ಕೆ. ಹೊಸಹಳ್ಳಿ, ಶಿವಾಜಿನಗರದಲ್ಲಿ ಕಾಡಾನೆ ದಾಳಿ

7
ಅಡಿಕೆ, ಬಾಳೆ ಬೆಳೆ ನಾಶ: ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕ

ಕೆ. ಹೊಸಹಳ್ಳಿ, ಶಿವಾಜಿನಗರದಲ್ಲಿ ಕಾಡಾನೆ ದಾಳಿ

Published:
Updated:
ಚನ್ನಗಿರಿ ತಾಲ್ಲೂಕಿನ ಶಿವಾಜಿನಗರದ ತೋಟಗಳಿಗೆ ಶುಕ್ರವಾರ ರಾತ್ರಿ ನುಗ್ಗಿರುವ ಕಾಡಾನೆಗಳು ಅಡಿಕೆ ಹಾಗೂ ಬಾಳೆಗಿಡಗಳನ್ನು ನಾಶ ಮಾಡಿವೆ. ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸ್ಥಳಕ್ಕೆ ಶನಿವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ವಲಯ ಅರಣ್ಯಾಧಿಕಾರಿ ದಿನೇಶ್ ಅವರೂ ಇದ್ದರು.

ಚನ್ನಗಿರಿ: ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಗೌಳಿಗೇರ ಕ್ಯಾಂಪ್ ಹಾಗೂ ಶಿವಾಜಿನಗರದಲ್ಲಿ ಶುಕ್ರವಾರ ರಾತ್ರಿ ಕಾಡಾನೆಗಳು ತೋಟಗಳಿಗೆ ನುಗ್ಗಿ ಅಡಿಕೆ ಹಾಗೂ ಬಾಳೆಗಿಡಗಳನ್ನು ನಾಶ ಮಾಡಿವೆ.

ಶುಕ್ರವಾರ ರಾತ್ರಿ ತೋಟಗಳಿಗೆ ನುಗ್ಗಿದ ಕಾಡಾನೆಗಳು ಶಿವಾಜಿನಗರ ಗ್ರಾಮದ ರೈತರಾದ ಶಾಮು, ದೇವಮ್ಮ, ಫಕೀರಪ್ಪ, ಧರ್ಮಪ್ಪ, ಯಲ್ಲಪ್ಪ ಎಂಬುವವರ ತೋಟದಲ್ಲಿ ಕಾಡಾನೆಗಳು ಸಿಕ್ಕ ಸಿಕ್ಕ ಅಡಿಕೆ, ಬಾಳೆಗಿಡಗಳನ್ನು ಕಿತ್ತು ಹಾಳುಗೆಡವಿವೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ‘ಈ ಭಾಗದ ಅರಣ್ಯ ಪ್ರದೇಶದಲ್ಲಿ ಕೂಡಲೇ 6 ಕಿ.ಮೀ ಉದ್ದಕ್ಕೂ ಕಂದಕವನ್ನು ನಿರ್ಮಿಸುವ ಮೂಲಕ ಕಾಡಾನೆಗಳು ಗ್ರಾಮಗಳನ್ನು ಪ್ರವೇಶಿಸಿದಂತೆ ನಿಯಂತ್ರಿಸಬೇಕು. ಹಾಗೆಯೇ ಈಗ ಆಗಿರುವ ನಷ್ಟದ ವರದಿಯನ್ನು ಸರ್ಕಾರಕ್ಕೆ ಕಳುಹಿಸಿ ಸಂತ್ರಸ್ತ ರೈತರಿಗೆ ಪರಿಹಾರ ಒದಗಿಸಿ’ ಎಂದು ಚನ್ನಗಿರಿ ವಲಯ ಅರಣ್ಯಾಧಿಕಾರಿ ದಿನೇಶ್ ಅವರಿಗೆ ಸೂಚಿಸಿದರು.

‘ಕುಕ್ಕುವಾಡೇಶ್ವರಿ ಅರಣ್ಯ ಪ್ರದೇಶ ಆನೆ ಕಾರಿಡಾರ್ ಆಗಿದ್ದು, ಇಲ್ಲಿ ಓಡಾಡುವ ಕಾಡಾನೆಗಳು ಹಳ್ಳಿಗಳಿಗೆ ಪ್ರವೇಶಿಸಿದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಇದಕ್ಕಾಗಿ ಈ ಭಾಗದಲ್ಲಿ ಇದುವರೆಗೆ 34 ಕಿ.ಮೀ ಕಂದಕ ನಿರ್ಮಾಣ ಮಾಡಲಾಗಿದೆ. ಇನ್ನೂ 6 ಕಿ.ಮೀ ದೂರ ಕಂದಕ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಮಾಡಾಳ್‌ ವಿರೂಪಾಕ್ಷಪ್ಪ ಸುದ್ದಿಗಾರರಿಗೆ ತಿಳಿಸಿದರು.

ಚನ್ನಗಿರಿ ವಲಯ ಅರಣ್ಯಾಧಿಕಾರಿ ದಿನೇಶ್, ‘ಶುಕ್ರವಾರ ತಡರಾತ್ರಿ 2 ಕಾಡಾನೆಗಳು ಈ ಭಾಗದ ಗ್ರಾಮಗಳಲ್ಲಿ ಓಡಾಡಿವೆ. ಜನವಸತಿ ಪ್ರದೇಶದಲ್ಲಿ ಆನೆಗಳು ಪ್ರವೇಶಿಸುವುದನ್ನು ತಡೆಯಲು ಮುನ್ನೆಚ್ಚರಿಕೆ ವಹಿಸಲಾಗುವುದು’ ಎಂದರು.

ಇಬ್ಬರ ಜೀವಹಾನಿಯಾಗಿತ್ತು:

ಕಳೆದ ವರ್ಷ ಉಬ್ರಾಣಿ ಹೋಬಳಿಯಲ್ಲಿ ಕಾಡಾನೆಗಳು ದಾಳಿ ಮಾಡಿ, ಇಬ್ಬರು ರೈತರನ್ನು ತುಳಿದು ಕೊಂದು ಹಾಕಿದ್ದವು. ಹಾಗೆಯೇ ಅಪಾರ ಪ್ರಮಾಣದ ಬೆಳೆ ನಾಶ ಮಾಡಿದ್ದವು. ಕಾರ್ಯಾಚರಣೆ ನಡೆಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ಎರಡು ಕಾಡಾನೆಗಳನ್ನು ಸೆರೆ ಹಿಡಿದು ಬನ್ನೇರುಘಟ್ಟ ಅರಣ್ಯಕ್ಕೆ ಬಿಟ್ಟಿದ್ದರು. ಈಗ ಮತ್ತೆ ಈ ಭಾಗದಲ್ಲಿ ಆನೆಗಳು ಕಾಣಿಸಿಕೊಂಡಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !