ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಟ್ಟಡ ಕಾರ್ಮಿಕರ ಸಮಸ್ಯೆ ಸಚಿವರೊಂದಿಗೆ ಚರ್ಚೆ: ಶಾಸಕ ಬಸವರಾಜು ವಿ. ಶಿವಗಂಗಾ

Published 6 ಜುಲೈ 2024, 15:47 IST
Last Updated 6 ಜುಲೈ 2024, 15:47 IST
ಅಕ್ಷರ ಗಾತ್ರ

ಚನ್ನಗಿರಿ: ‘ಕಟ್ಟಡ ಕಾರ್ಮಿಕರು ಕಷ್ಟಪಟ್ಟು ದುಡಿಯುತ್ತಾ ತಮ್ಮ ಕುಟುಂಬಗಳನ್ನು ಸಲಹುತ್ತಿದ್ದಾರೆ. ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿರುವ ಹಣ ಸದ್ಬಳಕೆಗಾಗಿ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚೆ ಮಾಡುತ್ತೇನೆ’ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ತಿಳಿಸಿದರು.

ಪಟ್ಟಣದಲ್ಲಿ ಕಟ್ಟಡ ಕಟ್ಟುವ ಕಾರ್ಮಿಕರ ತಾಲ್ಲೂಕು ಸಮಿತಿಯಿಂದ ಶನಿವಾರ ನಡೆದ ಕಟ್ಟಡ ಕಾರ್ಮಿಕರಿಗೆ ಮದುವೆ ಧನಸಹಾಯದ ಬಾಂಡ್ ವಿತರಣೆ ಹಾಗೂ ಹಿರಿಯ ಕಾರ್ಮಿಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಸರ್ಕಾರವಾಗಿದ್ದು, ಕಟ್ಟಡ ಕಾರ್ಮಿಕರ ಪರವಾಗಿದೆ. ಕಾರ್ಮಿಕ ಇಲಾಖೆಯಲ್ಲಿನ ಲೋಪದೋಷಗಳ ಬಗ್ಗೆ ಆಗಸ್ಟ್ 15ರಂದು ನಡೆಯುವ ಅಧಿವೇಶನದಲ್ಲಿ ಬೆಳಕು ಚೆಲ್ಲಲು ಬದ್ಧ. ತಾಲ್ಲೂಕಿನಲ್ಲಿ 500ಕ್ಕಿಂತ ಹೆಚ್ಚು ಫಲಾನುಭವಿಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯನ್ನು ಕೊಡಿಸಲಾಗಿದೆ. 298 ಕಟ್ಟಡ ಕಾರ್ಮಿಕ ಫಲಾನುಭವಿಗಳಿಗೆ ರೂ 1.98 ಕೋಟಿ ಮದುವೆ ಸಹಾಯದ ಧನಸಹಾಯ ನೀಡಲಾಗಿದೆ. ವಸತಿ ಸೌಲಭ್ಯ ಕಲ್ಪಿಸಲು ಅಗತ್ಯ ನಿವೇಶನವನ್ನು ಗುರುತಿಸಿ ಕೊಡುವಂತೆ ಈಗಾಗಲೇ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೊಳಚೆ ನಿರ್ಮೂಲನಾ ಮಂಡಳಿಯಿಂದ ಪಟ್ಟಣದಲ್ಲಿ ವಸತಿ ಸೌಲಭ್ಯವನ್ನು ಒದಗಿಸಲಾಗುವುದು ಎಂದರು.

‘ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ₹ 8,500 ಕೋಟಿ ಭ್ರಷ್ಟಾಚಾರವಾಗಿದೆ. 2022ರಿಂದ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಿಲ್ಲ. ಕಲ್ಯಾಣ ಮಂಡಳಿಯ ಹಣ ವ್ಯರ್ಥವಾಗಿ ಪೋಲಾಗುತ್ತಿದೆ. ಈ ಬಗ್ಗೆ ಕಾರ್ಮಿಕ ಸಚಿವರನ್ನು ಭೇಟಿ ಮಾಡಲು ಹೋದರೇ ಅವರು ಭೇಟಿ ಮಾಡಲು ಸಿದ್ಧರಿಲ್ಲ. ಹಾಗೆಯೇ ಕಾರ್ಮಿಕ ಇಲಾಖೆಯ ಸಚಿವರು ಸಂಘದ ಪದಾಧಿಕಾರಿಗಳನ್ನು ದಬಾಯಿಸಿ ಕಳುಹಿಸುತ್ತಾರೆ. ಕಾರ್ಮಿಕರ ಸಮಸ್ಯೆಗಳನ್ನು ಆಲಿಸಲು ಅವರು ಸಿದ್ಧರಿರುವುದಿಲ್ಲ’ ಎಂದು ಕಟ್ಟಡ ಕಟ್ಟುವ ಕಾರ್ಮಿಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಚ್.ಜಿ. ಉಮೇಶ್ ಹೇಳಿದರು.

ಕಟ್ಟಡ ಕಾರ್ಮಿಕರ ಸಂಘದ ಉಪಾಧ್ಯಕ್ಷ ಹನುಮಂತರಾವ್ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಘಟಕದ ಅಧ್ಯಕ್ಷ ವಿ. ಲಕ್ಷ್ಮಣ, ತಾಲ್ಲೂಕು ಘಟಕದ ಅಧ್ಯಕ್ಷ ಸೈಯದ್ ಗೌಸ್‌ಪೀರ್, ಗೌರವಾಧ್ಯಕ್ಷ ಸೈಯದ್ ಮುನಾವರ್, ಪ್ರಧಾನ ಕಾರ್ಯದರ್ಶಿ ಜೈನುಲ್ಲಾ ಖಾನ್, ಕಾರ್ಯದರ್ಶಿ ಪಿ.ಎಸ್. ಮಧು, ಮಹಮದ್ ರಫೀಕ್, ರಫೀವುಲ್ಲಾ, ವಿ. ಲೋಕೇಶ್ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT