ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಸಾರಿಗೆ ನೌಕರರ ಮುಷ್ಕರ: ಕರ್ತವ್ಯಕ್ಕೆ ಅಡ್ಡಿಪಡಿಸಿದ 25 ಮಂದಿ ವಿರುದ್ಧ ಎಫ್‌ಐಆರ್

‌ಸಾರಿಗೆ ನೌಕರರ ಮುಷ್ಕರ
Last Updated 20 ಏಪ್ರಿಲ್ 2021, 3:22 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ 25 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ದಾವಣಗೆರೆಯ 12 ಮಂದಿಯ ವಿರುದ್ಧ ಕೆ.ಟಿ.ಜೆ ನಗರ ಹಾಗೂ ಹರಿಹರ ಡಿಪೊದ 13 ಮಂದಿಯ ವಿರುದ್ಧ ವಿರುದ್ಧ ದೂರು ದಾಖಲಾಗಿದ್ದು, ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರ ನಡೆಯುತ್ತಿದ್ದ ವೇಳೆ ಕೆಲವು ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದರು. ಆ ವೇಳೆ ಕೆಲವರು ಅವರನ್ನು ಕೆಲಸ ಮಾಡದಂತೆ ತಡೆದಿದ್ದರು. ಅಲ್ಲದೇ ಮುಷ್ಕರದ ವೇಳೆ ತಟ್ಟೆಲೋಟ ಬಡಿದು ಪ್ರತಿಭಟಿಸಿದವರ ವಿರುದ್ಧವೂ ಪ್ರಕರಣ ದಾಖಲಾಗಿದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ ಹೆಬ್ಬಾಳ್ ತಿಳಿಸಿದ್ದಾರೆ.

ಕರ್ತವ್ಯಕ್ಕೆ ಹಾಜರಾಗದ11 ತರಬೇತಿ (ಟ್ರೈನಿ) ಚಾಲಕ ಕಮ್‌ ನಿರ್ವಾಹಕರನ್ನು ಆಯ್ಕೆ ಪಟ್ಟಿಯಿಂದ ತೆಗೆದು ಹಾಕಲಾಗಿದೆ.

ಕೆಎಸ್‌ಆರ್‌ಟಿಸಿ, ಖಾಸಗಿ ಬಸ್ ಚಾಲಕರ ವಾಗ್ವಾದ: ಪ್ರಯಾಣಿಕರನ್ನು ಕರೆದೊಯ್ಯುವ ವಿಚಾರಕ್ಕೆ ಸಂಬಂಧಿಸಿ ಕೆಎಸ್ಆರ್‌ಟಿಸಿ ಹಾಗೂ ಖಾಸಗಿ ಬಸ್ ಚಾಲಕರ ನಡುವೆ ಸೋಮವಾರ ವಾಗ್ವಾದ ನಡೆಯಿತು.

ನಗರದ ಹೈಸ್ಕೂಲ್ ಮೈದಾನದ ಬಳಿಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬೆಂಗಳೂರಿಗೆ ತೆರಳುವ ವಿಚಾರದಲ್ಲಿ ಸಾರಿಗೆ ಹಾಗೂ ಖಾಸಗಿ ಬಸ್ ಚಾಲಕರ ನಡುವೆ ವಾಗ್ವಾದ ನಡೆದಿದ್ದು, ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಕೆ. ಮಲ್ನಾಡ್ ಹಾಗೂ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ ಹೆಬ್ಬಾಳ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.

ನಡೆದಿದ್ದೇನು?: ಸಾರಿಗೆ ನೌಕರರ ಮುಷ್ಕರದ ನಿಮಿತ್ತ ಖಾಸಗಿ ಬಸ್‌ಗಳಿಗೆ ಒಂದು ತಿಂಗಳ ಮಟ್ಟಿಗೆ ತಾತ್ಕಾಲಿಕ ಪರ್ಮಿಟ್ ನೀಡಲಾಗಿತ್ತು. ಶನಿವಾರ ಹಾಗೂ ಭಾನುವಾರ ಬೆಂಗಳೂರಿನಿಂದ ಬಂದಿದ್ದ ಖಾಸಗಿ ಬಸ್‌ಗಳು ಬೀಡು ಬಿಟ್ಟಿದ್ದವು. ಸೋಮವಾರ ವಾಪಸ್ ಬೆಂಗಳೂರಿಗೆ ಹೋಗಬೇಕಾಗಿದ್ದ ವೇಳೆ ಕೆಎಸ್‌ಆರ್‌ಟಿಸಿ ಬಸ್‌ಗಳು ಬಂದಷ್ಟು ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ವೇಳೆ ಖಾಸಗಿ ಬಸ್ ಚಾಲಕರು ತಕರಾರು ಮಾಡಿದರು.

‘ಪ್ರಾದೇಶಿಕ ಸಾರಿಗೆ ಕಚೇರಿಯಿಂದ ನಮಗೆ ಒಂದು ತಿಂಗಳ ಮಟ್ಟಿಗೆ ತಾತ್ಕಾಲಿಕ ಲೈಸೆನ್ಸ್ ನೀಡಿದ್ದು, ನಾವು ಸಂಚರಿಸುವ ರೂಟ್‌ಗಳಲ್ಲಿ ಏಕಾಏಕಿ ಕೆಎಸ್‌ಆರ್‌ಟಿಸಿ ಬಸ್‌ಗಳು ಕಡಿಮೆ ಜನರನ್ನು ಕರೆದೊಯ್ಯುತ್ತಿವೆ. ಇದರಿಂದ ನಮಗೆ ಅನ್ಯಾಯವಾಗುತ್ತಿದೆ’ ಎಂದು ಖಾಸಗಿ ಬಸ್ ಚಾಲಕರು ಅಳಲು ತೋಡಿಕೊಂಡರು.

ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಸಿದ್ದೇಶ್ವರ್ ಹೆಬ್ಬಾಳ್ ಹಾಗೂ ಆರ್‌ಟಿಒ ಶ್ರೀಧರ್ ಕೆ. ಮಲ್ನಾಡ್ ಅವರು ಒಂದು ಖಾಸಗಿ ಬಸ್ ಚಲಿಸಿದ ಬಳಿಕ ಒಂದು ಕೆಎಸ್‌ಆರ್‌ಟಿಸಿ ಬಸ್ ಸಂಚರಿಸುವಂತೆ ಪರಿಹಾರ ಸೂಚಿಸಿದರು. ಪೊಲೀಸ್ ಬಂದೋಬಸ್ತ್
ಕಲ್ಪಿಸಲಾಗಿತ್ತು.

ಉಪವಾಸ ಸತ್ಯಾಗ್ರಹ ಕೈಬಿಟ್ಟ ನೌಕರರು: 6ನೇ ವೇತನ ಜಾರಿಗೆ ಆಗ್ರಹಿಸಿ ಕೆಎಸ್‌ಆರ್‌ಟಿಸಿ ನೌಕರರು ನಡೆಸುತ್ತಿರುವ ಮುಷ್ಕರ 13ನೇ ದಿನಕ್ಕೆ ಕಾಲಿಟ್ಟಿದೆ. ಸೋಮವಾರ ಮುಷ್ಕರ ತೀವ್ರಗೊಳಿಸಿ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿತ್ತು. ಕೊರೊನಾ ನಿಮಿತ್ತ ಅನುಮತಿ ಸಿಗದ ಕಾರಣ ಉಪವಾಸ ಕೈಬಿಟ್ಟು, ಕರ್ತವ್ಯದಿಂದ ದೂರ ಉಳಿದು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ.

70 ಬಸ್‌ಗಳ ಸಂಚಾರ: ಮುಷ್ಕರದ ನಡುವೆಯೂ 70 ಕೆಎಸ್‌ಆರ್‌ಟಿಸಿ ಬಸ್‌ಗಳು ವಿವಿಧ ಸ್ಥಳಗಳಿಗೆ ಸಂಚರಿಸಿದವು. 130ಕ್ಕೂ ಹೆಚ್ಚು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT