ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ: ಇತಿಹಾಸದ ಪುಟ ಸೇರಲಿದೆ ಡಿಆರ್‌ಎಂ ಪ್ರೌಢಶಾಲಾ ಕಟ್ಟಡ

60,000 ವಿದ್ಯಾರ್ಥಿಗಳು ಓದಿದ ಶಾಲೆಯ ಕಟ್ಟಡ ಸದ್ಯದಲ್ಲೇ ನೆಲಸಮ
Published 21 ನವೆಂಬರ್ 2023, 5:06 IST
Last Updated 21 ನವೆಂಬರ್ 2023, 5:06 IST
ಅಕ್ಷರ ಗಾತ್ರ

ಹರಿಹರ: ‘ನನ್ನ ನೆರಳಲ್ಲಿ ಕುಳಿತು ಓದಿ ಜೀವನ ಕಟ್ಟಿಕೊಂಡಿರುವ ಎಲ್ಲ ಹಳೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರಲ್ಲಿ ಮನವಿ ಏನಪ್ಪಾ ಅಂದರೆ, ನನ್ನತ್ತ ಒಮ್ಮೆ ನೋಡಿ ಮಾತನಾಡಿಸಿ. ಸಾಧ್ಯವಾದರೆ ನೆನಪಿಗಾಗಿ ನನ್ನೊಂದಿಗೆ ಒಂದು ಸೆಲ್ಫಿ ತೆಗೆದುಕೊಳ್ಳಿ. ನಾನು ಇನ್ನು ಕೆಲವೇ ದಿನಗಳಲ್ಲಿ ಇತಿಹಾಸದ ಪುಟಗಳಲ್ಲಿ ಸೇರಿಕೊಳ್ಳುವನಿದ್ದೇನೆ...

‘ನಾನು ಯಾರಿರಬಹುದು ಎಂದು ತಲೆ ಕೆರೆದುಕೊಳ್ಳಬೇಡಿ. ಹರಿಹರದ ಜೆ.ಸಿ. ಬಡಾವಣೆಯ ದೊಡ್ಡ ಮೈದಾನದಲ್ಲಿರುವ, ‘ಧರ್ಮರತ್ನಾಕರ ರಾಜನಹಳ್ಳಿ ಮದ್ದೂರಾಯಪ್ಪ’ (ಡಿಆರ್‌ಎಂ) ಸರ್ಕಾರಿ ಪ್ರೌಢಶಾಲೆಯ ಹಳೆಯ ಕಟ್ಟಡ ನಾನು.

‘ನೆನಪಿಗೆ ಬಂತೆ?..! ಹೌದು ನನಗೀಗ ವಯಸ್ಸಾಗಿದೆ. ಮುಂಚಿನ ತಾಕತ್ತು, ಸಾಮರ್ಥ್ಯ ನನ್ನಲ್ಲಿ ಉಳಿದಿಲ್ಲ. ನನ್ನ ಆವರಣದಲ್ಲಿ ಗಿಡಗಂಟಿಗಳು ಬೆಳೆದಿವೆ. ನನ್ನನ್ನು ತೆರವುಗೊಳಿಸಲು ಶಾಲೆಯ ಆಡಳಿತ ಮಂಡಳಿ, ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದ್ದು, ಕೆಲವೇ ದಿನಗಳಲ್ಲಿ ಜೆಸಿಬಿ ಯಂತ್ರಗಳು ಆರ್ಭಟಿಸಿ ನನ್ನನ್ನು ಇತಿಹಾಸದ ಪುಟಕ್ಕೆ ಸೇರಿಸಲಿವೆ.

ಏನೇ ಆಗಲಿ,  ಹಳೆ ಎಲೆ ಉದುರಿ, ಹೊಸ ಚಿಗುರಿಗೆ ಅವಕಾಶ ನೀಡಬೇಕೆಂಬ ಪ್ರಕೃತಿ ನಿಯಮ ನನಗೆ ಗೊತ್ತಿದೆ. ನಾನೀಗ ಇತಿಹಾಸದ ಪುಟ ಸೇರಲಿದ್ದೇನೆ. ಇನ್ನೂ ಕೆಲವು ದಿನಗಳವರೆಗೆ ಇಲ್ಲಿರುವೆ. ನನ್ನನ್ನು ಕಣ್ತುಂಬಿಕೊಳ್ಳುವವರು ಬನ್ನಿ. ನಾನು ಹೊರಡುವ ಮುನ್ನ ಬಂದು, ಪ್ರೀತಿಯಿಂದ ಒಂದು ಗುಡ್ ಬೈ ಹೇಳಿ. ಎಲ್ಲರಿಗೂ ಒಳ್ಳೆಯದಾಗಲಿ, ನಮಸ್ಕಾರ.

ಹಿನ್ನೆಲೆ: ದಕ್ಷಿಣ ಕಾಶಿ ಖ್ಯಾತಿಯ ಹರಿಹರದಲ್ಲಿ 1941ರಲ್ಲಿ ಮೈಸೂರು ಕಿರ್ಲೊಸ್ಕರ್ ಕಾರ್ಖಾನೆ ಆರಂಭವಾಯಿತು. ನಂತರ 1945ರಲ್ಲಿ ಆಗಿನ ಮೈಸೂರು ಸರ್ಕಾರದಿಂದ ಸರ್ಕಾರಿ ಪ್ರೌಢಶಾಲೆ ಆರಂಭವಾಯಿತು.

ಹರಪನಹಳ್ಳಿ ರಸ್ತೆ ಬದಿಯ ಆಗಿನ ಪುರಸಭೆ ಕಟ್ಟಡದಲ್ಲಿ ಕೆಲವು ವರ್ಷ ನಡೆದ ಈ ಶಾಲೆಗೆ 1945ರಲ್ಲಿ ಮಧ್ಯ ಕರ್ನಾಟಕದ ಮಹಾದಾನಿ ಎಂದೇ ಹೆಸರಾಗಿರುವ ರಾಜನಹಳ್ಳಿ ಮದ್ದೂರಾಯಪ್ಪ ಅವರ ಕುಟುಂಬದವರು ಜೆ.ಸಿ. ಬಡಾವಣೆಯಲ್ಲಿ ವಿಶಾಲವಾದ ಜಮೀನನ್ನು ದಾನವಾಗಿ ನೀಡಿದರು. ಆಗಿನ ಮೈಸೂರು ಸಂಸ್ಥಾನದ ದಿವಾನರಾದ ರಾಮಸ್ವಾಮಿ ಮೊದಲಿಯಾರ್‌ ಅವರು 1947ರ ಮೇ 21ರಂದು ಈ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರೆವೇರಿಸಿದರು. ನಂತರ 1955ರ ಮೇ 11ರಂದು ಆಗಿನ ವಿದ್ಯಾ ಸಚಿವರಾದ ಎ.ಜಿ.ರಾಮಚಂದ್ರರಾವ್ ಉದ್ಘಾಟಿಸಿದರು.

ಅಂದಿನಿಂದ 2015ರವರೆಗೆ ಅಂದರೆ, 65 ವರ್ಷಗಳ ಕಾಲ ಈ ಕಟ್ಟಡದಲ್ಲಿ ಪ್ರೌಢಶಾಲಾ ವಿಭಾಗ ಕಾರ್ಯನಿರ್ವಹಿಸಿತು. 1971ರಿಂದ ಇದೇ ಕಟ್ಟಡದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಆರಂಭಗೊಂಡು 2018ರವರೆಗೆ ಅಂದರೆ, 48 ವರ್ಷ ನಡೆಯಿತು. ಎರಡೂ ವಿಭಾಗಗಳು ಹೊಸ ಕಟ್ಟಡಗಳಿಗೆ ಸ್ಥಳಾಂತರಗೊಂಡಿವೆ.

ಕನ್ನಡ, ಆಂಗ್ಲ ಮತ್ತು ಉರ್ದು ಭಾಷಾ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿದ್ದುದು ಈ ಶಾಲೆಯ ಹೆಗ್ಗಳಿಕೆ. 1990ಕ್ಕಿಂತ ಮುಂಚೆ ಪ್ರೌಢಶಾಲಾ ವಿಭಾಗದಲ್ಲೇ 1,100, ಕಾಲೇಜಿನಲ್ಲಿ 600 ವಿದ್ಯಾರ್ಥಿಗಳಿದ್ದರು. ಈ ಎರಡೂ ವಿಭಾಗಗಳಿಂದ 60,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆದಿದ್ದಾರೆ.

ಎಸ್.ಪಿ. ಕಡಿವಾಳ್, ಪರಶುರಾಮ್, ಶರಣಪ್ಪ ಸೇರಿದಂತೆ ಹಲವು ಪ್ರಾಂಶುಪಾಲರು, ಶಿಕ್ಷಕರು, ಅಧಿಕಾರಿಗಳು, ಜನಪ್ರತಿನಿಧಿಗಳು ಈ ಶಾಲೆಯ ಹಿರಿಮೆ ಹೆಚ್ಚಿಸಿದ್ದಾರೆ. ಇಲ್ಲಿ ಓದಿ ದಿ. ವೈ.ನಾಗಪ್ಪ ಸಚಿವರಾಗಿದ್ದರು. ನೂರಾರು ಎಂಜಿನಿಯರ್‌ಗಳು, ವೈದ್ಯರು, ಸಾಹಿತಿಗಳು, ಶಿಕ್ಷಕರು, ಅಧ್ಯಾಪಕರು, ವಕೀಲರು, ಪತ್ರಕರ್ತರು, ವಿಜ್ಞಾನಿಗಳು, ಕಲಾವಿದರು, ಅಧಿಕಾರಿಗಳಾಗಿ ಸಮಾಜದಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಷಯ.

ಹರಿಹರದಲ್ಲಿ ನೆಲಸಮ ಆಗಲಿರುವ ಸರ್ಕಾರಿ ಡಿಆರ್‌ಎಂ ಪ್ರೌಢಶಾಲೆಯ ಹಳೆಯ ಕಟ್ಟಡ
ಹರಿಹರದಲ್ಲಿ ನೆಲಸಮ ಆಗಲಿರುವ ಸರ್ಕಾರಿ ಡಿಆರ್‌ಎಂ ಪ್ರೌಢಶಾಲೆಯ ಹಳೆಯ ಕಟ್ಟಡ
ಹರಿಹರದಲ್ಲಿ ನೆಲಸಮ ಆಗಲಿರುವ ಸರ್ಕಾರಿ ಡಿಆರ್‌ಎಂ ಪ್ರೌಢಶಾಲೆಯ ಹಳೆಯ ಕಟ್ಟಡದ ಒಳ ಆವರಣ
ಹರಿಹರದಲ್ಲಿ ನೆಲಸಮ ಆಗಲಿರುವ ಸರ್ಕಾರಿ ಡಿಆರ್‌ಎಂ ಪ್ರೌಢಶಾಲೆಯ ಹಳೆಯ ಕಟ್ಟಡದ ಒಳ ಆವರಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT