ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: 5 ಲಕ್ಷ ವಿದ್ಯಾರ್ಥಿಗಳ ಕಲಿಕೆಗೆ ಶೀಘ್ರ ಡಿಜಿಟಲ್ ವೇದಿಕೆ

Last Updated 13 ಸೆಪ್ಟೆಂಬರ್ 2020, 8:35 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ ರೀತಿಯ ಯಾವುದೇ ಅನಿರೀಕ್ಷಿತ ಸಂಕಷ್ಟ ಎದುರಾದರೂ ಶೈಕ್ಷಣಿಕವಾಗಿ ತೊಂದರೆ ಆಗದಂತೆ ಗಮನ ನೀಡುವ ಉದ್ದೇಶದಿಂದ ರಾಜ್ಯದ 5 ಲಕ್ಷ ವಿದ್ಯಾರ್ಥಿಗಳಿಗೆ ಏಕಕಾಲಕ್ಕೆ ಪಾಠ ಮಾಡುವ ಡಿಜಿಟಲ್ ವೇದಿಕೆ ಇನ್ನೆರಡು ತಿಂಗಳಲ್ಲಿ ಜಾರಿಗೆ ತರಲಾಗುವುದು ಎಂದು ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವಥ್‌ನಾರಾಯಣ ಹೇಳಿದರು.

ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಶನಿವಾರ ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಭಾಗಗಳ ಕಟ್ಟಡದ ಮೊದಲನೇ ಮಹಡಿ ಉದ್ಘಾಟಿಸಿ ಮಾತನಾಡಿದರು.

ಡಿಜಿಟಲ್ ತಂತ್ರಜ್ಞಾನದ ಮೂಲಕ ಸಾಮೂಹಿಕವಾಗಿ ಸಮುದಾಯಕ್ಕೆ ಶಿಕ್ಷಣ ನೀಡುವ ದೇಶದ ಏಕೈಕ ಮಾದರಿಯ ಹಾಗೂ ಮೊದಲ ವೇದಿಕೆ ಇದಾಗಲಿದೆ. ಇದು ಎಲ್ಲರಿಗೂ ಮಾದರಿ ಯೋಜನೆಯಾಗಲಿದೆ ಎಂದು ತಿಳಿಸಿದರು.

ತಂತ್ರಜ್ಞಾನ, ವಿಜ್ಞಾನ ಹಾಗೂ ಸ್ಥಳೀಯ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಂಡು ಯುವಜನರ ಸಬಲೀಕರಣಕ್ಕೂ ಮಹತ್ವದ ಯೋಜನೆಯನ್ನು ಸರ್ಕಾರ ರೂಪಿಸಿದೆ. ಅದಕ್ಕಾಗಿ ಈಗಾಗಲೇ ಪೂರ್ವಸಿದ್ಧತೆ ನಡೆಯುತ್ತಿದ್ದು, ಶೀಘ್ರ ಯೋಜನೆ ಜಾರಿಗೆ ಬರಲಿದೆ. ಇದರಿಂದ ಯುವಜನರು ಸ್ವಾವಲಂಬಿಯಾಗಿ, ದೇಶದ ಏಳ್ಗೆಗೆ ಶ್ರಮಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಂಕ ಆಧಾರಿತ ಶಿಕ್ಷಣ ವ್ಯವಸ್ಥೆ ಇನ್ನು 30 ತಿಂಗಳಲ್ಲಿ ಅಂತ್ಯಗೊಳ್ಳಲಿದೆ. 2023ರಿಂದ ಸಂಪೂರ್ಣವಾಗಿ ಕೌಶಲ ಆಧಾರಿತ, ವೃತ್ತಿಪರ, ಸಾಮಾಜಿಕ ಚಿಂತನೆಯನ್ನು ಒಳಗೊಂಡ, ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡುವ ಹೊಸ ಶಿಕ್ಷಣ ನೀತಿ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದ ವರೆಗೆ ಸಂಪೂರ್ಣ ಅನುಷ್ಠಾನಕ್ಕೆ ಬರಲಿದೆ. ಇದರಿಂದ ದೇಶದ ಬೆಳವಣಿಗೆಯ ಗತಿ ಸಂಪೂರ್ಣ ಬದಲಾಗಲಿದೆ ಎಂದರು.

ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಇಷ್ಟದ ವಿಷಯವನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡುವ ಅವಕಾಶ ಒದಗಲಿದೆ.

ಶಿಕ್ಷಕರು ತಮ್ಮ ವೃತ್ತಿಯನ್ನು ಮಾಡಿ ವೇತನ ಪಡೆದರೆ ಸಾಕಾಗದು. ಮಕ್ಕಳ ಭವಿಷ್ಯ ರೂಪಿಸುವ, ವ್ಯಕ್ತಿತ್ವವನ್ನು ಬೆಳೆಸುವ, ಸಾಮಾಜಿಕ ಕಳಕಳಿಯ ಹೊಣೆಗಾರಿಕೆಯನ್ನು ಅನುಭವದ ಮೂಲಕ ತಿಳಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಮುಂದಿನ ದಿನಗಳಲ್ಲಿ ಕೌಶಲಯುಕ್ತ ಅಭಿವೃದ್ಧಿಗೆ ವಿಶೇಷ ಆದ್ಯತೆ ಸಿಗಲಿದೆ. ಶಿಕ್ಷಣವೇ ಶಕ್ತಿಯಾಗಿದ್ದು, ಅದರ ಮೂಲಕ ಇಡೀ ಸಮಾಜವನ್ನು ಪರಿವರ್ತನೆ ಮಾಡುವ ಉದ್ದೇಶವಿದೆ. ಅದಕ್ಕೆ ಶಿಕ್ಷಕರ ಸಹಕಾರ, ಪಾಲ್ಗೊಳ್ಳುವಿಕೆ ಮುಖ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ, ‘ಸರ್ಕಾರ ಮತ್ತು ಜನಪ್ರತಿನಿಧಿಗಳ ಸಹಕಾರವಿದ್ದರೆ ದಾವಣಗೆರೆ ವಿಶ್ವವಿದ್ಯಾಲಯವನ್ನು ದೇಶದಲ್ಲಿಯೇ ಮಾದರಿಯಾಗಿ ಮಾಡಲು ಬದ್ಧ. ಅದಕ್ಕೆ ಅಗತ್ಯ ನೆರವು ನೀಡಬೇಕು’ ಎಂದು ಸಚಿವರಿಗೆ ಮನವಿ ಮಾಡಿದರು.

ಕುಲಸಚಿವ ಪ್ರೊ. ಬಸವರಾಜ ಬಣಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರೀಕ್ಷಾಂಗ ಕುಲಸಚಿವೆ ಪ್ರೊ. ಎಚ್.ಎಸ್. ಅನಿತಾ ವಂದಿಸಿದರು. ಪ್ರೊ. ಕುಮಾರ್ ಮಾತನಾಡಿದರು. ಡಾ. ರಾಜಕುಮಾರ್ ನಿರೂಪಿಸಿದರು. ಸಿಂಡಿಕೇಟ್ ಸದಸ್ಯರು ಇದ್ದರು.

ಇದಕ್ಕೂ ಮುನ್ನ ಸಚಿವರು ವಿಶ್ವವಿದ್ಯಾಲಯದ ಆವರಣದಲ್ಲಿರುವ ವಿವಿಧ ಕಟ್ಟಡಗಳನ್ನು ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT