ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೇಬೆನ್ನೂರು | ಹವಾಮಾನ ವೈಪರೀತ್ಯ: ಕಡಲೆ ಇಳುವರಿ ಕುಸಿತ

Published 1 ಫೆಬ್ರುವರಿ 2024, 4:48 IST
Last Updated 1 ಫೆಬ್ರುವರಿ 2024, 4:48 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಹವಾಮಾನ ವೈಪರೀತ್ಯದಿಂದ ಎರೆಭೂಮಿ ಪ್ರಮುಖ ಹಿಂಗಾರು ಬೆಳೆ ಕಡಲೆ ಬೆಳೆ ಇಳುವರಿ ತೀವ್ರ ಕುಸಿತ ಕಂಡಿದೆ. ಹೋಬಳಿ ವ್ಯಾಪ್ತಿಯಲ್ಲಿ ಕಡಲೆ ಕೊಯ್ಲು ಬರದಿಂದ ಸಾಗಿದ್ದು, ಇಳುವರಿ ಕುಸಿತ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಮಳೆಯಾಧಾರಿತ ಕೃಷಿ ಭೂಮಿಯಲ್ಲಿ ಈ ಬಾರಿ ಪ್ರತಿ ಎಕರೆಗೆ ಗರಿಷ್ಠ ಮೂರು ಕ್ವಿಂಟಲ್ ಕಡಲೆ ಇಳುವರಿ ಬರಲಿದೆ. ಅಕ್ಟೋಬರ್ ಅಂತ್ಯದಲ್ಲಿ ಮೂರು ಎಕರೆಗೆ ಕಡಲೆ ಬಿತ್ತನೆ ಮಾಡಲಾಗಿತ್ತು. ಡಿಸೆಂಬರ್‌ನಲ್ಲಿ ಹೂವು ಬಿಡುವ ಸಂದರ್ಭದಲ್ಲಿ ಮಂಜು ಬೀಳಲಿಲ್ಲ. ಚಳಿ ಪ್ರಮಾಣ ಕಡಿಮೆ ಇತ್ತು. ಹಾಗಾಗಿ ನಿರೀಕ್ಷಿಸಿದ ಪ್ರಮಾಣದಲ್ಲಿ ಕಾಯಿಗಟ್ಟಲಿಲ್ಲ. ಬಿತ್ತನೆಗೆ ಒಂದು ಹಸಿ ಮಳೆ ಆಗಿತ್ತು. ಆನಂತರ ಒಂದು ಮಳೆ ಬಂದರೂ ಇಬ್ಬನಿಯಲ್ಲಿ ಕಡಲೆ ಸಮೃದ್ಧವಾಗಿ ಬೆಳೆಯುತ್ತಿತ್ತು. ಇಬ್ಬನಿಯೂ ಬೀಳದೆ ಗಿಡ ಸೊರಗಿದವು ಎಂದು ಭೀಮನೆರೆ ರೈತ ವಿಶ್ವನಾಥ್ ಅಳಲು ತೋಡಿಕೊಂಡರು.

‘ಬಿತ್ತನೆಗೆ ಪ್ರತಿ ಎಕರೆಗೆ ₹ 4,000ದಿಂದ ₹ 5,000 ಖರ್ಚು ತಗುಲಿದೆ. ಕೊಯ್ಲು, ಯಾಂತ್ರಿಕ ಒಕ್ಕಣೆಗೆ ಪ್ರತಿ ಎಕರೆಗೆ ₹ 4,000 ಖರ್ಚಾಗುತ್ತದೆ. ಕಳೆ, ಔಷಧ ಸಿಂಪಡಣೆಗೆ ₹ 4,000 ಖರ್ಚು ಆಗಿದೆ. ಪ್ರತಿ ಎಕರೆಗೆ ಕಡಲೆ ಬೆಳೆಯಲು ₹ 12, 000 ಖರ್ಚು ಆಗುತ್ತದೆ. ಬಹುತೇಕ ಹೊಲಗಳಲ್ಲಿ 2 ಕ್ವಿಂಟಲ್‌ಗಿಂತ ಹೆಚ್ಚು ಇಳುವರಿ ಸಾಧ್ಯವಿಲ್ಲ. ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹ 5000 ಇದೆ. ಇಳುವರಿ ಕುಸಿತದಿಂದ ನಷ್ಟ ಅನುಭವಿಸುವಂತಾಗಿದೆ’ ಎಂದು ರೈತ ರುದ್ರೇಶ್ ಹೇಳಿದರು.

‘ಕೆಲ ರೈತರು ನೀರು ಹಾಯಿಸುವ ಮೂಲಕ ಕಡಲೆ ಬೆಳೆಯಲ್ಲಿ ಇಳುವರಿ ಹೆಚ್ಚಿಸಿಕೊಂಡಿದ್ದಾರೆ. ನೀರು ಕೊಟ್ಟ ಕಡಲೆ ಜಮೀನಿನಲ್ಲಿ 6ರಿಂದ 7 ಕ್ವಿಂಟಲ್ ಇಳುವರಿ ಸಿಗಲಿದೆ. 12 ಎಕರೆಯಲ್ಲಿ ಕಡೆಲೆ ಬೆಳೆದಿದ್ದೇನೆ. 4 ಎಕರೆಗೆ ಮಾತ್ರ ನೀರುಣಿಸಿದ್ದೇನೆ. ಉಳಿದಂತೆ ಒಣ ಭೂಮಿಯಲ್ಲಿ ಕಡಲೆ ಬೆಳೆ ಕುಸಿದಿದೆ’ ಎಂದು ರೈತ ಅನಿಲ್ ಕುಮಾರ್ ಹೇಳಿದರು.

ಭೀಮನೆರೆ ದೇವರಹಳ್ಳಿ ಸುತ್ತ ಕಡಲೆ ವ್ಯಾಪಕವಾಗಿ ಬೆಳೆಯುತ್ತಾರೆ. ಹೋಬಳಿ ವ್ಯಾಪ್ತಿಯಲ್ಲಿ 650 ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬೆಳೆಯಲಾಗಿದೆ. ಮಳೆ ಕೊರತೆ ಹವಾಮಾನ ವೈಪರೀತ್ಯದಿಂದ ಇಳುವರಿ ತೀವ್ರ ಕುಸಿದಿದೆ. ಕಳೆದ ಬಾರಿ ಪ್ರತಿ ಎಕರೆಗೆ 8 ಕ್ವಿಂಟಲ್‌ವರೆಗೆ ಇಳುವರಿ ತೆಗೆಯಲಾಗಿತ್ತು. 
ಕುಮಾರ್ ಕೃಷಿ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT