‌ ರಸಗೊಬ್ಬರ ದಾಸ್ತಾನು ಇದೆ’ ಎಂದು ಮಾಹಿತಿ ನೀಡಿದರು.

ಅಲೆಮಾರಿಗಳಿಗೆ ನೆರವು ನೀಡಿ: ‘ಅಲೆಮಾರಿ ಜನಾಂಗದ ಹಾಗೂ ಹಂದಿಗೊಂದಿ ಜನಾಂಗದ ಗರ್ಭಿಣಿಯರು ಹಾಗೂ ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಹಾರದ ಕಿಟ್‌ ನೀಡಬೇಕು. ದುಡಿಮೆ ಇಲ್ಲದೆ ಈ ಜನಾಂಗದವರು ಸಂಕಷ್ಟದಲ್ಲಿದ್ದಾರೆ’ ಎಂದು ಕಾಂಗ್ರೆಸ್‌ನ ಸದಸ್ಯ ಕೆ.ಎಸ್‌. ಬಸವಂತಪ್ಪ ಒತ್ತಾಯಿಸಿದರು. ತಮ್ಮ ಕ್ಷೇತ್ರದ ಅಲೆಮಾರಿಗಳಿಗೂ ನೆರವು ನೀಡಬೇಕು ಎಂದು ಸದಸ್ಯ ಜಿ.ಸಿ. ನಿಂಗಪ್ಪ ಧ್ವನಿಗೂಡಿಸಿದರು.

ಎರಡು ದಿನಗಳಲ್ಲಿ ಈ ಬಗ್ಗೆ ಸರ್ವೆ ನಡೆಸಿ ಫಲಾನುಭವಿಗಳನ್ನು ಗುರುತಿಸಿ ನೆರವು ನೀಡಲಾಗುವುದು ಎಂದು ಇಲಾಖೆಯ ಉಪನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌ ತಿಳಿಸಿದರು.

ಜಲಜೀವನ ಮಿಷನ್‌: ‘ಜಲಜೀವನ ಮಿಷನ್‌ ಯೋಜನೆಯಡಿ ‘ಮನೆ ಮನೆಗೆ ಗಂಗೆ’ ಕಾರ್ಯಕ್ರಮವನ್ನು ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಅನುಷ್ಠಾನಗೊಳಿಸಲಾಗುತ್ತಿದೆ. ಪ್ರತಿ ಮನೆಗೂ ನಳ ಸಂಪರ್ಕ ನೀಡಿ, ದಿನಾಲೂ ಒಂದು ಗಂಟೆ ನೀರು ಕೊಡಲಾಗುವುದು. ಇದಕ್ಕೆ ಮೀಟರ್‌ ಅಳವಡಿಸಲಾಗುವುದು’ ಎಂದು ಸಿಇಒ ಪದ್ಮ ಬಸವಂತಪ್ಪ ಮಾಹಿತಿ ನೀಡಿದರು.

ಅಧ್ಯಕ್ಷೆ ಯಶೋದಮ್ಮ ಮರುಳಪ್ಪ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎಸ್‌.ಎ. ರವೀಂದ್ರನಾಥ, ಎಸ್‌. ರಾಮಪ್ಪ, ಸ್ಥಾಯಿ ಸಮಿತಿ ಸದಸ್ಯರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಪ್ರತಿಧ್ವನಿಸಿದ ಗ್ರಾ.ಪಂ. ಚುನಾವಣೆ:ಅವಧಿ ಮುಗಿದ ಗ್ರಾಮ ಪಂಚಾಯಿತಿಗಳಿಗೆ ಉಸ್ತುವಾರಿ ಸಮಿತಿ ರಚಿಸಬೇಕು. ಐದು ವರ್ಷ ಕಾರ್ಯನಿರ್ವಹಿಸಿದ ಸದಸ್ಯರನ್ನೇ ಪಕ್ಷಾತೀತವಾಗಿ ಮುಂದಿನ ಆರು ತಿಂಗಳ ಅವಧಿಗೆ ನೇಮಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಕಾಂಗ್ರೆಸ್‌ ಸದಸ್ಯ ಕೆ.ಎಚ್‌. ಓಬಳಪ್ಪ ಪ್ರಸ್ತಾಪಿಸಿದ ವಿಷಯ, ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರ ನಡುವೆ ತಿಕ್ಕಾಟಕ್ಕೆ ಕಾರಣವಾಯಿತು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯ ಎಂ.ಆರ್‌. ಮಹೇಶ, ‘ಹಿಂದಿನ ಸದಸ್ಯರನ್ನೇ ಮುಂದುವರಿಸಬೇಕು ಎಂಬುದನ್ನು ನಾವು ಬೆಂಬಲಿಸುವುದಿಲ್ಲ. ಸರ್ಕಾರದ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ’ ಎಂದು ಪ್ರತಿಪಾದಿಸಿದರು.

ಕಾಂಗ್ರೆಸ್‌ನ ಸದಸ್ಯ ಡಿ.ಜಿ. ವಿಶ್ವನಾಥ್‌, ‘ತಮಗೆ ಬೇಕಾದವರನ್ನು ಸದಸ್ಯರನ್ನಾಗಿ ನೇಮಿಸಿದರೆ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದಂತಾಗುತ್ತದೆ. ಅದರ ಬದಲು ಆಡಳಿತಾಧಿಕಾರಿಯನ್ನು ನೇಮಿಸಲಿ’ ಎಂದು ಒತ್ತಾಯಿಸಿದರು.

ಮೂಲ ಸ್ಥಳಕ್ಕೇ ಬಂದ ಹೆರಿಗೆ ಆಸ್ಪತ್ರೆ:‘ಕೋವಿಡ್‌ ರೋಗಿಗಳಿರುವ ಕಾರಣಕ್ಕೆ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿದ್ದ ಮಹಿಳಾ ಮತ್ತು ಮಕ್ಕಳ ವಿಭಾಗವನ್ನು ಹಳೆ ಹೆರಿಗೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ನವಜಾತ ಶಿಶುಗಳನ್ನು ಇನ್‌ಕ್ಯೂಬೇಟರ್‌ನಲ್ಲಿಟ್ಟು ಆರೈಕೆಗೆ ಮಾಡುವ ಸಾಮರ್ಥ್ಯ ಅಲ್ಲಿ ಕಡಿಮೆ ಇರುವುದರಿಂದ ಖಾಸಗಿ ಆಸ್ಪತ್ರೆಯ ಮೊರೆ ಹೋಗಬೇಕಾಗುತ್ತಿದೆ. ಒಂದು ದಿನಕ್ಕೆ ಒಂದು ಮಗುವಿಗೆ ₹ 8 ಸಾವಿರ ವೆಚ್ಚವಾಗುತ್ತದೆ. ಇದು ದುಬಾರಿಯಾಗುವುದರಿಂದ ಅಗತ್ಯ ಸುರಕ್ಷತಾ ಕ್ರಮ ಕೈಗೊಂಡು ಮೊದಲಿದ್ದಲ್ಲೇ ಹೆರಿಗೆ ಮಾಡಿಸುವಂತೆ ಇಲಾಖೆಯಿಂದ ಸೂಚನೆ ಬಂದಿದೆ. ಹೀಗಾಗಿ ಮಹಿಳಾ ಮತ್ತು ಮಕ್ಕಳ ವಿಭಾಗಕ್ಕೆ ಹೆರಿಗೆ ವಾರ್ಡ್‌ ಅನ್ನು ಸ್ಥಳಾಂತರಿಸಲಾಗಿದೆ’ ಎಂದು ಜಿಲ್ಲಾ ಸರ್ಜನ್‌ ಡಾ. ನಾಗರಾಜ್‌ ಹಾಗೂ ಡಿಎಚ್‌ಒ ಡಾ. ರಾಘವೇಂದ್ರ ಸ್ವಾಮಿ ತಿಳಿಸಿದರು.

‘ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿರುವಗಾಂಧಿನಗರ ಹಾಗೂ ಗಣೇಶ ಬಡಾವಣೆಯಲ್ಲಿ ವ್ಯಕ್ತಿಗಳ ಶವವನ್ನು ಕೋವಿಡ್‌ ಪರೀಕ್ಷೆ ವರದಿ ಬಂದಿಲ್ಲ ಎಂಬ ಕಾರಣ ನೀಡಿ ಐದು ದಿನಗಳಾದರೂ ವಾರಸುದಾರರಿಗೆ ನೀಡಿಲ್ಲ. ಅವರ ಕುಟುಂಬದವರು ದಿನಾಲೂ ಅಲೆದಾಡುತ್ತಿದ್ದಾರೆ’ ಎಂದು ಸದಸ್ಯ ಬಸವಂತಪ್ಪ ಸಭೆಯ ಗಮನಕ್ಕೆ ತಂದರು.

‘ಈಗ ಎಸ್‌.ಎಸ್‌. ಆಸ್ಪತ್ರೆ ಹಾಗೂ ಬಾಪೂಜಿ ಆಸ್ಪತ್ರೆಯಲ್ಲಿ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದೆ. ಹೀಗಾಗಿ ಮೃತಪಟ್ಟವರ ಮಾದರಿಯನ್ನು ಇಲ್ಲಿಯೇ ಪರೀಕ್ಷೆಗೊಳಪಡಿಸಿ ಬೇಗನೆ ಶವ ಕೊಡಿಸುವ ವ್ಯವಸ್ಥೆ ಮಾಡುತ್ತೇವೆ’ ಎಂದು ಡಾ. ನಾಗರಾಜ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT