ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕರ್ಷಕ ದರ ಆಮೀಷವೊಡ್ಡಿದ ಟೂರಿಸ್ಟ್‌ ಕಂಪನಿ; ಮದೀನಾದಲ್ಲಿ ಉಮ್ರಾ ಯಾತ್ರಿಗಳ ಪರದಾಟ

Last Updated 6 ಜುಲೈ 2019, 14:07 IST
ಅಕ್ಷರ ಗಾತ್ರ

ದಾವಣಗೆರೆ: ಕಡಿಮೆ ದರದಲ್ಲಿ ಉಮ್ರಾ ಯಾತ್ರೆ (ಹಜ್‌) ಮಾಡಿಸುವುದಾಗಿ ಕರೆದುಕೊಂಡು ಹೋಗಿರುವ ಟೂರಿಸ್ಟ್‌ ಕಂಪನಿ ಮದೀನಾದಲ್ಲಿ ಬಿಟ್ಟಿದೆ. ಅಲ್ಲಿಂದ ಕರೆದುಕೊಂಡು ಬಾರದೆ ಕೈಕೊಟ್ಟಿದೆ. ಹಾಗಾಗಿ ವಾಪಸ್‌ ಬರಲು 83 ಯಾತ್ರಿಗಳು ಪರದಾಡುತ್ತಿದ್ದಾರೆ.

ಮಲೇಬೆನ್ನೂರಿನ ಖಾರಿ ತನ್ವೀರ್‌ ಎಂಬಾತನ ಹನೀಫ್‌ ಇಂಟರ್‌ನ್ಯಾಷನಲ್‌ ಟ್ರಾವೆಲ್‌ ಕಂಪನಿ ಈ ರೀತಿ ಮೋಸ ಮಾಡಿದೆ.

ನಾಲ್ಕು ತಿಂಗಳ ಹಿಂದೆ ಈ ಕಂಪನಿ ಆರಂಭಗೊಂಡಿತು. ಅತಿ ಕಡಿಮೆಗೆ ಅಂದರೆ ₹ 35 ಸಾವಿರಕ್ಕೆ 15 ದಿನಗಳ ಉಮ್ರಾ ಯಾತ್ರೆ ಕರೆದುಕೊಂಡು ಹೋಗಲಾಗುವುದು ಎಂದು ದಾವಣಗೆರೆ ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ಪ್ರಚಾರ ಮಾಡಿದ್ದರು. ಉಮ್ರಾ ಯಾತ್ರೆಗೆ ₹ 55 ಸಾವಿರದಿಂದ ₹ 60 ಸಾವಿರ ವೆಚ್ಚವಾಗುತ್ತದೆ. ಇಷ್ಟು ಕಡಿಮೆಗೆ ಕರೆದುಕೊಂಡು ಹೋಗುತ್ತಾರೆ ಎಂಬುದನ್ನು ಹಲವರು ನಂಬಿರಲಿಲ್ಲ. ಆದರೂ ಆರಂಭದಲ್ಲಿ ಹೆಸರು ನೋಂದಾಯಿಸಿದವರನ್ನು ಕರೆದುಕೊಂಡು ಹೋಗಿ ಕರೆತಂದಿದ್ದರು. ಹನೀಫ್‌ ಟೂರ್‌ ಆ್ಯಂಡ್‌ ಟ್ರಾವೆಲ್‌ ಕಂಪನಿಯು ಬೆಂಗಳೂರು ಜಯನಗರ ಬೈತುಲ್‌ ಹರಮ್‌ ಇಂಟರ್‌ನ್ಯಾಷನಲ್‌ ಟೂರ್‌ ಜತೆ ಟೈ ಅಪ್‌ ಮಾಡಿಕೊಂಡಿದ್ದು, ಅವರು ಯಾತ್ರೆ ನಿರ್ವಹಣೆ ಮಾಡುತ್ತಿದ್ದರು.

ಈ ರೀತಿ ಎರಡು ಬಾರಿ ಹೋಗಿ ಬಂದಿದ್ದರಿಂದ ಜನ ನಂಬಿದ್ದರಿಂದ ಸುಮಾರು 300 ಮಂದಿ ಮತ್ತೆ ಉಮ್ರಾಯಾತ್ರೆಗಾಗಿ ಹೆಸರು ನೀಡಿ ₹ 35 ಸಾವಿರ ಕಟ್ಟಿದ್ದಾರೆ. ಅದರಲ್ಲಿ 20 ಮಹಿಳೆಯರೂ ಸೇರಿ 83 ಮಂದಿಯನ್ನು ಜೂನ್ 20ರಂದು ಕರೆದುಕೊಂಡು ಹೋಗಲಾಗಿತ್ತು. ಮೆಕ್ಕಾಕ್ಕೆ ಹೋಗಿ, ಅಲ್ಲಿಂದ ಮದೀನಕ್ಕೆ ಬಂದು ಜೂನ್‌ 2ರಂದು ಈ ತಂಡ ಭಾರತಕ್ಕೆ ಹೊರಡಬೇಕಿತ್ತು. ಆದರೆ, ಯಾತ್ರಿಗಳು ಮೆಕ್ಕಾ ನೋಡಿ, ಮದೀನಾಕ್ಕೆ ಬಂದು ಬಾಕಿಯಾಗಿದ್ದಾರೆ.

ಬೈತುಲ್‌ ಹರಮ್‌ ಇಂಟರ್‌ನ್ಯಾಷನಲ್‌ ಟೂರ್‌ ಸಂಸ್ಥೆಗೆ ಕರೆ ಮಾಡಿದರೆ ಕರೆದುಕೊಂಡು ಹೋಗುವುದಷ್ಟೇ ನಮ್ಮಲ್ಲಿ ಬುಕ್‌ ಆಗಿದೆ ಎಂದು ಅವರು ಕೈಚೆಲ್ಲಿದ್ದಾರೆ. ಈ ತಂಡದ ಜತೆಗೇ ಇದ್ದ ಖಾರಿ ತನ್ವೀರ್‌ ವ್ಯವಸ್ಥೆ ಸರಿಪಡಿಸುವುದಾಗಿ ಹೇಳಿ ಅಲ್ಲಿಂದ ಒಬ್ಬನೇ ವಾಪಸ್ಸಾಗಿದ್ದಾನೆ. ಈಗ ಮೊಬೈಲ್‌ ಸ್ವಿಚ್‌ಡ್‌ ಆಫ್‌ ಮಾಡಿದ್ದಾನೆ.

ಈ ಬಗ್ಗೆ ವಿಡಿಯೊ ಮಾಡಿ ತಮ್ಮ ಸಂಬಂಧಿಕರಿಗೆ ಯಾತ್ರಿಗಳು ಕಳುಹಿಸಿದ್ದಾರೆ. ‘ಮೆಕ್ಕಾದಲ್ಲಿ ಹೋಟೆಲ್‌ನಿಂದಲೂ ಹೊರಗೆ ಹಾಕಿದ್ದರಿಂದ ಬೀದಿಗೆ ಬಿದ್ದಿದ್ದೇವೆ. ನಮ್ಮಲ್ಲಿ ದುಡ್ಡಿಲ್ಲ, ಊಟಕ್ಕೂ ಸಮಸ್ಯೆಯಾಗಿದೆ. ರಿಟರ್ನ್‌ ಟಿಕೆಟ್‌ ಇಲ್ಲ. ಸರ್ಕಾರ ಸಹಾಯ ಮಾಡಬೇಕು’ ಎಂದು ವಿಡಿಯೊ ಮೂಲಕ ಕೇಳಿಕೊಂಡಿದ್ದಾರೆ ಎಂದು ಮಲೇಬೆನ್ನೂರಿನ ಅಬಿದ್‌ ಅಲಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT