ತ್ಯಾವಣಿಗೆ: ‘ಆಧುನಿಕ ಜಗತ್ತಿನಲ್ಲಿ ಧರ್ಮ ಮತ್ತು ಜಾತಿಗಳ ಮಧ್ಯೆ ನಡೆದಿರುವಂತಹ ಆಂತರಿಕ ಸಂಘರ್ಷ ಒಳ್ಳೆಯ ಬೆಳವಣಿಗೆಯಲ್ಲ. ಮನುಷ್ಯ ಅರಿತು ಬಾಳುವುದರಲ್ಲಿ ಶ್ರೇಯಸ್ಸು, ನೆಮ್ಮದಿ ಇದೆ’ ಎಂದು ಬಾಳೆಹೊನ್ನೂರು ಪೀಠದ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ತ್ಯಾವಣಿಗೆ ಸಮೀಪದ ಕತ್ತಲಗೆರೆ ಗ್ರಾಮದಲ್ಲಿ ಶುಕ್ರವಾರ ಉಚ್ಚಂಗಮ್ಮ ದೇವಿಯ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ, ಕಾರ್ಯಕ್ರಮ ನೇರವೇರಿಸಿ ಬಳಿಕ ನಡೆದ ಧರ್ಮಸಭೆ ಸಾನಿದ್ಯ ವಹಿಸಿ ಅವರು ಮಾತನಾಡಿದರು.
‘ದೇವರು, ಧರ್ಮ, ಭಾಷೆ, ಪ್ರಾಂತೀಯ ಹೆಸರಿನಲ್ಲಿ ನಡೆಯುವ ಸಂಘರ್ಷಗಳಿಂದ ಮನುಷ್ಯನ ಉನ್ನತಿಯಾಗದು. ಮನುಷ್ಯ ಸ್ವಧರ್ಮದಲ್ಲಿ ನಿಷ್ಠೆ, ಪರಧರ್ಮದ ಬಗ್ಗೆ ಸಹಿಷ್ಣುತಾ ಮನೋಭಾವ ಹೊಂದಿ ಎಲ್ಲರೊಳು ಬೆರತು ಬಾಳುವುದೆ ಸುಖ ಜೀವನಕ್ಕೆ ಭದ್ರ ಬುನಾದಿ’ ಎಂದು ತಿಳಿಸಿದರು.
‘ದೇಶದಲ್ಲಿ ದೇವಸ್ಥಾನ, ಪೀಠ, ಮಠಗಳು ಸಮಾಜದಲ್ಲಿ ಸಾಮರಸ್ಯ, ಸೌಹಾರ್ದವನ್ನು ಬೆಳೆಸುವ ಕೆಲಸ ಮಾಡುತ್ತಿವೆ. ಮನುಷ್ಯನ ಬುದ್ಧಿಶಕ್ತಿಗೂ, ವಿಜ್ಞಾನಕ್ಕೂ ನಿಲುಕಲಾಗದೆ ಇರತಕ್ಕಂತಹದು ದೇವರು. ಮನುಷ್ಯ ದೇವರಲ್ಲಿ ಭಕ್ತಿ ಶ್ರದ್ಧೆ, ಕಾಯಕದಲ್ಲಿ ಶ್ರಮ ಪಡದಿದ್ದರೆ ಜೀವನ ಅತಂತ್ರ’ ಎಂದರು.
‘ನುಡಿದಂತೆ ನಡೆಯುವುದು ನಿಜವಾದ ಧರ್ಮ. ದೇವರು, ಧರ್ಮ ನಂಬಿಗೆಯ ಮೇಲೆ ನಿಂತುಕೊಂಡಿವೆ. ಮನುಷ್ಯ ಜೀವನದಲ್ಲಿ ವಿದ್ಯೆ, ಸಂಪತ್ತನ್ನು ಗಳಿಸುವಾಗ ನಾವೂ ಬಾಳಿ ಬದುಕುತ್ತೀವೆ ಎಂಬ ನಂಬಿಕೆಯಿರಬೇಕು’ ಎಂದು ತಿಳಿಸಿದರು.
‘ಕಣ್ಣು,ಕಿವಿ, ದೇಹದ ಅಂಗಗಳು ಊನ ಮಾಡಿದರೆ ನಾನು ಬದುಕಬಲ್ಲೆ. ಆದರೆ ದೇವರಲ್ಲಿರುವ ನನ್ನ ಭಾವನೆಗಳನ್ನು ನಾಶ ಮಾಡಿದರೆ ನಾನು ಬದುಕಲಾರೆ ಎಂದು ಗಾಂಧೀಜಿ ತಮ್ಮ ಜೀವನ ದಿನಚರಿಯಲ್ಲಿ ಬರೆದಿದ್ದಾರೆ’ ಎಂದು ಹೇಳಿದರು.
‘ಸಮಾಜದಲ್ಲಿ ಬೆಳೆಯುತ್ತಿರುವಂತಹ ದುಷ್ಟ ಶಕ್ತಿಗಳನ್ನು ದಮನ ಮಾಡಿ ಸಾತ್ವಿಕ ಶಕ್ತಿಗಳನ್ನು ಬೆಳೆಸುವುದಕ್ಕಾಗಿ ಕತ್ತಲಗೆರೆ ಗ್ರಾಮದಲ್ಲಿ ದೇವಿ ನೆಲಿಸಿದ್ದಾಳೆ’ ಎಂದು ತಿಳಿಸಿದರು.
ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಅಕ್ಕಪಕ್ಕ ಗ್ರಾಮಗಳಿಂದ ಆಂಜನೇಯ, ಕರಿಯಮ್ಮ, ಬೀರಲಿಂಗೇಶ್ವರ ಸ್ವಾಮಿಯ ಉತ್ಸಹ ಮೂರ್ತಿಗಳು, ಮಹಿಳೆಯರು ಕುಂಬಾಭಿಷೇಕ ಮೆರಗು ನೀಡಿದವು.
ಕಾರ್ಯಕ್ರಮದಲ್ಲಿ ಕಣ್ವಕುಪ್ಪೆ ಗವಿಮಠ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಬಸವಾಪಟ್ಟಣ ಶಿವಕುಮಾರ ಹಾಲಸ್ವಾಮಿಜಿ, ಕತ್ತಲಗೆರೆ ಶಿವಕುಮಾರ ಉಮಾಪತಿ ಹಾಲಸ್ವಾಮೀಜಿ, ಹಳೆಕುಂದ್ವಾಡದ ಕರಿಬಸವೇಶ್ವರ ದೇವಸ್ಥಾನದ ಧರ್ಮಾಧಿಕಾರಿ ರಾಜಣ್ಣ, ಉಚ್ಚಂಗಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷೆ ಮಾತೋಶ್ರೀ ಅನುಸೂಯಮ್ಮ, ರೈತ ಮುಖಂಡ ತೇಜಸ್ವಿ ಪಟೇಲ್, ಕಶೆಟ್ಟಿಹಳ್ಳಿ, ಎಂ. ಮಹಾರುದ್ರಯ್ಯ ರುದ್ರಯ್ಯ, ಜಡೆ ಗುರುಶಾಸ್ತ್ರೀ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಟಿ. ರವಿಕುಮಾರ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.