ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಎಂ. ಸಿದ್ದೇಶ್ವರ ಹೇಳಿಕೆಯಿಂದ ಬೇಸರ: ರೇಣುಕಾಚಾರ್ಯ

Published 19 ಜುಲೈ 2023, 15:11 IST
Last Updated 19 ಜುಲೈ 2023, 15:11 IST
ಅಕ್ಷರ ಗಾತ್ರ

ಹೊನ್ನಾಳಿ: ‘ಹೊನ್ನಾಳಿಯಲ್ಲಿ ನಮ್ಮ ಸಮಾಜ ಜಾಸ್ತಿ ಇದೆ. ನಾನು ಇಲ್ಲಿಂದಲೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂಬ ಸಂಸದ ಜಿ.ಎಂ. ಸಿದ್ದೇಶಣ್ಣ ಹೇಳಿಕೆಯಿಂದ ನೋವಾಗಿದೆ. ಅವರ ಹೇಳಿಕೆಯನ್ನು ಖಂಡಿಸುತ್ತೇನೆ’ ಎಂದು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಬುಧವಾರ ಹಿರೇಮಠ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಚುನಾವಣೆಯಲ್ಲಿ ಸೋತ ಮೇಲೆ ನನ್ನ ಕಾರ್ಯಕರ್ತರು ಮತ್ತು ಮುಖಂಡರು ಲೋಕಸಭಾ ಚುನಾವಣೆಗೆ ನಿಲ್ಲುವಂತೆ ಒತ್ತಾಯ ಮಾಡಿದ್ದರು. ಸಿದ್ದೇಶಣ್ಣ ಅವರು ಕಳೆದ ಚುನಾವಣೆಯಲ್ಲಿ ಇದು ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದರು. ಇದರಿಂದ ನಾನು ಲೋಕಸಭಾ ಚುನಾವಣೆಯಲ್ಲಿ ಪ್ರಬಲ ಆಕಾಂಕ್ಷಿ ಎಂದು ಹೇಳಿದ್ದೆ. ಇದಕ್ಕೆ ಪ್ರತಿಯಾಗಿ ಅವರು. ಹೊನ್ನಾಳಿ ತಾಲ್ಲೂಕಿನಲ್ಲಿ ನಮ್ಮ ಸಮಾಜ ಜಾಸ್ತಿ ಇದೆ ಎಂದು ಹೇಳಿದ್ದಾರೆ. ಇದು ಸರಿಯಲ್ಲ’ ಎಂದರು.

‘ಜಾತಿಯ ಬದಲು ಹೊನ್ನಾಳಿಯಲ್ಲಿ ಬಿಜೆಪಿ ಕಾರ್ಯಕರ್ತರು ಹೆಚ್ಚಾಗಿದ್ದಾರೆ. ನಾನು ಅಲ್ಲಿ ಚುನಾವಣೆ ಮಾಡುತ್ತೇನೆ ಎಂದು ಸಿದ್ದೇಶ್ವರ ಅವರು ಹೇಳಿದ್ದರೆ ನೋವಾಗುತ್ತಿರಲಿಲ್ಲ. ಅವರ ಈ ಹೇಳಿಕೆಯಿಂದ ನಮ್ಮ ಪಕ್ಷದ ಕಾರ್ಯಕರ್ತರಿಗೂ ನೋವಾಗಿದೆ’ ಎಂದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಹೊಸ ಬೆಳವಣಿಗೆಗಳು ಆಗುತ್ತಿವೆ. ಬೆಂಗಳೂರಿನ ಪೊಲೀಸ್ ಠಾಣೆಯ‌ಲ್ಲಿ ಸಿಬ್ಬಂದಿಗೆ ಕುರಾನ್ ವಿತರಣೆ ಮಾಡಿದ್ದಾರೆ ಎನ್ನುವ ಆರೋಪ ಇದೆ. ಕುರಾನ್ ಗ್ರಂಥದ ಬಗ್ಗೆ ಗೌರವವಿದೆ. ಆದರೆ ಇದು ಧರ್ಮ ಧರ್ಮಗಳ ನಡುವೆ ಸಂಘರ್ಷವನ್ನುಂಟು ಮಾಡುತ್ತದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿರೋಧಪಕ್ಷಗಳು ಒಂದಾಗಿ ‘ಇಂಡಿಯಾ’ ಎಂಬ ಮೈತ್ರಿಕೂಟ ರಚಿಸಿಕೊಂಡಿವೆ. ಇದರಿಂದ ಏನೂ ಪ್ರಯೋಜನವಿಲ್ಲ. ಮೋದಿ ಹುಲಿ ಇದ್ದಂತೆ. ಅವರನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಜೆ.ಕೆ. ಸುರೇಶ್, ಹಿರೇಮಠ ರಾಜು ಹಾಗೂ ಮುಖಂಡರು‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT