ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೇಬೆನ್ನೂರು: ಬೇರೆ ಸಮುದಾಯದವರನ್ನು ನೋಯಿಸಬೇಡಿ

ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಸಂದೇಶ
Last Updated 5 ನವೆಂಬರ್ 2021, 4:22 IST
ಅಕ್ಷರ ಗಾತ್ರ

ಮಲೇಬೆನ್ನೂರು: ‘ಈಚೆಗೆ ರಾಜಕಾರಣಿಗಳು ಲಂಗು–ಲಗಾಮಿಲ್ಲದೇ ಮಾತನಾಡಿ ಇನ್ನೊಂದು ಸಮುದಾಯ, ಜನರ ಮನಸ್ಸನ್ನು ನೋಯಿಸುತ್ತಿದ್ದಾರೆ. ಇದು ನಿಲ್ಲಬೇಕು. ಸಂಘರ್ಷದ ವಾತಾವರಣ ನಿರ್ಮಿಸಬೇಡಿ. ಸದ್ಭಾವ, ಸಾಮರಸ್ಯ, ಸದ್ಬುದ್ಧಿ ಬೆಳೆಸಿ ಸಮಾಜ ಕಟ್ಟುವ ಕೆಲಸ ಮಾಡಿ’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಕಿವಿಮಾತು ಹೇಳಿದರು.

ಇಲ್ಲಿಯ ‘ಶ್ರೀ ಗುರು ರೇಣುಕ ಅಕ್ಕಿ ಗಿರಣಿ’ಯಲ್ಲಿ ಗುರುವಾರ ದೀಪಾವಳಿ ಹಬ್ಬದ 30ನೇ ವರ್ಷದ ಇಷ್ಟಲಿಂಗ ಪೂಜೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು.

‘ಈಚೆಗೆ ಮಾತನಾಡುವವರ ಸಂಖ್ಯೆ ಹೆಚ್ಚಾಗಿದೆ. ಕೆಲಸ ಮಾಡುವವರು ಕಡಿಮೆ ಆಗಿದ್ದಾರೆ’ ಎಂದ ಅವರು, ‘ರಾಜಕಾರಣಿಗಳು ಒಂದು ಜಾತಿ, ಸಮುದಾಯಕ್ಕೆ ಮೀಸಲಾಗಬಾರದು. ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡಬೇಕು. ರೈತರ ಸಂಕಷ್ಟ ಪರಿಹರಿಸಬೇಕು’ ಎಂದು ಸಲಹೆ ನೀಡಿದರು.

‘ಕಾರ್ತಿಕ ಮಾಸ ದೀಪ ಬೆಳಗುವ ಹೊತ್ತು. ದೀಪ ಹೊರಗಡೆಯ ಕತ್ತಲು ಕಳೆಯುತ್ತದೆ. ಅದರಂತೆ ಮನದ ಕತ್ತಲನ್ನೂ ಹೊರದೂಡಿ ಅಭಿವೃದ್ಧಿ, ಸುಜ್ಞಾನ ಬೆಳಗಿಸಿ ಪರಿಶುದ್ಧರಾಗಬೇಕು. ಮನುಷ್ಯರಲ್ಲಿ ಧರ್ಮಾಚರಣೆಯ ಭಾವವನ್ನು ಬೆಳೆಸಬೇಕಿದೆ. ಧರ್ಮಪೀಠ, ಮಠಾಧೀಶರು, ಧಾರ್ಮಿಕ ಪ್ರಜ್ಞೆ, ರಾಷ್ಟ್ರಾಭಿಮಾನವನ್ನು ಮುಂದಿನ ತಲೆಮಾರಿಗೆ ಉಳಿಸಿ–ಬೆಳಸುವ ಕೆಲಸ ಮಾಡಬೇಕಿದೆ’ ಎಂದು ಅವರು ಹೇಳಿದರು.

‘ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಕೊರೊನಾ ನಿಯಂತ್ರಿಸುವಲ್ಲಿ ಉತ್ತಮ ಕಾರ್ಯ ಮಾಡಿದ್ದಾರೆ’ ಎಂದು ಶ್ಲಾಘಿಸಿದ ಸ್ವಾಮೀಜಿ, ಅವರನ್ನು ಸನ್ಮಾನಿಸಿ ರುದ್ರಾಕ್ಷಿ ಹಾರ ಹಾಕಿ ಆಶೀರ್ವದಿಸಿದರು.

ಜೂಕಿ ಹಿರೆಮಠದ ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ, ‘ಅಜ್ಞಾನದ ಅಂಧಕಾರ ಓಡಿಸಿ, ಜ್ಞಾನದ ಬೆಳಕು ಬೆಳಗಿಸಿ’ ಎಂದು ಹೇಳಿದರು.

ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ಎ. ರವೀಂದ್ರನಾಥ್, ಡಾ. ಎ.ಎಚ್. ಶಿವಯೋಗಿಸ್ವಾಮಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹನಗವಾಡಿ ವೀರೇಶ್, ಧೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಮೇಯರ್ ಎಸ್‌.ಟಿ.ವೀರೇಶ್, ಎಪಿಎಂಸಿ ನಿರ್ದೇಶಕ ಮಂಜಣ್ಣ, ಅಕ್ಕಿ ಉದ್ಯಮಿ ಬೆನಕನಕೊಂಡಿ ಚಿದಾನಂದಪ್ಪ, ಬಿ.ಎಂ. ವಾಗೀಶ್ ಸ್ವಾಮಿ, ಬಿ.ಎಂ. ಚನ್ನೇಶ್ ಸ್ವಾಮಿ, ಜಗದೀಶ್ವರ ಸ್ವಾಮಿ, ಜಿ.ಪಿ. ಹನುಮಗೌಡ,ಬಿ.ಎಂ. ನಂಜಯ್ಯ ಇದ್ದರು.

₹ 12 ಕೋಟಿ ವೆಚ್ಚದಲ್ಲಿ ರೇಣುಕಾಚಾರ್ಯರ ಶಿಲಾಮೂರ್ತಿ

ರಂಭಾಪುರಿ ಪೀಠದಲ್ಲಿ 51 ಅಡಿ ಎತ್ತರದ ರೇಣುಕಾಚಾರ್ಯರ ಶಿಲಾಮೂರ್ತಿಯನ್ನು ₹ 12 ಕೋಟಿ ವೆಚ್ಚದಲ್ಲಿ ಪ್ರತಿಷ್ಠಾಪಿಸಲಾಗುವುದು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ₹ 5 ಕೋಟಿ ನೀಡಿದ್ದಾರೆ. ತೆಲಂಗಾಣದಿಂದ ಒಂದು ಶಿಲೆ ಬಂದಿದೆ. 2 ಶಿಲೆಗಳು 100 ಗಾಲಿ ಲಾರಿಯ ಮೂಲಕ ಬರಲಿದೆ. ಶಿಲ್ಪಿ ಅಶೋಕ ಗುಡಿಗಾರ್ ಶಿಲಾಮೂರ್ತಿ ಕೆತ್ತನೆ ಕೆಲಸವನ್ನು ಒಂದು ವರ್ಷದಲ್ಲಿ ಮಾಡಿಕೊಡಲಿದ್ದಾರೆ.

ಕ್ಷೇತ್ರದ ಅಭಿವೃದ್ಧಿಗಾಗಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಈಗಾಗಲೇ ₹ 7 ಕೋಟಿ ಅನುದಾನವನ್ನು ಯಡಿಯೂರಪ್ಪ ನೀಡಿದ್ದಾರೆ. ಬೈಪಾಸ್ ರಸ್ತೆ ನಿರ್ಮಾಣಕ್ಕೆ ₹ 4 ಕೋಟಿ ವಿಶೇಷ ಅನುದಾನ ಮಂಜೂರಾಗಿದೆ. ನ.18ರಂದು ಕಾರ್ತಿಕ ದೀಪೋತ್ಸವ, ಕಾಮಗಾರಿಗೆ ಭೂಮಿಪೂಜೆ ನೆರವೇರಲಿದೆ ಎಂದು ರಂಭಾಪುರಿ ಸ್ವಾಮೀಜಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT