ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಲಕ ಸ್ನೇಹಿಯಾಗದ ಪರಿಸರ ಸ್ನೇಹಿ ಆಟೊ

ಮೈಲೇಜ್‌ ಇಲ್ಲ, ಬಿಡಿಭಾಗ ಸಿಗಲ್ಲ, ಓಲಾಡುವ ಆಟೊದಲ್ಲಿ ಪಯಣಿಸಲು ಜನರಿಗೂ ಹೆದರಿಕೆ
Last Updated 25 ಆಗಸ್ಟ್ 2020, 3:44 IST
ಅಕ್ಷರ ಗಾತ್ರ

ದಾವಣಗೆರೆ: ಮಹಾನಗರ ಪಾಲಿಕೆಯು ಸ್ಮಾರ್ಟ್‌ಸಿಟಿ ಆಗುತ್ತಿರುವಾಗಲೇ ಹೊಗೆ ಇಲ್ಲದೇ ಸ್ಮಾರ್ಟ್‌ ಆದ, ಪರಿಸರ ಸ್ನೇಹಿಯಾದ ಆಟೊಗಳು ಓಡಾಬೇಕು ಎಂದು ಸ್ಮಾರ್ಟ್‌ಸಿಟಿ ಯೋಜನೆಯಡಿ ಎಲೆಕ್ಟ್ರಿಕ್‌ ಚಾಲಿತ 9 ಆಟೊಗಳನ್ನು ಸಬ್ಸಿಡಿಯಲ್ಲಿ ವಿತರಣೆ ಮಾಡಲಾಗಿತ್ತು. ಆದರೆ ಮೈಲೇಜ್‌ ಇಲ್ಲದೇ, ಹಾಳಾದರೆ ರಿಪೇರಿ ಮಾಡಿಸಲು ಬಿಡಿಬಾಗಗಳು ಸಿಗದೇ ಚಾಲಕರು ಕಂಗಾಲಾಗಿದ್ದಾರೆ.

‘ಮೂರು ಗಂಟೆ ಚಾರ್ಜ್‌ಗೆ ಇಡಬೇಕು. 80 ಕಿಲೋಮೀಟರ್‌ ಮೈಲೇಜ್‌ ಸಿಗುತ್ತದೆ ಎಂದು ಹೇಳಿದ್ದರು. ಆದರೆ 35 ಕಿಲೋಮೀಟರ್‌ ಅಷ್ಟೇ ಮೈಲೇಜ್ ಸಿಗುತ್ತಿದೆ. ಮತ್ತೆ 3 ಗಂಟೆ ಚಾರ್ಜ್‌ ಇಡಬೇಕು. ಚಾರ್ಜ್‌ಗೆ ಇಡುವುದರಲ್ಲಿಯೇ ಸಮಯ ಕಳೆದುಹೋಗುತ್ತಿದೆ’ ಎಂದು ಆಟೊ ಚಾಲಕ ಸಿದ್ಧರಾಮೇಶ್ವರ ಅಳಲು ತೋಡಿಕೊಂಡರು.

‘ಸಬ್ಸಿಡಿಯಲ್ಲಿ ಎಲೆಕ್ಟ್ರಿಕ್ ಆಟೊ ನೀಡುವುದಾಗಿ ಸ್ಮಾರ್ಟ್‌ಸಿಟಿಯವರು 10 ತಿಂಗಳ ಹಿಂದೆ ಅರ್ಜಿ ಆಹ್ವಾನ ಮಾಡಿದರು. ನಾವು ಹೋದಾಗ ₹ 1.81 ಲಕ್ಷದ ಆಟೊ ಸಬ್ಸಿಡಿಯಲ್ಲಿ ₹ 72,400ಕ್ಕೆ ಬರುತ್ತದೆ ಎಂದು ಹೇಳಿದರು. ಗಾಡಿ ನೋಡಬೇಕು ಎಂದಾಗ ಶೋರೂಂನಲ್ಲಿದೆ ಎಂದರು. ಅಲ್ಲಿ ಟ್ರಯಲ್‌ಗೆ ಗಾಡಿ ಕೊಡಿ ಅಂದರೆ ಕೊಟ್ಟಿಲ್ಲ. ನೋಡಿಕೊಂಡು ಹೋಗಿ ಎಂದು ಹೇಳಿದರು. ಹಾಗಾಗಿ ಟ್ರಯಲ್‌ ನೋಡಲಾಗಲಿಲ್ಲ. ಆಮೇಲೆ ಅವರೇ ಸಾಲದ ವ್ಯವಸ್ಥೆ ಮಾಡಿದರು. ಅವಸರವಸರದಲ್ಲಿ ಆಟೊ ನೀಡಿದರು. ಅಲ್ಲಿಂದ ಸಮಸ್ಯೆಗಳು ಆರಂಭಗೊಂಡವು. ಮೊದಲ ತಿಂಗಳು ಜನರ ಪ್ರತಿಕ್ರಿಯೆ ಚೆನ್ನಾಗಿತ್ತು. ಎಲೆಕ್ಟ್ರಿಕ್‌ ಆಟೊ ಹತ್ತಿದರು. ಆಟೊ ಕುಣಿಯುವುದನ್ನು ನೋಡಿ ಒಮ್ಮೆ ಬಂದವರು ಮತ್ತೆ ಈ ಆಟೊ ಹತ್ತುತ್ತಿಲ್ಲ’ ಎಂದು ಮತ್ತೊಬ್ಬ ಆಟೊ ಚಾಲಕ ಕೊಟ್ರೇಶ್‌ ಸಮಸ್ಯೆ ವಿವರಿಸಿದರು.

‘ಕೆಲವು ಹಿರಿಯರು ನಮ್ಮ ಆಟೊ ಹತ್ತಿ ಈ ಆಟೋದ ಸಹವಾಸವೇ ಬೇಡ ಎಂದು ಅರ್ಧದಾರಿಯಲ್ಲೇ ಇಳಿದು ಹೋಗಿದ್ದಾರೆ. ಹೊಸ ಗಾಡಿ ಅಂದರೆ ಫಸ್ಟ್‌ ಪಾರ್ಟಿ ವಿಮೆ ಮಾಡಬೇಕು. ಆದರೆ ಥರ್ಡ್‌ ಪಾರ್ಟಿ ವಿಮೆ ಮಾಡಿದ್ದಾರೆ. ಅಂದರೆ ಅಪಘಾತವಾದರೆ ಚಾಲಕರಿಗಾಗಲಿ, ಆಟೊಗಾಗಲಿ ವಿಮೆ ಸಿಗುವುದಿಲ್ಲ. ಪ್ರಯಾಣಿಕರಿಗಷ್ಟೇ ಸಿಗುತ್ತದೆ’ ಎನ್ನುವುದು ಆಟೊ ಚಾಲಕ ಬಸವರಾಜ್‌ ಅವರ ದೂರು.

ಗುಜರಿ ಅಂಗಡಿಯಲ್ಲಿದ್ದ ಆಟೊಗೆ ಪೈಂಟ್‌ ಹೊಡೆದು ತಂದು ಕೊಟ್ಟಿರಬೇಕು. ಸಮಸ್ಯೆಗಳನ್ನು ಆಟೊ ಕಂಪನಿಯವರ ಗಮನಕ್ಕೂ, ಸ್ಮಾರ್ಟ್‌ಸಿಟಿ ಅಧಿಕಾರಿಗಳ ಗಮನಕ್ಕೂ ನಿರಂತರ ತರಲಾಗುತ್ತಿದೆ. ಆದರೆ ಸಮಸ್ಯೆಗಳು ಪರಿಹಾರವಾಗಿಲ್ಲ. ಇದು ಕಂಪನಿಯ ಡಿಫಾಲ್ಟ್‌ ಎಂದು ಶೋ ರೂಂನವರು ಹೇಳುತ್ತಿದ್ದಾರೆ. ಆದರೆ ಯಾವುದೇ ಸ್ಪಂದನ ದೊರೆಯುತ್ತಿಲ್ಲ. ಈ ಆಟೊಗಳನ್ನು ಸ್ಮಾರ್ಟ್‌ಸಿಟಿಯವರೇ ವಾಪಸ್ ಪಡೆದು ಮಾರಾಟ ಮಾಡಿ ಆಟೊಗಾಗಿ ಮಾಡಿರುವ ಸಾಲ ತೀರಿಸಲಿ ಎಂಬುದು ಎಲ್ಲ ಎಲೆಕ್ಟ್ರಿಕ್‌ ಆಟೊಗಳ ಚಾಲಕರ ಒಕ್ಕೊರಲ ಮನವಿ.

ವೇಗವಾಗಿ ಹೋದರೆ ಒಂದು ಕಡೆ ವಾಲುವ, ಪ್ರಯಾಣಿಕರಿಗೆ ಹತ್ತಲು ಕಷ್ಟ ಆಗುವಷ್ಟು ಎತ್ತರ ಇರುವ, ಸ್ಪಾರ್‌ಪಾರ್ಟ್ಸ್‌ ಸಿಗದ, ವಿಮೆ ಸರಿ ಇಲ್ಲದ, ನಮಗೆ ದುಡಿಮೆಯೇ ಇಲ್ಲದಂತೆ ಮಾಡಿರುವ ಈ ಆಟೊ ಬೇಡ ಎಂಬ ಅವರ ಮನವಿಗೆ ಅಧಿಕಾರಿಗಳು ಸ್ಪಂದಿಸುವರೇ ಎಂಬುದನ್ನು ಕಾದು ನೋಡಬೇಕಿದೆ.

ಸಮಸ್ಯೆ ಸರಿಪಡಿಸಲು ಕ್ರಮ: ಎಂಡಿ

‘ಆಟೊದಲ್ಲಿ ಸಮಸ್ಯೆ ಇರುವುದು ಹೌದು. ಈ ಬಗ್ಗೆ ಬೋರ್ಡ್ ಮೀಟಿಂಗ್‌ನಲ್ಲಿ ಈ ವಿಚಾರ ಪ್ರಸ್ತಾಪ ಮಾಡುತ್ತೇನೆ. ಆಟೊ ಚಾಲಕರಿಗೆ ತೊಂದರೆ ಆಗದಂತೆ ಏನು ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಚರ್ಚೆ ನಡೆಸಲಾಗುವುದು. ಕಂಪನಿಯವರನ್ನು ಕೂಡ ಕರೆಸಿ ಮಾತನಾಡುತ್ತೇವೆ. ನಾನು ಮ್ಯಾನೇಜಿಂಗ್‌ ಡೈರೆಕ್ಟರ್‌ ಆಗಿ ಬಂದ ಮೇಲೆ ಈ ಸಮಸ್ಯೆ ಪರಿಹರಿಸಲು ನಿರಂತರ ಪ್ರಯತ್ನಿಸುತ್ತಿದ್ದೇನೆ’ ಎಂದು ಸ್ಮಾರ್ಟ್‌ಸಿಟಿ ಯೋಜನೆಯ ಮ್ಯಾನೇಜಿಂಗ್ ಡೈರೆಕ್ಟರ್‌ ರವೀಂದ್ರ ಮಲ್ಲಾಪುರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT