ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನಿತ ಶಿಕ್ಷಕರ ಬೇಡಿಕೆ ಈಡೇರಿಕೆಗೆ ಒತ್ತಾಯ

Last Updated 10 ಜುಲೈ 2020, 12:55 IST
ಅಕ್ಷರ ಗಾತ್ರ

ದಾವಣಗೆರೆ: ‘ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದರೂ ಸರ್ಕಾರ ಕಡೆಗಣಿಸಿದ್ದು, ಶೀಘ್ರ ಬೇಡಿಕೆ ಈಡೇರಿಸದಿದ್ದರೆ ಮುಂಬರುವ ಎರಡು ಪದವೀಧರ ಮತ್ತು ಎರಡು ಶಿಕ್ಷಕರ ಕ್ಷೇತ್ರಗಳ ವಿಧಾನ ಪರಿಷತ್‌ ಚುನಾವಣೆಯಲ್ಲಿ ಶಿಕ್ಷಕರನ್ನೇ ಅಭ್ಯರ್ಥಿಗಳನ್ನಾಗಿ ನಿಲ್ಲಿಸುತ್ತೇವೆ’ ಎಂದು ಕರ್ನಾಟಕ ರಾಜ್ಯ ಅನುದಾನಿತ, ಅನುದಾನ ರಹಿತ ಶಾಲಾ, ಕಾಲೇಜುಗಳ ನೌಕರರ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಿ.ಸಿ. ಗೋಪಿನಾಥ್‌ ಎಚ್ಚರಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅನುದಾನಿತ, ಅನುದಾನ ರಹಿತ ಶಾಲಾ, ಕಾಲೇಜು ಸೇರಿ 2.50 ಲಕ್ಷ ನೌಕರರು ಇದ್ದು, 15 ವರ್ಷಗಳಿಂದ ಬೇಡಿಕೆ ಈಡೇರಿಕೆಗೆ ಒತ್ತಾಯಿಸುತ್ತಿದ್ದರೂ ಹೋರಾಟಕ್ಕೆ ಪ್ರತಿಫಲ ಇಲ್ಲ. ಎಲ್ಲಾ ಸಂಘಟನೆಗಳ ಪ್ರಮುಖರು ಶುಕ್ರವಾರ ಸಭೆ ನಡೆಸಿದ್ದು, ಉಗ್ರ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ರಾಜಕೀಯ ಬರುವ ಇರಾದೆ ಶಿಕ್ಷಕರಿಗೆ ಇಲ್ಲ. ಶಿಕ್ಷಕರು ರಾಜಕೀಯಕ್ಕೆ ಬರಬಾರದು ಎಂದರೆ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಹೇಳಿದರು.

ಕಾಲ್ಪನಿಕ ವೇತನ ನಗದೀಕರಣಕ್ಕಾಗಿ ಬಸವರಾಜು ಹೊರಟ್ಟಿ ನೇತೃತ್ವದಲ್ಲಿ ಸದನ ಸಮಿತಿ ನೀಡಿರುವ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. 2006ರ ನಂತರ ನೇಮಕಗೊಂಡ ನೌಕರರಿಗೆ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು. ಶಿಕ್ಷಕರಿಗೆ ಯಾವುದೇ ಆರೋಗ್ಯ ವಿಮೆ ಇಲ್ಲ. ವಿಮೆ ಜಾರಿಗೊಳಿಸಬೇಕು. ಅನುದಾನಿತ ಶಾಲಾ ಮಕ್ಕಳಿಗೂ ಶೂ, ಸಾಕ್ಸ್‌, ಬ್ಯಾಗ್‌, ನೋಟ್‌ ಪುಸ್ತಕ ನೀಡಬೇಕು. ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಕಾಲೇಜುಗಳಲ್ಲಿನ ಖಾಲಿ ಹುದ್ದೆ ಭರ್ತಿ ಮಾಡಬೇಕು. ಪ್ರಾಥಮಿಕ ಶಾಲೆಗಳಲ್ಲಿ 40:1 ಅನುಪಾತದಂತೆ ಹಾಗೂ ಪ್ರೌಢಶಾಲೆಗಳಲ್ಲಿ ಕನಿಷ್ಠ 25, ಗರಿಷ್ಠ 50 ಮಕ್ಕಳ ದಾಖಲಾತಿಗೆ ಅವಕಾಶ ನೀಡಬೇಕು. ‘ಡಿ’ ಗ್ರೂಪ್‌ ನೌಕರರನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸಂಚಾಲಕ ಹನುಮಂತಪ್ಪ, ‘ಶಿಕ್ಷಣ ಸಚಿವರು ಅನುದಾನ ರಹಿತ ಶಾಲಾ ಶಿಕ್ಷಕರಿಗೆ ವೇತನ ನೀಡಲು ಅನುದಾನಿತ ಶಿಕ್ಷಕರು ಎರಡು ದಿನಗಳ ವೇತನ ನೀಡಬೇಕು ಎಂಬ ಹೇಳಿಕೆಗೆ ನಮ್ಮ ಒಪ್ಪಿಗೆ ಇಲ್ಲ’ ಎಂದು ಹೇಳಿದರು.

ಒಕ್ಕೂಟಕ್ಕೆ ಆಯ್ಕೆಯಾದ ನೂತನ ಪದಾಧಿಕಾರಿಗಳು:

ಕೆ.ಹನುಮಂತಪ್ಪ (ಗೌರವಾಧ್ಯಕ್ಷ), ಎಂ.ಪಿ.ಎಂ. ಷಣ್ಮುಖಯ್ಯ (ಕಾರ್ಯಾಧ್ಯಕ್ಷ), ಕೆ.ವೈ. ಹಡಗಲಿ, ಈಶಾನಾಯ್ಕ್‌ ಕೆ., ನಾಗರಾಜ್‌, ರಂಜನ್‌, ಶಿವಾನಂದ ಸ್ವಾಮಿ, ಎಸ್‌.ಎಸ್‌. ಪಾಟೀಲ, ಆರ್.ಎಚ್‌. ಪಾಟೀಲ, ಅಬ್ದುಲ್‌ ಖಾದರ್‌ (ಉಪಾಧ್ಯಕ್ಷ), ಎಸ್‌.ಎನ್‌. ಗಡದಿನ್ನಿ (ಕಾರ್ಯದರ್ಶಿ), ಟಿ.ರವಿಕುಮಾರ್‌ (ಖಜಾಂಚಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT