ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಕೈಸೇರಿತು ₹ 253 ಕೋಟಿ

ಕಿಸಾನ್ ಸಮ್ಮಾನ್: ಜಿಲ್ಲೆಯ 1,50,841 ರೈತರ ಖಾತೆಗಳಿಗೆ ಹಣ ವರ್ಗಾವಣೆ
Last Updated 12 ಜುಲೈ 2021, 5:29 IST
ಅಕ್ಷರ ಗಾತ್ರ

ದಾವಣಗೆರೆ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಜಿಲ್ಲೆಯ 1,50,841 ರೈತರಿಗೆ ಈವರೆಗೆ (7 ಕಂತು ಸೇರಿ) ₹ 253 ಕೋಟಿ ಹಣ ರೈತರ ಖಾತೆಗಳಿಗೆ ಜಮೆಯಾಗಿದೆ.

‘ಚನ್ನಗಿರಿ ತಾಲ್ಲೂಕಿನಲ್ಲಿ ಹೆಚ್ಚು ಫಲಾನುಭವಿಗಳು ಇದ್ದು, ಹರಿಹರ ತಾಲ್ಲೂಕಿನಲ್ಲಿ ಕಡಿಮೆ ಫಲಾನುಭವಿಗಳು ಇದ್ದಾರೆ. ಕೇಂದ್ರ ಸರ್ಕಾರದಿಂದ ₹ 198 ಕೋಟಿ ಹಾಗೂ ರಾಜ್ಯ ಸರ್ಕಾರದಿಂದ ₹ 54 ಕೋಟಿ ರೈತರ ಖಾತೆಗೆ ಸಂದಾಯವಾಗಿದೆ. ಕಳೆದ ತಿಂಗಳು 7ನೇ ಕಂತು ಜಮೆಯಾಗಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾಹಿತಿ ನೀಡಿದರು.

‘ಈ ಯೋಜನೆಯಡಿ ಕೃಷಿ ಭೂಮಿ ಹೊಂದಿರುವ ಪ್ರತಿ ರೈತ ಕುಟುಂಬಕ್ಕೆ ಕೇಂದ್ರ ಸರ್ಕಾರ ಮೂರು ಕಂತುಗಳಲ್ಲಿ ವಾರ್ಷಿಕ ₹ 6,000 ಹಾಗೂ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ
₹ 4,000 ಆರ್ಥಿಕ ನೆರವು ದೊರಕಿದ್ದು, ಜಿಲ್ಲೆಯಲ್ಲಿ ನೋಂದಣಿಯಾದ ಎಲ್ಲಾ ರೈತರಿಗೆ ಹಣ ಜಮೆಯಾಗಿದೆ’ ಎಂದು ಮಾಹಿತಿ ನೀಡಿದರು. ‘ಭೂ ಮಾಲೀಕತ್ವ ಹೊಂದಿದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೌಕರರು ಹಾಗೂ ಸರ್ಕಾರಕ್ಕೆ ಆದಾಯ ತೆರಿಗೆ ಪಾವತಿಸುವವರನ್ನು ಈ ಯೋಜನೆಯಿಂದ ಸಂಪೂರ್ಣ ಹೊರಗೆ ಇಡಲಾಗಿದ್ದು, ಕೆಲವು ಕಡೆಗಳಲ್ಲಿ ಪತಿ ಹಾಗೂ ಪತ್ನಿ ಇಬ್ಬರಿಗೂ ಕಿಸಾನ್ ಸಮ್ಮಾನ್ ಹಣ ಪಾವತಿಯಾಗಿರುವ ನಿದರ್ಶನಗಳು ಇದ್ದು, ಅವರೆಲ್ಲಾ ಹಣವನ್ನು ವಾಪಸ್ ನೀಡಿದ್ದಾರೆ’ ಎಂದು ಅವರು ಹೇಳಿದರು.

‘ಒಂದು ಕುಟುಂಬದಲ್ಲಿ ಒಬ್ಬರು ಮಾತ್ರ ಈ ಯೋಜನೆಯ ಸದುಪಯೋಗ ಪಡೆಯಲು ಅರ್ಹರಾಗಿರುವುದರಿಂದ ಜಂಟಿ ಖಾತೆ ಇರುವ ಕೆಲವರಿಗೆ ಹಣ ಬಂದಿಲ್ಲ. ಕೆಲವೊಂದು ಸಮಸ್ಯೆ ಬಿಟ್ಟರೆ ಈ ಹಣದಿಂದ ತುಂಬಾ ಅನುಕೂಲವಾಗಿದೆ’ ಎನ್ನುತ್ತಾರೆ ರಾಮೇಶ್ವರ ಗ್ರಾಮದ ರೈತ ರಾಕೇಶ್.

‘ರಸಗೊಬ್ಬರದ ಬೆಲೆಯೂ ಜಾಸ್ತಿಯಾಗಿದೆ. ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರದ ಖರೀದಿಗೆ ಹಣವಿಲ್ಲದ ಸಂದರ್ಭದಲ್ಲಿ ಕಿಸಾನ್ ಸಮ್ಮಾನ್ ನೆರವಿಗೆ ಬಂದಿದೆ. ನೇರವಾಗಿ ರೈತರ ಖಾತೆಗಳಿಗೆ ಹಣ ಜಮೆಯಾಗುವುದರಿಂದ ಇದರಿಂದ ಸಾಕಷ್ಟು ಪ್ರಯೋಜನವಾಗಿದೆ’ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT