ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನದಿಂದ ವಂಚಿತರಾಗದಿರಲು ಹಲವು ಕ್ರಮ

Last Updated 28 ಜನವರಿ 2023, 6:17 IST
ಅಕ್ಷರ ಗಾತ್ರ

ದಾವಣಗೆರೆ: ಹಾಸ್ಟೆಲ್‌ನಲ್ಲಿ ಇರುವ ಪದವಿ ವಿದ್ಯಾರ್ಥಿಗಳು ಬಹುತೇಕ ಸಂದರ್ಭದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಂಡಿರುವುದಿಲ್ಲ. ಊರಿನಲ್ಲಿ ಹೆಸರು ಇರುತ್ತದೆ ಎಂದು ಸುಮ್ಮನಾಗುತ್ತಾರೆ ಅಥವಾ ಪಾಲಕರು ಸೇರಿಸುತ್ತಾರೆ ಎಂದು ಆ ಬಗ್ಗೆ ತಲೆಕೆಸಿಕೊಳ್ಳುವುದಿಲ್ಲ. ಇಂತಹ ಸಂದರ್ಭದಲ್ಲಿ ಹಲವರು ಮತದಾನದಿಂದ ವಂಚಿತರಾಗುತ್ತಾರೆ. ಅವರು ಏನು ಮಾಡಬೇಕು?

ಪತ್ರಕರ್ತರು ಸೇರಿದಂತೆ ಖಾಸಗಿ ಉದ್ಯೋಗಿಗಳಿಗೆ ಚುನಾವಣೆ ಸಂದರ್ಭದಲ್ಲಿ ರಜೆ ಸಿಗದ ಕಾರಣ ಮತದಾನ ಮಾಡಲು ಆಗುವುದಿಲ್ಲ. ಆಗ ಏನು ಮಾಡಬೇಕು ಎಂಬ ಪ್ರಶ್ನೆಗಳು ‘ಪ್ರಜಾವಾಣಿ’ ಫೋನ್‌ ಇನ್‌ನಲ್ಲಿ ಎದುರಾದವು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಕ್ರಮದ ಭರವಸೆ ನೀಡಿದರು.

ಪದವಿ ವಿದ್ಯಾರ್ಥಿಗಳು ತಾವು ಕಲಿಯುವ ಸ್ಥಳದಲ್ಲೇ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಹಾಸ್ಟೆಲ್‌ನಲ್ಲಿದ್ದು ಓದುತ್ತಿದ್ದರೆ ವಾರ್ಡನ್‌ಗೆ ತಿಳಿಸಿ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಅಥವಾ ತಾವೇ ವೋಟರ್ ಹೆಲ್ಪಲೈನ್‌ ಆ್ಯಪ್‌ ಮೂಲಕ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ವಿವರಿಸಿದರು.

ಪತ್ರಕರ್ತರು ಸೇರಿದಂತೆ ಖಾಸಗಿಯವರಿಗೆ ಅಂಚೆ ಮತದಾನ: ಮನವಿ ಸಲ್ಲಿಸಿ

ಪತ್ರಕರ್ತರು ಸೇರಿದಂತೆ ಖಾಸಗಿ ಉದ್ಯೋಗಿಗಳಿಗೆ ಚುನಾವಣೆ ಸಂದರ್ಭದಲ್ಲಿ ಕಂಪನಿ ರಜೆ ನೀಡಬೇಕು ಎಂಬ ನಿಯಮ ಇದೆ. ಆದರೆ ಕೆಲವೊಮ್ಮೆ ಅಗತ್ಯ ಸೇವೆ ನೀಡುವ ಸಂದರ್ಭದಲ್ಲಿ ಹಲವರಿಗೆ ಮತದಾನ ಮಾಡಲು ಆಗುವುದಿಲ್ಲ. ಅಂತಹವರಿಗೆ ಅಂಚೆ ಮತದಾನ ಮಾಡಲು ಅವಕಾಶ ನೀಡಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಇದೆ.

ತುರ್ತು ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಖಾಸಗಿ ಉದ್ಯೋಗಿಗಳು ಅಂಚೆ ಮತದಾನಕ್ಕೆ ಅವಕಾಶ ನೀಡುವಂತೆ ಚುನಾವಣೆ ಆಯೋಗಕ್ಕೆ ಮನವಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಂಬಂಧಪಟ್ಟ ಸಂಘ ಅಥವಾ ಕಂಪನಿ ಮೂಲಕ ಬೆಂಗಳೂರಿನಲ್ಲಿರುವ ಚುನಾವಣಾ ಆಯೋಗದ ಕಚೇರಿಗೆ ಅರ್ಜಿ ಸಲ್ಲಿಸಬೇಕು ಅಥವಾ ಆಯಾ ಜಿಲ್ಲಾ ಚುನಾವಣಾಧಿಕಾರಿಗೆ ಮನವಿ ಸಲ್ಲಿಸಿದರೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಲಿದೆ ಎಂದು ಶಿವಾನಂದ ಕಾಪಶಿ ತಿಳಿಸಿದರು.

ನಗರ ಪ್ರದೇಶದಲ್ಲಿ ಸಮಸ್ಯೆ ಹೆಚ್ಚು

ಅರ್ಜಿ ಸಲ್ಲಿಸಿದರೂ ಮತದಾರರ ಗುರುತಿನ ಚೀಟಿ ನಮಗೆ ಸಿಕ್ಕಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ, ‘ಗ್ರಾಮೀಣ ಪ್ರದೇಶಗಳಲ್ಲಿ ಈ ಸಮಸ್ಯೆ ಇಲ್ಲ. ನಗರ ಪ್ರದೇಶಗಳಲ್ಲಿ ಹೆಚ್ಚಿನ ವಾರ್ಡ್‌ಗಳು ಇರುವ ಕಾರಣ ಗೊಂದಲವಾಗುವುದು ಸಹಜ. ಬಿಎಲ್‌ಒಗಳು ಕೆಲವೊಮ್ಮೆ ಹಲವು ಕಾರಣಗಳಿಂದ ಅರ್ಜಿ ಸಲ್ಲಿಸಿದರೂ ಮತದಾರರ ಚೀಟಿ ನೀಡಿರುವುದಿಲ್ಲ. ಗುರುತಿನ ಚೀಟಿಯಿಂದ ಮತದಾರರು ವಂಚಿತರಾಗಬಾರದು ಎಂಬ ಉದ್ದೇಶದಿಂದ ‌‌ಚುನಾವಣಾ ಆಯೋಗ ಮತದಾರರ ವಿಳಾಸಕ್ಕೆ ಅಂಚೆ ಮೂಲಕ ಮತದಾರರ ಗುರುತಿನ ಚೀಟಿ ಕಳುಹಿಸುವ ವ್ಯವಸ್ಥೆ ಮಾಡಿದೆ. ಚೀಟಿ ಸಿಗದಿದ್ದರೆ ಸಹಾಯವಾಣಿ– 1950 ಸಂಪರ್ಕಿಸಬೇಕು ಅಥವಾ ಬಿಎಲ್‌ಒಗಳನ್ನು ವಿಚಾರಿಸಬಹುದು ಎಂದು ಡಿಸಿ ತಿಳಿಸಿದರು.

ಮತದಾರರ ಚೀಟಿ ಕಳೆದುಹೋಗಿದ್ದರೆ ಏನು ಮಾಡಬೇಕು:

ಮತದಾರರ ಗುರುತಿನ ಚೀಟಿ ಕಳೆದುಹೋಗಿದೆ. ಆದರೆ ಅದರ ಸಂಖ್ಯೆ ತಿಳಿದಿದೆ. ಗುರುತಿನ ಚೀಟಿ ಮತ್ತೆ ಪಡೆಯುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ, ‘ಮೊದಲು ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು. ಕೂಡಲೇ ಪರಿಶೀಲಿಸಿಕೊಂಡರೆ ಈ ಬಾರಿಯ ಚುನಾವಣೆಯಲ್ಲಿ ಮತ ಚಲಾಯಿಸಬಹುದು‘ ಎಂದರು.

ಅನಧಿಕೃತ ಮತದಾರರ ಗುರುತಿನ ಚೀಟಿ ಮುದ್ರಿಸಿದರೆ ಕ್ರಮ

ಚುನಾವಣಾ ಆಯೋಗದಿಂದ ನೀಡಲಾಗುವ ಮತದಾರರ ಗುರುತಿನ ಚೀಟಿಯೇ ಅಧಿಕೃತ. ಖಾಸಗಿ ಕಂಪ್ಯೂಟರ್‌ ಕೇಂದ್ರಗಳಲ್ಲಿ ಅನಧಿಕೃತವಾಗಿಮತದಾರರ ಗುರುತಿನ ಚೀಟಿ ಮುದ್ರಿಸಿ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಸೈಬರ್ ಅಪರಾಧ ವಿಭಾಗಕ್ಕೂ ಮಾಹಿತಿ ನೀಡಲಾಗಿದೆ. ಸಾರ್ವಜನಿಕರು ಖಾಸಗಿಯಾಗಿ ಮತದಾರರ ಚೀಟಿ ನೀಡುತ್ತಿರುವುದು ಗಮನಕ್ಕೆ ಬಂದರೆ ದೂರು ನೀಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಆಯೋಗದಿಂದ ಜಾಗೃತಿ ಕಾರ್ಯಕ್ರಮ

ಮತದಾರರು ಆಮಿಷಕ್ಕೆ ಬಲಿಯಾಗಿ ಮತದಾನ ಮಾಡುವುದನ್ನು ತಪ್ಪಿಸಲು, ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಪ್ರಕ್ರಿಯೆ ಸೇರಿದಂತೆ ಮತದಾನಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಚುನಾವಣಾ ಆಯೋಗದಿಂದ ‘ಸ್ವೀಪ್‌‘ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೀದಿ ನಾಟಕ, ರೆಡಿಯೋ ಮೂಲಕ ಮಾಹಿತಿ, ಕಾಲೇಜುಗಳಲ್ಲಿ ಎಲೆಕ್ಟ್ರೋಲ್‌ ಲಿಟರಸಿ ಕ್ಲಬ್‌ (ಇಎಲ್‌ಸಿ) ಸೇರಿದಂತೆ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಿವಾನಂದ ಕಾಪಶಿ ತಿಳಿಸಿದರು.

ಸಿಬ್ಬಂದಿ ಹೆಚ್ಚಿಸಿ

ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಇದರಿಂದ ಜನರು ತೊಂದರೆ ಎದುರಿಸುವಂತಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ, ‘ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT