ಗುರುವಾರ , ಫೆಬ್ರವರಿ 2, 2023
26 °C
ಉತ್ತಮ ಆರೋಗ್ಯಕ್ಕಾಗಿ ಶುದ್ಧ ಎಣ್ಣೆ ಬಳಕೆಯ ಬಗ್ಗೆ ಮೂಡಿದ ಜಾಗೃತಿ

ಗಾಣದ ಎಣ್ಣೆಗೆ ಬೇಡಿಕೆ: ಬೆಳೆಯುತ್ತಿದೆ ಉದ್ಯಮ

ಸ್ಮಿತಾ ಶಿರೂರ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೋವಿಡ್‌ ಕಾಲಿಟ್ಟ ನಂತರ ಹಲವು ಉದ್ಯಮಗಳು ಮುಚ್ಚಿದರೆ, ಇನ್ನು ಕೆಲವು ಹೊಸ ಉದ್ಯಮಗಳು ತಲೆ ಎತ್ತಿವೆ. ಜನರಿಗೆ ಬದುಕಲು ಹೊಸ ದಾರಿಗಳೂ ತೆರೆದಿವೆ. ದಾವಣಗೆರೆಯಲ್ಲಿ ಅಲ್ಲಲ್ಲಿ ಇದ್ದ ಗಾಣದ ಎಣ್ಣೆ ಉದ್ಯಮಕ್ಕೆ ಹೊಸಬರ ಪ್ರವೇಶವಾಗಿದೆ.

ರೋಗ ನಿರೋಧಕ ಶಕ್ತಿಯ ಮಹತ್ವದ ಅರಿವಾಗುತ್ತಿದ್ದಂತೆಯೇ ಜನರಲ್ಲಿ ಆರೋಗ್ಯದ ಕಾಳಜಿ ಹೆಚ್ಚಳವಾಗಿದೆ. ಆಹಾರ, ಎಣ್ಣೆ, ಬಳಸುವ ವಸ್ತುಗಳು ರಾಸಾಯನಿಕ ಮುಕ್ತವಾಗಿರಬೇಕೆಂದು ಬಹುತೇಕ ಜನ ಬಯಸುತ್ತಿದ್ದಾರೆ. ರಾಸಾಯನಿಕ ಮುಕ್ತ ಆಹಾರಗಳಿಗೆ ಬೇಡಿಕೆ ಬಂದಿದೆ. ಅಡುಗೆಯಲ್ಲಿ ಶುದ್ಧ ಎಣ್ಣೆ ಇದ್ದರೆ ಎಷ್ಟೋ ಕಾಯಿಲೆಗಳಿಂದ ಮುಕ್ತರಾಗಬಹುದು ಎಂಬ ನಂಬಿಕೆ ಬೆಳೆಯುತ್ತಿರುವುದರಿಂದ ಗಾಣದ ಎಣ್ಣೆಗೆ ಬಹು ಬೇಡಿಕೆ ಉಂಟಾಗಿದೆ. ಹೀಗಾಗಿಯೇ ಇಲ್ಲಿ ಕೋವಿಡ್‌ ನಂತರ ಹಲವು ಗಾಣದ ಎಣ್ಣೆ ಉತ್ಪಾದನಾ ಕೇಂದ್ರಗಳು ತಲೆ ಎತ್ತಿವೆ. ಬ್ರ್ಯಾಂಡ್‌ಗಳನ್ನೂ ಸೃಷ್ಟಿಸಿ ಜನರಲ್ಲಿ ಭರವಸೆ ಮೂಡಿಸಿವೆ.

ಪುಣೆಯಲ್ಲಿ ಟೂಲ್‌ ಎಂಜಿನಿಯರ್‌ ಆಗಿದ್ದ ದಾವಣಗೆರೆಯ ಯುವಕ ನಂದನ್‌ ಪಿ.ಜಿ. 2021 ಡಿಸೆಂಬರ್‌ನಲ್ಲಿ ಕೋವಿಡ್‌ ಕಾರಣದಿಂದ ಉದ್ಯೋಗಕ್ಕೆ ರಾಜೀನಾಮೆ ನೀಡಿ ತವರಿಗೆ ಮರಳಿದರು. ಆರೋಗ್ಯ ರಕ್ಷಣೆಗಾಗಿ ಶುದ್ಧ ಎಣ್ಣೆ ಬಳಕೆ ಅವಶ್ಯಕ ಎಂಬುದನ್ನು ಅರಿತ ಅವರು ಅದರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿ ಸಿದ್ದವೀರಪ್ಪ ಬಡಾವಣೆಯಲ್ಲಿ ‘ಸ್ವರ್ಣ’ ಗಾಣದ ಎಣ್ಣೆ ಉತ್ಪಾದನಾ ಕೇಂದ್ರ ತೆರೆದರು. ಒಂದು ವರ್ಷ ಪೂರೈಸಿರುವ ಈ ಕೇಂದ್ರದಲ್ಲೀಗ 3 ಮರದ ಗಾಣದ ಯುನಿಟ್‌ಗಳು ಇವೆ. ಕೊಬ್ಬರಿ, ಶೇಂಗಾ, ಕುಸುಬಿ, ಸಾಸಿವೆ, ಎಳ್ಳು, ಹರಳು, ಬಾದಾಮಿ ಎಣ್ಣೆಗಳನ್ನು ಇವರು ಉತ್ಪಾದಿಸುತ್ತಿದ್ದಾರೆ. ಇಬ್ಬರಿಗೆ ಉದ್ಯೋಗವನ್ನೂ ನೀಡಿರುವ ಇವರು ಸದ್ಯದಲ್ಲೇ ಮತ್ತೆರಡು ಯುನಿಟ್‌ಗಳನ್ನೂ ಆರಂಭಿಸುವ ಸಿದ್ಧತೆಯಲ್ಲಿದ್ದಾರೆ.

‘ಮರ ಹಾಗೂ ಕಲ್ಲಿನಿಂದ ಮಾಡಿದ ಗಾಣ ಇರುವುದರಿಂದ ಎಣ್ಣೆ ಉತ್ಪಾದನೆಯಾಗುವಾಗ ಉಷ್ಣತೆ ಹೆಚ್ಚಳವಾಗುವುದಿಲ್ಲ. ಆಗ ಎಣ್ಣೆಯ ನೈಸರ್ಗಿಕ ಗುಣ, ವಿಟಮಿನ್‌ಗಳು ನಾಶವಾಗುವುದಿಲ್ಲ. ಮಾರುಕಟ್ಟೆಯಲ್ಲಿ ಸಿಗುವ ಪ್ಯಾಕೆಟ್‌ ಎಣ್ಣೆಗಳಲ್ಲಿ ಇರುವ ಪ್ಯಾರಾಫಿನ್‌ ಹಾಗೂ ಇತರ ರಾಸಾಯನಿಕಗಳನ್ನು ಇದರಲ್ಲಿ ಸೇರಿಸದೇ ಇರುವುದರಿಂದ ಅಡುಗೆ ಹಾಗೂ ಚರ್ಮಕ್ಕೆ ಇಂಥ ಎಣ್ಣೆ ಉಪಯುಕ್ತ. ರುಚಿ, ಗುಣಮಟ್ಟ ಗಾಣದ ಎಣ್ಣೆಯಲ್ಲೇ ಹೆಚ್ಚು. ಪ್ಯಾಕೆಟ್‌ ಎಣ್ಣೆಗಿಂತಲೂ ಈಡು ಎಂಬ ಕಾರಣಕ್ಕೆ ಒಮ್ಮೆ ಬಳಸಲು ಆರಂಭಿಸಿದವರಿಗೆ ಇದರ ಪ್ರಯೋಜನದ ಅರಿವಾಗುತ್ತದೆ. ದರ ಹೆಚ್ಚಳ ಎಂಬ ಭಾವನೆ ಸಾಮಾನ್ಯ ಜನರಲ್ಲಿದೆ. ಆದರೆ, ಕಚ್ಚಾ ಪದಾರ್ಥಗಳ ದರವನ್ನು ಗಮನಿಸಿದಾಗ ಮಾರುಕಟ್ಟೆಯಲ್ಲಿ ಸಿಗುವ ಎಣ್ಣೆ ಕಂಪನಿಗಳು ಮಾಡುವ ಮೋಸದ ಅರಿವಾಗುತ್ತದೆ’ ಎನ್ನುತ್ತಾರೆ ಉದ್ಯಮಿ ನಂದನ್‌ ಪಿ.ಜಿ.

‘ಕಚ್ಚಾ ಪದಾರ್ಥಗಳ ಬೆಲೆ ಗಮನಿಸಿದಾಗ ನಾವು ನೀಡುತ್ತಿರುವ ದರ ನಮಗೆ ಗಿಟ್ಟುವುದಿಲ್ಲ. ಆದರೆ ಅವುಗಳ ಉಪ ಉತ್ಪನ್ನಗಳಿಗೂ ಬೇಡಿಕೆ ಇರುವುದರಿಂದ ಸದ್ಯಕ್ಕೆ ಕಡಿಮೆ ದರ ಇಟ್ಟಿದ್ದೇವೆ. ಕೊಬ್ಬರಿ, ಶೇಂಗಾ ಹಿಂಡಿಗಳು ಪಶು ಆಹಾರವಾಗಿ ಬಳಕೆ ಆಗುತ್ತಿವೆ. ಉಳಿದ ಹಿಂಡಿಗಳಿಗೂ ಬೇಡಿಕೆ ಇವೆ’ ಎಂದು ಅವರು ವಿವರಿಸಿದರು.

ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಪರಮಶಿವಯ್ಯ ಎಂ. ಬುಕಸಾಗರಮಠ ಅವರು ಸ್ವಯಂ ನಿವೃತ್ತಿ ಪಡೆದು ತಮ್ಮ ತವರಾದ ದಾವಣಗೆರೆಗೆ ಬಂದಾಗ ಹೊಳೆದಿದ್ದು ಇದೇ ‘ಗಾಣದ ಎಣ್ಣೆಯ ಉದ್ಯಮ’. ಶ್ರೀನಿವಾಸ ನಗರದಲ್ಲಿ ‘ಪರಿವರ್ತನ್‌’ ಗಾಣದ ಎಣ್ಣೆಯ ಉದ್ಯಮವನ್ನು ಇವರು ಆರಂಭಿಸಿದ್ದಾರೆ. ಒಂದು ಮರದ ಗಾಣದ ಯುನಿಟ್‌ ಇಟ್ಟುಕೊಂಡು ಸ್ವಂತವಾಗಿ ಎಲ್ಲ ಕೆಲಸ ನಿರ್ವಹಿಸುವ ಇವರು ಶೇಂಗಾ, ಕೊಬ್ಬರಿ, ಸಾಸಿವೆ, ಹುಚ್ಚೆಳ್ಳು, ಎಳ್ಳು, ಹರಳು ಹಾಗೂ ಸೂರ್ಯಕಾಂತಿ ಎಣ್ಣೆಯನ್ನು ಉತ್ಪಾದಿಸುತ್ತಿದ್ದಾರೆ.

‘2012ರಲ್ಲಿ ನಾನು ಮಧುಮೇಹ ಪೀಡಿತನಾದಾಗ ನನಗೆ ಆರೋಗ್ಯ ರಕ್ಷಣೆಯ ಕಾಳಜಿ ಆರಂಭವಾಯಿತು. ಈ ಬಗ್ಗೆ ಹಲವು ಅಧ್ಯಯನ ನಡೆಸಿದೆ. ಆಗ ಆಯಿಲ್‌ ಮಾಫಿಯಾ ಹಾಗೂ ಇತರ ಮೆಡಿಕಲ್‌ ಮಾಫಿಯಾ ಬಗ್ಗೆ ಅರಿವಾಯಿತು. 2018ರಲ್ಲಿ ಮಧುಮೇಹದ ಔಷಧಗಳನ್ನು ನಿಲ್ಲಿಸಿ ಆಹಾರದ ನಿಯಂತ್ರಣದಿಂದಲೇ ಪೂರ್ಣ ಮಧುಮೇಹವನ್ನು ತೊಲಗಿಸಿದೆ. ಇದು ಸಾಧ್ಯ ಎಂದು ತಿಳಿದಾಗ ಜನರಿಗಾಗಿ ಎನಾದರೂ ಮಾಡೋಣ ಎನಿಸಿತು. ಆಗ ‘ಪರಿವರ್ತನ್‌’ ಆರಂಭಿಸಿದೆ. 4 ತಿಂಗಳಲ್ಲೇ ನನಗೆ ಅತ್ಯುತ್ತಮ ಫೀಡ್‌ಬ್ಯಾಕ್‌ ಲಭಿಸಿದೆ. ರಾಜ್ಯದಾದ್ಯಂತ ಗ್ರಾಹಕರು ಕೊರಿಯರ್‌ ಮೂಲಕ ಎಣ್ಣೆ ತರಿಸಿಕೊಳ್ಳುತ್ತಿದ್ದಾರೆ’ ಎಂದು ಪರಮಶಿವಯ್ಯ ವಿವರಿಸಿದರು.

‘ದಾವಣಗೆರೆಯಲ್ಲಿ 12 ಗಾಣದ ಎಣ್ಣೆ ಉತ್ಪಾದನಾ ಕೇಂದ್ರಗಳು ಇರಬಹುದು. ಕಳೆದ 2 ವರ್ಷಗಳ ಅವಧಿಯಲ್ಲೇ ಇವೆಲ್ಲ ಆರಂಭವಾಗಿವೆ. ಹೆಚ್ಚಾಗಿ ಬೇಡಿಕೆ ಇರುವ ಶೇಂಗಾ ಎಣ್ಣೆ ಲೀಟರ್‌ಗೆ ₹ 300, ಕೊಬ್ಬರಿ ಎಣ್ಣೆ ಲೀಟರ್‌ಗೆ ₹ 350, ಕುಸುಬಿ ಎಣ್ಣೆ ಲೀಟರ್‌ಗೆ ₹ 350 ಇದೆ’ ಎಂದು ಅವರು ತಿಳಿಸಿದರು.

ಕೋವಿಡ್‌ ಮೊದಲ ಅಲೆಯ ಸಂದರ್ಭದಲ್ಲಿ ಕುಂದವಾಡ ಕೆರೆ ರಸ್ತೆಯಲ್ಲಿ ಉದ್ಯಮಿ ನಳಿನಿ ಪೂರ್ಣ ಅವರು ‘ಚಾರ್ವಿ ಅಥೆಂಟಿಕ್‌’ ಎಂಬ ಗಾಣದ ಎಣ್ಣೆಯ ಉದ್ಯಮ ಆರಂಭಿಸಿದ್ದಾರೆ. 2 ಗಾಣದ ಯುನಿಟ್‌ಗಳ ಮೂಲಕ ಇವರು ಶೇಂಗಾ, ಕುಸುಬಿ, ಕೊಬ್ಬರಿ, ಎಳ್ಳು, ಬಾದಾಮಿ, ವಾಲ್‌ನಟ್‌ ಮೊದಲಾದ ಎಣ್ಣೆ ಉತ್ಪಾದಿಸಿ ಬ್ರ್ಯಾಂಡ್‌ ಮಾಡಿದ್ದಾರೆ. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಗೂ ಕಳುಹಿಸುತ್ತಿದ್ದಾರೆ.

‘ಎಣ್ಣೆ ಕಲಬೆರಕೆ ಗಮನಿಸಿದಾಗ ಶುದ್ಧ ಎಣ್ಣೆಯನ್ನು ಜನರಿಗೆ ಒದಗಿಸಬೇಕು ಎಂಬ ಯೋಚನೆ ಬಂತು. ಹೀಗಾಗಿ ಈ ಉದ್ಯಮ ಆರಂಭಿಸಿದ್ದೇನೆ. ಕೃಷಿ ಇಲಾಖೆಯವರಿಂದ ತುಂಬಾ ಸಹಾಯ ಒದಗಿತು. ಪ್ರಧಾನ ಮಂತ್ರಿ ಫಾರ್ಮಲೈಜೇಶನ್‌ ಆಫ್‌ ಮೈಕ್ರೊ ಫುಡ್‌ ಪ್ರೊಸೆಸಿಂಗ್‌ ಎಂಟರ್‌ಪ್ರೈಸಿಸ್‌ (ಪಿಎಂಎಸ್‌ಎಂಇ) ಯೋಜನೆಯ ಅಡಿ ಈ ಉದ್ಯಮಕ್ಕಾಗಿ ಸಾಲವನ್ನೂ ಇಲಾಖೆ ಒದಗಿಸಿದೆ. ಆರಂಭದಲ್ಲಿ ಕಷ್ಟವಾದರೂ ನಂತರ ನಿಧಾನಕ್ಕೆ ಉದ್ಯಮಕ್ಕೆ ಉತ್ತಮ ಸ್ಪಂದನೆ ಲಭಿಸಿದೆ. ಈಗ ಬೇರೆ ಜಿಲ್ಲೆಗಳಿಗೂ ಕೊರಿಯರ್‌ ಮೂಲಕ ಉತ್ಪನ್ನ ಕಳುಹಿಸಿಕೊಡುತ್ತಿದ್ದೇವೆ’ ಎಂದು ನಳಿನಿ ಪೂರ್ಣ ತಿಳಿಸಿದರು.

ಗಾಣದ ಎಣ್ಣೆ ಉದ್ಯಮದಲ್ಲೂ ಅಲ್ಲಲ್ಲಿ ಕಲಬೆರಕೆ ಆರಂಭವಾಗಿದೆ. ಆದರೆ ಗ್ರಾಹಕರು ಸ್ಥಳದಲ್ಲೇ ಎಣ್ಣೆ ಉತ್ಪಾದನೆ, ಕಚ್ಚಾ ಪದಾರ್ಥಗಳನ್ನು ಪರಿಶೀಲಿಸಿದರೆ ಉತ್ಪನ್ನಗಳ ಶುದ್ಧತೆ ಬಗ್ಗೆ ಖಾತ್ರಿ ಪಡಿಸಿಕೊಳ್ಳಬಹುದು ಎನ್ನುತ್ತಾರೆ ಗಾಣದ ಎಣ್ಣೆಯ ಈ ಉದ್ಯಮಿಗಳು.

..............

ವಾಸ್ತವ ಅರಿಯಬೇಕಿದೆ

ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಶೇಂಗಾಕ್ಕೆ ₹ 120 ದರವಿದೆ. 4 ಕೆ.ಜಿ. ಶೇಂಗಾ ಬಳಸಿದರೆ ಒಂದು ಲೀಟರ್‌ ಎಣ್ಣೆ ಸಿಗುತ್ತದೆ. ಗುಣಮಟ್ಟದ ಶೇಂಗಾ ಎಣ್ಣೆ ಲೀಟರ್‌ಗೆ ಕನಿಷ್ಠ ₹ 480 ಆದರೂ ಆಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ನಮಗೆ ಪ್ಯಾಕೆಟ್‌ ಎಣ್ಣೆ ಎಷ್ಟಕ್ಕೆ ಸಿಗುತ್ತದೆ ಎಂದು ವಿಶ್ಲೇಷಿಸಿದಾಗ ವಾಸ್ತವದ ಅರಿವಾಗುತ್ತದೆ. ಕಳೆದ ಒಂದು ವರ್ಷದಿಂದ ಗಾಣದ ಎಣ್ಣೆಯನ್ನು ಬಳಸುತ್ತಿದ್ದೇವೆ. ಆರೋಗ್ಯ ಸುಧಾರಣೆಯೂ ಆಗಿದೆ. ರುಚಿಯಂತೂ ಅದ್ಭುತ ಎನಿಸುವಂತಿದೆ.

- ಹನುಮಂತಪ್ಪ ಎನ್‌.ಪಿ., ಡಿಡಿಸಿಸಿ ಬ್ಯಾಂಕ್‌ ಸಹಾಯಕ ವ್ಯವಸ್ಥಾಪಕ, ದಾವಣಗೆರೆ

ಉತ್ತಮ ಆರೋಗ್ಯಕ್ಕಾಗಿ ಶುದ್ಧ ಎಣ್ಣೆ ಬೇಕು

ಉತ್ತಮ ಆರೋಗ್ಯಕ್ಕಾಗಿ ಗಾಣದ ಎಣ್ಣೆಯ ಬಳಕೆ ಮಾಡುತ್ತಿದ್ದೇವೆ. ಒಂದು ವರ್ಷದಿಂದ ಬಳಸುತ್ತಿದ್ದು, ರುಚಿ ತುಂಬಾ ಚೆನ್ನಾಗಿದೆ. ದಪ್ಪಗೆ ಇರುವುದರಿಂದ ಅಡುಗೆಗೆ ಒದಗುತ್ತದೆ. ಆರೋಗ್ಯದ ಮೇಲೆ ಆಗುವ ಪರಿಣಾಮ ತಕ್ಷಣಕ್ಕೆ ಅರಿವಿಗೆ ಬರುವುದಿಲ್ಲ.

- ನೀಮಾ ಡಿ.ಆರ್‌., ಉಪನ್ಯಾಸಕರು, ಬಾಪೂಜಿ ಎಂಬಿಎ ಕಾಲೇಜ್‌, ದಾವಣಗೆರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು