ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ನೀರಿಗಾಗಿ ನಿಯಮ ಉಲ್ಲಂಘಿಸಿ ಭೂಮಿಗೆ ಕನ್ನ!

ಅಂತರ್ಜಲ ಪಾತಾಳಕ್ಕೆ ಕುಸಿದರೂ ಹೊಸ ಕೊಳವೆಬಾವಿಗೆ ಒಲವು
Published 21 ಫೆಬ್ರುವರಿ 2024, 21:26 IST
Last Updated 21 ಫೆಬ್ರುವರಿ 2024, 21:26 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯದಲ್ಲಿ ಭೀಕರ ಬರ ಆವರಿಸಿದ್ದು, ಕೆರೆಗಳು ಬರಿದಾಗಿವೆ. ಅಂತರ್ಜಲ ಮಟ್ಟ ಕುಸಿದಿದೆ. ಆದರೂ, ಜಿಲ್ಲೆಯ ವಿವಿಧೆಡೆ ರೈತರು ಅಡಿಕೆ ತೋಟಗಳ ರಕ್ಷಣೆಗಾಗಿ ಹೊಸದಾಗಿ ಕೊಳವೆಬಾವಿ ಕೊರೆಸುತ್ತ ಹಣ ಕಳೆದುಕೊಳ್ಳುತ್ತಿದ್ದಾರೆ.

ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ನ್ಯಾಮತಿ, ಹರಿಹರ, ದಾವಣಗೆರೆ ಮತ್ತು ಜಗಳೂರು ತಾಲ್ಲೂಕುಗಳಲ್ಲಿ ಈಗ ಕೊಳವೆಬಾವಿ ಕೊರೆಯುವ ಯಂತ್ರಗಳ ಆರ್ಭಟ ಇದೆ. ಆದರೆ, ಶೇ 5ರಷ್ಟು ಕೊಳವೆಬಾವಿಗಳಲ್ಲಿ ಮಾತ್ರ ಅಷ್ಟಿಷ್ಟು ಪ್ರಮಾಣದಲ್ಲಿ ನೀರು ದೊರೆತಿದೆ.

ಅಂತರ್ಜಲವನ್ನು ಅತಿಯಾಗಿ ಬಳಸಿದ ರಾಜ್ಯದ 15 ಜಿಲ್ಲೆಗಳ 45 ತಾಲ್ಲೂಕುಗಳನ್ನು 2020ರಲ್ಲೇ ಗುರುತಿಸಿರುವ ಸರ್ಕಾರ, ಮನಬಂದಂತೆ ಕೊಳವೆಬಾವಿ ಕೊರೆಯಿಸದಂತೆ ನಿರ್ಬಂಧ ಹೇರಿದೆ. ಕೊಳವೆಬಾವಿ ಕೊರೆಯಿಸಲು ಬಯಸುವವರು ಜಿಲ್ಲಾ ಅಂತರ್ಜಲ ನಿಯಂತ್ರಣ ಸಮಿತಿಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕೆಂಬ ನಿಯಮ ರೂಪಿಸಲಾಗಿದೆ. ಇದರಲ್ಲಿ ಜಿಲ್ಲೆಯ ಚನ್ನಗಿರಿ ಮತ್ತು ಜಗಳೂರು ತಾಲ್ಲೂಕುಗಳು ಇವೆ. ಆದರೆ, ಒಬ್ಬರೂ ಅರ್ಜಿ ಸಲ್ಲಿಸಿ ಅನುಮತಿ ಕೋರಿಲ್ಲ ಎಂದು ಅಂತರ್ಜಲ ಅಭಿವೃದ್ಧಿ ಇಲಾಖೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಜಿಲ್ಲೆಯಲ್ಲಿ ಅತಿಯಾಗಿ ಕೊಳವೆಬಾವಿ ಕೊರೆಸುತ್ತಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಜಗಳೂರು, ಚನ್ನಗಿರಿ ತಾಲ್ಲೂಕುಗಳಲ್ಲಿ ಕೊಳವೆಬಾವಿ ಕೊರೆಯಿಸಲು ಸಮಿತಿಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯುವುದು ಕಡ್ಡಾಯ. ಈವರೆಗೆ ಯಾರೂ ಅರ್ಜಿ ಸಲ್ಲಿಸಿಲ್ಲ’ ಎಂದು ಅಂತರ್ಜಲ ಅಭಿವೃದ್ಧಿ ಇಲಾಖೆಯ ಹಿರಿಯ ಭೂವಿಜ್ಞಾನಿ ಆರ್‌.ಬಸವರಾಜು ಹೇಳಿದರು.

ಯಂತ್ರಗಳ ಆರ್ಭಟ: ಜಿಲ್ಲೆಯ ಜಗಳೂರು ತಾಲ್ಲೂಕಿನ ತಾರೀಹಳ್ಳಿ, ಪಲ್ಲಾಗಟ್ಟೆ, ದಿದ್ದಿಗೆ, ಕಲ್ಲೇನಹಳ್ಳಿ, ಗೋಡೆ, ಮಲೆಮಾಚೀಕೆರೆ, ಮರಿಕುಂಟೆ, ಉಚ್ಚಂಗಿಪುರ, ಉಜ್ಜಪ್ಪ ಒಡೆಯರಹಳ್ಳಿ, ಆಸಗೋಡು, ವಡ್ಡರಹಟ್ಟಿ, ಸೂರಗೊಂಡನಹಳ್ಳಿ, ದಾವಣಗೆರೆ ತಾಲ್ಲೂಕಿನ ಬಿಳಿಚೋಡು, ಕಿತ್ತೂರು, ಅಣಜಿ, ಮಾಯಕೊಂಡ, ಹದಡಿ, ಹರಿಹರ ತಾಲ್ಲೂಕಿನ ಮಲೇಬೆನ್ನೂರು, ಚನ್ನಗಿರಿ, ಸಂತೇಬೆನ್ನೂರು ಸೇರಿದಂತೆ ಅನೇಕ ಕಡೆಗಳಲ್ಲಿ ನಿತ್ಯವೂ ಕೊಳವೆಬಾವಿ ಕೊರೆಯುವ ಯಂತ್ರಗಳ ಆರ್ಭಟ ಕೇಳಿಬರುತ್ತಿದೆ.

‘ಕಳೆದ ಎರಡು ತಿಂಗಳಲ್ಲಿ ನಮ್ಮೂರಿನಲ್ಲೇ 100ಕ್ಕೂ ಅಧಿಕ ರೈತರು ಹೊಸ ಕೊಳವೆಬಾವಿ ಕೊರೆಸಿದ್ದು, ಹೆಚ್ಚೆಂದರೆ ಶೇ 5ರಷ್ಟು ಬಾವಿಗಳಲ್ಲಿ ಗರಿಷ್ಠ ಎರಡು ಇಂಚಿನಷ್ಟು ನೀರು ದೊರಕಿದೆ’ ಎಂದು ಪಲ್ಲಾಗಟ್ಟೆ ಗ್ರಾಮದ ರೈತ ಜಯಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮೂರಿನಲ್ಲಿ 1,000 ಅಡಿ ಕೊರೆದರೂ ಕೆಲವು ಬೋರ್‌ವೆಲ್‌ಗಳಲ್ಲಿ ನೀರು ಬಿದ್ದಿಲ್ಲ. ನನ್ನ ಜಮೀನಿನಲ್ಲಿ ಮೂರು ತಿಂಗಳಲ್ಲಿ ಎರಡು ಕೊಳವೆಬಾವಿ ಕೊರೆಸಿದರೂ ನೀರು ಸಿಕ್ಕಿಲ್ಲ. ಬೋರ್‌ ಕೊರೆಯುವ ಲಾರಿ ಬರಬೇಕೆಂದರೆ ಕನಿಷ್ಠ 15 ದಿನ ಮೊದಲೇ ಮುಂಗಡ ಹಣ ಕೊಟ್ಟು ಬುಕ್ಕಿಂಗ್‌ ಮಾಡಬೇಕಿದೆ’ ಎಂದು ತಾರೀಹಳ್ಳಿಯ ರೈತ ರಾಜೇಂದ್ರಪ್ರಸಾದ್‌ ವಿವರಿಸಿದರು.

‘ಕೊಳವೆಬಾವಿ ಕೊರೆಯಲು 400 ಅಡಿವರೆಗೆ ಪ್ರತಿ ಅಡಿಗೆ ₹ 92 ದರ ಇದೆ. 400ರಿಂದ 600 ಅಡಿವರೆಗೆ ₹ 110 ಇದೆ. ನಂತರ 1,000 ಅಡಿವರೆಗೆ ಈ ದರ ಹೆಚ್ಚುತ್ತ ಹೋಗುತ್ತದೆ ಎಂದು ಕೊಳವೆಬಾವಿ ಕೊರೆಯುವ ಯಂತ್ರದ ವ್ಯವಸ್ಥಾಪಕ ಶಕ್ತಿವೇಲು ಹೇಳಿದರು.

ಜಗಳೂರು ಮತ್ತು ಚನ್ನಗಿರಿ ತಾಲ್ಲೂಕಿನ ಕೆಲವು ಗ್ರಾಮಗಳ ರೈತರು ₹ 1ರಿಂದ ₹ 2 ಕೋಟಿಯಷ್ಟು ಹಣವನ್ನು ಕೊಳವೆಬಾವಿ ಕೊರೆಯಿಸಲು ವ್ಯಯಿಸಿದ್ದಾರೆ. ಇನ್ನೂ ಕೆಲವೆಡೆ ರೈತರು ಕೊಳವೆಬಾವಿ ಕೊರೆಯುವ ಯಂತ್ರಗಳಿಗಾಗಿ ಏಜೆಂಟರಿಗೆ ಮುಂಗಡ ಹಣ ನೀಡಿ ಕಾಯುತ್ತಿದ್ದಾರೆ.

ಮಹದೇವಪ್ಪ ದಿದ್ದಿಗೆ
ಮಹದೇವಪ್ಪ ದಿದ್ದಿಗೆ
ಹನುಮಂತಪ್ಪ
ಹನುಮಂತಪ್ಪ
ಸಸಸ
ಸಸಸ

ಅಂತರ್ಜಲ ಮಟ್ಟ ತೀವ್ರ ಕುಸಿದಿದೆ. ಮಣ್ಣಿನ ಜೈವಿಕ ಶಕ್ತಿ ಅಭಿವೃದ್ಧಿಪಡಿಸುವಂತೆ ಸರ್ಕಾರ ಜಾಗೃತಿ ಮೂಡಿಸುತ್ತಿಲ್ಲ. ಕೊಳವೆಬಾವಿ ಕೊರೆಸಿ ರೈತರು ಸಾಲಗಾರರಾಗುವಂತಾಗಿದೆ

–ಮಹದೇವಪ್ಪ ದಿದ್ದಿಗೆ ಜಿಲ್ಲಾ ಸಂಚಾಲಕ ಮೈಕ್ರೋಬಿ ಫೌಂಡೇಷನ್‌

ಜಮೀನಿನಲ್ಲಿದ್ದ ನಾಲ್ಕು ಬೋರ್‌ವೆಲ್‌ಗಳು ಬತ್ತಿವೆ. ಅಡಿಕೆ ತೋಟ ಉಳಿಸಿಕೊಳ್ಳಲು ಈಗ ಮತ್ತೊಂದನ್ನು ಕೊರೆಸುತ್ತಿದ್ದೇನೆ. ಸಾವಿರ ಅಡಿವರೆಗೆ ಕೊರೆಸಿದರೆ ₹ 1.30 ಲಕ್ಷ ಖರ್ಚಾಗುತ್ತದೆ

–ಹನುಮಂತಪ್ಪ ರೈತ ತಾರೀಹಳ್ಳಿ

ಕೊಳವೆಬಾವಿ ಕೊರೆಯಿಸಲು ನಿರ್ಬಂಧ ಹೇರಿರುವ ವಿವಿಧ ಜಿಲ್ಲೆಗಳ ತಾಲ್ಲೂಕುಗಳ ಪಟ್ಟಿ ಬಾಗಲಕೋಟೆ: ಬಾಗಲಕೋಟೆ ಬಾದಾಮಿ ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ನೆಲಮಂಗಲ‌ ಬೆಂಗಳೂರು ನಗರ: ಆನೇಕಲ್‌ ಬೆಂಗಳೂರು ಪೂರ್ವ ಬೆಂಗಳೂರು ಉತ್ತರ ಬೆಂಗಳೂರು ದಕ್ಷಿಣ ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಚಿಂತಾಮಣಿ ಗೌರಿಬಿದನೂರು ಗುಡಿಬಂಡೆ ಶಿಡ್ಲಘಟ್ಟ ಬಾಗೇಪಲ್ಲಿ ಬೆಳಗಾವಿ: ಅಥಣಿ ರಾಮದುರ್ಗ ಸವದತ್ತಿ ವಿಜಯನಗರ: ಹಗರಿಬೊಮ್ಮನಹಳ್ಳಿ ಹರಪನಹಳ್ಳಿ ಚಾಮರಾಜನಗರ: ಗುಂಡ್ಲುಪೇಟೆ ಚಿಕ್ಕಮಗಳೂರು: ಕಡೂರು ‌ಚಿತ್ರದುರ್ಗ: ಚಿತ್ರದುರ್ಗ ಹೊಳಲ್ಕೆರೆ ಹಿರಿಯೂರು ಹೊಸದುರ್ಗ ಚಳ್ಳಕೆರೆ ದಾವಣಗೆರೆ: ಜಗಳೂರು ಚನ್ನಗಿರಿ ಗದಗ: ಗದಗ ರೋಣ ಹಾಸನ: ಅರಸೀಕೆರೆ ಕೋಲಾರ: ಕೋಲಾರ ಬಂಗಾರಪೇಟೆ ಮಾಲೂರು ಮುಳಬಾಗಿಲು ಶ್ರೀನಿವಾಸಪುರ ರಾಮನಗರ: ರಾಮನಗರ ಕನಕಪುರ ತುಮಕೂರು: ತುಮಕೂರು ಚಿಕ್ಕನಾಯಕನಹಳ್ಳಿ ಕೊರಟಗೆರೆ ಮಧುಗಿರಿ ತಿಪಟೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT