ಶುಕ್ರವಾರ, ಫೆಬ್ರವರಿ 28, 2020
19 °C

ಭ್ರಷ್ಟರಿಗೆ ಬಹಿಷ್ಕಾರ ಹಾಕಿದರೆ ಅದೇ ಶಿಕ್ಷೆ: ಸಂತೋಷ್ ಹೆಗ್ಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ದೇಶದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದ್ದು, ಬರೀ ಅಧಿಕಾರ ಹಾಗೂ ಶ್ರೀಮಂತಿಕೆಯನ್ನು ಪೂಜಿಸುವ ಸಮಾಜವಾಗಿದೆ. ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ತೃಪ್ತಿ ಹಾಗೂ ಸಾಮಾಜಿಕ ಮೌಲ್ಯಗಳು ಅಗತ್ಯ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಎಂದು ಅಭಿಪ್ರಾಯಪಟ್ಟರು.

ರೋಟರಿ ಹಾಗೂ ಕನೆಕ್ಟ್ಸ್‌ಹಾಗೂ ರೋಟರಿ ಇಂಟರ್ ನ್ಯಾಷನಲ್ ಡಿಸ್ಟ್ರಿಕ್ಟ್ 3160 ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ 36ನೇ ಡಿಸ್ಟ್ರಿಕ್ಟ್ ಸಮ್ಮೇಳನ ‘ಸಂಬಂಧ’ ಎರಡನೇ ದಿನದ ಸಮಾರಂಭದಲ್ಲಿ ಅವರು ಮಾತನಾಡಿ, ‘ಈ ದೇಶದಲ್ಲಿ ಅನ್ಯಾಯ ಹೆಚ್ಚಾಗುತ್ತಿದೆ ಎಂದರೆ ಅದು ವೈಯಕ್ತಿಕ ದೋಷವಲ್ಲ. ಅದು ಸಮಾಜದ ದೋಷ. ಭ್ರಷ್ಟರಿಗೆ ಬಹಿಷ್ಕಾರ ಹಾಕಿದರೆ ಅದೇ ಅವರಿಗೆ ಕೊಡುವ ದೊಡ್ಡ ಶಿಕ್ಷೆ’ ಎಂದು ಹೇಳಿದರು.

‘ಕ್ಷೇತ್ರದ ಅರಿವು ಇಲ್ಲದವರು ಸಂಸತ್ತಿಗೆ ಆಯ್ಕೆಯಾಗುತ್ತಿದ್ದು, ಸಂಸದರಾಗಬಯಸುವವರಿಗೆ ಆ ಕ್ಷೇತ್ರದ ಕುಂದು–ಕೊರತೆ ಬಗ್ಗೆ ಮಾಹಿತಿ ಇರಬೇಕು. ಅಲ್ಲದೇ ಅಲ್ಲಿನ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಶಕ್ತಿ ಇರಬೇಕು. ಜನರ ಸಮಸ್ಯೆಗೆ ಸ್ಪಂದಿಸಬೇಕಾದರೆ ಜನಪ್ರತಿನಿಧಿಗಳಿಗೆ ಶಿಕ್ಷಣ ಅವಶ್ಯಕ’ ಎಂದು ಹೇಳಿದರು.

‘ಇತ್ತೀಚಿನ ದಿನಗಳಲ್ಲಿ ಸಂವಿಧಾನದಲ್ಲಿ ಗಹನವಾದ ಚರ್ಚೆಗಳು ನಡೆಯುತ್ತಿಲ್ಲ. ಪತ್ರಿಕೆಯೊಂದು ವರದಿ ಮಾಡಿರುವಂತೆ 2016ರ ಲೋಕಸಭೆಯಲ್ಲಿ 40 ದಿವಸಗಳಲ್ಲಿ ಒಂದೂ ಚರ್ಚೆಯೂ ನಡೆದಿಲ್ಲ. 2004–2009ರಲ್ಲಿ 543 ಸಂಸದರಲ್ಲಿ 174 ಮಂದಿ ಒಂದು ಸಾರಿಯೂ ಮಾತನಾಡಿಲ್ಲ. ತಿಂಗಳ ಸಂಬಳ ಪಡೆದು ಸಂಸತ್ತಿನಲ್ಲಿ ಕುಳಿತು ಹೋಗುತ್ತಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಸಂವಿಧಾನದ ಆಧಾರ ಸ್ಥಂಭಗಳಾದ ಶಾಸಕಾಂಗ, ಕಾರ್ಯಾಂಗ ಹಾಗೂ ಮಾಧ್ಯಮಗಳಿಂದಲೂ ಮೌಲ್ಯಗಳು ಕುಸಿಯುತ್ತಿವೆ. ಕೆಪಿಎಸ್‌ಸಿಯನ್ನು ಉದಾಹರಣೆಯಾಗಿ ನೀಡಿದ ಸಂತೋಷ್ ಹೆಗ್ಡೆ. ಹಣ ಕೊಟ್ಟು ಕೆಲಸಕ್ಕೆ ಸೇರಿದವರಿಂದ ನಾವು ಪ್ರಾಮಾಣಿಕ ಕೆಲಸ ನಿರೀಕ್ಷಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.

ಸಂವಿಧಾನದ ನಾಲ್ಕನೇ ಅಂಗ ಮಾಧ್ಯಮರಂಗ ಹಿಂದುಳಿದ ವರ್ಗದವರನ್ನು ಮೇಲೆತ್ತುವ ಕೆಲಸ ಮಾಡಬೇಕು. ಆದರೆ ಅದನ್ನು ಬಿಟ್ಟು ಸುಳ್ಳು ವರದಿಗಳನ್ನು ಮಾಡುತ್ತಿವೆ ಎಂದು ಮೀರಾ ರಾಡಿಯಾ ಸೇರಿ ಪ್ರಕರಣವನ್ನು ಉದಾಹರಣೆ ನೀಡಿದರು.

ಬೋಫೋರ್ಸ್, 2ಜಿ ಹಗರಣ, ಕಾಮನ್‌ವೆಲ್ತ್‌ ಸೇರಿ ಹಲವು ಹಗರಣಗಳಿಂದ ದೇಶಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ. 1985ರಲ್ಲೇ ರಾಜೀವ್‌ಗಾಂಧಿ ಅವರು ಹೇಳಿರುವಂತೆ ಸರ್ಕಾರ ₹1 ಖರ್ಚು ಮಾಡಿ ಕಾಮಗಾರಿ ನಡೆಸಿದರೆ ಕೇವಲ 15 ಪೈಸೆಯಷ್ಟು ಮಾತ್ರ ಸಿಗುತ್ತಿತ್ತು. ಆದರೆ ಇಂದು ಸರ್ಕಾರ ₹10 ಖರ್ಚು ಮಾಡಿದರೆ 15 ಪೈಸೆಯಷ್ಟು ಸಿಗುತ್ತಿದೆ ಎಂದು ಹೇಳಿದರು.

‘ನಮ್ಮ ಸಮಾಜದಲ್ಲಿ ಬದಲಾವಣೆ ತರುವುದು ಕಷ್ಟವಲ್ಲ. ಮೊದಲು ನಮ್ಮಲ್ಲಿ ಬದಲಾವಣೆಯಾಗಬೇಕು. ನಂತರ ಸಮಾಜ ಬದಲಾವಣೆಯಾಗುತ್ತದೆ. ಭಾರತದ ಭವಿಷ್ಯಕ್ಕೋಸ್ಕರ ಬದಲಾಗಲೇಬೇಕಿದೆ. ಶಿಕ್ಷಕರು ಚಂದ್ರಯಾನಕ್ಕೆ ರಾಕೆಟ್ ಬಿಡುವುದನ್ನು ಹೇಳಿಕೊಡುವುದರ ಜೊತೆಗೆ ಮಾನವೀಯ ಮೌಲ್ಯವನ್ನು ಕಲಿಸಬೇಕು’ ಎಂದರು.

ವಿಜಯವಾಡದ ಪ್ರಾಜೆಕ್ಟ್ ಪಾಸಿಟಿವ್ ಹೆಲ್ತ್‌ನ ರಾಷ್ಟ್ರೀಯ ಸಮಿತಿ ಸದಸ್ಯ ಡಾ.ವಿ.ಜಿ. ಮೋಹನ್ ಪ್ರಸಾದ್ ಸಕಾರಾತ್ಮಕ ಆರೋಗ್ಯದ ಬಗ್ಗೆ ಮಾತನಾಡಿದರು. ರೊಟೇರಿಯನ್ ಐಪಿಡಿಜಿ ಶಶಿಕುಮಾರ್ ಶರ್ಮ, ರೋಟರಿ 3160 ಡಿಸ್ಟ್ರಿಕ್ಟ್ ಗವರ್ನರ್‌ ನಯನ್ ಎಸ್. ಪಾಟೀಲ್, ಶಿಖಾ ಪಾಟೀಲ್, ಡಾ.ಉದಯ್‌ಕುಮಾರ್ ಶೆಟ್ಟಿ, ಆರ್.ಗೋಪಿನಾಥ್, ಎಂ.ರವೀಂದ್ರ, ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು