ಸೋಮವಾರ, ಅಕ್ಟೋಬರ್ 19, 2020
25 °C
ಅಗ್ನಿಶಾಮಕ, ಆರೋಗ್ಯ, ಪೊಲೀಸ್ ಠಾಣೆಗೆ ಒಂದೇ ನಂಬರ್* ಮೂರು ಜಿಲ್ಲೆಗಳಲ್ಲಿ ಅನುಷ್ಠಾನ

ತುರ್ತು ಸೇವೆಗಳಿಗೆಲ್ಲ 112 ಸಂಖ್ಯೆಗೆ ಕರೆ ಮಾಡಿ: ಎಸ್‌ಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಪೊಲೀಸ್ ಕಚೇರಿ, ಅಗ್ನಿಶಾಮಕ ದಳ, ಅಂಬುಲೆನ್ಸ್ ಹಾಗೂ ಇನ್ನಿತರ ತುರ್ತು ಸೇವೆಗಳಿಗಾಗಿ ಇನ್ನೂ ಮುಂದೆ 112 ಸಂಖ್ಯೆಗೆ ಸಾರ್ವಜನಿಕರು ಕರೆ ಮಾಡಬೇಕು. ಕೂಡಲೇ ಸಹಾಯಕ್ಕೆ ಧಾವಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ ವೇದಮೂರ್ತಿ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ತುರ್ತು ಸೇವೆಗಳನ್ನು ಒಂದುಗೂಡಿಸಿ ಇಆರ್‌ ಎಸ್ಎಸ್(ಎಮರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್‌ ಸಿಸ್ಟಮ್) ಸಿದ್ಧಪಡಿಸಲಾಗಿದೆ. ಈ ಯೋಜನೆಯಡಿ ನಾಲ್ಕು ವಾಹನಗಳನ್ನು ರಾಯಚೂರು ಜಿಲ್ಲಾ ಪೊಲೀಸ್ ಘಟಕಕ್ಕೆ ಸರ್ಕಾರವು ಒದಗಿಸಿದೆ. ಈ ವಾಹನಗಳು ರಾಯಚೂರು ನಗರ, ಲಿಂಗಸುಗೂರು ಮತ್ತು ಸಿಂಧನೂರು ವ್ಯಾಪ್ತಿಗೆ ಒಳಪಟ್ಟಂತೆ ಸಂಬಂಧಿಸಿದ ಉಪ ವಿಭಾಗದ ಡಿವೈಎಸ್‌ಪಿ ಅವರ ಉಸ್ತುವಾರಿಯಲ್ಲಿ ವಾಹನಗಳು ಕರ್ತವ್ಯ ನಿರ್ವಹಿಸುತ್ತವೆ ಎಂದು ತಿಳಿಸಿದರು.

ಸಾರ್ವಜನಿಕರು ತುರ್ತು ಸೇವೆ ಸಂಬಂಧವಾಗಿ ಯಾವುದೇ ದೂರವಾಣಿಯ ಕರೆ, ಇ–ಮೇಲ್ ಸಂದೇಶ, 112 ಆ್ಯಪ್ ಮುಖಾಂತರ ದೂರು ನೀಡಿದಾಗ ಬೆಂಗಳೂರಿನಲ್ಲಿರುವ ನಿಯಂತ್ರಣ ಕೊಠಡಿಯ ನಿರ್ವಹಣೆಯ ಸಿಬ್ಬಂದಿ ಕರೆ ಸ್ವೀಕರಿಸುತ್ತಾರೆ. ಸಂಬಂಧಪಟ್ಟ ಜಿಲ್ಲೆಯ ನಿಯಂತ್ರಣ ಕೊಠಡಿಗೆ ರವಾನಿಸಿದಾಗ ಕರೆಯನ್ನು ತುರ್ತು ಸ್ಪಂದನಾ ವಾಹನಕ್ಕೆ ತಲುಪಿಸಿ ಸೇವೆಯು ಅಗತ್ಯವಿರುವ ಸ್ಥಳಕ್ಕೆ ವಾಹನಗಳನ್ನು ತೆರಳುವಂತೆ ಸೂಚಿಸಲಾಗುತ್ತದೆ. ಈ ವಾಹನಗಳಲ್ಲಿ ಎಂಡಿಟಿ ಮೊಬೈಲ್ ಡಾಟಾ ಟರ್ಮಿನಲ್ ತಂತ್ರಾಶ ಅಳವಡಿಸಲಾಗಿದೆ. ಅದರ ಜಿಪಿಎಸ್ ಸಹಾಯದಿಂದ ಅವಘಡಗೊಂಡ ಸ್ಥಳಕ್ಕೆ ತೆರಳಲು ಸಹಕಾರಿಯಾಗಿದೆ ಎಂದರು.

ವಾಹನಗಳು ದಿನದ 24 ಗಂಟೆಯೂ ಸೇವೆ ಒದಗಿಸುತ್ತವೆ. ಇವುಗಳಲ್ಲಿ ಎಎಸ್ಐ‌ ದರ್ಜೆಯ ಅಧಿಕಾರಿ ಹಾಗೂ ಒಬ್ಬ ಸಿಬ್ಬಂದಿಯನ್ನು ನೇಮಿಸಿದ್ದು, ಚಾಲಕ ಸಹ ನಿಯೋಜಿಸಿದೆ. ಇವರೆಲ್ಲ ಮೂರು ಪಾಳೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ ಎಂದರು.

ಈ ವಾಹನಗಳ ಚಲನ ವಲನಗಳ ಮೇಲೆ ನಿಗಾ ವಹಿಸಲು ಜಿಲ್ಲಾ ನಿಸ್ತಂತು (ವೈರ್‌ಲೆಸ್‌) ಕೇಂದ್ರದಲ್ಲಿ ಪ್ರತ್ಯೇಕ ಸಾಫ್ಟವೇರ್‌ ಅಳವಡಿಸಿ ನುರಿತ ಸಿಬ್ಬಂದಿ ನೇಮಿಸಲಾಗಿದೆ. ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಾಗುತ್ತದೆ. ಯಾವುದೇ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಘಟನೆಗಳು ಜರುಗಿದಲ್ಲಿ 112 ಸಹಾಯವಾಣಿಗೆ ಕರೆ ಮಾಡುವಂತೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.