ಶುಕ್ರವಾರ, ಆಗಸ್ಟ್ 6, 2021
21 °C
ಕೇರಳದಲ್ಲಿ ಝೀಕಾ ವೈರಸ್ ಭೀತಿ: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚನೆ

ದಾವಣಗೆರೆ: ಜಿಲ್ಲೆಯಲ್ಲಿ ಲಾರ್ವಾ ಸಮೀಕ್ಷೆಗೆ ಒತ್ತು ನೀಡಿ–ಮಹಾಂತೇಶ ಬೀಳಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ನೆರೆಯ ಕೇರಳದಲ್ಲಿ ಝೀಕಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸೊಳ್ಳೆಗಳ ಲಾರ್ವಾ ಪತ್ತೆಹಚ್ಚುವ ಸಮಿಕ್ಷೆ ಕಾರ್ಯಕ್ಕೆ ಒತ್ತು ನೀಡಬೇಕು’ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಧಿಕಾರಿಗಳಿಗೆ ಸೂಚಿಸಿದರು.

ಝೀಕಾ ವೈರಸ್ ತಡೆಗಟ್ಟಲು ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಈಡಿಸ್ ಈಜಿಪ್ಟೈ’ ಸೊಳ್ಳೆ ಹಗಲು ವೇಳೆ ಕಚ್ಚುವುದರಿಂದ ಝೀಕಾ ವೈರಸ್ ಹರಡಲಿದ್ದು, ಇದಕ್ಕೆ ಯಾವುದೇ ಲಸಿಕೆ ಇಲ್ಲ. ಮುಂಜಾಗ್ರತಾ ಕ್ರಮ ಕೈಗೊಳ್ಳುವುದೇ ಇದರ ನಿಯಂತ್ರಣಕ್ಕೆ ಇರುವ ದಾರಿ. ಹೀಗಾಗಿ ಆರೋಗ್ಯ ಇಲಾಖೆಯು ಜಿಲ್ಲೆಯ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಈ ಸೊಳ್ಳೆಗಳು ಅಭಿವೃದ್ಧಿಯಾಗದಂತೆ ಸಮೀಕ್ಷೆ ಕೈಗೊಂಡು ಲಾರ್ವಾ ಪತ್ತೆಯಾದಲ್ಲಿ, ಕೂಡಲೆ ನಾಶಗೊಳಿಸಬೇಕು’ ಎಂದು ಸೂಚಿಸಿದರು.

‘ಮಹಾನಗರಪಾಲಿಕೆಯೂ ಸೇರಿ ಆಯಾ ನಗರ, ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಘನ ತ್ಯಾಜ್ಯ ವಸ್ತುಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಜಿಲ್ಲೆಯಲ್ಲಿ ಇಂತಹ ಪ್ರಕರಣ ಪತ್ತೆಹಚ್ಚಲು ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಾರ್ಯ ನಿರ್ವಹಿಸಬೇಕು. ರೋಗ ಲಕ್ಷಣ ಪ್ರಕರಣ ಪತ್ತೆಯಾದಲ್ಲಿ, ಅದರ ಸೀರಂ ಮಾದರಿಯನ್ನು ಝೀಕಾ ವೈರಸ್ ಮತ್ತು ಡೆಂಗಿ ಪರೀಕ್ಷೆಗಾಗಿ ಜಿಲ್ಲಾ ಸರ್ವೇಕ್ಷಣಾ ಘಟಕ, ಡಿಪಿಎಚ್‍ಎಲ್ ಪ್ರಯೋಗ ಶಾಲೆಗೆ ಸಲ್ಲಿಸಬೇಕು’ ಎಂದು ಮಹಾಂತೇಶ ಬೀಳಗಿ ಸೂಚಿಸಿದರು.

ಡಿಎಚ್ಒ ಡಾ. ನಾಗರಾಜ್ ಮಾತನಾಡಿ, ‘ಗರ್ಭಿಣಿಯರು ಸೋಂಕಿಗೆ ಒಳಗಾದರೆ ಹುಟ್ಟುವ ಮಗುವೂ ಸೋಂಕಿಗೆ ಒಳಗಾಗಿ ‘ಮೈಕ್ರೋಸೆಫಾಲಿ’ ರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಸೊಳ್ಳೆಯಿಂದ ಪಾರಾಗುವುದೇ ಇದರ ತಡೆಗೆ ಸೂಕ್ತ ವಿಧಾನ. ಈಡಿಸ್  ಸೊಳ್ಳೆಗಳು ಮನೆಯ ಸುತ್ತಮುತ್ತಲ ನೀರಿನ ತೊಟ್ಟಿ, ಘನತ್ಯಾಜ್ಯ ವಸ್ತುಗಳಲ್ಲಿನ ನೀರಿನಲ್ಲಿ ಮೊಟ್ಟೆ ಇಟ್ಟು ಮರಿ (ಲಾರ್ವಾ) ಮಾಡಿಕೊಳ್ಳುತ್ತವೆ. ಈ ಸೊಳ್ಳೆಗಳು ಅಭಿವೃದ್ಧಿಯಾಗದಂತೆ ನೀರಿನ ಸಂಗ್ರಹಗಾರಗಳನ್ನು ವಾರಕ್ಕೊಮ್ಮೆ ಸ್ವಚ್ಛವಾಗಿ ಸ್ವಚ್ಛಗೊಳಿಸಬೇಕು’ ಎಂದು ಸಲಹೆ ನೀಡಿದರು.

‘ಆರೋಗ್ಯ ಇಲಾಖೆಯು ಜಿಲ್ಲೆಯಲ್ಲಿ ಈಗಾಗಲೇ ಲಾರ್ವಾ ಸಮೀಕ್ಷೆ ನಡೆಸುತ್ತಿದ್ದು, ಲಾರ್ವಾಗಳು ಮರು ಉತ್ಪತ್ತಿಯಾಗಿರುವುದು ಕಂಡುಬಂದಲ್ಲಿ, ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಅಗತ್ಯ ಕ್ರಮ ವಹಿಸಲಿದೆ. ಗರ್ಭಿಣಿಯರಿಗೆ ಎನ್‍ಎನ್‍ಸಿ ತಪಾಸಣೆ ನಡೆಸಿದಾಗ ‘ಮೈಕ್ರೋಸೆಫಾಲಿ’ ಕಂಡುಬಂದಲ್ಲಿ ಅಥವಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಮೈಕ್ರೋಸೆಫಾಲಿ ಮಗುವಿನ ಜನನವಾದಲ್ಲಿ ಅಗತ್ಯ ಪರೀಕ್ಷೆಗಳಿಗಾಗಿ ಜಿಲ್ಲಾ ಸವೇಕ್ಷಣಾ ಘಟಕ ಹಾಗೂ ಇಲಾಖೆಯ ಅಧಿಕಾರಿಗಳಿಗೆ ಖಾಸಗಿ ಆಸ್ಪತ್ರೆಗಳು ಮಾಹಿತಿ ನೀಡಬೇಕು’ ಎಂದು ಡಿಎಚ್‍ಒ ಡಾ. ನಾಗರಾಜ್ ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ. ರಾಜೀವ್, ಕೋವಿಡ್ ನೋಡಲ್ ಅಧಿಕಾರಿ ಪ್ರವೀಣ್ ನಾಯಕ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಮೀನಾಕ್ಷಿ, ಸರ್ವೆಲೆನ್ಸ್ ಮೆಡಿಕಲ್ ಅಧಿಕಾರಿ ಡಾ. ಶ್ರೀಧರ್, ಡಾ. ನಟರಾಜ್, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು