ಶನಿವಾರ, ಜೂನ್ 12, 2021
23 °C
ಜಿಲ್ಲಾಧಿಕಾರಿಗೆ ಸೂಚನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ

ವಾರಕ್ಕೆ ನಾಲ್ಕು ದಿನ ಸಂಪೂರ್ಣ ಲಾಕ್‌ಡೌನ್ ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೋವಿಡ್‌ ಎರಡನೇ ಅಲೆಯನ್ನು ನಿಯಂತ್ರಿಸಲು ಶಿವಮೊಗ್ಗ ಮಾದರಿಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಕೂಡ ವಾರದಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್‌ಡೌನ್‌, ವಾರದಲ್ಲಿ ಮೂರು ದಿನ ಈಗಿರುವ ಅರೆ ಲಾಕ್‌ಡೌನ್‌ ಜಾರಿಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.

ಕೋವಿಡ್ ನಿಯಂತ್ರಣದ ಕುರಿತು ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಹಾಗೂ ಕೈಗೊಳ್ಳಬೇಕಾಗಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ, ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಸರ್ಕಾರದ ಕ್ರಮಗಳಿಗೆ ಜನರು ಸಹಕಾರ ನೀಡುತ್ತಿಲ್ಲ. ಪರಿಸ್ಥಿತಿ ಕೈಮೀರುವ ಮೊದಲೇ ಕ್ರಮ ವಹಿಸಬೇಕು. ಹಾಗಾಗಿ ಶಿವಮೊಗ್ಗ ಮಾದರಿ ಇಲ್ಲೂ ಅನುಸರಿಸಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ, ಎಂ.ಪಿ. ರೇಣುಕಾಚಾರ್ಯ ಸಚಿವರಿಗೆ ಮನವಿ ಮಾಡಿದರು. ಆ ಮಾದರಿಯನ್ನೂ ಇಲ್ಲೂ ಜಾರಿ ಮಾಡಿ ಎಂದು ಸಚಿವರು ತಿಳಿಸಿದರು.

ಲಾಕ್‍ಡೌನ್ ಸಂದರ್ಭದಲ್ಲಿ ಪೊಲೀಸ್ ಇಲಾಖೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡದೇ ಹೋದರೆ ಕೋವಿಡ್ ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಲಾಕ್‍ಡೌನ್ ಸಂದರ್ಭದಲ್ಲಿ ಪೊಲೀಸರು ಕಠಿಣ ಕ್ರಮ ಜರುಗಿಸುವುದು ಅನಿವಾರ್ಯ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಪೊಲೀಸರ ಕ್ರಮಗಳಿಗೆ ಅಪಪ್ರಚಾರ ನಡೆಯುತ್ತಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.

ಲಾಕ್‍ಡೌನ್ ಕಾರಣದಿಂದ ಜಿಲ್ಲೆಯಲ್ಲಿ ಕೆಲ ಹಕ್ಕಿಪಿಕ್ಕಿ ಕುಟುಂಬದವರು ತೀವ್ರ ಸಂಕಷ್ಟದಲ್ಲಿದ್ದರು. ಕರೂರಿನಲ್ಲಿರುವ 35 ಅಲೆಮಾರಿ ಕುಟುಂಬದ 130 ಜನರಿಗೆ ಆಹಾರ ಕಿಟ್‌ ತಕ್ಷಣ ಒದಗಿಸಲಾಗಿದೆ. ಅವರು ಸೇರಿ ಜಿಲ್ಲೆಯ 421 ಕುಟುಂಬಗಳಿಗೆ ಆಹಾರದ ಕಿಟ್ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು. ಆಹಾರ ಇಲ್ಲದೇ ಯಾರೂ ಪರಿತಪಿಸಬಾರದು ಎಂದು ಬೈರತಿ ಬಸವರಾಜ ಹೇಳಿದರು.

ಕೋವಿಡ್ ಪ್ರಕರಣಗಳು ಹೆಚ್ಚು ಹೆಚ್ಚು ವರದಿಯಾಗುತ್ತಿದ್ದು, ವಿವಿಧ ತಾಲ್ಲೂಕುಗಳಿಂದಲೂ ಕೋವಿಡ್ ಸೋಂಕಿತರು ಚಿಕಿತ್ಸೆಗಾಗಿ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಬರುತ್ತಿದ್ದಾರೆ. ಸೋಂಕಿತರಿಗೆ ಬೆಡ್ ಹಾಗೂ ಚಿಕಿತ್ಸೆಗೆ ಇನ್ನಷ್ಟು ಅನುಕೂಲ ಮಾಡಿಕೊಡಬೇಕಿದೆ. ಅಲ್ಲದೆ ಆಸ್ಪತ್ರೆಯಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ಕೋವಿಡ್ ಚಿಕಿತ್ಸೆಗೆ ಸಂಪೂರ್ಣ ತೊಡಗಿಸಿಕೊಳ್ಳಲು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಚಿಗಟೇರಿ ಜಿಲ್ಲಾ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್ ಆಸ್ಪತ್ರೆಯನ್ನಾಗಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಮನಕ್ಕೆ ತಂದರು.

ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ಇದು ಅಗತ್ಯವಾಗಿದ್ದು, ಕೂಡಲೇ ಚಿಗಟೇರಿ ಜಿಲ್ಲಾ ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್ ಆಸ್ಪತ್ರೆಯನ್ನಾಗಿಸಬೇಕು. ನಾನ್‍ಕೋವಿಡ್ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಯಲ್ಲಿ ವ್ಯವಸ್ಥೆಗೊಳಿಸಬೇಕು ಎಂದು ಸಚಿವರು ಸೂಚನೆ ನೀಡಿದರು.

ದಾವಣಗೆರೆಯಲ್ಲಿ 10 ಕೆ.ಎಲ್. ಸಾಮರ್ಥ್ಯದ ವೈದ್ಯಕೀಯ ಬಳಕೆಯ ಆಕ್ಸಿಜನ್ ಘಟಕ ಸ್ಥಾಪನೆಗೆ ಮಂಜೂರಾತಿ ಸಿಕ್ಕಿದೆ. ₹ 86 ಲಕ್ಷ ವೆಚ್ಚದಲ್ಲಿ ಈ ಘಟಕ ಸ್ಥಾಪನೆಯಾಗಲಿದೆ. ಈ ಕುರಿತು ಆಮ್ಲಜನಕ ಘಟಕ ಪೂರೈಸುವ ಕಂಪನಿ ಅಧಿಕಾರಿಗಳನ್ನು ಈಗಾಗಲೇ ಸಂಪರ್ಕಿಸಿ ಮಾಹಿತಿ ಪಡೆಯಲಾಗಿದೆ. ಇನ್ನು 30 ದಿನಗಳೊಳಗೆ ಈ ಆಕ್ಸಿಜನ್ ಘಟಕ ಬಳಕೆಗೆ ಲಭ್ಯವಾಗುವಂತೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ. ರಾಜ್ಯದ ಗಣಿಗಾರಿಕೆ ಮತ್ತು ಭೂವಿಜ್ಞಾನ ಸಚಿವರು ಕೂಡ ಆಮ್ಲಜನಕ ಟ್ಯಾಂಕರ್ ಒಂದನ್ನು ಜಿಲ್ಲೆಗೆ ಒಂದು ವಾರದೊಳಗಾಗಿ ನೀಡುವ ಭರವಸೆ ನೀಡಿದ್ದಾರೆ ಎಂದರು. 

ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳಲ್ಲಿ ಶೇ 75 ರಷ್ಟು ಬೆಡ್‍ಗಳನ್ನು ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಸರ್ಕಾರಕ್ಕೆ ಮೀಸಲಿಡುವಂತೆ ಆದೇಶ ಹೊರಡಿಸಲಾಗಿದೆ. ಎಬಿಎಆರ್‌ಕೆ ಯೋಜನೆಯಡಿ ನೊಂದಾಯಿತ ಖಾಸಗಿ ಆಸ್ಪತ್ರೆಗಳು ಸರ್ಕಾರಿ ವೈದ್ಯರು ಶಿಫಾರಸು ಮಾಡಿರುವ ರೋಗಿಗಳಿಗೂ ಬೆಡ್ ನೀಡುತ್ತಿಲ್ಲ. ಮೀಸಲಿರುವ ಬೆಡ್‍ಗಳಲ್ಲಿ ಖಾಸಗಿ ಆಸ್ಪತ್ರೆಯವರೇ ರೋಗಿಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ಹೆಚ್ಚಿನ ಶುಲ್ಕವನ್ನೂ ವಿಧಿಸುತ್ತಿದ್ದಾರೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅಸಮಾಧಾನ
ವ್ಯಕ್ತಪಡಿಸಿದರು.

‘ನಮ್ಮಲ್ಲಿ ಸಾಮಾನ್ಯ ಬೆಡ್‌ಗಳ ಕೊರತೆ ಇಲ್ಲ. ಆಮ್ಲಜನಕ ಬೆಡ್‌, ವೆಂಟಿಲೇಟರ್‌ಗಳ ಕೊರತೆ ಇರುವುದು ನಿಜ. ಖಾಸಗಿ ಆಸ್ಪತ್ರೆಗಳಲ್ಲಿ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಎಷ್ಟು ಬೆಡ್ ಖಾಲಿ ಇವೆ ಎಂಬುದನ್ನು ನೋಟಿಸ್‌ ಬೋರ್ಡ್‌ನಲ್ಲಿ ಹಾಕಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಇರುವ ಬೆಡ್‌ಗಳ ನಿಯಂತ್ರಣ ಜಿಲ್ಲಾಡಳಿತಕ್ಕೆ ಬರಬೇಕು ಎಂದು ಸಚಿವರು ಸೂಚಿಸಿದರು.

ಹಿಂದೆ ನಗರ ಪ್ರದೇಶಗಳಲ್ಲಿ ಸೋಂಕು ಹೆಚ್ಚಿತ್ತು. ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ನಗರಗಳಿಗೆ ಬಂದು ಸೋಂಕು ಒಯ್ಯುತ್ತಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿಯೂ ಸೋಂಕು ಹೆಚ್ಚಾಗುತ್ತಿದೆ ಎಂದು ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್‌ ಮಾಹಿತಿ ನೀಡಿದರು.

ಹೋಮ್‌ ಐಸೊಲೇಶನ್‌ನಿಂದಲೂ ಕೊರೊನಾ ಹರಡುತ್ತಿರುವುದರಿಂದ ಎಲ್ಲರನ್ನೂ ಕೋವಿಡ್‌ ಕೇರ್‌ ಸೆಂಟರ್‌ಗೆ ದಾಖಲಿಸಬೇಕು ಎಂದು ಸಚಿವರು ಸೂಚಿಸಿದರು. ಜಿಲ್ಲೆಯಲ್ಲಿ 6 ಕೋವಿಡ್‌ ಕೇರ್‌ ಸೆಂಟರ್‌ ಆರಂಭಿಸಲಾಗಿದೆ. 1,030 ಮಂದಿಯ ಸಾಮರ್ಥ್ಯ ಇದೆ.
ಅದರಲ್ಲಿ 180 ಮಂದಿ ಮಾತ್ರ ಇದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಶಾಸಕರಾದ ಎಸ್.ಎ. ರವೀಂದ್ರನಾಥ್, ಪ್ರೊ. ಲಿಂಗಣ್ಣ, ಮೇಯರ್‌ ಎಸ್.ಟಿ. ವೀರೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಡಿಎಚ್‍ಒ ಡಾ. ನಾಗರಾಜ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು