ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡರನಾಯ್ಕನಹಳ್ಳಿ: ' ಪ್ರತಿಯೊಬ್ಬರೂ ಜಾನಪದ ಸಾಹಿತ್ಯ ಉಳಿಸಿ, ಬೆಳೆಸಬೇಕಿದೆ'

ಉಕ್ಕಡಗಾತ್ರಿ: ತಾಲ್ಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷ ಬಿ. ಷಣ್ಮುಖಪ್ಪ ಅಭಿಪ್ರಾಯ
Last Updated 25 ಮಾರ್ಚ್ 2023, 5:05 IST
ಅಕ್ಷರ ಗಾತ್ರ

ಕಡರನಾಯ್ಕನಹಳ್ಳಿ: ಸಮೃದ್ಧವಾಗಿರುವ ಜಾನಪದ ಸಾಹಿತ್ಯವನ್ನು ಉಳಿಸಿ, ಬೆಳೆಸುವ ಕಾರ್ಯ ಪ್ರತಿಯೊಬ್ಬರಿಂದ ಆಗಬೇಕು ಎಂದು ಸಮ್ಮೇಳನಾಧ್ಯಕ್ಷ ಬಿ. ಷಣ್ಮುಖಪ್ಪ ಅಭಿಪ್ರಾಯಪಟ್ಟರು.

ಸಮೀಪದ ಉಕ್ಕಡಗಾತ್ರಿ ಕ್ಷೇತ್ರದಲ್ಲಿ ಶುಕ್ರವಾರ ನಡೆದ ಹರಿಹರ ತಾಲ್ಲೂಕು ಮಟ್ಟದ 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಜಾನಪದ ಸಾಹಿತ್ಯ ಅತ್ಯಂತ ಸರಳವೂ, ಸುಂದರವೂ ಆಗಿದೆ. ಯುವ ಪೀಳಿಗೆಗೆ ಈ ಸಾಹಿತ್ಯ ಪ್ರಕಾರವನ್ನು ತಲುಪಿಸುವ ಜವಾಬ್ದಾರಿ ಎಲ್ಲರದ್ದಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಈ ಕಾರ್ಯವನ್ನು ಮುಂಚೂಣಿಯಲ್ಲಿ ನಿರ್ವಹಿಸಬೇಕಿದೆ ಎಂದ ಅವರು, ಪ್ರತಿ ತಾಲ್ಲೂಕು ಕೇಂದ್ರ ಮತ್ತು ಹೋಬಳಿ ಕೇಂದ್ರಗಳಲ್ಲಿ ಪರಿಷತ್‌ ಸ್ವಂತ ಭವನ ಹೊಂದುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಹರಿಹರ ತಾಲ್ಲೂಕು ಕನ್ನಡ ಸಾಹಿತ್ಯದಲ್ಲಿ ಮೇರು ಪಂಕ್ತಿಯಲ್ಲಿದೆ. ಹಳ್ಳಿಹಳ್ಳಿಗಳಲ್ಲಿ ಸಾಹಿತಿಗಳು, ಸಾಹಿತ್ಯಾಸಕ್ತರು ಇರುವುದು ಸಂತಸದ ವಿಷಯ ಎಂದು ಸಮ್ಮೇಳನ ಉದ್ಘಾಟಿಸಿದ ಹಾವೇರಿಯ ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.

‘ನಾಡು, ನುಡಿ, ನೆಲ, ಜಲದ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಗ್ರಾಮೀಣ ಭಾಗದಲ್ಲಿ ಸಾಹಿತ್ಯದ ಸೊಗಡಿದೆ. ಜಾನಪದ ಸಾಹಿತ್ಯದ ವಿವಿಧ ಪ್ರಕಾರಗಳು ಗ್ರಾಮೀಣ ಪ್ರದೇಶಗಳಲ್ಲೇ ಜನ್ಮತಾಳಿವೆ. ಸರ್ಕಾರ ಬಜೆಟ್‌ನಲ್ಲಿ ಸಾಹಿತ್ಯ ಪರಿಷತ್‌ನ ಮತ್ತು ಸಾಹಿತ್ಯ ಸಮ್ಮೇಳನಗಳಿಗೆ ಹಣ ಅನುದಾನ ಮೀಸಲಿಟ್ಟಿದ್ದು ಹೆಮ್ಮೆಯ ಸಂಗತಿ’ ಎಂದು ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಾಮದೇವಪ್ಪ ಹರ್ಷ ವ್ಯಕ್ತಪಡಿಸಿದರು.

ಕರಿಬಸವೇಶ್ವರ ದೇವಸ್ಥಾನದಿಂದ ನಾಡಿನಾದ್ಯಂತ ಖ್ಯಾತವಾಗಿರುವ ಉಕ್ಕಡಗಾತ್ರಿಯಲ್ಲಿ ಕನ್ನಡದ ಹಬ್ಬವಾದ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಾಹಿತ್ಯಾಸಕ್ತರಿಗೆ ಸಂತಸ ತಂದಿದೆ ಎಂದು ಮಾಜಿ ಶಾಸಕ ಬಿ.ಪಿ.ಹರೀಶ್ ಹೇಳಿದರು.

ಸಾಹಿತ್ಯ ಪರಿಷತ್‌ನ ಹರಿಹರ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ ಮಾತನಾಡಿದರು.

ಬೆಳಿಗ್ಗೆ ರಾಷ್ಟ್ರ ಧ್ವಜಾರೋಹಣವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರಿಬಸಮ್ಮ ನೆರವೇರಿಸಿದರು. ಬಿ.ವಾಮದೇವಪ್ಪ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಡಿ.ಎಂ. ಮಂಜುನಾಥಯ್ಯ ಪರಿಷತ್ ಧ್ವಜಾರೋಹಣ ನೆರವೇರಿಸಿದರು. ನಂತರ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಹಂಸರಥದಲ್ಲಿ ನಡೆಯಿತು.

ಕನ್ನಡಾಭಿಮಾನಿ ಮಹಿಳೆಯರು ಜನಪದ ಶೈಲಿಯ ಉಡುಗೆಯೊಂದಿಗೆ ಪೂರ್ಣ ಕುಂಭ ಹೊತ್ತು ಸಾಗಿದರು. ಡೊಳ್ಳುಕುಣಿತ, ವಿವಿಧ ಕಲಾತಂಡಗಳ ಪ್ರದರ್ಶನದೊಂದಿಗೆ ಕನ್ನಡಾಂಬೆಯ ಭಾವಚಿತ್ರದ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಕನ್ನಡ ಬಾವುಟಗಳು ರಾರಾಜಿಸಿದವು.

‘ಹರಿಹರ ತಾಲೂಕಿನ ನಾಗರಿಕ ಅವಶ್ಯಕತೆಗಳು ಹಾಗೂ ಪರಿಹಾರ’ ವಿಷಯ ಕುರಿತು ಕಾರ್ಮಿಕ ಮುಖಂಡ ಎಚ್.ಕೆ. ಕೊಟ್ರಪ್ಪ, ‘ಹರಿಹರ ತಾಲ್ಲೂಕಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಅನನ್ಯತೆ’ ವಿಷಯ ಕುರಿತು ನಿವೃತ್ತ ಉಪನ್ಯಾಸಕ ಎ.ಬಿ. ರಾಮಚಂದ್ರಪ್ಪ, ‘ರೈತರ ಸಮಸ್ಯೆಗಳು ಮತ್ತು ಪರಿಹಾರ’ ವಿಷಯ ಕುರಿತು ಹೊಳೆ ಸಿರಿಗೆರೆಯ ಕುಂದೂರು ಮಂಜಪ್ಪ ಉಪನ್ಯಾಸ ನೀಡಿದರು.

ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ, ಹಾಸ್ಯ ಸಂಭ್ರಮ, ಚಿತ್ರ ಕಲಾ ಪ್ರದರ್ಶನಗಳು ಸಮ್ಮೇಳನದ ಆಕರ್ಷಣೆಯಾಗಿದ್ದವು.

ದೇವಸ್ಥಾನದ ಟ್ರಸ್ಟ್ ಕಾರ್ಯದರ್ಶಿ ಸುರೇಶ್, ಎನ್.ಜಿ. ನಾಗನಗೌಡ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ನಂದಿಗಾವಿ ಶ್ರೀನಿವಾಸ್, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.

ಟ್ರಸ್ಟ್‌ನಿಂದ ಸಾಹಿತ್ಯಾಸಕ್ತರಿಗೆ ಗೋದಿ ಹುಗ್ಗಿ, ಅನ್ನ ಸಾರು ಸೇರಿದಂತೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಪರಿಷತ್‌ನ ತಾಲ್ಲೂಕು ಘಟಕದ ಗೌರವ ಕಾರ್ಯದರ್ಶಿ ಬಿ.ಬಿ. ರೇವಣ ನಾಯ್ಕ್ ಸಮ್ಮೇಳನದ ಪ್ರಮುಖ ನಿರ್ಣಯಗಳನ್ನು ಮಂಡಿಸಿದರು.

***

ಸಮ್ಮೇಳನದ ನಿರ್ಣಯಗಳು

l ಅಂತರರಾಷ್ಟ್ರೀಯ ಮಟ್ಟದ ಕೈಗಾರಿಕಾ ಕೇಂದ್ರವೆಂದು ಪ್ರಸಿದ್ಧವಾಗಿದ್ದ ಹರಿಹರವು ಮತ್ತೆ ಆ ವೈಭವ ಹೊಂದಲು ಈಗಾಗಲೇ ಸ್ಥಳ ನಿಗದಿ ಮಾಡಿರುವ ತಾಲ್ಲೂಕಿನ ಕುರುಬರಹಳ್ಳಿಯಲ್ಲಿ ಯೂರಿಯಾ ಹಾಗೂ ಹನಗವಾಡಿಯ ಬಳಿ ಎಥೆನಾಲ್ ಘಟಕಗಳನ್ನು ಶೀಘ್ರ ಸ್ಥಾಪಿಸಬೇಕು

l ದಾವಣಗೆರೆ ಜಿಲ್ಲೆಯ ಉದ್ದೇಶಿತ ಸರ್ಕಾರಿ ವೈದ್ಯಕೀಯ ಕಾಲೇಜನ್ನು ದಾವಣಗೆರೆಗೆ ಬದಲು ಹರಿಹರದಲ್ಲಿ ಸ್ಥಾಪಿಸಬೇಕು

l ರಾಜ್ಯದ ಪ್ರಮುಖ ಸಂಪರ್ಕ ಕೇಂದ್ರವಾದ ಹರಿಹರಕ್ಕೆ ರಿಂಗ್ ರಸ್ತೆ ನಿರ್ಮಿಸಬೇಕು

l ‘ದಕ್ಷಿಣ ಕಾಶಿ’ ಎಂದೇ ಹೆಸರಾಗಿರುವ ಪ್ರಾಚೀನ ಹರಿಹರೇಶ್ವರ ದೇವಾಲಯವನ್ನು ‘ಎ’ ಗ್ರೇಡ್‌ಗೆ ಪರಿವರ್ತಿಸಿ, ಪ್ರವಾಸಿ ಕೇಂದ್ರವಾಗಿಸಬೇಕು

l ಆಡಳಿತ ನಿರ್ವಹಣೆ ದೃಷ್ಟಿಯಿಂದ ಹರಿಹರವನ್ನು ರಾಜ್ಯದ ಉಪ ರಾಜಧಾನಿ ಎಂದು ಘೋಷಿಸಬೇಕು

l ಜನಸಂಖ್ಯೆ ಆಧರಿಸಿ ಹರಿಹರದಲ್ಲಿ ಕನ್ನಡ ಭವನ ನಿರ್ಮಿಸಬೇಕು

l ಮುಂದಿನ ವರ್ಷ ದಾವಣಗೆರೆಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದ ಕೆಲವು ಗೋಷ್ಠಿಗಳನ್ನು ಹರಿಹರದಲ್ಲಿ ಆಯೋಜಿಸಬೇಕು

l ವೇಗವಾಗಿ ಬೆಳೆಯುತ್ತಿರುವ ಹರಿಹರದಲ್ಲಿ ಪ್ರತ್ಯೇಕ ನಗರಾಭಿವೃದ್ಧಿ ಪ್ರಾಧಿಕಾರ ರಚಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT